ತುಮಕೂರು : ಮಾಜಿ ಉಪಮುಖ್ಯಮಂತ್ರಿ ಹಾಗೂ ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಒತ್ತಾಯಿಸಿ ಇಂದು ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ್ ಯುವ ಸೈನ್ಯ(ರಿ), ಛಲವಾದಿ ಮಹಾಸಭಾ(ರಿ),ಡಾ.ಜಿ.ಪರಮೇಶ್ವರ್ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಮುಖಂಡರುಗಳು ನಗರದ ಟೌನ್ ಹಾಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಒತ್ತಾಯಿಸಿದರು.
ನಗರದ ಬಿ.ಜಿ.ಎಸ್.ವೃತ್ತ(ಟೌನ್‌ಹಾಲ್)ದಲ್ಲಿ ಸಮಾವೇಶಗೊಂಡಿದ್ದ ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ್ ಯುವ ಸೈನ್ಯ, ಛಲವಾದಿ ಮಹಾಸಭಾ(ರಿ) ಹಾಗೂ ಡಾ.ಜಿ.ಪರಮೇಶ್ವರ್ ಅಭಿಮಾನಿಗಳು, ನಗರಪಾಲಿಕೆಯ ಮೇಯರ್, ಸದಸ್ಯರುಗಳು, ವಿದ್ಯಾವಂತ, ದಕ್ಷ, ಪ್ರಾಮಾಣಿಕ ಮತ್ತು ಸಜ್ಜನ ರಾಜಕಾರಣಿ ಡಾ.ಜಿ.ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿಯಾಗುವ ಎಲ್ಲಾ ಆರ್ಹತೆಗಳಿದ್ದು,ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಈ ಬಾರಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ,ಕಾಂಗ್ರೆಸ್ ಪಕ್ಷದಲ್ಲಿ ಸಾಮಾಜಿಕ ನ್ಯಾಯವಿದೆ ಎಂಬುದನ್ನು ಸಾಭೀತು ಪಡಿಸುವಂತೆ ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಪಾಲಿಕೆಯ ವಿರೋಧಪಕ್ಷದ ಮಾಜಿ ನಾಯಕ ಜೆ.ಕುಮಾರ್,ಇಂದು ಕಾಂಗ್ರೆಸ್ ಪಕ್ಷ ಅತ್ಯಂತ ಬಹುಮತಗಳಿಸಿ,ಅಧಿಕಾರದ ಚುಕ್ಕಾಣಿ ಹಿಡಿಯುವ ಹಂತಕ್ಕೆ ಬಂದಿದೆ ಎಂದರೆ,ಅದರ ಹಿಂದೆ ಡಾ.ಜಿ.ಪರಮೇಶ್ವರ್ ಅವರ ಶ್ರಮವಿದೆ.ಮಧುಗಿರಿ ಮತ್ತು ಕೊರಟಗೆರೆ ಮೀಸಲು ಕ್ಷೇತ್ರಗಳಲ್ಲಿ ತಲಾ ಮೂರು ಬಾರಿ ಸೇರಿದಂತೆ 6ನೇ ಬಾರಿಗೆ ವಿಧಾನಸಭೆ ಪ್ರವೇಶಿಸಿರುವ ಡಾ.ಜಿ.ಪರಮೇಶ್ವರ್ ರೇಷ್ಮೆ ಸಚಿವರಾಗಿ,ಉನ್ನತ ಶಿಕ್ಷಣ,ವೈದ್ಯಕೀಯ ಶಿಕ್ಷಣ ಸಚಿವರಾಗಿ,ಗೃಹ ಸಚಿವರಾಗಿ,ಉಪಮುಖ್ಯಮಂತ್ರಿಯಾಗಿ ಸಣ್ಣ ಲೋಪದೋಷವೂ ಇಲ್ಲದೆ ಕಾರ್ಯನಿರ್ವಹಿಸಿದ್ದಾರೆ.ಅಲ್ಲದೆ ಈ ಬಾರಿಯ ಚುನಾವಣೆಯಲ್ಲಿ ಪ್ರಣಾಳಿಕೆ ಸಮಿತಿಯ ಅಧ್ಯಕ್ಷರಾಗಿ ಅತ್ಯಂತ ಉತ್ಕೃಷ್ಟ ಪ್ರಣಾಳಿಕೆ ನೀಡಿ,ಅದು ರಾಜ್ಯದ ಮತದಾರರ ಮನೆ ಮತ್ತು ಮನಗಳನ್ನು ತಲುಪುವಂತೆ ಮಾಡಿದ್ದಾರೆ.ಹಾಗಾಗಿ ಈ ಬಾರಿ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಯಾಗಿ ನೇಮಿಸುವ ಮೂಲಕ ಪಕ್ಷಕ್ಕಾಗಿ ದುಡಿದವರಿಗೆ ಮನ್ನಣೆ ನೀಡಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದರು.
ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ್ ಯುವ ಸೈನ್ಯದ ರಾಜ್ಯಾಧ್ಯಕ್ಷ ನಗುತಾ ರಂಗನಾಥ್ ಮಾತನಾಡಿ,ಕರ್ನಾಟಕದಲ್ಲಿ ಇಂದು ಕಾಂಗ್ರೆಸ್ 136 ಸೀಟುಗಳನ್ನು ಪಡೆದಿದೆ ಎಂದರೆ ಅದಕ್ಕೆ ಡಾ.ಜಿ.ಪರಮೇಶ್ವರ್ ಅವರು ಸಹ ಕಾರಣರು. ಎಲ್ಲಾ ಸಮುದಾಯದವರು,ಅದರಲ್ಲಿಯೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಐದು ಗ್ಯಾರಂಟಿಗಳ ಜೊತೆಗೆ,ಸುಮಾರು 500ಕ್ಕು ಹೆಚ್ಚು ಭರವಸೆಗಳನ್ನು ಒಳಗೊಂಡ ಸರ್ವವ್ಯಾಪಿ ಪ್ರಣಾಳಿಕೆಯನ್ನು ನೀಡಿದ್ದೇ ಕಾರಣ.ಅಲ್ಲದೆ ದೇಶಕ್ಕೆ ಸ್ವಾತಂತ್ರ ಬಂದು 75 ವರ್ಷಗಳು ಕಳೆದರೂ ಸಹ ಶೇ17ಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದಲಿತ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ದೊರೆತ್ತಿಲ್ಲ.ಅತ್ಯಂತ ಸಣ್ಣ ಸಮುದಾಯಗಳು ಸಹ ಮುಖ್ಯಮಂತ್ರಿ ಹುದ್ದೆಯನ್ನು ಅನುಭವಿಸಿವೆ.ಹಾಗಾಗಿ ಈ ಬಾರಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಮೂಲಕ ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯದ ಪರವಾಗಿದೆ ಎಂಬ ಸಂದೇಶವನ್ನು ದೇಶಕ್ಕೆ ಮುಟ್ಟಿಸಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಮಾಜಿ ಅಧ್ಯಕ್ಷ ಹಾಗೂ ಅಲ್ಪಸಂಖ್ಯಾತ ಸಮುದಾಯದ ಮುಖಂಡ ಅತೀಕ್ ಅಹಮದ್ ಮಾತನಾಡಿ,ಮಾಜಿ ಉಪಮುಖ್ಯಮಂತ್ರಿಗಳಾದ ಡಾ.ಜಿ.ಪರಮೇಶ್ವರ್ ಎಲ್ಲಾ ಸಮುದಾಯಗಳಿಗೂ ಬೇಕಾದ ವ್ಯಕ್ತಿ.ಎಂಟು ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷರಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸಿದ ಅವರ ಕಾಲದಲ್ಲಿ ಒಮ್ಮೆ ಪೂರ್ಣ ಪ್ರಮಾಣದಲ್ಲಿ ಮತ್ತೊಮ್ಮೆ ಸಮ್ಮಿಶ್ರ ಸರಕಾರದಲ್ಲಿ ಅಧಿಕಾರಕ್ಕೆ ತಂದವರು.