ತುಮಕೂರು: ಕಾಡುಗೊಲ್ಲರನ್ನು ಪರಿಶಿಷ್ಟ ವರ್ಗದ ಜಾತಿ ಪಟ್ಟಿಗೆ ಸೇರಿಸುವುದು ಮತ್ತು ಕಾಡುಗೊಲ್ಲರ ಅಭಿವೃದ್ದಿ ನಿಗಮಕ್ಕೆ ಅಧ್ಯಕ್ಷರ ನೇಮಕ ಮತ್ತು ಅನುದಾನ ಬಿಡುಗಡೆ ಕುರಿತಂತೆ ಸರಕಾರದ ಮೇಲೆ ಒತ್ತಡ ತರಲು ಯಾವ ರೀತಿಯ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಚರ್ಚಿಸುವ ಸಂಬಂಧ ಕಾಡುಗೊಲ್ಲರ ಕ್ಷೇಮಾಭಿವೃದ್ದಿ ಸಂಘದ ಮಾಜಿ ಅಧ್ಯಕ್ಷ ಅಕ್ಕಲಪ್ಪ,ನಿವೃತ್ತ ಎಇಇ ಷಣ್ಮುಗಪ್ಪ ನೇತೃತ್ವದಲ್ಲಿ ಕಾಡುಗೊಲ್ಲರ ವಿವಿಧ ಸಂಘಗಳಮುಖಂಡರ ಸಭೆಯನ್ನು ಜಿಲ್ಲಾ ಯಾದವ ಸಮಾಜದ ಹಾಸ್ಟಲ್‌ನ ಆವರಣದಲ್ಲಿ ಕರೆಯಲಾಗಿತ್ತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಿವೃತ್ತ ಎಇಇ ಷಣ್ಮುಗಪ್ಪ, ರಾಜ್ಯದಲ್ಲಿ ಮೊದಲ ಬಾರಿಗೆ 1982ರಲ್ಲಿ ಕಾಡುಗೊಲ್ಲ ಎಂಬ ಉಪಪಂಗಡಕ್ಕೆ ಅಂಕಿತ ಹಾಕಿದವರು ಸಿದ್ದಪ್ಪನವರು.ವಿ.ಪಿ.ಮಂಡಲ್ ಅವರನ್ನು ಕರೆದುಕೊಂಡು ಬಂದ ನಮ್ಮ ಸ್ಥಿತಿಗಳನ್ನು ಪರಿಚಿಯಿಸಿದಾಗ ಉತ್ತರ ಭಾರತದ ಯಾದವ ಸಮುದಾಯಕ್ಕಿಂತ ಬಿನ್ನವಾಗಿ,ಅರೆ ಅಲೆಮಾರಿ ಸಮುದಾಯ ವಾಗಿ,ಸಾಮಾಜಿಕ ಕಟ್ಟುಪಾಡು,ಮೌಢ್ಯ, ಕಂದಾಚಾರವೇ ತುಂಬಿರುವ ಈ ಸಮುದಾಯ, ಪರಿಶಿಷ್ಟ ಪಂಗಡದ ಜಾತಿಪಟ್ಟಿಗೆ ಸೇರಲು ಎಲ್ಲಾ ರೀತಿಯಿಂದಲೂ ಆರ್ಹವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾಡುಗೊಲ್ಲರ ಹೋರಾಟ ಗಳು ಹುಟ್ಟಿಕೊಂಡವು.ಅಂದಿನಿಂದ ಇಂದಿನವರೆಗೂ ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿದ್ದರೂ ಆಳುವ ಪಕ್ಷಗಳು ನಮ್ಮನ್ನು ಕೇವಲ ಓಟ್‌ಬ್ಯಾಂಕ್ ಮಾಡಿಕೊಂಡು,ಮೋಸ ಮಾಡಿವೆ.ಇದರ ವಿರುದ್ದ ನಿರ್ಣಾಯಕ ಹೋರಾಟ ರೂಪಿಸುವ ಅನಿವಾರ್ಯವಿದೆ.ಈ ನಿಟ್ಟಿನಲ್ಲಿ ವಿವಿಧ ಹೆಸರುಗಳಲ್ಲಿ ಕಾಡುಗೊಲ್ಲರ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವ ಸಂಘಟನೆ ಗಳು ಒಂದೇ ವೇದಿಕೆಯಲ್ಲಿ ಬಂದು,ನಮ್ಮ ಗಟ್ಟಿ ದ್ವನಿಯ ಮೂಲಕ ಸರಕಾರದ ಕಣ್ಣು ತೆರೆಸಬೇಕಾಗಿದೆ ಎಂದರು.
ಇದು ಯಾರ ವಿರುದ್ದವೂ ನಡೆಯುತ್ತಿರುವ ಹೋರಾಟವಲ್ಲ. ಕಾಡುಗೊಲ್ಲರ ವಿರುದ್ದ ಯಾರೇ ನಿಂತರು ಅವರ ವಿರುದ್ದ ನಾವೆಲ್ಲರೂ ಸಂಘಟಿತ ಹೋರಾಟ ನಡೆಸಬೇಕಾಗಿದೆ.ಗೊಲ್ಲ ಸಮುದಾಯ ಸೇರಿದಂತೆ ಎಲ್ಲಾ ಜಾತಿಗಳಲ್ಲಿ ಅರ್ಥಿಕವಾಗಿ ಹಿಂದುಳಿದ ಜನ ಇದ್ದಾರೆ.ಆದರೆ ಇನ್ನೂ ಮೌಡ್ಯ, ಕಂದಾಚಾರಕ್ಕೆ ಅಂಟಿಕೊಂಡು, ಸಮಾಜದ ಮುಖ್ಯವಾಹಿನಿಗೆ ಬರಲು ಹಿಂದೇಟು ಹಾಕುತ್ತಿರುವ ಈ ಕಾಡುಗೊಲ್ಲ ಸಮುದಾಯವನ್ನು ಗೊಲ್ಲ,ಯಾದವ ಸಮುದಾಯಗಳು ಬೆಂಬಲಿಸಿ,ಇವರ ಶೈಕ್ಷಣಿಕ, ಸಾಮಾಜಿಕ ಉನ್ನತ್ತಿಗೆ ಶ್ರಮಿಸುವ ಕೆಲಸ ಮಾಡಬೇಕಾಗಿದೆ.ಈಗಾಗಲೇ ಕಾಡುಗೊಲ್ಲರನ್ನು ಎಸ್ಟಿ ಸಮುದಾಯಕ್ಕೆ ಸೇರಿಸಬೇಕೆನ್ನುವ ಕರ್ನಾಟಕ ಸರಕಾರದ ಶಿಫಾರಸ್ಸು ಕೇಂದ್ರದ ಮುಂದಿದೆ. ಇದಕ್ಕೆ ಬೆಂಬಲವಾಗಿ ಕೇಂದ್ರದ ಸಚಿವರಾದ ನಾರಾಯಣಸ್ವಾಮಿ ಕೆಲಸ ಮಾಡುತ್ತಿದ್ದಾರೆ. ಇದರ ಜೊತೆಗೆ ಬಿ.ಎಸ್.ಯಡಿಯೂರಪ್ಪ ಕೊಟ್ಟ ಮಾತಿನಂತೆ ಕಾಡುಗೊಲ್ಲರ ಅಭಿವೃದ್ದಿ ನಿಗಮ ಸ್ಥಾಪನೆಗೆ ಸರಕಾರದ ಮೇಲೆ ಒತ್ತಡ ತರುವಂತೆ ಅವರ ಮೇಲೆ ಸ್ಥಳೀಯ ಶಾಸಕರ ಮೂಲಕ ಒತ್ತಡ ತರಬೇಕಿದೆ. ಈ ನಿಟ್ಟಿನಲ್ಲಿ ಕಾಡುಗೊಲ್ಲರು ಒಗ್ಗಟ್ಟಿನ ಹೋರಾಟ ರೂಪಿಸಬೇಕಾಗಿದೆ ಎಂದು ಷಣ್ಮುಖಪ್ಪ ನುಡಿದರು.
