ತುಮಕೂರು : ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದೆ ಸಾವನ್ನಪ್ಪಿದ ತಾಯಿ, ಮಕ್ಕಳ ಪ್ರಕರಣಕ್ಕೆ ಸಂಬಂಧಿಸಿದಂತೆ ತಪಿತಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಇಂದು ನಡೆದಿದೆ.
ನಗರದ ೨೨ನೇ ವಾರ್ಡಿನ ಸದಸ್ಯ ಶ್ರೀನಿವಾಸ್,ಮೇಯರ್ ಪ್ರಭಾವತಿ,ಉಪಮೇಯರ್ ಟಿ.ಕೆ.ನರಸಿಂಹಮೂರ್ತಿ, ಸದಸ್ಯರಾದ ನಯಾಜ್ ಅಹಮದ್ ಅವರುಗಳು ಮೃತರು ವಾಸವಿದ್ದ ಭಾರತಿ ನಗರ ಪ್ರದೇಶಕ್ಕೆ ಭೇಟಿ ನೀಡಿ, ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದ ನಂತರ,ಜಿಲ್ಲಾಸ್ಪತ್ರೆಯ ಸರ್ಜನ್ ಹಾಗೂ ಡಿ.ಹೆಚ್.ಓ ಸ್ಥಳಕ್ಕೆ ಭೇಟಿ ನೀಡುವವರೆಗೂ ಮೃತದೇಹದ ಶವ ಸಂಸ್ಕಾರಕ್ಕೆ ಅವಕಾಶ ನೀಡುವುದಿಲ್ಲ. ಜಿಲ್ಲಾಸ್ಪತ್ರೆ ಭ್ರಷ್ಟಾಚಾರದ ಕೂಪವಾಗಿದ್ದು, ಹೆರಿಗೆಗೆ ಬರುವ ಬಡವರ ಬಳಿ, ಅಸ್ಪತ್ರೆಯಲ್ಲಿ ಕೆಲಸ ಮಾಡುವ ಆಯಾಗಳ ಮೂಲಕ ವೈದ್ಯರು ಲಂಚಕ್ಕೆ ಬೇಡಿಕೆ ಇಡುವುದು ಸಾಮಾನ್ಯವಾಗಿದೆ. ಇಂದಿನ ಈ ದುರ್ಘಟನೆಗೂ ಲಂಚ ನೀಡದಿರುವುದೇ ಕಾರಣ ಎಂದು ಆರೋಪಿಸಿದರು.
ಸ್ಥಳಕ್ಕೆ ಆಗಮಿಸಿದ ಜಿಲ್ಲಾಸ್ಪತ್ರೆಯ ಸರ್ಜನ್ ಡಾ.ವೀಣಾ,ಜನಪ್ರತಿನಿಧಿಗಳ ಆರೋಪವನ್ನು ಆಲಿಸಿದರು. ಈ ವೇಳೆ ಮಾತನಾಡಿದ ಅವರು,ತಾಯಿ ಕಾರ್ಡು ಇಲ್ಲವೆಂಬ ಕಾರಣಕ್ಕೆ ಚಿಕಿತ್ಸೆ ನೀಡದೆ ನಿರ್ಲಕ್ಷ ಮಾಡಿದ ವೈದ್ಯರು ವಿರುದ್ದ ಕ್ರಮಕ್ಕೆ ಈಗಾಗಲೇ ಶಿಫಾರಸ್ಸು ಮಾಡಲಾಗಿದೆ.ಇನ್ನು ಮುಂದೆ ಜಿಲ್ಲಾಸ್ಪತ್ರೆಯಲ್ಲಿ ಈ ರೀತಿಯ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸುವುದಾಗಿ ಸಾರ್ವಜನಿಕರಿಗೆ ಹಾಗೂ ಜನಪ್ರತಿನಿಧಿಗಳಿಗೆ ಭರವಸೆ ನೀಡಿದರು.
