ತುಮಕೂರು : ಪ್ರತಿ ತಿಂಗಳ ಮೂರನೇ ಶುಕ್ರವಾರ “ಕಾರ್ಮಿಕ ಇಲಾಖೆಯ ನಡೆ ಕಾರ್ಮಿಕರ ಕಡೆ” ಎಂಬ ಶೀರ್ಷಿಕೆಯಡಿ ನೋಂದಣಿ ಅಭಿಯಾನವನ್ನು ತಾಲ್ಲೂಕುವಾರು ಕೈಗೊಂಡು ಕಟ್ಟಡ ಕಾರ್ಮಿಕರ ಹಾಗೂ ಅಸಂಘಟಿತ ಕಾರ್ಮಿಕರನ್ನು ‘ಇ-ಶ್ರಮ್ ಅಭಿಯಾನದಡಿ ನೋಂದಣಿ’ ಮಾಡಿಸುವಂತೆ ತುಮಕೂರು ಹಾಗೂ ಮಧುಗಿರಿ ಉಪವಿಭಾಗದ ಕಾರ್ಮಿಕ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿ ಮಾತನಾಡಿದ ಅವರು, ಗುತ್ತಿಗೆದಾರರ ಸಭೆಯನ್ನು ತಾಲ್ಲೂಕು ಮಟ್ಟದಲ್ಲಿ ಕರೆದು ಅವರ ಬಳಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ನೋಂದಣಿ ಮಾಡಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಸೂಚಿಸಿದ ಅವರು, ಅಸಂಘಟಿತ ಕಾರ್ಮಿಕರ ಹಾಗೂ ಕಟ್ಟಡ ಕಾರ್ಮಿಕರ ನೋಂದಣಿ ಕುರಿತು ಜಾಗೃತಿ ಮೂಡಿಸಿ, ಸೌಲಭ್ಯಗಳ ಮಾಹಿತಿ ನೀಡುವಂತೆ ತಿಳಿಸಿದ ಅವರು, ನಕಲಿ ಕಾರ್ಮಿಕರನ್ನು ಪತ್ತೆ ಹಚ್ಚುವಲ್ಲಿ ಸಾರ್ವಜನಿಕರ ಸಹಾಯ ಪಡೆಯುವಂತೆ ತಿಳಿಸಿದರು.
ತುಮಕೂರು ನಗರದ ಅಮಾನಿಕೆರೆಯ ಬಳಿಯ ಸೈಕಲ್ ಟ್ರಾö್ಯಕ್ ಸುತ್ತಮುತ್ತ ಬಹಳ ದಿನಗಳಿಂದ ಮಳೆ ನೀರು ನಿಂತು ವಾಸನೆ ಬರುತ್ತಿದ್ದು ಇದನ್ನು ಸ್ವಚ್ಛಗೊಳಿಸುವಂತೆ ಪಾಲಿಕೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಇಂದಿರಾ ಕ್ಯಾಂಟೀನ್‌ಗಳಲ್ಲಿ ಸಾರ್ವಜನಿಕರಿಗೆ ಮೂಲ ಸೌಕರ್ಯಗಳ ಒದಗಿಸುವಿಕೆ ಕ್ಷೀಪ್ರಗತಿಯಲ್ಲಿ ಆಗಬೇಕು, ಶೌಚಾಲಯಗಳು ಸ್ವಚ್ಚವಾಗಿರಬೇಕು, ಕುಡಿಯುವ ನೀರು, ಬೆಳಕಿನ ಲಭ್ಯತೆ ಇರಬೇಕು, ಆಹಾರ ಸ್ಯಾಂಪಲ್‌ಗಳನ್ನು ತರಿಸಿಕೊಂಡು ಆಗಾಗ್ಗೆ ಪರಿಶೀಲಿಸಬೇಕು ಎಂದು ನಗರ ಯೋಜನಾ ಪ್ರಾಧಿಕಾರ ಹಾಗೂ ಪಾಲಿಕೆಯ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.
