ಶಿರಾ : ನಮ್ಮಲ್ಲಿ ಹಲವಾರು ಜನರು ಹಣವುಳ್ಳವರಿದ್ದಾರೆ. ಆದರೆ ಹೃದಯ ಶ್ರೀಮಂತಿಕೆ ಇರುವವರು ನಮ್ಮ ಚಿದಾನಂದ್ ಎಂ.ಗೌಡ ಅವರು ಚಿದಾನಂದ್ ಗೌಡ ಅವರು ಶಿರಾ ತಾಲ್ಲೂಕಿನ ಸುಮಾರು 1000 ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿ ಪ್ರತಿಭಾವಂತರನ್ನು ಪ್ರೋತ್ಸಾಹಿಸುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯ. ಇದು ರಾಜ್ಯಕ್ಕೆ ಮಾದರಿಯಾದ ಕಾರ್ಯಕ್ರಮ ಎಂದು ತುಮಕೂರಿನ ರಾಮಕೃಷ್ಣ ಆಶ್ರಮದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿಗಳು ನುಡಿದರು.
ಅವರು ನಗರದ ಸಿರಿಗಂಧ ಪ್ಯಾಲೇಸ್‌ನಲ್ಲಿ ಜೆಮ್ಸ್ ಎಜುಕೇಶನಲ್ ಟ್ರಸ್ಟ್ ವತಿಯಿಂದ 2022-23ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ. 80ಕ್ಕಿಂತ ಹೆಚ್ಚು ಹಾಗೂ ಪಿಯುಸಿಯಲ್ಲಿ ಶೇ. 85 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸುಮಾರು 2000 ರೂ. ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ಜೀವನದ ಯಶಸ್ಸಿಗೆ ಶೇ. 99 ರಷ್ಟು ಪರಿಶ್ರಮ ಹಾಕಿದರೆ ಶೇ. 1 ರಷ್ಟು ಉತ್ಸಾಹ ಇದ್ದರೆ ಸಾಧನೆ ಸಾಧ್ಯವಾಗುತ್ತದೆ. ಪ್ರತಿಭೆ ಎನ್ನುವುದು ಯಾರ ಮನೆಯ ಸ್ವತ್ತಲ್ಲ. ಯಾರು ಪ್ರಾಮಾಣಿಕ, ನಿರಂತರ ಮತ್ತು ಶ್ರದ್ಧೆಯಿಂದ ಅಧ್ಯಯನದಲ್ಲಿ ತೊಡಗಿಸಿಕೊಂಡು ಕಠಿಣ ಪರಿಶ್ರಮ ಪಡುತ್ತಾರೋ ಅವರಿಗೆ ಯಶಸ್ಸು ಲಭಿಸುತ್ತದೆ ಎಂದರು.
ಜೆಮ್ಸ್ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷರು ಹಾಗೂ ವಿಧಾನಪರಿಷತ್ ಸದಸ್ಯರಾದ ಚಿದಾನಂದ್ ಎಂ.ಗೌಡ ಅವರು ಮಾತನಾಡಿ ಮಕ್ಕಳ ಪ್ರಗತಿ ಶಿಕ್ಷಣದಿಂದ ಮಾತ್ರ ಸಾಧ್ಯ ಎಂಬುದನ್ನು ಅರಿತಿರುವ ನಾನು ಶಿರಾ ತಾಲ್ಲೂಕಿನಲ್ಲಿ ಹುಟ್ಟಿ ಬೆಳೆದು ನಮ್ಮ ತಾಲೂಕಿನ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ನನ್ನಿಂದ ಆದ ಸಹಾಯ ಮಾಡುತ್ತಿದ್ದೇನೆ. ಶಿರಾದಲ್ಲಿ ಪ್ರೆಸಿಡೆನ್ಸಿ ಶಾಲೆ ಸ್ಥಾಪಿಸಿದ ಹಿನ್ನೆಲೆಯಲ್ಲಿ ನಮ್ಮ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಸುಮಾರು 1000 ಮಂದಿ ವೈದ್ಯರಾಗಿದ್ದಾರೆ. ಅದಕ್ಕೂ ಮುನ್ನ ಶಿರಾದಿಂದ ವೈದ್ಯರಾಗುತ್ತಿದ್ದವರ ಸಂಖ್ಯೆ 3 ರಿಂದ 4 ಮಾತ್ರ ಇತ್ತು ಎಂದ ಅವರು ನಮ್ಮಲ್ಲಿ ಹಬ್ಬ ಹರಿದಿನ, ಜಾತ್ರೆಗಳಲ್ಲಿ ಅತಿ ಹೆಚ್ಚು ಜನ ಭಾಗವಹಿಸುತ್ತಾರೆ. ಆದರೆ ಶಿಕ್ಷಣದ ಜಾತ್ರೆಯಲ್ಲಿ ಶಿಕ್ಷಣದ ತೇರನ್ನು ಎಳೆಯಲು ಭಾವಸಹಿಸುವವರ ಸಂಖ್ಯೆ ಕಡಿಮೆ. ಆದರೆ ಇಂದು ಸುಮಾರು 2000 ಕ್ಕೂ ಹೆಚ್ಚು ಜನ ಭಾಗವಹಿಸಿದ್ದೀರಿ. ನಿಮ್ಮ ಉತ್ಸಾಹ ಹೀಗೆ ಇರಲಿ ಎಂದರು.
ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಅವರು ಮಾತನಾಡಿ ಯಾವ ಕುಟುಂಬದಲ್ಲಿ ಹೆಣ್ಣು ಆರೋಗ್ಯವಾಗಿರುತ್ತಾಳೋ, ಅಂತಹ ಕುಟುಂಬ ಸಂತೋಷವಾಗಿರುತ್ತಾರೆ. ಹೆಣ್ಣುಮಕ್ಕಳಲ್ಲಿರುವ ಸಹನೆ, ಶಕ್ತಿ, ತಾಳ್ಮೆ ನಮಗೆ ದೇವರು ಕೊಟ್ಟಿರುವ ವರ. ಆದ್ದರಿಂದ ಹೆಣ್ಣು ಮಕ್ಕಳು ಸಹನೆಯಿಂದ, ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡುತ್ತಾರೆ ಎಂದ ಅವರು ರಾಜಕಾರಣಿಗಳು ಕೇವಲ ರಾಜಕೀಯಕ್ಕಷ್ಟೆ ಸೀಮಿತರಾಗಿರುತ್ತಾರೆ. ಆದರೆ ಚಿದಾನಂದ್ ಎಂ.ಗೌಡ ಅವರು ರಾಜಕಾರಣಿಗಳು ಹಾಗೂ ಶಿಕ್ಷಣ ತಕ್ಷರು, ಸಮಾಜ ಸೇವಕರೂ ಆಗಿದ್ದಾರೆ. ಸುಮಾರು 1000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಇಂದು ಪ್ರತಿಭಾ ಪುರಸ್ಕಾರ ಮಾಡುತ್ತಿದ್ದಾರೆ. ಅವರ ಸೇವೆಯನ್ನು ಜನರು ಸ್ಮರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪಾಂಡುರಂಗಯ್ಯ, ಜ್ಞಾನಜ್ಯೋತಿ ಪ.ಪೂ. ಕಾಲೇಜಿನ ಪ್ರಾಂಶುಪಾಲ ಪರಮೇಶ್ ಗೌಡ, ಶ್ರೀ ಶಾರದಾ ಇಂಟರ್ ನ್ಯಾಷನಲ್ ಕೇಂಬ್ರಿಡ್ಜ್ ಶಾಲೆಯ ಕಾರ್ಯದರ್ಶಿ ಬಾಲಕೃಷ್ಣ, ಮುಖ್ಯ ಶಿಕ್ಷಕ ನದೀಮ್ ಅಜ್ಮತ್, ಮಂಜುಶ್ರೀ ಶಾಲೆಯ ಮಹಾಲಿಂಗಪ್ಪ, ಮಾಜಿ ತಾ.ಪಂ. ಸದಸ್ಯ ಹೊನ್ನಗೊಂಡನಹಳ್ಳಿ ಚಿಕ್ಕಣ್ಣ, ಮುಖಂಡ ಮದಲೂರು ಮುರ್ತಿ ಮಾಸ್ಟರ್, ನಿವೃತ್ತ ಶಿಕ್ಷಕ ಕುಮಾರ್, ಹಿರಿಯ ವೈದ್ಯ ಡಾ.ಕೆ.ರಾಮಕೃಷ್ಣ, ನರೇಶ್ ಬಾಬು, ಕರಿಯಣ್ಣ ಸೇರಿದಂತೆ ಹಲವರು ಹಾಜರಿದ್ದರು.