ಪಾವಗಡ : 2023ರ ವಿಧಾನಸಭಾ ಚುನಾಚಣೆಯಲ್ಲಿ ಕಾಂಗ್ರೆಸ್ ಪಕ್ಷ ಅವಕಾಶ ಮಾಡಿಕೊಟ್ಟರೆ ಪಾವಗಡ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಜಿ.ಪಂ ಮಾಜಿ ಸದಸ್ಯೆ ಗಾಯತ್ರಿ ಬಾಯಿ ತಿಳಿಸಿದರು.
ಶುಕ್ರವಾರ ವೀರಮ್ಮನಹಳ್ಳಿ ಗೇಟ್ ಬಳಿಯಿರುವ ತಮ್ಮ ತೋಟದ ಮನೆಯಲ್ಲಿ ಏರ್ಪಡಿಸಿದ್ದ ಔತಣ ಕೂಟ ಹಾಗೂ ಕೋಳಿ ಫಾರಂ ಘಟಕದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ನಮ್ಮ ತಂದೆ ಮಾಜಿ ಶಾಸಕ ಸೋಮ್ಲಾನಾಯಕ್ ರವರ ಸ್ನೇಹಿತರು ಹಾಗೂ ಸಾವಿರಾರು ಅಭಿಮಾನಿಗಳ ಸೂಚನೆಯಂತೆ ಕಾಂಗ್ರೆಸ್ ಪಕ್ಷದಿಂದ ಕೆರೆದಿದ್ದ 2023ರ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಟಿಕೆಟ್ ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಸಲಾಗಿದೆ, ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಥಾನಕ್ಕೆ ಬಾರೀ ಪೈಪೋಟಿಯಿದ್ದು ಪಕ್ಷ ಅವಕಾಶ ಕಲ್ಪಿಸಿದರೆ ಸ್ಪರ್ಧಿಸುತ್ತೇನೆ ಎಂದರು.
ಕ್ಷೇತ್ರದ ಹಿರಿಯರು ಹಾಗೂ ಯುವ ಜನತೆಯ ನಾಡಿಮಿಡಿತ ಅರಿತಿರುವ ನಾನು ನಮ್ಮ ತಂದೆಯೊಂದಿಗೆ ನಿರಂತರವಾಗಿ ರಾಜಕೀಯ ಸಭೆ ಸಮಾರಂಭಗಳಲ್ಲಿ ಭಾಗವಹಿಸಿ ಜನರ ಸೇವೆ ಮಾಡಿ ಗುರ್ತಿಸಿಕೊಂಡಿದ್ದೇನೆ, ಕ್ಷೇತ್ರದ ಜನತೆಗೆ ಹಲವಾರು ಅಭಿವೃದ್ದಿ ಯೋಜನೆಗಳನ್ನು ಪಟ್ಟಿ ಮಾಡಿಕೊಂಡಿರುವ ನನಗೆ ಪಕ್ಷ ಅವಕಾಶ ನೀಡಿದರೆ ಜನತೆಯ ಆಶೀರ್ವಾದ ಪಡೆದು ಗೆಲುವು ಸಾಧಿಸಿ ಪ್ರಾಮಾಣಿಕವಾಗಿ ಸೇವೆ ಮಾಡುತ್ತೇನೆ ಎಂದರು.
ನಮ್ಮ ತಂದೆ ಎರಡು ಬಾರಿ ಶಾಸಕರಾಗಿ ಕ್ಷೇತ್ರಕ್ಕೆ ಮಾಡಿರುವ ಸೇವೆ, ನಾನು ಜಿ.ಪಂ ಸದಸ್ಯಳಾಗಿ ಮಾಡಿರುವ ಸೇವೆಗಳು ಮತ್ತು ಕ್ಷೇತ್ರದಲ್ಲಿ ನಿರಂತರವಾಗಿ ಜನರೊಂದಿಗೆ ಜೀವನ ಸಾಗಿಸುತ್ತಿರುವ ನಮಗೆ ತಾಲೂಕಿನಲ್ಲಿ ಜನಾನುರಾಗಿಗಳಾಗಿ ಸೇವೆ ಮಾಡಲು ಸಾದ್ಯವಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ವೆಂಕಟರಮಣಪ್ಪ, ಮಾಜಿ ಶಾಸಕ ಸೋಮ್ಲಾನಾಯ್ಕ್, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಟಿ.ನರಸಿಂಹಯ್ಯ, ಮಾನಂ ವೆಂಕಟಸ್ವಾಮಿ, ಸೊಗಡು ವೆಂಕಟೇಶ್, ಕೋರ್ಟ್ ನರಸಪ್ಪ, ನಂಜುಂಡಸ್ವಾಮಿ, ಪ್ರಸಾದ್ ರೆಡ್ಡಿ. ಎಸ್ಟಿ ನಾಗರಾಜು, ಸಣ್ಣಾರೆಡ್ಡಿ, ಶಕುಂತಲಾಬಾಯಿ, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಸೇರಿದಂತೆ ಸುಮಾರು ಐದು ಸಾವಿರಕ್ಕೂ ಹೆಚ್ಚಿನ ಕಾರ್ಯಕರ್ತರುಗಳು ಹಾಜರಿದ್ದು ಗಾಯತ್ರಿ ಬಾಯಿ ರವರಿಗೆ ಶುಭಕೋರಿದರು.