ತಾಯಿ, ಮಗುವಿನ ಆರೋಗ್ಯಕ್ಕೆ ಸಂಬಂಧಿಸಿದಂತೆ ದಾಖಲೆಗಳು ಇಲ್ಲವೆಂಬ ಕಾರಣಕ್ಕೆ ಚಿಕಿತ್ಸೆ ನಿರಾಕರಿಸುವುದು ತಪ್ಪು. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟವ ವಿರುದ್ದ ಕ್ರಮಕ್ಕೆ ಶಿಫಾರಸ್ಸು ಮಾಡಿದ್ದೇನೆ.ದಾಖಲೆಗಾಗಿ ಚಿಕಿತ್ಸೆ ನಿರಾಕರಿಸದಂತೆ ಎಲ್ಲಾ ವೈದ್ಯರುಗಳಿಗೂ ಸೂಚನೆ ನೀಡುವುದಾಗಿ ಡಾ.ವೀಣಾ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ್ ಮಾತನಾಡಿ,ಬುಧವಾರ ರಾತ್ರಿ ೮:೩೦ರ ಸುಮಾರಿಗೆ ಕಸ್ತೂರಿ ಎನ್ನುವ ಗಭೀರ್ಣಿ ಮಹಿಳೆಯೊಬ್ಬರು ಹೆರಿಗೆ ನೋವಿನಿಂದ ಜಿಲ್ಲಾಸ್ಪತ್ರೆಗೆ ಸೇರಲು ಬಂದಾಗ ಕರ್ತವ್ಯದಲ್ಲಿದ್ದ ವೈದ್ಯೆ ಡಾ.ಉಷಾ ಎಂಬುವವರು ಗರ್ಭೀಣಿ ಮಹಿಳೆಯ ಬಳಿ ತಾಯಿ, ಮಗುವಿನ ಆರೋಗ್ಯದ ಮಾಹಿತಿಯನ್ನು ಒಳಗೊಂಡಿರುವ ತಾಯಿ ಕಾರ್ಡು ಇಲ್ಲವೆಂಬ ಕಾರಣಕ್ಕೆ ಚಿಕಿತ್ಸೆ ನೀಡಿಲ್ಲ ಎಂದು ತಿಳಿದು ಬಂದಿದೆ.ದಾಖಲೆಗಳಿಲ್ಲವೆಂಬ ಕಾರಣಕ್ಕೆ ಯಾವುದೇ ರೋಗಿಗೆ ಚಿಕಿತ್ಸೆ ನಿರಾಕರಿಸುವಂತಿಲ್ಲ. ಹಾಗಾಗಿ ಸದರಿ ವೈದ್ಯರ ಅಮಾನತ್ತಿಗೆ ಸರಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ.ಅಲ್ಲದೆ, ಆ ಸಮಯದಲ್ಲಿ ಕರ್ತವ್ಯದಲ್ಲಿದ್ದ ನರ್ಸ್ಗಳನ್ನು ಸಹ ಪತ್ತೆ ಹಚ್ಚಿ ಅವರ ಅಮಾನತ್ತಿಗೂ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.
ಒಟ್ಟಾರೆ ಇಡೀ ಪ್ರಕರಣ ಜಿಲ್ಲಾಸ್ಪತ್ರೆಗೆ ಕಪ್ಪು ಚುಕ್ಕೆಯಾಗಿದ್ದು,ಸರಕಾರ ಸೂಕ್ತ ಕ್ರಮ ಕೈಗೊಂಡು, ಸಂತ್ರಸ್ಥರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಹಾಗೂ ತಬ್ಬಲಿಯಾದ ಮೃತ ಕಸ್ತೂರಿ ಅವರ ಮಗಳಿಗೆ ಆಶ್ರಯ ನೀಡಬೇಕೆಂಬುದು ಸ್ಥಳೀಯರ ಒತ್ತಾಯವಾಗಿದೆ.