ಜಿಲ್ಲೆತುಮಕೂರು

ಭಾರತದ ಸಂವಿಧಾನ ವಿಶ್ವದ ಶ್ರೇಷ್ಠ ಸಂವಿಧಾನ : ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್

ತುಮಕೂರು : ಭಾರತದ ಸಂವಿಧಾನವು ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾನತೆ, ನ್ಯಾಯ ಮತ್ತು ಸ್ವಾತಂತ್ರ್ಯ ಒದಗಿಸಿದೆ . ಭಾರತದ ಸಂವಿಧಾನ ದೇಶದ ಪ್ರಜೆಗಳ ಸರ್ವ ಸಮಾನತೆಗೆ ಕಾನೂನಿನ ಭದ್ರ ಅಡಿಪಾಯ ಹಾಕಿ‌ಕೊಟ್ಟಿದೆ.
ಸಂವಿಧಾನದ ಮಹತ್ವದ ಬಗ್ಗೆ ಎಲ್ಲರಿಗೂ ಅರಿವು ಮೂಡಿಸುವುದು, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವುದರ ಜತೆಗೆ ಅವರ ಸಾಧನೆಯ ಬಗ್ಗೆ ತಿಳಿಸಿ ಕೊಡುವುದು ‘ಭಾರತ ಸಂವಿಧಾನ’ ದಿನಾಚರಣೆಯ ವಿಶೇಷತೆ ಆಗಿದೆ ಎಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ಇಂದು ನಗರದ ಜಿಲ್ಲಾ ಗ್ರಂಥಾಲಯದ ಸಭಾಂಗಣದಲ್ಲಿ ಅಯೋಜಿಸಲಾಗಿದ್ದ ‘ಭಾರತ ಸಂವಿಧಾನ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಕ್ಕಳು, ಅಧಿಕಾರಿಗಳು, ಶ್ರೀಮಂತರು ಸೇರಿದಂತೆ ದೇಶದ ಎಲ್ಲಾ ಜನರಿಗೂ ಕಾನೂನು ಅನ್ವಯವಾಗುತ್ತದೆ, ನಾವೆಲ್ಲರೂ ಸಂವಿಧಾನದ ಚೌಕಟ್ಟಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ, ನವೆಂಬರ್ ೨೬ ಸ್ವತಂತ್ರ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹತ್ವದ ದಿನವಾಗಿದೆ. ೧೯೪೯ರ ನವೆಂಬರ್ ೨೬ ರಂದು ಸಂವಿಧಾನವನ್ನು ಅಳವಡಿಸಿಕೊಳ್ಳಲಾಯಿತು, ೭೪ ವರ್ಷಗಳು ಸಂದ ಈ ಸುಸಂದರ್ಭದಲ್ಲಿ ದೇಶದ ಸರ್ವೊಚ್ಚ ನ್ಯಾಯಾಲದ ಆವರಣದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ರವರ ಪ್ರತಿಮೆಯನ್ನು ರಾಷ್ಟಪತಿಗಳು ಆನಾವರಣ ಮಾಡಿದ್ದಾರೆ .
ಜಿಲ್ಲೆಯಲ್ಲಿ ಸಹ ಡಾ. ಬಿ.ಆರ್. ಅಂಬೇಡ್ಕರ್ ರವರ ಪ್ರತಿಮೆಯ ಸ್ಥಾಪಿಸಲು ಕ್ರಮವಹಿಸುವಂತೆ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಿ.ಪರಮೇಶ್ವರ್ ಸೂಚಿಸಿದ್ದು, ಪ್ರತಿಮೆಯ ಸ್ಥಾಪನೆಗೆ ಅಗತ್ಯ ಕ್ರಮ ವಹಿಸಲಾಗುತ್ತಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ನ್ಯಾ. ನೂರುನ್ನೀಸ ಅವರು, ಭಗವದ್ಗೀತೆ, ಖುರಾನ್, ಬ್ಯೆಬಲ್ ಸೇರಿದಂತೆ ಜಗತ್ತಿನ ಎಲ್ಲಾ ಧರ್ಮಗ್ರಂಥಗಳ ಶ್ರೇಷ್ಠ ಚಿಂತನೆಯ ಸಾರವನ್ನು ಭಾರತದ ಸಂವಿಧಾನ ಹೊಂದಿದ್ದು, ವಿವಿಧ ಸಂಸ್ಕೃತಿ, ಭಾಷೆಗಳನ್ನು ಒಳಗೊಂಡ ಭಾರತೀಯರನ್ನು ಒಗ್ಗೂಡಿಸುವ ಜತೆಗೆ ಭಾರತೀಯರಲ್ಲಿ ಮಾನವೀಯ ಗುಣಗಳನ್ನು ಮೂಡಿಸುವ ಹೊಣೆಗಾರಿಕೆಯನ್ನು ಸಂವಿಧಾನ ಯಶಸ್ವಿಯಾಗಿ ನಿಭಾಯಿಸಿದೆ, ಅಭಿವ್ಯಕ್ತಿ ಸ್ವಾತಂತ್ರ‍್ಯ, ವಾಕ್ ಸ್ವಾತಂತ್ರ‍್ಯ, ಸಾಮಾಜಿಕ, ಆರ್ಥಿಕ, ಸಮಾನತೆ, ಭ್ರಾತೃತ್ವ, ಪರಸ್ಪರ ವಿಶ್ವಾಸ ಹಾಗೂ ಎಲ್ಲಾ ಧರ್ಮೀಯರಿಗೆ ಗೌರವ ಹೀಗೆ ಎಲ್ಲಾ ವಿಚಾರಗಳು ಸಂವಿಧಾನದ ಪ್ರಸ್ತಾವನೆಯಲ್ಲಿ ಒಳಗೊಂಡಿದ್ದು ಸಂವಿಧಾನ ಎಲ್ಲರಿಗೂ ದಾರಿದೀಪವಾಗಿದೆ, ಅಲ್ಲದೇ ದೇಶದಲ್ಲಿ ಸಮೃದ್ಧಿ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಲು ಸಂವಿಧಾನವು ಸಹಾಯ ಮಾಡುತ್ತದೆ.
ಅವಕಾಶಗಳು ಎಲ್ಲಾರಿಗೂ ಸಮಾನವಾಗಿದ್ದು, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಕಂಡ ಕನಸನ್ನು ನನಸಾಗಿಸುವ ಹೊಣೆ ಯುವಜನಾಂಗದ ಮೇಲಿದೆ, ಇಂದಿನ ಮಕ್ಕಳೇ ಇಂದಿನ ಪ್ರಜೆಗಳಾಗಿದ್ದು, ಮಕ್ಕಳು ನೈತಿಕ ಮೌಲ್ಯಗಳನ್ನು ಅಳವಡಿಸಕೊಳ್ಳಬೇಕು, ಹಿರಿಯರನ್ನು ಗೌರವಿಸಬೇಕು, ‘ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೆ ದೇವತಾ’ ಎಂದು ಸ್ತ್ರೀಯರನ್ನು ಗೌರವವಾಗಿ ಕಾಣುವ ದೇಶ ನಮ್ಮದಾಗಿದ್ದು, ಎಲ್ಲಾ ವಿಧ್ಯಾರ್ಥಿಗಳು, ಯುವಜನರು ಕಾನೂನು ನೀಡಿದ ಅವಕಾಶಗಳನ್ನು ಸದೋಪಯೋಗ ಪಡಿಸಿಕೊಂಡು ಸರಿಯಾದ ಮಾರ್ಗದಲ್ಲಿ ಜೀವನ ರೂಪಿಸಿಕೊಳ್ಳುತ್ತಾ ಸುಸ್ಥಿರ ದೇಶ ಕಟ್ಟಬೇಕು ಎಂದು ಕರೆ ನೀಡಿದರು.

