ಚಿಕ್ಕನಾಯಕನಹಳ್ಳಿಜಿಲ್ಲೆತುಮಕೂರು

ತುಮಕೂರು ಜಿಪಂ ಬಿಜೆಪಿ ತೆಕ್ಕೆಗೆ ಕೊಟ್ಟರೆ ಅಭಿವೃದ್ಧಿ ಪರ್ವ : ಸಚಿವ ಜೆ.ಸಿ.ಮಾಧುಸ್ವಾಮಿ

ಹುಳಿಯಾರು: ತುಮಕೂರು ಜಿಲ್ಲಾ ಪಂಚಾಯ್ತಿಯನ್ನು ಅತಂತ್ರ ಮಾಡದೆ ಭಾರಿ ಬಹುಮತಗಳೊಂದಿಗೆ ಬಿಜೆಪಿ ತೆಕ್ಕೆಗೆ ಕೊಟ್ಟರೆ ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವ ನಿಶ್ಚಿತ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಹುಳಿಯಾರು ಹೋಬಳಿಯ ಬೆಳ್ಳಾರ ಗ್ರಾಮದಲ್ಲಿ ಶನಿವಾರ ನಡೆದ ವಿವಿಧ ಪಕ್ಷದ ಕಾರ್ಯಕರ್ತರ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಳೆದ ಬಾರಿ ತುಮಕೂರು ಜಿಲ್ಲಾ ಪಂಚಾಯ್ತಿಗೆ ಅತಂತ್ರ ಫಲಿತಾಂಶ ನೀಡಿದ ಪರಿಣಾಮ ಮೈತ್ರಿ ಆಡಳಿತ ನಡೆಸಲಾಯಿತು. ಇದರಿಂದಾಗಿ ಅಭಿವೃದ್ಧಿ ಬಗ್ಗೆ ಯೋಚನೆ ಮಾಡದೆ ಕೇವಲ ಅಧಿಕಾರಕ್ಕೆ ಕಿತ್ತಾಡಿದರು. ಜಿಪಂನಲ್ಲಿ 600 ಕೋಟಿ ರೂ. ಇದ್ದರೂ ಸರಿಯಾಗಿ ಸಭೆ ನಡೆಸದೆ ಜಿಲ್ಲೆಯಲ್ಲಿ ಕೆಲಸ ಕಾರ್ಯಗಳು ಕುಂಟಿವಾದವು. ಪಶು ಔಷಧಿ ಕೊಳ್ಳಲು ಸಹ ಅನುಮೋದನೆ ಕೊಟ್ಟಿರಲಿಲ್ಲ. ಇದರಿಂದ ಬೇಸತ್ತು ಖುದ್ದು ನಾನೇ ಜಿಪಂ ಸದಸ್ಯರಿಗೆ ಕರೆ ಮಾಡಿ ಸಭೆ ನಡೆಸಿ ಅನುಮೋದನೆ ಕೊಡಿ ಎಂದು ಕೇಳಿಕೊಂಡಿದ್ದೇನೆ. ಇದು ಅತಂತ್ರ ಫಲಿತಾಂಶದ ಫಲದ ನಿದರ್ಶನ. ಹಾಗಾಗಿ ಬಿಜೆಪಿಗೆ ಬಹುಮತ ಕೊಟ್ಟರೆ ಜಿಲ್ಲೆಯ ಅಭವೃದ್ಧಿ ಮಂತ್ರ ಪಠಿಸುವಂತೆ ಸದಸ್ಯರನ್ನು ತಯಾರಿ ಮಾಡುವುದಾಗಿ ತಿಳಿಸಿದರು.
