ತುಮಕೂರು : ಬಹುಪಾಲು ಉದ್ಯೋಗಿಗಳೇ ಪ್ರಯಾಣಿಸುವ ಅರಸೀಕೆರೆ-ಕೆಎಸ್‌ಆರ್ ಪ್ಯಾಸೆಂಜರ್ ರೈಲು ತುಂಬಾ ವಿಳಂಬವಾಗಿ ಸಂಚರಿಸುತ್ತಿದೆ. ಇದರಿಂದ ಕೆಲಸಗಳಿಗೆ ಹೋಗಲು ಇದೇ ರೈಲನ್ನು ಅವಲಂಬಿಸಿರುವ ಸಾವಿರಾರು ಜನರು ಉದ್ಯೋಗ ಕಳೆದುಕೊಳ್ಳು ಭೀತಿಯಲ್ಲಿದ್ದಾರೆ. ಸಮಯಕ್ಕೆ ಸರಿಯಾಗಿ ಬೆಂಗಳೂರು ತಲುಪುವಂತೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ವಿಭಾಗೀಯ ವ್ಯವಸ್ಥಾಪಕರನ್ನು ಒತ್ತಾಯಿಸಲಾಯಿತು.
ಮಂಗಳವಾರ ಬೆಂಗಳೂರಿನ ನೈಋತ್ಯ ರೈಲ್ವೇ ವಿಭಾಗೀಯ ಮುಖ್ಯಸ್ಥರ ಕಚೇರಿಯಲ್ಲಿ ನಡೆದ ರೈಲು ಪ್ರಯಾಣಿಕರ ಸಲಹಾ ಸಮಿತಿ ಸದಸ್ಯರ ಸಭೆಯಲ್ಲಿ ವೇದಿಕೆ ಕಾರ್ಯದರ್ಶಿ ಹಾಗೂ ಸಮಿತಿ ಸದಸ್ಯ ಕರಣಂ ರಮೇಶ್, ಸದಸ್ಯರಾದ ಟಿ.ಆರ್. ರಘೋತ್ತಮ ರಾವ್ ಹಾಗೂ ಪ್ರತಾಪ್ ಸಿಂಗ್ ವಿಷಯ ಪ್ರಸ್ತಾಪಿಸಿ ರೈಲು ಸಂಚಾರ ವಿಳಂಬದಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಎಳೆಎಳೆಯಾಗಿ ವಿವರಿಸಿದರಲ್ಲದೆ, ಬೆಳಗ್ಗೆ 9.20ರ ವೇಳೆಗೆ ಬೆಂಗಳೂರು ತಲುಪುವಂತೆ ಸೂಕ್ತ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದರು. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಅಧಿಕಾರಿಗಳು ಎಕ್ಸ್ಪ್ರೆಸ್ ರೈಲುಗಳ ಸಂಚಾರದಲ್ಲಿ ವಿಳಂಬವಾಗುತ್ತಿರುವುದರಿಂದ ಹೀಗಾಗುತ್ತಿದೆ. ಇದನ್ನು ಸರಿಪಡಿಸಲು ಇರುವ ಸಾಧ್ಯತೆಗಳ ಬಗ್ಗೆ ಪರಿಶೀಲಿಸುವ ಭರವಸೆ ನೀಡಿದರು.
ಕೆಎಸ್‌ಆರ್-ಹುಬ್ಬಳ್ಳಿ ಸ್ಪೆಷಲ್ ರೈಲು ರದ್ದಾಗಿರುವುದರಿಂದ ಆ ರೈಲನ್ನು ಪ್ಯಾಸೆಂಜರ್ ಆಗಿ ಪರಿವರ್ತಿಸಿ, ಬೆಳಗ್ಗೆ 7.30 ರ ಆಸುಪಾಸಿಗೆ ಬೆಂಗಳೂರಿನಿಂದ ಹೊರಡುವಂತೆ ಓಡಿಸಬೇಕೆಂಬ ಸಲಹೆಗೆ ಅಧಿಕಾರಿಗಳು ಪೂರಕವಾಗಿ ಸ್ಪಂದಿಸಿದರು.