ನಗರ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ರಸ್ತೆ ಗುಂಡಿಗಳು ಬಿದ್ದಿವೆಯೋ ಪರಿಶೀಲಿಸಿ ವರದಿ ನೀಡುವಂತೆ ಮತ್ತು ಗುಂಡಿ ಬಿದ್ದಿರುವ ರಸ್ತೆಗಳ ದುರಸ್ಥಿಗೆ ಕ್ರಮ ಕೈಗೊಳ್ಳುವಂತೆ ಪಾಲಿಕೆ ಉಪ ಆಯುಕ್ತೆ ಸುಮತಿ ಅವರಿಗೆ ಸೂಚಿಸಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ಪ್ರಗತಿ ಮತ್ತು ನಿರ್ವಹಣೆಯ ಪರಿಶೀಲನೆಯನ್ನು 15 ದಿನಗಳಿಗೊಮ್ಮೆ ಕೈಗೊಳ್ಳಬೇಕು ಹಾಗೂ ಸಿಸಿ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ನಿಯಮಿತವಾಗಿ ಪರಿಶೀಲಿಸುವಂತೆ ಸ್ಮಾರ್ಟ್ ಸಿಟಿ ಎಂ.ಡಿ ರಂಗಸ್ವಾಮಿ ಅವರಿಗೆ ಸೂಚಿಸಿದರು.
ಜಿಲ್ಲೆಯಾದ್ಯಂತ ದುರಸ್ತಿಯಾಗಬೇಕಿದ್ದ 101 ಶುದ್ದ ಕುಡಿಯುವ ನೀರಿನ ಘಟಕಗಳ ಪೈಕಿ 74 ಘಟಕಗಳು ದುರಸ್ಥಿಯಾಗಿದ್ದು, ಹಳೆಯ ಮತ್ತು ಹೊಸ ಪ್ರಕರಣ ಸೇರಿ ಇಲ್ಲಿಯವರೆಗೆ 64 ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿ ಬಾಕಿ ಇದ್ದು, ಇದನ್ನು ತಕ್ಷಣ ಕೈಗೊಳ್ಳುವಂತೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಇ ರವೀಶ್ ಅವರಿಗೆ ಸೂಚಿಸಿದರು.
ನಗರ ವಸತಿ ಯೋಜನೆಯಡಿ ಅನುಮೋದನೆಗಾಗಿ ಬಾಕಿ ಇರುವ ಮನೆಗಳ ಕುರಿತಂತೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ಸೂಚಿಸಿದರು.
ನಗರ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬಸ್ ಶೆಲ್ಟರ್‌ಗಳಿಲ್ಲದೆ ಮಳೆ ಹಾಗೂ ಬಿಸಿಲಿನಿಂದ ಜನರು ಬಳಲುತ್ತಿದ್ದು, ನರೇಗಾದಡಿ ಮೊದಲ ಆದ್ಯತೆ ಮೇರೆಗೆ ಒಂದು ಸಾವಿರ ಬಸ್ ನಿಲ್ದಾಣಗಳನ್ನು ಮುಖ್ಯ ಸ್ಥಳಗಳಲ್ಲಿ ನಿರ್ಮಿಸುವ ಕುರಿತಂತೆ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಅನುಮೋದನೆ ಪಡೆದು ಇಓಗಳು ಪ್ರಸ್ತಾವನೆ ಸಿದ್ಧಪಡಿಸುವಂತೆ ಮತ್ತು ಕೆಎಸ್‌ಆರ್‌ಟಿಸಿ ಅಧಿಕಾರಿಗಳೊಂದಿಗೆ ಚರ್ಚಿಸುವಂತೆ ತಿಳಿಸಿದರು.
ತಿಪಟೂರು ತಾಲ್ಲೂಕಿನ ಕೆಬಿ ಕ್ರಾಸ್ ಡಿಪೋ ಬಳಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸುವ ಸಂಬಂಧ ಡಿಹೆಚ್‌ಓ ಹಾಗೂ ಟಿಹೆಚ್‌ಓಗಳೊಂದಿಗೆ ಚರ್ಚಿಸಿ ಪ್ರಸ್ತಾವನೆ ಸಲ್ಲಿಸುವಂತೆ ತಿಪಟೂರು ತಹಶೀಲ್ದಾರ್ ಅವರಿಗೆ ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.