ತಿಪಟೂರು : ಮಠದ ವಿದ್ಯಾರ್ಥಿಗಳು ಹಾಗೂ ಭಕ್ತರೊಂದಿಗೆ ಸಿಹಿ ಹಂಚಿ ಕೆರೆಗೋಡಿ ರಂಗಾಪುರ ಸುಕ್ಷೇತ್ರದ ಗುರುಪರದೇಶೀಕೇಂದ್ರ ಸ್ವಾಮೀಜಿಯವರ 71ನೇ ಜನ್ಮ ವರ್ಧಂತಿ ಆಚರಣೆ ಸರಳವಾಗಿ ಮಠದ ಆವರಣದಲ್ಲಿ ನಡೆಯಿತು.
ತಾಲ್ಲೂಕಿನ ಕೆರೆಗೋಡಿ-ರಂಗಾಪುರ ಸುಕ್ಷೇತ್ರದ ಮಠದಲ್ಲಿ ತ್ರಿವಿಧ ದಾಸೋಹಿ ಏಳನೇ ಗುರುಪರದೇಶಿಕೇಂದ್ರ ಸ್ವಾಮೀಜಿಯವರ 71ನೇ ಜನ್ಮ ವರ್ಧಂತಿ ಮಹೋತ್ಸವದ ಅಂಗವಾಗಿ ಬುಧವಾರ ಕ್ಷೇತ್ರದ ಅಭಿಮಾನಿಗಳು, ಹಿರಿಯ ವಿದ್ಯಾರ್ಥಿ ಸಂಘದವರು, ಭಕ್ತಾಧಿಗಳು ಮಠದ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾತನಾಡಿದರು.
ಮನುಷ್ಯನ ಜನ್ಮ ತುಂಬಾ ಪವಿತ್ರವಾದದ್ದು ನಾವುಗಳು ಪ್ರತಿ ಕ್ಷಣವೂ ಒಳ್ಳೆಯದನ್ನು ಮಾಡುವ ಕಡೆ ಯೋಚಿಸುತ್ತಾ, ಯಾರಿಗೂ ಸಹ ಕೆಟ್ಟದನ್ನು ಬಯಸದೆ, ತೊಂದರೆ ಕೊಡದಂತೆ ನಾವುಗಳು ಜೀವನ ಮಾಡಬೇಕು. ಮಠದ ಏಳಿಗೆಗೆ ಭಕ್ತರ ಸಹಕಾರ ನಿರಂತರವಾಗಿದ್ದು ಇಲ್ಲಿನ ಆರಾಧ್ಯ ದೈವರಾದ ರಂಗ ಹಾಗೂ ಶಂಕರರ ಕೃಪೆ ಮತ್ತು ಹಿರಿಯ 6 ಪೂಜ್ಯರುಗಳ ಆಶೀರ್ವಾದವೇ ಮುಖ್ಯವಾಗಿದ್ದು ಇವರೆಲ್ಲರ ಆಶೀರ್ವಾದ ಸದಾ ಭಕ್ತಾದಿಗಳ ಮೇಲೆ ಇರುತ್ತದೆ. ಮಠ ಜಾತ್ಯತೀತವಗಿದ್ದು, ನಮ್ಮ ಸಂಸ್ಕೃತಿಯೂ ಅದೇ ಆಗಿದೆ. ಸಮಾಜದಲ್ಲಿ ಶಾಂತಿ ನೆಲೆಸಬೇಕಾದರೆಯಾವುದೇ ಧರ್ಮ, ಜಾತಿ ವೈಷಮ್ಯಗಳು ಬೇಕಾಗಿಲ್ಲ. ನಾವೆಲ್ಲರೂ ಭಾರತೀಯರು ಎಂಬ ಭಾವನೆ ಎಲ್ಲರಲ್ಲೂ ನೆಲೆಸಿ ಎಲ್ಲ ಧರ್ಮದವರನ್ನು ಪ್ರೀತಿ ಸಹಬಾಳ್ವೆಯಿಂದ ನಡೆಸಿಕೊಳ್ಳುವುವುದು ದೇಶಕ್ಕೆ ಹೆಮ್ಮೆಯ ಸಂಗತಿ ಎಂದರು.
ಗೋಡೆಕೆರೆ ಚರಪಟ್ಟಾಧ್ಯಕ್ಷ ಮೃತ್ಯುಂಜಯದೇಶಿಕೇಂದ್ರ ಸ್ವಾಮೀಜಿ ಮಾತನಾಡಿ ಸ್ವಾಮೀಜಿಯವರು ಸಾಮಾಜಿಕ ಹಾಗೂ ಧಾರ್ಮಿಕ ಕಾಳಜಿ ಹೊಂದಿದ್ದು ಮಾನವೀಯ ಮೌಲ್ಯದ ನೆಲೆಗಟ್ಟಿನಲ್ಲಿ ಕಾಯಕ ಮಾಡುತ್ತಾ ಭಕ್ತರದೊಂದಿಗೆ ಒಡನಾಟವಿಟ್ಟುಕೊಂಡು ಎಲ್ಲರ ಭಕ್ತಿಗೆ ಪಾತ್ರರಾಗಿದ್ದಾರೆ. ಹಿರಿಯ ಸ್ವಾಮೀಜಿಗಳು ಹಾಕಿಕೊಟ್ಟ ಧರ್ಮ ಮಾರ್ಗದಲ್ಲಿ ಸಾಗುತ್ತಾ ಮಠದ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ. ಮಠದ ಏಳಿಗೆಯ ಜೊತೆಯಲ್ಲಿ ಭಕ್ತರ ಕಷ್ಟಕಾರ್ಪಣ್ಯಗಳಿಗೂ ಸ್ಪಂದಿಸುತ್ತಾ ಸಮಾಜಮುಖಿಯಾಗಿದ್ದಾರೆ ಎಂದರು.