ಪ್ಯಾಸೆಂಜರ್ ಆಗಿ ಪರಿವರ್ತಿಸಿ : ಚಿಕ್ಕಮಂಗಳೂರು ರೈಲು ಹಾಗೂ ಸಂಜೆಯ ಶಿವಮೊಗ್ಗ ಇಂಟರ್‌ಸಿಟಿ ರೈಲುಗಳು ತುಮಕೂರು-ಬೆಂಗಳೂರು ಮಧ್ಯೆ ಎರಡು ಗಂಟೆಗಳಿಗೂ ಹೆಚ್ಚು ಕಾಲ ತೆಗೆದುಕೊಳ್ಳುವುದರಿಂದ ಈ ಎರಡೂ ರೈಲುಗಳನ್ನು ತಿಪಟೂರು ನಂತರ ಪ್ಯಾಸೆಂಜರ್ ಅಥವಾ ಫಾಸ್ಟ್ ಪ್ಯಾಸೆಂಜರ್ ಆಗಿ ಬದಲಾಯಿಸಿ ಓಡಿಸಿದರೆ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದಾಗ ಈ ಬಗ್ಗೆ ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ.
ಅರಳುಗುಪ್ಪೆ, ಅಮ್ಮಸಂದ್ರದಲ್ಲಿ ನಿಲುಗಡೆಗೆ ಮನವಿ: ಚಿಕ್ಕಮಂಗಳೂರು ರೈಲಿಗೆ ಅರಳುಗುಪ್ಪೆಯಲ್ಲಿ ನಿಲುಗಡೆ ನೀಡುವಂತೆ ಹಾಗೂ ಕಾರಟಗಿ ರೈಲಿಗೆ ಅಮ್ಮಸಂದ್ರದಲ್ಲಿ ನಿಲುಗಡೆ ನೀಡುವಂತೆ ಮತ್ತೊಮ್ಮೆ ಮನವಿ ಮಾಡಿದ್ದು ಈ ಬಗ್ಗೆ ಮೈಸೂರು ವಲಯದ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡುವುದಾಗಿ ಬೆಂಗಳೂರು ವಲಯದ ಹಿರಿಯ ವಾಣಿಜ್ಯ ಅಧಿಕಾರಿ ಕೃಷ್ಣಾರೆಡ್ಡಿ ತಿಳಿಸಿದರು.
ತುಮಕೂರು ರೈಲು ನಿಲ್ದಾಣದ ಪಾರ್ಕಿಂಗ್ ವ್ಯವಸ್ಥೆ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಯಿತು. ತುಮಕೂರು ರೈಲು ನಿಲ್ದಾಣ ಆಧುನೀಕರಣಗೊಳ್ಳುತ್ತಿದ್ದು, ಈ ಯೋಜನೆಯಲ್ಲಿ ಬಹುಮಹಡಿ ನಿಲ್ದಾಣ ನಿರ್ಮಾಣವಾಗಲಿದೆ. ಆ ಕೆಲಸ ಬರುವ ಮಾರ್ಚ್ ಒಳಗೆ ಬಹುಪಾಲು ಮುಗಿಯಬೇಕಿದೆ. ಅದಕ್ಕೂ ಮುಂಚೆ ತಾತ್ಕಾಲಿಕವಾಗಿ ಕಾಂಕ್ರೀಟ್ ಹಾಕಿ ನೆಲ ಸಮ ಮಾಡುವ ಕೆಲಸ ಮಾಡಿಸುವ ಬಗ್ಗೆ ಕ್ರಮ ತೆಗೆದುಕೊಳ್ಳಲು ಕಿರಿಯ ಅಧಿಕಾರಿಗೆ ಸೂಚಿಸಿದರು.
ಪಾರ್ಕಿಂಗ್ ಸ್ಟಾಂಡ್ ಸಿಬ್ಬಂದಿಯ ಅನುಚಿತ ವರ್ತನೆ ಬಗ್ಗೆಯೂ ದೂರುಗಳಿರುವ ಬಗ್ಗೆ ತಿಳಿಸಿದ್ದು ಕೂಡಲೇ ಗುತ್ತಿಗೆದಾರರನ್ನ ಕರೆಸಿ ಮಾತನಾಡಿ ಎಚ್ಚರಿಕೆ ನೀಡಲು ಕಿರಿಯ ಅಧಿಕಾರಿಗೆ ಸೂಚಿಸಿದರು.
ತುಮಕೂರು – ಯಶವಂತಪುರ/ಬೆಂಗಳೂರು ಮಧ್ಯೆ ನಿರಂತರ ರೈಲುಗಳ ಸಂಚಾರದ ಬಗ್ಗೆ ಮನವಿ ಮಾಡಿದ್ದು, ಹೊಸ ಮೆಮು ರೈಲುಗಳು ಆದಷ್ಟು ಬೇಗ ಲಭ್ಯವಾಗುವ ವಿಶ್ವಾಸವಿದ್ದು ತುಮಕೂರಿಗೆ ಆದ್ಯತೆಯ ಮೇರೆಗೆ ಓಡಿಸಲಾಗುವುದು. ಈ ಬಗ್ಗೆ ಜಿಎಂ ಅವರಿಗೂ ಮಾಹಿತಿ ನೀಡಲಾಗಿದೆ ಎಂದು ಸೀನಿಯರ್ ಡಿಓಎಂ ನವೀನ್ ತಿಳಿಸಿದರು.