ಉಪನ್ಯಾಸ ನೀಡಿ ಮಾತನಾಡಿದ ಅಂಕಣ ಬರಹಗಾರ ಶಿವಸುಂದರ್ ಸಂವಿಧಾನ ದಿನ ಎಂದು ಆಚರಣೆ ಶುರುವಾಗಿದ್ದು ೨೦೧೫ರಿಂದ. ಅದಕ್ಕೂ ಮುನ್ನ ಕಾನೂನು ದಿನವಾಗಿ ಆಚರಿಸಲಾಗುತ್ತಿತ್ತು, ಭಾರತದಲ್ಲಿ ಸಂವಿಧಾನ ಅಂಗೀಕಾರವಾಗಿದ್ದು ೧೯೪೯ ರ ನವೆಂಬರ್ ೨೬ ರಂದೇ, ನಮ್ಮ ದೇಶದಲ್ಲಿ ಹೊಸ ಶಕೆ ಆರಂಭವಾಗಿದ್ದು ಸಂವಿಧಾನ ಜಾರಿಗೆ ಬಂದಾಗಿನಿAದಲೇ, ಸ್ವಾತಂತ್ರ‍್ಯ ಬಂದ ನಂತರ ಯಾವ ರೀತಿ ದೇಶ ನಡೆಸಬೇಕು, ಯಾವ ರೀತಿಯ ಹಕ್ಕುಗಳು, ಕರ್ತವ್ಯಗಳು, ಕಾನೂನುಗಳು ದೇಶದಲ್ಲಿ ಇರಬೇಕು ಎಂಬ ತೀರ್ಮಾನ ಮಾಡಲು ಸಂವಿಧಾನ ಸಮಿತಿ ರಚನೆಯಾಯ್ತು, ನಮ್ಮ ಸಂವಿಧಾನ ದೇಶದ ಜನರನ್ನು ಸಶಕ್ತಗೊಳಿಸಿದೆ. ಸರ್ವರಿಗೂ ಸಮಾನತೆಯೊದಗಿಸಿದೆ. ಮೂಲಭೂತ ಹಕ್ಕುಗಳು, ಕರ್ತವ್ಯವನ್ನೂ ನೀಡಿದೆ. ಭಾರತಕ್ಕೆ ಸಂವಿಧಾನವೇ ದೊಡ್ಡ ಬಲ. ನಮ್ಮ ಸಂವಿಧಾನವು ನಮ್ಮೆಲ್ಲರನ್ನು ರಕ್ಷಿಸುವ ಬಹುದೊಡ್ಡ ಕಾನೂನು ಎಂದರು, “ರಕ್ತಪಾತವಿಲ್ಲದೇ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಳನ್ನು ತರುವಂತಹ ವ್ಯವಸ್ಥೆಯೇ ಪ್ರಜಾಪ್ರಭುತ್ವ’ ಎನ್ನುವ ಮೂಲ ಮಂತ್ರದೊಂದಿಗೆ ನಮ್ಮ ಸಂವಿಧಾನವನ್ನು ರಚಿಸಲಾಗಿದೆ. ಸಂವಿಧಾನ ಪೀಠಿಕೆ, ಭ್ರಾತೃತ್ವ, ಸಾಮರಸ್ಯ ಹಾಗೂ ಸಮಾನತೆಯ ಕುರಿತು ಹೆಚ್ಚು ತಿಳಿಯುವುದು ಅತಿ ಮುಖ್ಯ. ಇದನ್ನು ಚಾಚೂತಪ್ಪದೇ ಆಚರಿಸಿದಾಗ ಮಾತ್ರ ನಮ್ಮ ದೇಶ ಸರ್ವ ಜನಾಂಗದ ಶಾಂತಿಯ ತೋಟವಾಗಿ ಹೊರ ಹೊಮ್ಮಲಿದೆ ಎಂದರು.

