ಶ್ರೀ ಸಿದ್ದಿವಿನಾಯಕ ಸೇವಾ ಮಂಡಳಿಯಿಂದ 46ನೇ ವರ್ಷದ ಗಣೇಶೋತ್ಸವಕ್ಕೆ ಚಾಲನೆ
ತುಮಕೂರು– ಇಲ್ಲಿನ ವಿನಾಯಕ ನಗರದಲ್ಲಿ ಶ್ರೀ ಸಿದ್ದಿವಿನಾಯಕ ಸೇವಾ ಮಂಡಳಿ ವತಿಯಿಂದ 46ನೇ ವರ್ಷದ ಗಣೇಶೋತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆಯಿತು.
ಸರ್ಕಾರದ ಕೋವಿಡ್-19 ಮಾರ್ಗಸೂಚಿ ಅನ್ವಯ ಕೊರೊನಾ ನಿಯಮಾವಳಿಯನ್ನು ಪಾಲಿಸಿ 46ನೇ ವರ್ಷದ ಗಣೇಶೋತ್ಸವಕ್ಕೆ ಶ್ರೀ ಸಿದ್ದಿವಿನಾಯಕ ಸೇವಾ ಮಂಡಳಿಯಲ್ಲಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸುವ ಮೂಲಕ ಚಾಲನೆ ನೀಡಲಾಯಿತು.
46ನೇ ವರ್ಷದ ಗಣೇಶೋತ್ಸವವನ್ನು ಮಂಡಳಿಯ ಅಧ್ಯಕ್ಷ ಜಿ.ಹೆಚ್. ಪರಮಶಿವಯ್ಯ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಕಳೆದ 45 ವರ್ಷಗಳಿಂದ ಸಿದ್ದಿವಿನಾಯಕ ಸೇವಾ ಮಂಡಳಿ ಬಹಳ ಅದ್ದೂರಿಯಾಗಿ ಗಣೇಶೋತ್ಸವವನ್ನು ಆಚರಿಸಿಕೊಂಡು ಬಂದಿದ್ದು, ಸುಮಾರು 40ಕ್ಕೂ ಅಧಿಕ ದಿನಗಳ ವಿವಿಧ ಸಾಂಸ್ಕöÈತಿಕ, ಮನರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿತ್ತು. ಆದರೆ ಕಳೆದ 2 ವರ್ಷಗಳಿಂದ ಕೋವಿಡ್ ಮಹಾಮಾರಿಯ ಆರ್ಭಟದಿಂದಾಗಿ ಜನರ ಆರೋಗ್ಯ ದೃಷ್ಠಿಯಿಂದ ಸರ್ಕಾರದ ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸುವುದು ಅನಿವಾರ್ಯವಾಗಿದೆ. ಹಾಗಾಗಿ ಯಾವುದೇ ಅದ್ದೂರಿ, ಆಡಂಬರ ಇಲ್ಲದೆ ಧಾರ್ಮಿಕ ಪೂಜಾ ವಿಧಿ ವಿಧಾನಗಳಿಗೆ ಮಾತ್ರ ಸೀಮಿತಗೊಳಿಸಿ ಗಣೇಶೋತ್ಸವ ಆಚರಿಸಲಾಗುತ್ತಿದೆ ಎಂದರು.
ಸರ್ಕಾರದ ಕೋವಿಡ್ ನಿಯಮಾವಳಿ ಪ್ರಕಾರವೇ ಬುಧವಾರದವರೆಗೆ ಪ್ರತಿದಿನ ಗಣೇಶಮೂರ್ತಿಗೆ ವಿಶೇಷ ಪೂಜಾ ಕೈಂಕರ್ಯ ನೆರವೇರಲಿದೆ. ಸಾರ್ವಜನಿಕರೆ ಬೆಳಿಗ್ಗೆ 11 ರಿಂದ ರಾತ್ರಿ 8 ಗಂಟೆಯವರೆಗೆ ಗಣೇಶನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು.
ಗಣೇಶನ ದರ್ಶನ ಮತ್ತು ಪೂಜಾ ವಿಧಿ ವಿಧಾನಗಳಲ್ಲಿ ಭಕ್ತರು ಪಾಲ್ಗೊಳ್ಳಲು ಒಂದು ಬಾರಿಗೆ 20 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಪ್ರತಿಯೊಬ್ಬರೂ ಸಹ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದರು.
ಪ್ರತಿಯೊಬ್ಬರಿಗೂ ಜೀವ ಮುಖ್ಯ. ಆರೋಗ್ಯ ಚೆನ್ನಾಗಿದ್ದರೆ ಮುಂದೆ ಏನು ಬೇಕಾದರೂ ಮಾಡಬಹುದು. ಹಾಗಾಗಿ ಜನರ ಆರೋಗ್ಯದ ದೃಷ್ಠಿಯಿಂದ ಅತ್ಯಂತ ಸರಳವಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಗಣೇಶೋತ್ಸವ ಆಚರಿಸಲಾಗುತ್ತಿದೆ ಎಂದು ಅವರು ಹೇಳಿದರು.
ಬುಧವಾರ ಬೆಳಿಗ್ಗೆ 9 ಗಂಟೆಗೆ ಯಾವುದೇ ಅದ್ದೂರಿ, ಆಡಂಬರವಿಲ್ಲದೆ ಪ್ರತಿಷ್ಠಾಪಿಸಿರುವ ಗಣೇಶಮೂರ್ತಿಯ ವಿಸರ್ಜನೋತ್ಸವ ನಡೆಯಲಿದೆ, ನಗರದ ವಿದ್ಯಾನಗರದ ವಾಟರ್ ಟ್ಯಾಂಕ್‌ನಲ್ಲಿ ಗಣಪತಿ ಮೂರ್ತಿಯನ್ನು ವಿಸರ್ಜಿಸಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಂಡಳಿಯ ಉಪಾಧ್ಯಕ್ಷ ನಾಗೇಶ್, ಕಾರ್ಯದರ್ಶಿ ರಾಘವೇಂದ್ರರಾವ್, ಸಹ ಕಾರ್ಯದರ್ಶಿ ಜಗಜ್ಯೋತಿ ಸಿದ್ದರಾಮಯ್ಯ, ಖಜಾಂಚಿ ಪ್ರಭು, ನಿರ್ದೇಶಕರುಗಳಾಗ ನಿಂಗಪ್ಪ, ಮಹದೇವಪ್ಪ, ಪ್ರಸನ್ನಕುಮಾರ್, ಸಿದ್ದರಾಜು, ನರಸಿಂಹಮೂರ್ತಿ, ನಾಗರಾಜು, ನಟರಾಜು, ಮಹೇಶ್, ವಿರೂಪಾಕ್ಷ, ವೆಂಕಟೇಶ್, ಹೇಮರಾಜು ಸಿಂಚ, ವಿಜಯಕುಮಾರ್, ವೆಂಕಟೇಶಬಾಬು, ಪದ್ಮರಾಜು, ಉಮಾಶಂಕರ್, ರಮೇಶ್‌ಬಾಬು, ಅನುಸೂಯ, ರೇಣುಕಾಪರಮೇಶ್, ಇಂದ್ರಾಣಿ ಮತ್ತಿತರರು ಉಪಸ್ಥಿತರಿದ್ದರು.