ಪ್ರಸ್ತುತ ಇರುವ 1ಎ ಲೈನನ್ನು ವಿಸ್ತರಿಸಿ 20 ಬೋಗಿಗಳ ರೈಲು ನಿಲುಗಡೆಗೆ ಅವಕಾಶ ಮಾಡಬಹುದು ಎಂದು ಸದಸ್ಯ ರಘೋತ್ತಮ ರಾವ್ ಅವರ ಸಲಹೆಗೆ ಸ್ಪಂದಿಸಿದ ಡಿಆರ್‌ಎಂ ಯೋಗೇಶ್ ಮೋಹನ್, ಈ ಬಗ್ಗೆ ತಯಾರಿಸಿರುವ ನೀಲನಕ್ಷೆ ನೀಡುವಂತೆ ತಿಳಿಸಿದರು.
ತುಮಕೂರಿನಿಂದ ಅರಸೀಕೆರೆ ಮಾರ್ಗವಾಗಿ ಹಾಸನಕ್ಕೆ ಡೆಮು/ಮೆಮು ರೈಲು ಸಂಚಾರಕ್ಕೆ ಮಾಡಿದ ಮನವಿಗೆ ಸ್ಪಂದಿಸಿದ ಅಧಿಕಾರಿಗಳು, ಅರಸೀಕೆರೆ ಮಾರ್ಗ ವಿದ್ಯುದೀಕರಣ ಆಗುತ್ತಿದೆ. ಅದು ಪೂರ್ಣಗೊಂಡ ನಂತರ ಮೆಮು ರೈಲು ಸಂಚಾರಕ್ಕೆ ಯೋಚಿಸಬಹುದು. ವಿದ್ಯುದೀಕರಣವಾಗಿರುವ ಮಾರ್ಗದಲ್ಲಿ ಡೆಮು ರೈಲು ಸಂಚಾರಕ್ಕೆ ಅನುಮತಿ ನೀಡಬಾರದು ಎಂದು ರೈಲ್ವೇ ಮಂಡಳಿ ಸೂಚನೆ ಇರುವುದರಿಂದ ಆ ಮಾರ್ಗದ ವಿದ್ಯುದೀಕರಣ ಪೂರ್ಣಗೊಂಡ ನಂತರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಯಶವಂತಪುರ ನಿಲ್ದಾಣ ಆಧುನೀಕರಣಕ್ಕೆಂದು ನಿಲ್ದಾಣದ ಒಂದು ಪ್ರವೇಶದ್ವಾರವನ್ನು ಮುಚ್ಚಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಕನಿಷ್ಟ ಹತ್ತ ಅಡಿಗಳಷ್ಟು ಜಾಗ ಮಾಡಿಕೊಟ್ಟು ಒಂದು ಟಿಕೆಟ್ ಕೌಂಟರ್ ಅಥವಾ ಟಿಕೆಟ್ ವೆಂಡಿಂಗ್ ಮಿಷಿನ್ ಹಾಕಿದರೆ ಅನುಕೂಲವಾಗಲಿದೆ. ಕಾಮಗಾರಿ ಕೆಲಸ ಬೇಗ ಮುಗಿಯುವುದಿಲ್ಲ. ಹಾಗಾಗಿ ಇದು ಅನಿವಾರ್ಯ ಎಂದು ಮನವರಿಕೆ ಮಾಡಿದ್ದು ಈ ಬಗ್ಗೆ ಪರಿಶೀಲಿಸಲು ಡಿಆರ್‌ಎಂ ಯೋಗೇಶ್ ಮೋಹನ್ ಸೂಚಿಸಿದರು.
ಸಭೆಯಲ್ಲಿ ಡಿಆರ್‌ಎಂ ಯೋಗೇಶ್ ಮೋಹನ್, ಸೀನಿಯರ್ ಡಿಸಿಎಂ ಕೃಷ್ಣಾರೆಡ್ಡಿ, ಸೀನಿಯರ್ ಡಿಓಎಂ ಸುನೀಲ್ ಮತ್ತಿತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.