ಬಿಜೆಪಿಯಲ್ಲಿ ಹೊಸಬ, ಹಳಬ ಎನ್ನುವ ಭೇದಭಾವ ಇರುವುದಿಲ್ಲ. ಏಕೆಂದರೆ ಬಿಜೆಪಿಗೆ ನಾನೇ ಹೊಸಬ. ಆದರೂ ನನ್ನೇನು ಆಚೆಗೆ ನಿಲ್ಲಿಸದೆ ಕರೆದು ಮಂತ್ರಿ ಮಾಡಿದ್ದಾರೆ. ಅಂತಹದರಲ್ಲಿ ನಾನು ಪಕ್ಷಕ್ಕೆ ಸೇರುವವರನ್ನು ಹೊಸಬ, ಹಳಬ ಎಂದು ತಾರತಮ್ಯ ಮಡುವುದು ಸರಿಯಲ್ಲ. ಅಲ್ಲದೆ ಮೊದಲಿನಿಂದಲೂ ನಾನು ಜಾತಿ, ಧರ್ಮದ ತಾರತಮ್ಯ ಮಾಡಿಲ್ಲ. ಹಾಗಾಗಿ ಯಾವುದೇ ಅನುಮಾನ ಬೇಡ. ಪಕ್ಷಕ್ಕೆ ಸೇರುವವರನ್ನು ಪ್ರೀತಿ ವಿಶ್ವಾಸದಿಂದ ಕಾಣುತ್ತೇನೆ ಎಂದರಲ್ಲದೆ ಕಾರ್ಯಕರ್ತರು ಮತ್ತು ಮತದಾರರು ವೈಯಕ್ತಿಕ ಹಿತಬದಿಗಿತ್ತು ಊರು, ತಾಲೂಕು, ರಾಜ್ಯ, ದೇಶಕ್ಕೆ ಒಳ್ಳೆದಾಗಲಿ ಎಂಬ ದೊಡ್ಡತನದಿಂದ ಚುನಾವಣೆಯಲ್ಲಿ ಕೆಲಸ ಮಾಡಬೇಕು ಮತ್ತು ಮತ ಹಾಕಬೇಕು ಎಂದರು.
ಐದಾರು ಸಾವಿರ ರೂ. ಹಣ ದುಡಿಯಲು ಹಳ್ಳಿಯಿಂದ ಪಟ್ಟಣಕ್ಕೆ ಬರುವುದನ್ನು ತಪ್ಪಿಸಿ ಮನೆ ಮುಂದೆಯೇ ದುಡಿಯುವ ವಾತಾವರಣ ನಿರ್ಮಾಣ ಮಾಡಿದಾಗ ಮಾತ್ರ ಹಳ್ಳಿಗರ ಬದುಕು ಹಸನಾಗುತ್ತದೆ. ಈ ನಿಟ್ಟಿನಲ್ಲಿ ತಾಲೂಕಿನ ಎಲ್ಲಾ ಕೆರೆಗಳನ್ನೂ ತುಂಬಿಸಿ ಅದರಿಂದ ಕ್ಷೇತ್ರದ ಅಂತರ್ಜಲ ಹೆಚ್ಚು ಮಾಡಿ ಇಲ್ಲಿನ ಜನ ಮನೆ ಮುಂದೆ ಕೃಷಿ ಜೊತೆ ಉಪಕಸುಬು ಮಾಡಿ ನೆಮ್ಮದಿಯ ಜೀವನ ನಡೆಸುವಂತೆ ಮಾಡುವುದು ನನ್ನ ಉದ್ದೇಶವಾಗಿತ್ತು. ಹಾಗಾಗಿಯೇ ಸಣ್ಣ ನೀರಾವರಿ ಇಲಾಖೆಗೆ ಪಟ್ಟು ಹಿಡಿದು ಪಡೆದು ಕೆರೆಗಳನ್ನು ತುಂಬಿಸುವ ಕೆಲಸಕ್ಕೆ ಹಣ ಮೀಸಲಿಟ್ಟು ಟೆಂಡರ್ ಸಹ ಕರೆಯಲಾಗಿದೆ. ಈ ಮೂಲಕ ಮತ ನೀಡಿದ ಕ್ಷೇತ್ರದ ಜನರ ಖುಣ ತೀರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯೆ ಮಂಜುಳಾ, ತಾಪಂ ಮಾಜಿ ಅಧ್ಯಕ್ಷ ಕೆಂಕೆರೆ ನವೀನ್, ಮಾಜಿ ಉಪಾಧ್ಯಕ್ಷ ವಸಂತಯ್ಯ, ಮಾಜಿ ಸದಸ್ಯ ಕೇಶವಮೂರ್ತಿ, ಮುಂಖಡರಾದ ಬರಕನಹಾಲ್ ವಿಶ್ವನಾಥ್, ನಿರಂಜನಮೂರ್ತಿ, ಶಂಕರಲಿಂಗಯ್ಯ, ಗ್ರಾಪಂ ಉಪಾಧ್ಯಕ್ಷೆ ಕಮಲಮ್ಮ, ಸದಸ್ಯರುಗಳಾದ ರಘುವೀರ್, ರಾಧಮ್ಮ, ರೇಣುಕಮ್ಮ ಮತ್ತಿತರರು ಇದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker