ಶಿರಾ : ನಗರದಲ್ಲಿರುವ ಹಳೇ ತಾಲ್ಲೂಕು ಕಚೇರಿ ಸ್ಥಳವನ್ನು ಕಾನೂನು ಇಲಾಖೆಗೆ ಪುನರ್ ವರ್ಗಾವಣೆ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹಾಗೂ ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಮನವಿ ಸಲ್ಲಿಸಿ ಹಳೆಯ ತಾಲ್ಲೂಕು ಕಚೇರಿಯ ಸ್ಥಳವನ್ನು ಕಾನೂನು ಇಲಾಖೆಗೆ ಪುನರ್ ವರ್ಗಾವಣೆ ಮಾಡಲು ಆದಷ್ಟು ಶೀಘ್ರ ಕ್ರಮ ಕೈಗೊಳ್ಳುತ್ತೇನೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು.
ಅವರು ಶಿರಾ ವಕೀಲರ ಸಂಘಕ್ಕೆ 55 ಇಂಚಿನ ಎಲ್‌ಸಿಡಿ ಟಿವಿಯನ್ನು ತಮ್ಮ ಸ್ವಂತ ಖರ್ಚಿನಿಂದ ಕೊಡುಗೆಯಾಗಿ ನೀಡಿ ಮಾತನಾಡಿದರು. ಶಿರಾ ನ್ಯಾಯಾಲಯದ ಆವರಣ ಕಡಿಮೆ ಇದ್ದು, ತಾಲ್ಲೂಕು ಅಭಿವೃದ್ದಿಯಾಗುತ್ತಿರುವ ನಿಟ್ಟಿನಲ್ಲಿ ಸ್ಥಳಾವಕಾಶದ ಅಗತ್ಯವಿದೆ. ಈ ಹಿಂದೆ ಇದ್ದ ಹಳೆಯ ತಾಲ್ಲೂಕು ಕಚೇರಿಯ ಸ್ಥಳವು ನ್ಯಾಯಾಲಯಕ್ಕೆ ಸೇರಿದ್ದು ಅದನ್ನು ಪುನರ್ ಕಾನೂನು ಇಲಾಖೆಗೆ ವರ್ಗಾವಣೆ ಮಾಡಬೇಕೆಂದು ವಕೀಲರ ಸಂಘದಿಂದ ಮನವಿ ಮಾಡಿದ್ದು, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇನೆ ಎಂದ ಅವರು ಭಾರತ ಸಂವಿಧಾನದ ಸಂರಕ್ಷಕರೆಂದರೆ ಅದು ವಕೀಲರು. ನಾವೆಲ್ಲರೂ ಸಂವಿಧಾನದ ಅಡಿಯಲ್ಲಿ ಜೀವಿಸಬೇಕು ಹಾಗೂ ಎಲ್ಲರೂ ಕೂಡ ಸಂವಿಧಾನದ ಅಡಿಯಲ್ಲಿ ಕೆಲಸ ಮಾಡಬೇಕು ಎಂದರು.
ನಾವು ಮಾಡುವ ಸಹಾಯವನ್ನು ಕೊಡುಗೆ ಎನ್ನಬೇಡಿ. ನಾನು ಸೇವೆ ಮಾಡಲು ನೀಡಿದ ಒಂದು ಅವಕಾಶ ಎಂದು ತಿಳಿಯುತ್ತೇನೆ. ಇಂದಿನ ಆಧುನಿಕ ಯುವಕ್ಕೆ ಹೊಂದಿಕೊಂಡು ವಕೀಲರು ಕರ್ತವ್ಯ ನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಮೂಲಭೂತ ಸೌಕರ್ಯಗಳು ಕಚೇರಿಗೆ ಅತಿ ಅವಶ್ಯಕ. ಆದ್ದರಿಂದ 55 ಇಂಚಿನ ಎಲ್‌ಸಿಡಿ ಟಿವಿಯನ್ನು ಕೊಡುಗೆಯಾಗಿ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಧರಣೇಶ್ ಗೌಡ, ಉಪಾಧ್ಯಕ್ಷ ವೈ.ಟಿ.ರಾಮಚಂದ್ರಪ್ಪ, ಖಜಾಂಚಿ ಎಚ್.ಗುರುಮೂರ್ತಿ, ಜಂಟಿ ಕಾರ್ಯದರ್ಶಿ ಬಿ.ಆರ್.ರಾಮಕೃಷ್ಣ, ವಕೀಲರಾದ ವಾಜಿದ್ ಅಹಮದ್, ಮುದಿಮಡು ಮಂಜುನಾಥ್, ಬಸವರಾಜು, ಜಿ.ಬಿ.ರಮೇಶ್, ಹೆಚ್.ನಾಗರಾಜ್, ಕಂಬದುರಪ್ಪ ಸೇರಿದಂತೆ ಹಲವರು ಹಾಜರಿದ್ದರು.