ಅಲ್ಲದೆ ಈ ಬಾರಿಯ ಚುನಾವಣೆ ಸಂದರ್ಭದಲ್ಲಿ ಪ್ರಣಾಳಿಕೆ ಸಮಿತಿಯ ಅಧ್ಯಕ್ಷರಾಗಿ ಐದು ಗ್ಯಾರಂಟಿಗಳ ಜೊತೆಗೆ, ರಾಜ್ಯದ ಅರ್ಥಿಕ ಸ್ಥಿತಿ, ಗತಿಯನ್ನು ಅಧ್ಯಯನ ಮಾಡಿ, ಹಲವಾರು ಭರವಸೆಗಳನ್ನು ನೀಡಿದ್ದರ ಫಲವಾಗಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ.ಪಕ್ಷಕ್ಕೆ ನಿಷ್ಟರಾಗಿ ಕೆಲಸ ಮಾಡಿರುವ ಡಾ.ಜಿ.ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಮಾಡುವ ಮೂಲಕ ಕಾಂಗ್ರೆಸ್ ಪಕ್ಷದ ಯುವ ಕಾರ್ಯಕರ್ತರಿಗೆ,ಪಕ್ಷಕ್ಕಾಗಿ ದುಡಿದರೆ ಅಧಿಕಾರ ತಾನಾಗಿಯೇ ದೊರೆಯಲಿದೆ ಎಂಬ ಸ್ಪಷ್ಟ ಸಂದೇಶವನ್ನು ಪಕ್ಷ ನೀಡಬೇಕೆಂದು ಈ ಮೂಲಕ ಎಐಸಿಸಿ ಹಾಗೂ ಕೆಪಿಸಿಸಿಗೆ ಒತ್ತಾಯಿಸುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ತುಮಕೂರು ಮಹಾನಗರಪಾಲಿಕೆ ಮೇಯರ್ ಶ್ರೀಮತಿ ಪ್ರಭಾವತಿ ಸುಧೀಶ್ವರ್,ಪಾಲಿಕೆ ಸದಸ್ಯರಾದ ನಯಾಜ್ ಅಹಮದ್,ಛಲವಾದಿ ಮಹಾಸಭಾದ ರಾಜ್ಯ ನಿರ್ದೇಶಕ ನಾಗೇಶ್,ದಲಿತ ಛಲವಾದಿ ಮಹಾಸಭಾ ಅಧ್ಯಕ್ಷ ಡಾ.ಚಂದ್ರಪ್ಪ,ದೊಡ್ಡಸಿದ್ದಯ್ಯ,.ಶಿವಪ್ರಸಾದ್,ಇರಕಸಂದ್ರ ಜಗನ್ನಾಥ್,ನರಸಿಂಹಮೂರ್ತಿ,ಚಿಕ್ಕ ಕೊರಟಗೆರೆ ಕುಮಾರ್, ಎನ್.ಕೆ.ನಿಧಿ ಕುಮಾರ್, ಹರೀಶ್ ಕೊರಟಗೆರೆ, ಸಿದ್ದಲಿಂಗಯ್ಯ, ರಘು ವಕೀಲರು,ಮಾದಿಗ ದಂಡೋರ ಜಿಲ್ಲಾಧ್ಯಕ್ಷ ರಾಜೇಶ್, ನಿವೃತ್ತ ಅಧಿಕಾರಿ ಶಿವಣ್ಣ, ಕೆಪಿಸಿಸಿ ವೀಕ್ಷಕರಾದ ವಿಜಯಲಕ್ಷಿö್ಮ, ನಾಗಮ್ಮ,ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ್ ಯುವಸೈನ್ಯದ ವಸುಂಧರ,ಶ್ರೀಧರ್, ಓಂಕಾರ್ ಕೊಪ್ಪಕಲ್ಲು, ಮಂಜೇಶ್, ಸೈದಪ್ಪ ಡಾಂಗೆ ಮತ್ತಿತರರು ಭಾಗವಹಿಸಿದ್ದರು.