ದೇಶದ ಎಲ್ಲಾ ವರ್ಗದ ಜನರು ಸ್ಮರಿಸುವಂತಹ ವ್ಯಕ್ತಿ ಡಾ.ಬಿ.ಆರ್.ಅಂಬೇಡ್ಕರ್ : ನರಸಿಂಹಮೂರ್ತಿ
ಬಿಜೆಪಿ ಎಸ್ಸಿ ಮೋರ್ಚಾದಿಂದ ಡಾ.ಬಿ.ಆರ್.ಅಂಬೇಡ್ಕರ್ ಪರಿನಿಬ್ಬಾಣ ದಿನ ಆಚರಣೆ
ತುಮಕೂರು : ಹುಟ್ಟಿನಿಂದ ಸಾಯುವವರೆಗೂ ಅನೇಕ ಅವಮಾನ,ಅಪಮಾನಗಳನ್ನು ಎದುರಿಸಿ,ಭಾರತೀಯರಿಗೆ ಸಂವಿಧಾನ ವೆಂಬ ಜ್ಞಾನದೀವಿಗೆಯನ್ನು ನೀಡಿದ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ದೇಶದ ಎಲ್ಲ ಜನರು ಸ್ಮರಿಸುವಂತಹ ವ್ಯಕ್ತಿ ಎಂದು ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ನರಸಿಂಹಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ನಗರದ ಟೌನ್‌ಹಾಲ್ ವೃತ್ತದಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನದ ಕಾರ್ಯಕ್ರಮದಲ್ಲಿ ಬಾಬಾ ಸಾಹೇಬರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡುತಿದ್ದ ಅವರು, ಜಗತ್ತೇ ಅವರನ್ನು ಜ್ಞಾನದ ಸಂಕೇತವೆಂದು ಪೂಜಿಸುತ್ತಿರುವ ಕಾಲದಲ್ಲಿ,ಅವರನ್ನು ಒಂದು ಜಾತಿಗೆ ಸಿಮಿತಗೊಳಿ ಸುತಿರುವುದು ವಿಷಾದ ಸಂಗತಿ ಎಂದರು.
ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿ ಇಡೀ ದೇಶದ ಎಲ್ಲ ಸಮುದಾಯದ ಜನರಿಗೂ ಸರಿಹೊಂದುವಂತಹ ಸಂವಿಧಾನವನ್ನು ನೀಡಿದ ಮಹಾನ್ ವ್ಯಕ್ತಿ ಡಾ.ಬಿ.ಆರ್.ಅಂಬೇಡ್ಕರ್.ಚಿಕ್ಕಂದಿನಿಂದಲೂ ಹಲವಾರು ನೋವುಗಳನ್ನು ಅನುಭವಿಸಿದ್ದ ಬಾಬಾ ಸಾಹೇಬರು ನನ್ನ ಮುಂದಿನ ಪೀಳಿಗೆ ಈ ಅವಮಾನಗಳಿಂದ ಹೊರಬರಬೇಕು ಎಂಬ ಆಶಯದೊಂದಿಗೆ ಸಂವಿಧಾನದಲ್ಲಿ ಹಲವಾರು ಕಾಯ್ದೆ, ಕಾನೂನುಗಳನ್ನು ಅಳವಡಿಸಿ,ರಕ್ಷಣೆ ನೀಡಿದರು.ಇಂತಹ ಮಹಾನ್ ಚೇತನ ಸತ್ತಾಗ ದೆಹಲಿಯಲ್ಲಿ ಮಣ್ಣು ಮಾಡಲು ಅಂದಿನ ಕಾಂಗ್ರೆಸ್ ಸರಕಾರ ಅವಕಾಶ ನೀಡಲಿಲ್ಲ.ಅಲ್ಲದೆ ಭಾರತದ ಮೊದಲು ಕಾನೂನು ಮಂತ್ರಿಯಾಗಿ ಸದನದ ಮುಂದೆ ಮಂಡಿಸಿದ ಹಿಂದೂ ಕೋಡ್‌ಬಿಲ್‌ಗೆ ಸೋಲಾಗುವಂತೆ ಮಾಡುವ ಮೂಲಕ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮಾಡಿದರು. ಇವರಿಗೆ ಅಂಬೇಡ್ಕರ್ ಹೆಸರಿನಲ್ಲಿ ದಲಿತರ ಮತ ಕೇಳುವ ನೈತಿಕ ಹಕ್ಕು ಇಲ್ಲ ಎಂದು ಎ.ನರಸಿಂಹಮೂರ್ತಿ ತಿಳಿಸಿದರು.
ಕಾಂಗ್ರೆಸ್ ಸರಕಾರದಲ್ಲಿ ನೆಹರು,ಇಂದಿರಾಗಾಂಧಿ ಅವರಿಗೆ ಭಾರತರತ್ನ ಪ್ರಶಸ್ತಿ ನೀಡಲಿಲ್ಲ. ಇದನ್ನು ಕೊಡಲು ಬಿಜೆಪಿ ಸರಕಾರವೇ ಬರಬೇಕಾಯಿತು.ಎರಡು ಚುನಾವಣೆಗಳಲ್ಲಿ ಹೀನಾಯವಾಗಿ ಸೋಲುವಂತೆ ಮಾಡಿ,ಅಪಮಾನಕ್ಕೆ ಒಳಪಡಿಸಿದರು.1999ರಲ್ಲಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಮೊದಲ ಬಾರಿಗೆ ಬಾಬಾ ಸಾಹೇಬರಿಗೆ ಭಾರತರತ್ನ ನೀಡಿ, ದೇಶದ ಅತ್ಯುನ್ನತ ಗೌರವ ದೊರೆಯುವಂತೆ ಮಾಡಿದರು.ನರೇಂದ್ರಮೋದಿ ನೇತೃತ್ವದ ಎನ್.ಡಿ.ಎ.ಸರಕಾರ ಬಾಬಾ ಸಾಹೇಬರು ಹುಟ್ಟಿದ, ಓದಿದ, ಕೆಲಸ ಮಾಡಿದ,ಮೃತರಾದ ಹೀಗೆ ಐದು ಪ್ರಮುಖ ಸ್ಥಳಗಳನ್ನು ಪಂಚತೀರ್ಥ ಎಂಬ ಹೆಸರಿನಲ್ಲಿ ಪ್ರವಾಸಿ ತಾಣಗಳಾಗಿ ಅಭಿವೃದ್ದಿ ಪಡಿಸಿ ಯುವಜನತೆಗೆ ಅವರನ್ನು ಪರಿಚಯಿಸುವ ಕೆಲಸ ಮಾಡುತ್ತಿದೆ. ಇದು ಪ್ರಧಾನಿಯವರಿಗೆ ದಲಿತರ ಮೇಲಿರುವ ನಿಜವಾದ ಕಾಳಜಿ ಎಂದು ನರಸಿಂಹಮೂರ್ತಿ ನುಡಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೈ.ಹೆಚ್.ಹುಚ್ಚಯ್ಯ,ಬಿಜೆಪಿ ನಗರ ಮಂಡಲ ಅಧ್ಯಕ್ಷ ಹನುಮಂತರಾಜು,ನಗರ ಎಸ್ಸಿ ಮೋರ್ಚಾ ಅಧ್ಯಕ್ಷ ಹನುಮಂತರಾಯಪ್ಪ,ಮುಖಂಡರಾದ ನವೀನ್,ಹನುಮಂತರಾಜು,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೋಕೇಶ್,ಮಾಧ್ಯಮ ಪ್ರಮುಖ್ ಪ್ರತಾಪ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.