ಗುಬ್ಬಿ : ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಡಿವೈಡರ್ ಗೆ ಕಾರು ಡಿಕ್ಕಿ ಹೊಡೆದು 8 ವರ್ಷದ ಹೆಣ್ಣು ಮಗು ಶಾಲಿನಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಮತ್ತೊಂದು ಮಗು ಚಿಂತಾಜನಕ ಸ್ಥಿತಿಗೆ ತಲುಪಿರುವ ಹೃದಯ ವಿದ್ರಾವಕ ಘಟನೆ ಗುಬ್ಬಿ ತಾಲ್ಲೂಕಿನ ದೊಡ್ಡಗುಣಿ ಸಮೀಪದ ರಾಷ್ಟ್ರೀಯ ಹೆದ್ದಾರಿ 73 ರಲ್ಲಿ ನಡೆದಿದೆ.
ಹೋಂಡೈ ವೆನ್ಯೂ ಹೆಸರಿನ KA 06 MB ಕಾರಿನಲ್ಲಿ ಚಾಲಕ ಮಲ್ಲಿಕಾರ್ಜುನಯ್ಯ ಮಕ್ಕಳಾದ ಶಾಲಿನಿ, ಬಸವೇಶ್, ಗಗನ್, ಕರಣ್, ಸೇರಿದಂತೆ ಶ್ರೇಯಸ್ ಪ್ರಯಾಣಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಓರ್ವ ಮಗುವಿನ ಸ್ಥಿತಿ ಗಂಭೀರವಾಗಿದ್ದು ಇನ್ನು 3 ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿದೆ ಜೊತೆಗೆ ಹಿಂಬದಿಯ ಕಾರಿನಲ್ಲಿ ಮಕ್ಕಳ ಪೋಷಕರು ಪ್ರಯಾಣ ಮಾಡುತ್ತಿದ್ದರು ಎನ್ನಲಾಗಿದೆ.
5 ಮಕ್ಕಳ ಪೈಕಿ ಎಲ್ಲರೂ 8 ಮತ್ತು 5 ವರ್ಷದ ಮಕ್ಕಳಾಗಿದ್ದು 4 ಮಂದಿ ಗಂಡು ಮಕ್ಕಳು, ಒಂದು ಹೆಣ್ಣು ಮಗು ಆಗಿದ್ದು ಇವರೆಲ್ಲ ಗುಬ್ಬಿ ತಾಲ್ಲೋಕಿನ ಕೆ ಮತ್ತಿಘಟ್ಟ ಮತ್ತು ಕಲ್ಲೂರು ಕ್ರಾಸ್ ಗ್ರಾಮದವರಾಗಿದ್ದಾರೆ. ಮಕ್ಕಳನ್ನೆಲ್ಲ ಒಂದು ಕಾರಿನಲ್ಲಿ ಕೂರಿಸಿ ದೊಡ್ಡವರೆಲ್ಲ ಮತ್ತೊಂದು ಕಾರಿನಲ್ಲಿ ಪ್ರಯಾಣ ಬೆಳೆಸುತ್ತಿದ್ದರು.ಮನೆ ದೇವರಾದ ಕಾರೆಗುರ್ಚಿ ಬಳಿಯ ಗಂಗಾ ಕ್ಷೇತ್ರಕ್ಕೆ ಕುಟುಂಬದೊಂದಿಗೆ ತೆರಳಿ ದೇವರ ದರ್ಶನ ಪಡೆದು ವಾಪಸ್ ಊರಿಗೆ ಮರಳುವಾಗ ಈ ದುರ್ಘಟನೆ ಸಂಭವಿಸಿದೆ.
ಘಟನಾ ಸ್ಥಳಕ್ಕೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕುಮಾರ್ ಕೆವಿ ಭೇಟಿ ನೀಡಿದ್ದು ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.