ತುಮಕೂರು : ಪತ್ರಕರ್ತರಿಗೆ ಕೌತುಕ ಮತ್ತು ಸ್ಪಷ್ಟತೆ ಬಹಳ ಮುಖ್ಯ. ಪತ್ರಿಕೋದ್ಯಮ ವಿದ್ಯಾರ್ಥಿಗಳ ಯಶಸ್ಸಿಗೆ ವೃತ್ತಿ ಮತ್ತು ಪ್ರವೃತ್ತಿ ಒಂದೇ ಆಗಿರಬೇಕು. ಅದರಿಂದ ಕಾರ್ಯಕ್ಷಮತೆ ಲಭಿಸುತ್ತದೆ ಎಂದು ಏಷ್ಯಾನೆಟ್ ಸುವರ್ಣನ್ಯೂಸ್ ಸಂಪಾದಕ ಅಜಿತ್ ಹನಮಕ್ಕನವರ್ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವತಿಯಿಂದ ಗುರುವಾರ ಆಯೋಜಿಸಿದ್ದ ಇಂಪ್ರೆಶನ್-2023′ ಮಾಧ್ಯಮ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದರು.
ನಿರಂತರ ಕಲಿಕೆ ಮತ್ತು ಅಭ್ಯಾಸದಿಂದ ತಜ್ಞತೆ ಲಭಿಸುತ್ತದೆ. ಬದಲಾವಣೆಗೆ ವೇಗವಾಗಿ ಒಗ್ಗಿಕೊಳ್ಳುವ ಕ್ಷಮತೆ ಬೆಳೆಸಿಕೊಳ್ಳಬೇಕು. ಮಾಧ್ಯಮ ಕಲಿಕಾರ್ಥಿಗಳು ಮೊದಲು ಗುರಿ ತಲುಪಲು ಮಾನಸಿಕವಾಗಿ ತಯಾರಾಗಬೇಕು. ಆತ್ಮಸಂತೃಪ್ತಿ ನೀಡುವಂತಹ ವೃತ್ತಿಯನ್ನು ಆಯ್ದುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕೊಪ್ಪಳ ವಿಶ್ವವಿದ್ಯಾನಿಲಯದ ಕುಲಪತಿ ಬಿ. ಕೆ. ರವಿ, ವಿದ್ಯೆ, ವಿನಯ, ವಸ್ತುನಿಷ್ಠತೆ, ನಿರಂತರ ಶ್ರಮ, ಸದೃಢ ಮನಸ್ಥಿತಿ, ಈ ಐದು ಅಂಶಗಳನ್ನು ಪತ್ರಿಕೋದ್ಯಮ ಮತ್ತು ಸಂವಹನದ ವಿದ್ಯಾರ್ಥಿಗಳು ಅಳವಡಿಸಿಕೊಂಡರೆ ಭವಿಷ್ಯದಲ್ಲಿ ಉತ್ತಮ ಪತ್ರಕರ್ತರಾಗುತ್ತಾರೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಮನುಷ್ಯರಾದ ನಾವು ತಾಂತ್ರಿಕವಾಗಿ ಊಹೆಗೆ ನಿಲುಕದಷ್ಟು ಆವಿಷ್ಕಾರಗಳನ್ನು ಸೃಷ್ಟಿಸುತ್ತಿದ್ದೇವೆ. ಪ್ರತಿ ಆರು ತಿಂಗಳಿಗೊಮ್ಮೆ ಬದಲಾಗುವ ವಿದ್ಯುನ್ಮಾನಗಳ ಕುರಿತು ವಿಶೇಷ ಉಪನ್ಯಾಸ ಮತ್ತು ಕಾರ್ಯಾಗಾರಗಳ ಮೂಲಕ ಮಾಧ್ಯಮದ ವಿದ್ಯಾರ್ಥಿಗಳಲ್ಲಿ ಬದಲಾವಣೆಗೆ ವೇಗವಾಗಿ ಒಗ್ಗಿಕೊಳ್ಳುವ ಕ್ಷಮತೆಯನ್ನು ಬೆಳೆಸಬೇಕು ಎಂದರು.
ದುಬೈನ ಉನ್ನತ ತಂತ್ರಜ್ಞಾನ ಕಾಲೇಜಿನ ಅಪ್ಲೆöÊಡ್ ಮಾಧ್ಯಮ ವಿಭಾಗದ ಉಪನ್ಯಾಸಕ ಡಾ. ಶ್ರೀಶ ಎಂ. ಮಾತನಾಡಿ, ಇಂದಿಗೆ ಮಾಧ್ಯಮ ಕ್ಷೇತ್ರದಲ್ಲಿ ಅನೇಕ ಅವಕಾಶಗಳು ಮತ್ತು ಸಾಧ್ಯತೆಗಳಿವೆ. ಕರ್ತವ್ಯನಿಷ್ಠೆಯಷ್ಟೇ ಆದಾಯ ಗಳಿಕೆಯೂ ಬದುಕಿಗೆ ಅಗತ್ಯವೆಂಬುದನ್ನು ಅರಿತು ಯೋಜಿತವಾಗಿ ಕೆಲಸ ಮಾಡಬೇಕು. ಕೃತಕ ಬುದ್ಧಿಮತ್ತೆ ಪ್ರಪಂಚವನ್ನು ಆಳುವ ಕಾಲ ಸಮೀಪವಿದೆ ಎಂದು ಅಭಿಪ್ರಾಯಪಟ್ಟರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ತುಮಕೂರು ವಿಶ್ವವಿದ್ಯಾನಿಲಯದ ಮಾಧ್ಯಮ ಹಬ್ಬ ಹಾಗೂ ರಾಷ್ಟಿçÃಯ ಸಮ್ಮೇಳನ ಸಂಘಟನಾ ಕಾರ್ಯದರ್ಶಿ ಡಾ. ಸಿಬಂತಿ ಪದ್ಮನಾಭ ಕೆ.ವಿ., ಮಾಧ್ಯಮ ಕ್ಷೇತ್ರದಲ್ಲಿ ನಿರಂತರವಾಗಿ ಬದಲಾವಣೆಗಳಾಗುತ್ತಿರುತ್ತವೆ. ಹೊಸ ತಂತ್ರಜ್ಞಾನಗಳು ಹುಟ್ಟಿಕೊಳ್ಳುತ್ತಿರುತ್ತವೆ. ಅಂತಹ ಬದಲಾವಣೆಗಳ ಕುರಿತು ಸಮಾಜದಲ್ಲಿ ಸಾಕ್ಷರತೆ ಹೆಚ್ಚಿಸುವ ಸಲುವಾಗಿ ಹಾಗೂ ಮಾಧ್ಯಮದ ವಿದ್ಯಾರ್ಥಿಗಳಲ್ಲಿ ಕಾರ್ಯಕ್ಷೇತ್ರದ ಅನುಭವ ಒದಗಿಸುವ ಸಲುವಾಗಿ ಈ ಮಾಧ್ಯಮ ಹಬ್ಬವನ್ನು ಏರ್ಪಡಿಸಲಾಗಿದೆ ಎಂದರು.
ತುಮಕೂರ ವಿಶ್ವವಿದ್ಯಾನಿಲಯದ ಕುಲಸಚಿವೆ ನಾಹಿದಾ ಜûಮ್ ಜûಮ್, ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನ ಕುಮಾರ್ ಕೆ., ವಿವಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ. ಕರಿಯಣ್ಣ ಭಾಗವಹಿಸಿದ್ದರು.