ಗುಬ್ಬಿ : ಕೆಸರಿಗೆ ಕಲ್ಲು ಎಸೆಯುವ ಕೆಲಸ ನಾನು ಮಾಡುವುದಿಲ್ಲ. ಕೆಸರನ್ನೇ ತೆಗೆಯುವ ಕೆಲಸ ನಮ್ಮ ಮತದಾರರು ಮಾಡುತ್ತಾರೆ. ಜಾತಿ ವ್ಯಾಮೋಹ ಬಿಟ್ಟು ಈ ಬಾರಿ ನಾಗರಾಜು ಅವರನ್ನು ಗೆಲ್ಲಿಸಿ ನನಗೆ ಶಕ್ತಿ ನೀಡಿ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಗುಬ್ಬಿ ಪಟ್ಟಣದ ಬಸ್ ನಿಲ್ದಾಣ ಬಳಿ ಪಂಚರತ್ನ ರಥಯಾತ್ರೆ ಕುರಿತು ಮಾತನಾಡಿದ ವೇಳೆ ನನಗೂ ಮಾತನಾಡಲು ಬರುತ್ತದೆ. ಆದರೆ ಕೆಸರಿಗೆ ಕಲ್ಲು ಎಸೆಯುವುದು ಸರಿಯಲ್ಲ. ಕೆಲ ದಲಿತ ಮುಖಂಡರನ್ನು ಎತ್ತಿ ಕಟ್ಟಿ ನನ್ನ ವಿರುದ್ದ ಹೇಳಿಕೆ ಕೊಡುವ ಚಿತಾವಣೆ ಯಾರದ್ದು ತಿಳಿದಿದೆ. ನಾನು ಎಲ್ಲಾ ಸಮುದಾಯದ ಪ್ರೀತಿ ಗಳಿಸಿದ್ದೇನೆ. ಇಂತಹ ಹೇಳಿಕೆಗೆ ಗಮನ ಕೊಡದೆ ದಲಿತ ಬಂಧುಗಳು ಜಾತ್ಯತೀತ ಜೆಡಿಎಸ್ ಪಕ್ಷವನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ಪಂಚಭೂತಗಳು, ಪಂಚೇಂದ್ರಿಯಗಳು ಹೇಗೆ ಮನುಷ್ಯನ ಅಗತ್ಯವಾಗಿದೆ ಅದೇ ರೀತಿ ಪಂಚರತ್ನ ಯೋಜನೆ ಸಹ ರಾಜ್ಯದ ಜನರ ಜೀವನಾಡಿ ಎನಿಸಲಿದೆ. ಈ ನಿಟ್ಟಿನಲ್ಲಿ ಐದು ಪ್ರಮುಖ ಕಾರ್ಯಕ್ರಮವನ್ನು ಜನರ ಮುಂದೆ ತಂದಿದ್ದೇನೆ. ನುಡಿದಂತೆ ನಡೆದ ನಾನು ಸ್ಪಷ್ಟ ಬಹುಮತ ನೀಡಿ ಅಧಿಕಾರ ಕೊಟ್ಟಲ್ಲಿ ಈ ಎಲ್ಲಾ ಯೋಜನೆ ಸಾಕಾರ ಗೊಳಿಸುವೆ ಎಂದು ಆಶ್ವಾಸನೆ ನೀಡಿದ ಅವರು ರೈತರ ಸಂಕಷ್ಟಕ್ಕೆ ಕೇವಲ ಎರಡು ಸಾವಿರ ನೀಡುವ ಬಿಜೆಪಿ ಸರ್ಕಾರ 40 ಪರ್ಸೆಂಟ್ ಸರ್ಕಾರ ಎನ್ನುವುದು ಜಗಜ್ಜಾಹೀರು. ಈ ನಿಟ್ಟಿನಲ್ಲಿ ರೈತರ ಕೃಷಿ ಚಟುವಟಿಕೆಗೆ 10 ರಿಂದ 15 ಸಾವಿರ ರೂಗಳ ಸಹಾಯ ಧನ ಜೆಡಿಎಸ್ ಸರ್ಕಾರ ನೀಡಲಿದೆ ಎಂದು ಅಭಯ ನೀಡಿದರು.