ಮಾಡಾಳು ರುದ್ರಮುನಿ ಸ್ವಾಮೀಜಿ ಮಾತನಾಡಿ ಸ್ವಾಮೀಜಿಯವರು ಅನ್ನ ದಾಸೋಹದ ಜೊತೆಗೆ ಜ್ಞಾನ ದಾಸೋಹ ನೀಡುವ ಮೂಲಕ ಶೈಕ್ಷಣಿಕ ಸೇವೆಯಲ್ಲಿ ನಿರತವಾಗಿದ್ದಾರೆ. ಗ್ರಾಮೀಣರ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡುತ್ತಿದ್ದು, ಇವರ ಸೇವೆ ಹೀಗೆ ಮುಂದುವರಿಯುತ್ತಿರಲಿ. ದೇವರು ಇವರಿಗೆ ಮತ್ತಷ್ಟು ಆಯುಷ್ಯಾರೋಗ್ಯ ಕೊಟ್ಟು ಕಾಪಾಡಲಿ ಇವರ ಆಶೀರ್ವಾದ ಸದಾ ಭಕ್ತರ ಮೇಲಿರಲಿ ಎಂದು ಆಶಿಸಿದರು.
ಕರಡಿಗವಿಮಠ ಸುಕ್ಷೇತ್ರದ ಶಿವಶಂಕರ ಶಿವಯೋಗಿ ಸ್ವಾಮೀಜಿ ಮಾತನಾಡಿ ಆಧ್ಯಾತ್ಮಿಕ ಹಾಗೂ ಸಮಾಜಮುಖಿ ಕೆಲಸ ಕಾರ್ಯಗಳ ಮೂಲಕ ಅಚ್ಚಳಿಯದೆ ಜನಮಾನಸದಲ್ಲಿ ಸ್ವಾಮೀಜಿಗಳು ಉಳಿದಿದ್ದಾರೆ. ಸಾವಿರಾರು ಮಕ್ಕಳಿಗೆ ಅನ್ನಾಶ್ರಯ ಕೊಟ್ಟು ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಾ, ಭಿಕ್ಷಾಟನೆ ಹಾಗೂ ಭಕ್ತರ ಸಹಕಾರದೊಂದಿಗೆ ಮಠವನ್ನು ಅಭಿವೃದ್ದಿಯ ಪಥದತ್ತ ಕೊಂಡೊಯ್ಯುತ್ತಿರುವ ಇವರ ಸೇವೆ ಸಮಾಜಕ್ಕೆ ಮತ್ತಷ್ಟು ನೀಡುವಂತಾಗಲಿ ಎಂದರು.
ಈ ಸಂದರ್ಭದಲ್ಲಿ ಜನ್ಮವರ್ಧಂತಿಯ ಅಂಗವಾಗಿ ಸುಕ್ಷೇತ್ರದಲ್ಲಿನ ಎಲ್ಲಾ ಗದ್ದುಗೆಗಳಿಗೆ ಮತ್ತು ರಂಗ- ಶಂಕರರಿಗೆ ವಿಶೇಷ ಹೋಮ ಹವನ, ಅಭಿಷೇಕ, ಪೂಜಾಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಮಠದಲ್ಲಿನ ವಿದ್ಯಾರ್ಥಿಗಳೊಂದಿಗೆ ಸ್ವಾಮೀಜಿ ಸಿಹಿ ಹಂಚಿ ಜನ್ಮವರ್ಧಂತಿ ಆಚರಿಸಿಕೊಂಡರು.
ಸಮಾರಂಭದಲ್ಲಿ ಪಂಡಿತ್ ತಗಡೂರು ವೀರಭದ್ರಪ್ಪ, ಕುಮಾರ್ ಆಸ್ಪತ್ರೆಯ ಡಾ. ಶ್ರೀಧರ್, ನಮ್ರತಾ ಆಯಿಲ್ನ ಶಿವಪ್ರಸಾದ್, ಹಿರಿಯ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಯು.ಬಿ.ಶಿವಪ್ಪ, ಉಪಾಧ್ಯಕ್ಷ ಬಸವರಾಜು, ಶರಣಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಜಿ.ಸಿದ್ದರಾಮಯ್ಯ, ತಾಲ್ಲೂಕು ಅಧ್ಯಕ್ಷ ಎಂ.ಜಿ.ಪರಮೇಶ್ವರಯ್ಯ, ಭದ್ರಪ್ಪ, ಶಂಕರಪ್ಪ, ಸಂಸ್ಕೃತ ಶಿಕ್ಷಕ ಗಂಗಣ್ಣ ಇದ್ದರು.