ಗುಬ್ಬಿ: ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ತಂಬಾಕು ಉತ್ಪನ್ನಗಳ ಉತ್ಪಾದನೆ, ಸರಬರಾಜು ಮತ್ತು ಮಾರಾಟದ ಮೇಲೆ ನಿಯಂತ್ರಣ ಹೇರಲು ಸರ್ಕಾರದ ಆದೇಶದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ತಾಲ್ಲೂಕು ವೈದ್ಯಾಧಿಕಾರಿ ಡಾ.ಬಿಂದು ಮಾಧವ ಅವರ ನೇತೃತ್ವದಲ್ಲಿ ಪಟ್ಟಣದ ಸಿಗರೇಟ್ ಝೋನ್ ಗಳಿಗೆ ದಾಳಿ ಮಾಡಿ ದಂಡ ವಿಧಿಸಿ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಿದರು.
ಪಟ್ಟಣದ ಪ್ರಮುಖ ರಸ್ತೆಗಳಲ್ಲಿರುವ ಎಲ್ಲಾ ಚಹಾ ಅಂಗಡಿ, ಹೋಟೆಲ್ ಹಾಗೂ ಗೂಡಂಗಡಿಗಳ ಮೇಲೆ ದಿಢೀರ್ ದಾಳಿ ನಡೆಸಿ ಸಿಗರೇಟ್ ಹಾಗೂ ಬೀಡಿ ಸೇವನೆಗೆ ಅವಕಾಶ ಮಾಡಿದ ಅಂಗಡಿ ಮಾಲೀಕರಿಗೆ ದಂಡ ವಿಧಿಸಿದರು. ನಂತರ ಕರಪತ್ರ ನೀಡಿ ತಂಬಾಕು ನಿಯಂತ್ರಣಕ್ಕೆ ಸಹಕರಿಸಲು ಸೂಚಿಸಿ ಜಾಗೃತಿ ಮೂಡಿಸುವ ಕೆಲಸ ಮಾಡಿದರು.
ತಾಲ್ಲೂಕು ವೈದ್ಯಾಧಿಕಾರಿ ಡಾ.ಬಿಂದು ಮಾಧವ ಸುದ್ದಿಗಾರರೊಂದಿಗೆ ಮಾತನಾಡಿ ತಂಬಾಕು ನಿಯಂತ್ರಣ ಕಾಯಿದೆಯಲ್ಲಿನ ಸೆಕ್ಷನ್ 4 ಮತ್ತು 5 ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಹಾಗೂ ತಂಬಾಕು ಉತ್ಪನ್ನಗಳ ನೇರ, ಪರೋಕ್ಷ ಜಾಹೀರಾತು ಉತ್ತೇಜನ ಪ್ರಾಯೋಜಕತೆ ಮೇಲೆ ನಿಷೇಧ ಹೇರಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಸಿಗರೇಟು ಸೇವನೆ ಕಂಡು ಬಂದಲ್ಲಿ ಪ್ರತಿ ಉಲ್ಲಂಘನೆಗೆ ರೂ 200 ದಂಡ ಸ್ಥಳದಲ್ಲೇ ವಿಧಿಸಲಾಗುವುದು ಎಂದರು.
ಸಾರ್ವಜನಿಕ ಸ್ಥಳವನ್ನು ಧೂಮಪಾನ ಮುಕ್ತವಾಗಿಸಲು ಅಂಗಡಿಗಳಲ್ಲಿ ಧೂಮಪಾನ ನಿಷೇಧದ ಬೋರ್ಡ್ ಹಾಕಬೇಕು, ಸಾರ್ವಜನಿಕರಿಗೆ ಸಿಗರೇಟ್ ಸೇವನೆಗೆ ಅವಕಾಶ ಮಾಡದಂತೆ ಗ್ರಾಹಕರಿಗೆ ಸೂಚಿಸಲು ಅಂಗಡಿ ಮಾಲೀಕರಿಗೆ ತಿಳುವಳಿಕೆ ನೀಡಿದ ಅಧಿಕಾರಿಗಳು ಸಿಗರೇಟ್ ಮಾರಾಟ ಮಾಡಬಾರದು. ಉತ್ತಮ ಆರೋಗ್ಯ ಸಮಾಜ ನಿರ್ಮಾಣಕ್ಕೆ ಎಲ್ಲಾ ಅಂಗಡಿ ಮಾಲೀಕರು ಸಹಕರಿಸಬೇಕು. ಮುಂದಿನ ದಿನಗಳಲ್ಲಿ ನೇರ ದಾಳಿ ಮಾಡಿ ತಂಬಾಕು ಉತ್ಪನ್ನಗಳನ್ನು ವಶಕ್ಕೆ ಪಡೆಯುವ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ನಿರೀಕ್ಷಕ ಜಯಣ್ಣ, ಕ್ಷೇತ್ರ ಸಮನ್ವಯಾಧಿಕಾರಿ ಮಧುಸೂದನ್, ಎಎಸೈ ನಹೀಂ ಇತರರು ಇದ್ದರು.