ಜಿಲ್ಲೆಯ ಯುವ ಪ್ರತಿಭೆಗಳ ಅನಾವರಣಗೊಳಿಸುವ ಯುವ ಸಂಭ್ರಮ : ಡಾ. ಜಿ.ಪರಮೇಶ್ವರ್
ತುಮಕೂರು : ತುಮಕೂರು ದಸರಾ ಅಂಗವಾಗಿ ಜಿಲ್ಲೆಯ ಯುವ ಪ್ರತಿಭೆಗಳ ಅನಾವರಣಗೊಲಿಸಲು ಯುವ ಸಂಭ್ರಮ ಉತ್ತಮ ವೇದಿಕೆಯಾಗಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅಭಿಪ್ರಾಯ ವ್ಯಕ್ತ ಪಡಿಸಿದರು.
ನಗರದ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದ ಹಾಸ್ಯ ಚಕ್ರವರ್ತಿ ಟಿ.ಆರ್.ನರಸಿಂಹರಾಜು ವೇದಿಕೆಯಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಯುವ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದಲ್ಲಿ 40 ವರ್ಷದೊಳಗಿನವರ ಜನಸಂಖ್ಯೆ ಹೆಚ್ಚಾಗಿದ್ದು, ಅವರಿಗೆ ನಮ್ಮ ಕಲೆ, ಸಂಸ್ಕೃತಿ, ಸಂಪ್ರದಾಯಗಳನ್ನು ತಿಳಿಸುವ ಮೂಲಕ ಅವರನ್ನು ಸರಿದಾರಿಯಲ್ಲಿ ನಡೆಸುವುದು ನಮ್ಮ ಜವಬ್ದಾರಿಯಾಗಿದೆ ಎಂದು ತಿಳಿಸಿದರು.
ಜಿಲ್ಲೆಯು ಕಲಾ ಸಂಸ್ಕೃತಿಯ ನೆಲೆಬಿಡಾಗಿದ್ದು, ರಾಜ್ಯ ಮತ್ತು ರಾಷ್ಟç ಮಟ್ಟದಲ್ಲಿ ಮನ್ನಣೆ ಪಡೆಯುವುದರೊಂದಿಗೆ ಜಿಲ್ಲೆಗೆ ಕೀರ್ತಿ ತಂದಿರುವ ಕಲಾವಿದರನ್ನು ಯುವಜನತೆ ಮಾರ್ಗದರ್ಶಕರನ್ನಾಗಿಸಿಕೊಳ್ಳಬೇಕು. ಯುವ ಸಂಭ್ರಮದ ಮೂಲಕ ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಲು ವೇದಿಕೆಯನ್ನು ಕಲ್ಪಿಸಲಾಗಿದ್ದು, ಅಕ್ಟೋಬರ್ 10ರವರೆಗೆ ನಡೆಯುವ ಯುವ ಸಂಭ್ರಮ ಕಾರ್ಯಕ್ರಮದಲ್ಲಿ ಸಾವಿರಾರು ಸ್ಥಳೀಯ ಕಲಾವಿದರು ಭಾಗವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಶಾಸಕ ಜಿ.ಬಿ. ಜ್ಯೋತಿ ಗಣೇಶ್, ವಿಶ್ವದಲ್ಲೇ ಅತೀ ಹೆಚ್ಚು ಯುವಕ-ಯುವತಿಯರನ್ನು ಭಾರತ ಹೊಂದಿದ್ದು, ಯುವ ಜನತೆ ದೇಶದ ಶಕ್ತಿಯಾಗಿದ್ದಾರೆ. ಆದರೆ ದೇಶದ ಯುವ ಜನತೆ ನಿರಾಸಕ್ತಿಗೊಳಗಾಗುತ್ತಿರುವುದು ಅತಂಕ ಪಡುವಂತಾಗಿದ್ದು, ಯುವ ಜನತೆಯನ್ನು ಕ್ರೀಯಾಶೀಲರನ್ನಾಗಿಸಲು ನಮ್ಮ ಸಂಸ್ಕೃತಿ, ಸಂಪ್ರದಾಯಗಳನ್ನು ತಿಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಪಾವಗಡ ಶಾಸಕ ಹೆಚ್.ವಿ. ವೆಂಕಟೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ್ ಕು. ಮಿರ್ಜಿ ಸೇರಿದಂತೆ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.