ಸರ್ಕಾರದಲ್ಲಿ ಯೋಜನೆ ರೂಪಿಸಲು ಸಾರಾಯಿ ಲಾಟರಿ ಬಳಸುವ ಸರ್ಕಾರದ ವಿರುದ್ಧ ಆಲೋಚಿಸಿ ಎರಡನ್ನೂ ರದ್ದು ಪಡಿಸಿ ಬಡವರ ಮಧ್ಯಮ ವರ್ಗದ ಜನರ ಪರ ನಿಲ್ಲುವ 1.25 ಲಕ್ಷ ಕೋಟಿ ಬೃಹತ್ ಮೊತ್ತದ ಪಂಚರತ್ನ ಕಾರ್ಯಕ್ರಮ ರೂಪಿಸಿದ್ದೇನೆ. ಅಧಿಕಾರ ನೀವು ಕೊಟ್ಟಲ್ಲಿ ವಿದ್ಯಾವಂತ ಹೆಣ್ಣು ಮಕ್ಕಳಿಗೆ ಸ್ವ ಉದ್ಯೋಗ ಸೃಷ್ಟಿಸಿ ನಾಲ್ಕೈದು ಮಹಿಳೆಯರಿಗೆ ಅವರೇ ಕೆಲಸ ಕೊಡುವ ರೀತಿ ಮಾಡುವುದು, ವೃದ್ದಾಪ್ಯ ವೇತನವನ್ನು 5 ಸಾವಿರಕ್ಕೆ ಹೆಚ್ಚಳ, ವಿಧವಾ ಮತ್ತು ವಿಕಲ ಚೇತನರ ವೇತನ ಸಹ ಹೆಚ್ಚಳ ಮಾಡುವ ಜೊತೆಗೆ ಸ್ವಸಹಾಯ ಸಂಘದ ಸಾಲ ಮನ್ನಾ ಮಾಡುವ ಮೂಲಕ ಸ್ತ್ರೀ ಸಬಲೀಕರಣ ಮಾಡುವುದು ಧ್ಯೇಯವಾಗಿದೆ ಎಂದರು.
ರೈತರ ಸಾಲ ಮನ್ನಾ ಮಾಡುವ ಕೊಟ್ಟ ಮಾತಿನಂತೆ 25 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದೆ. ಸ್ಪಷ್ಟ ಬಹುಮತ ನೀಡಿದರೆ ಎಂದು ಹೇಳಿದ್ದ ನಾನು ಸಮ್ಮಿಶ್ರ ಸರ್ಕಾರದ ವೇಳೆ ಈ ಮನ್ನಾ ಮಾಡಿದೆ. ಆದರೆ ಬಿಜೆಪಿ ಸರ್ಕಾರ ಬೆಳೆ ವಿಮೆ ನೀಡುವ ಮಾತು ಕೊಟ್ಟು ಖಾಸಗಿ ಕಂಪೆನಿ ಉದ್ದಾರ ಮಾಡಿದ್ದಾರೆ ಎಂದು ಆರೋಪಿಸಿದ ಅವರು ಕೃಷಿಕ ಯುವಕರಿಗೆ ಹೆಣ್ಣು ಕೊಡುತ್ತಿಲ್ಲ ಎಂಬ ದೂರು ಗಂಭೀರ ಎನಿಸಿ ಸಿರಿವಂತರು ಕೃಷಿಕರ ಮನೆ ಬಾಗಿಲಿಗೆ ಬರುವಂತೆ ಮಾಡಲು ಕೃಷಿ ಚಟುವಟಿಕೆಗೆ ಹೆಚ್ಚು ಗಮನ ನೀಡಿ ವಿವಿಧ ಯೋಜನೆ ಕೊಡುವ ಆಲೋಚನೆ ಸಿದ್ಧವಿದೆ. ಈ ಜೊತೆಗೆ ಕೋವಿಡ್ ವೇಳೆ ರಾಜ್ಯದಲ್ಲಿ ಸುಮಾರು 63 ಸಾವಿರ ಮಂದಿ ಸಾವನ್ನಪ್ಪಿದರು. ತುಮಕೂರಿನಲ್ಲಿ ತಾಯಿ ಹಾಗೂ ಅವಳಿ ಮಕ್ಕಳು ಮೃತ ಪಟ್ಟ ಇಂತಹ ಘಟನೆಗೆ ಆಸ್ಪತ್ರೆಗಳ ಅವ್ಯವಸ್ಥೆ ಹಾಗೂ ನಡವಳಿಕೆ ಕಾರಣ. ಈ ನಿಟ್ಟಿನಲ್ಲಿ ಪ್ರತಿ ಹೋಬಳಿ ಮಟ್ಟದಲ್ಲಿ ಹೈಟೆಕ್ ಆಸ್ಪತ್ರೆ ನಿರ್ಮಾಣ ಮಾಡುವ ಯೋಜನೆ ನಮ್ಮಲ್ಲಿದೆ ಎಂದರು.
ಕೋವಿಡ್ ವೇಳೆ ಖಾಸಗಿ ಶಾಲೆಗಳ ದಂಧೆ ಪೋಷಕರನ್ನು ಕಂಗೆಡಿಸಿತ್ತು. ಇದೇ ಯೋಚಿಸಿ ಹೈಟೆಕ್ ಶಾಲೆ ಯುಕೆಜಿ ಯಿಂದ ಹನ್ನೆರಡನೇ ತರಗತಿ ವರೆಗೆ ಉಚಿತ ಶಿಕ್ಷಣ ನೀಡುವ ಪ್ರತಿ ಪಂಚಾಯಿತಿಯಲ್ಲಿ ಶಾಲೆ ನಿರ್ಮಾಣ ಕಾರ್ಯಕ್ರಮ ರಚನೆಯಾಯಿತು. ಈಚೆಗೆ ಶ್ರೀನಿವಾಸಪುರದಲ್ಲಿ ಶಾಲೆಯ ಅವ್ಯವಸ್ಥೆ ಬಗ್ಗೆ ಮಕ್ಕಳೇ ಧರಣಿ ನಡೆಸಿದ್ದು ತೀವ್ರ ನೋವು ತಂದಿದೆ. ಐದಾರು ಕಿಮೀ ದೂರದಿಂದ ಮಕ್ಕಳು ಶಾಲೆಗೆ ಬರುವುದು ಎಲ್ಲವನ್ನೂ ಕಂಡು ಉಚಿತ ಶಿಕ್ಷಣ ಕಾರ್ಯಕ್ರಮ ನಮ್ಮ ಪಂಚರತ್ನ ರಥಯಾತ್ರೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದ ಅವರು ರಾಷ್ಟ್ರೀಯ ಪಕ್ಷಗಳಿಂದ ದುರಾಡಳಿತ ಸಿಕ್ಕ ಪರಿಣಾಮ ಪ್ರಾದೇಶಿಕ ಪಕ್ಷಗಳತ್ತ ಜನ ಮುಖ ಮಾಡಿದ್ದಾರೆ. ಜೆಡಿಎಸ್ ಗೆ ಅಧಿಕಾರ ನೀಡುವ ನಿಟ್ಟಿನಲ್ಲಿ ಗುಬ್ಬಿ ಕ್ಷೇತ್ರದಲ್ಲಿ ನಾಗರಾಜು ಅವರಿಗೆ ಮತ ನೀಡಿ ಆಶೀರ್ವದಿಸಿ ಎಂದು ಮನವಿ ಮಾಡಿದರು.
ಇಡೀ ಕಾರ್ಯಕ್ರಮದ ಆಯೋಜಕ ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ಮಾತನಾಡಿ ಪಂಚರತ್ನ ಯೋಜನೆ ಬಗ್ಗೆ ತಿಳಿಸುವ ಜೊತೆಗೆ ಕ್ಷೇತ್ರದ ಪ್ರತಿ ಮನೆಗೆ ತೆರಳಿ ಮತಯಾಚನೆ ಮಾಡುತ್ತೇನೆ. ಪಕ್ಷಕ್ಕೆ ಮೋಸ ಮಾಡುವ ಜಾಯಮಾನ ನನ್ನದಲ್ಲ. ಪಕ್ಷ ನಿಷ್ಠೆ ಜೊತೆಗೆ ಅಭಿವೃದ್ಧಿಗೆ ಒತ್ತು ನೀಡಿ ಮನೆ ಮಗನಂತೆ ದುಡಿಯುತ್ತೇನೆ. ಈ ಬಾರಿ ನನಗೆ ಮತ ನೀಡಿ ಎಂದು ಮನವಿ ಮಾಡಿ ಕುಮಾರಣ್ಣ ಅವರನ್ನು ಮುಂದಿನ ಸಿಎಂ ಮಾಡೋಣ ಎಂದು ಕರೆ ನೀಡಿದರು.
ಪಂಚರತ್ನ ರಥವನ್ನು ಜೆಡಿಎಸ್ ಪಕ್ಷದ ಸಹಸ್ರಾರು ಅಭಿಮಾನಿಗಳು ಭವ್ಯ ಸ್ವಾಗತ ಕೋರಿದರು. ಬಿದ್ದಾಂಜನೇಯ ದೇವಾಲಯದಿಂದ ಪಟ್ಟಣದ ಬಸ್ ನಿಲ್ದಾಣ ವರೆಗೆ ಬೃಹತ್ ಮೆರವಣಿಗೆ ನಡೆಸಲಾಯಿತು. ಕ್ರೇನ್ ಯಂತ್ರದ ಮೂಲಕ ದೊಡ್ಡ ಕೊಬ್ಬರಿ ಹಾರ ಹಾಗೂ ಜೆಸಿಬಿ ಯಂತ್ರದ ಮೂಲಕ ಪುಷ್ಪ ಮಳೆ ನಡೆಯಿತು. ವಿಶೇಷವಾಗಿ ಹೆಲಿಕಾಪ್ಟರ್ ಮೂಲಕ ಸುರಿದ ಹೂವಿನ ಮಳೆ ನೆರೆದಿದ್ದ ಎಲ್ಲಾ ಅಭಿಮಾನಿಗಳಿಗೆ ಸಂತಸ ತಂದಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಅಂಜಿನಪ್ಪ, ತಾಲ್ಲೂಕು ಅಧ್ಯಕ್ಷ ಚಿಕ್ಕೀರಪ್ಪ, ಜಿಪಂ ಮಾಜಿ ಸದಸ್ಯೆ ಗಾಯತ್ರಿದೇವಿ ನಾಗರಾಜು, ಪಕ್ಷದ ಮುಖಂಡರಾದ ಕಳ್ಳಿಪಾಳ್ಯ ಲೋಕೇಶ್, ಬೆಳ್ಳಿ ಲೋಕೇಶ್, ಗಂಗಣ್ಣ, ಹೆಚ್.ಡಿ.ಯಲ್ಲಪ್ಪ, ಜಿ.ಡಿ.ಸುರೇಶ್ ಗೌಡ ಇತರರು ಇದ್ದರು.