ಸಮುದಾಯದ ಮುಖಂಡರಾದ ಡಿ.ಕೆ.ಗಂಗಾಧರ್ ಮಾತನಾಡಿ,ಶಿರಾ ಬೈ ಎಲೆಕ್ಷನ್ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಗಳಾದ ಬಿ.ಎಸ್.ಯಡಿಯೂರಪ್ಪ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು.ಅಧ್ಯಕ್ಷರ ಆಯ್ಕೆಯಲ್ಲಿ ಪೈಪೋಟಿ ಇದೆ ಎಂಬ ಹಾರಿಕೆ ಉತ್ತರ ನೀಡುವ ಬದಲು ಆರ್ಹ ಕಾಡುಗೊಲ್ಲರನ್ನು ಅಧ್ಯಕ್ಷರನ್ನಾಗಿ ನೇಮಿಸಿ,ಅಗತ್ಯ ಅನುದಾನ ನೀಡಬೇಕೆಂಬುದು ನಮ್ಮ ಬೇಡಿಕೆಯಾಗಿದೆ.ಈ ನಿಟ್ಟಿನಲ್ಲಿ ಶೀಘ್ರದಲ್ಲಿಯೇ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸಾಂಕೇತಿಕ ಧರಣಿ ಹಮ್ಮಿಕೊಳ್ಳುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡದ ಜಾತಿ ಪಟ್ಟಿಗೆ ಸೇರಿಸಬೇಕು ಹಾಗೂ ಕಾಡುಗೊಲ್ಲರ ಅಭಿವೃದ್ದಿ ನಿಗಮ ಸ್ಥಾಪಿಸಬೇಕೆಂಬುದು ಸುಮಾರು 20 ವರ್ಷಗಳ ಬೇಡಿಕೆ ಹಲವರು ಈ ಹೋರಾಟವನ್ನು ಕೈಗೆತ್ತಿಕೊಂಡು ಮುನ್ನೆಡೆಸಿದ್ದಾರೆ. ಇವರೆಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋರಾಟ ರೂಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ಮುಖಂಡರು ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬೇಕೆಂದು ಗಂಗಾಧರ್ ತಿಳಿಸಿದರು.
ಕಾಡುಗೊಲ್ಲರ ಕ್ಷೇಮಾಭಿವೃದ್ದಿ ಸಂಘದ ಬಿ.ಟಿ.ಗೋವಿಂದರಾಜು ಮಾತನಾಡಿ, ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷ ನಮ್ಮ ಸಮುದಾಯದ ಹೆಸರನ್ನು ಬಳಸಿಕೊಂಡು, ಕ್ಷೇತ್ರ ಎಲ್ಲಾ ಬೂತ್‌ಗಳಲ್ಲಿಯೂ ಕಾಡುಗೊಲ್ಲರ ಮತಗಳನ್ನು ಪಡೆದು, ಗೆಲುವು ಸಾಧಿಸಿದ ನಂತರ,ಈಗ ಅಧ್ಯಕ್ಷರ ನೇಮಕದ ಪೈಪೋರ್ಟಿ ಮತ್ತಿತರ ಸಬೂಬು ಹೇಳುತ್ತಿದೆ. ಇವುಗಳಿಗೆ ಕಿವಿಕೊಡದೆ, ಕಾಡುಗೊಲ್ಲರ ಅಭಿವೃದ್ದಿ ನಿಗಮ ಸ್ಥಾಪನೆಯಾಗಿ, ಅಧ್ಯಕ್ಷರ ನೇಮಕ, ಅನುದಾನ ಬಿಡುಗಡೆ ಮಾಡುವಂತೆ ಸರಕಾರದ ಮೇಲೆ ಒತ್ತಡ ತರಬೇಕಿದೆ ಎಂದರು.
ಸಭೆಯಲ್ಲಿ ಅಕ್ಕಲಪ್ಪ ಯಾದವ್, ಎಂ.ಜಿ.ಶಿವಣ್ಣ, ಈರಣ್ಣ, ಚಿಕ್ಕರಾಜು,ನಾಗರಾಜು, ರ‍್ರಪ್ಪ ಪೂಜಾರ್,ಮಂಜುನಾಥ್, ಕೆಂಪರಾಜು,ದಿಲೀಪ್‌ಕುಮಾರ್, ಪುರುಷೋತ್ತಮ್ ಸೇರಿದಂತೆ ಹಲವರು ಉಪಸ್ಥಿತರಿದ್ದು, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.