ಕಾರ್ಯಕ್ರಮದಲ್ಲಿ ಸರ್ವರನ್ನು ಸ್ವಾಗತಿಸಿ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಕೃಷ್ಣಪ್ಪ ಅವರು ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಎನ್. ಗೋಪಾಲಸ್ವಾಮಿ ಬಿ.ಆರ್.ಅಂಬೇಡ್ಕರ್, ಕೆ.ಎಂ.ಮುನ್ಷಿ, ಮೊಹಮ್ಮದ್ ಸಾದುಲ್ಲಾ, ಟಿ.ಟಿ. ಕೃಷ್ಣಮಾಚಾರಿ ಮತ್ತು ಡಿ.ಪಿ.ಖೇತಾನ್ ಸೇರಿದಂತೆ ಕರಡು ಸಮಿತಿಯು ಏಳು ಸದಸ್ಯರನ್ನು ಹೊಂದಿತ್ತು, ಮೊದಲ ಸಭೆಯಲ್ಲಿ ಬಿ.ಆರ್.ಅಂಬೇಡ್ಕರ್ ಅವರನ್ನು ಕರಡು ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು, ವಿಶ್ವದಲ್ಲೇ ಶ್ರೇಷ್ಠವಾದ ಸಂವಿಧಾನ ನೀಡಿದ ಡಾ. ಬಿ.ಆರ್. ಅಂಬೇಡ್ಕರ್ ಅವರು ಯಾರೂ ಮರೆಯಲಾಗದ ಗಮನಾರ್ಹ ಕಾರ್ಯವನ್ನು ಮಾಡಿ ವಿಶ್ವದ ಶ್ರೇಷ್ಠ ಪುರುಷರಾಗಿದ್ದಾರೆ ಎಂದರು.

ಕಾರ್ಯಕ್ರಮ ನಿರೂಪಿಸಿ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆಯ ವಸತಿಶಾಲೆ ವಾರ್ಡನ್ ತನುಜಾ ಭಾರತೀಯ ಸಂವಿಧಾನದ ಪಿತಾಮಹ ಎಂದು ಕರೆಯಲ್ಪಡುವ ಬಿ.ಆರ್. ಅಂಬೇಡ್ಕರ್ (೧೪ ಏಪ್ರಿಲ್ ೧೮೯೧) ಅವರ ೧೨೫ ನೇ ಜನ್ಮದಿನದ ವರ್ಷವಾಗಿದ್ದು, ವರ್ಷವನ್ನು ಅದ್ಧೂರಿಯಾಗಿ ಆಚರಿಸಲು ಸರ್ಕಾರ ನಿರ್ಧರಿಸುವುದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮುಂಬೈಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಸ್ಮಾರಕಕ್ಕೆ ಅಡಿಗಲ್ಲು ಹಾಕುವ ಸಂದರ್ಭದಲ್ಲಿ ನವೆಂಬರ್ ೨೬ ರಂದು ಸಂವಿಧಾನ ದಿನವನ್ನಾಗಿ ಆಚರಿಸುವಂತೆ ಘೋಷಣೆ ಮಾಡಿದ್ದರು ಎಂದು ಹೇಳಿದರು.
ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ರೇಷ್ಮೇ ಇಲಾಖೆಯ ಉಪನಿರ್ದೇಶಕರಾದ ರಾಮಕೃಷ್ಣ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ರವೀಶ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ತ್ಯಾಗರಾಜ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker