ತುಮಕೂರು : ಕಾಂಗ್ರೆಸ್ ಪಕ್ಷದ ಮುಖಂಡ ರಾಹುಲ್‌ಗಾಂಧಿ ಅವರು ಕೈಗೊಂಡಿರುವ ಭಾರತ ಜೋಡೋ ಯಾತ್ರೆ ಇಂದಿನ ಸಮಾಜಕ್ಕೆ ಅಗತ್ಯವಾಗಿದ್ದು,ದ್ವೇಷ ತುಂಬಿರುವ ಸಮಾಜದಲ್ಲಿ ಶಾಂತಿಗಾಗಿ ನಡೆಯುತ್ತಿರುವ ಯಾತ್ರೆಗೆ ನಾಗರಿಕ ಸಮಾಜದ ಬೆಂಬಲ ದೊರೆತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಪಾದಯಾತ್ರೆ ಆರಂಭವಾದ ನಂತರ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ.ಸಮಾಜದಲ್ಲಿ ಸಾಮರಸ್ಯ ಕಾಪಾಡಲು ರಾಹುಲ್‌ಗಾಂಧಿ ಹೆಜ್ಜೆ ಹಾಕುತ್ತಿದ್ದು,ಜನಸಾಮಾನ್ಯರು ಪಾದಯಾತ್ರೆ ಯಲ್ಲಿ ಪಾಲ್ಗೊಳ್ಳುವ ಮೂಲಕ ಬೆಂಬಲ ತೋರುತ್ತಿದ್ದಾರೆ ಎಂದರು.
ಭಾರತ ಇಂದು ಯುವಕರ ರಾಷ್ಟ್ರ, ನಿರುದ್ಯೋಗ ಸಮಸ್ಯೆ ತೀವ್ರವಾಗಿದ್ದು, ಜ್ವಲಂತ ಸಮಸ್ಯೆಗಳಿಗೆ, ಆರ್ಥಿಕ ವ್ಯವಸ್ಥೆ ಸರಿಪಡಿಸಲು ಕೇಂದ್ರ ಸರಕಾರ ಮುಂದಾಗುತ್ತಿಲ್ಲ, ಕೆಲವರ ಆಸ್ತಿ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ, ದೇಶದ ಶೇ.1ರಷ್ಟು ಜನರ ಕೈಯಲ್ಲಿ ದೇಶದ ಆರ್ಥಿಕತೆ ಇದೆ.ಅಸಮತೋಲನದ ಆರ್ಥಿಕತೆಯಿಂದ ಸಾಮಾನ್ಯ ಜನರಿಗೆ ಉಪಯೋಗವಿಲ್ಲದಂತಾಗಿದೆ.ಕೃಷಿ ಉತ್ಪನ್ನ ಇಳಿಮುಖವಾಗಿದ್ದು,ಆಡಳಿತದಲ್ಲಿ ವಿಪರೀತ ಭ್ರಷ್ಟಾಚಾರ ಆಗುತ್ತಿದ್ದು,ಲೋಕಾಯುಕ್ತದಂತಹ ಸಂಸ್ಥೆ ಕೆಲಸ ಮಾಡಲು ಆಗದಂತಹ ವಾತಾವರಣ ಇದೆ.ದೇಶದ ಪರಿಸ್ಥಿತಿ ಜನ ಸಾಮಾನ್ಯರಿಗೆ ತಿಳಿಸುವ ನಿಟ್ಟಿನಲ್ಲಿ ರಾಹುಲ್ ಗಾಂಧಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದರು.
ಭಾರತದ ಸಂವಿಧಾನಕ್ಕೆ ವಿರೋಧವಾಗಿ ಆಡಳಿತ ಸರಕಾರ ನಡೆದುಕೊಳ್ಳುತ್ತಿದೆ.ಸಮಾನತೆ, ಸಾಮರಸ್ಯವನ್ನು ಕದಡುವ ಜೊತೆಗೆ, ಪ್ರಜಾಪ್ರಭುತ್ವವನ್ನು ಹಂತ ಹಂತವಾಗಿ ಕೊಲ್ಲುವ ಹುನ್ನಾರ ನಡೆಯುತ್ತಿದ್ದು,ಈ ಆಡಳಿತದ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸಬೇಕಿದೆ,ಸಾವಿರಾರು ಮಂದಿ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುವ ಮೂಲಕ ಅಭೂತ ಪೂರ್ವ ಬೆಂಬಲ ದೊರೆತಿದೆ ಎಂದು ತಿಳಿಸಿದರು.
ಅಕ್ಟೋಬರ್ 08ರ ಶನಿವಾರ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಪಾದಯಾತ್ರೆ ಜಿಲ್ಲೆ ಕಾಲಿಡಲಿದ್ದು,ಟಿ.ಬಿ.ಕ್ರಾಸ್ ನಿಂದ ಬಾಣಸಂದ್ರವರೆಗೆ,ಭಾನುವಾರ ಕೆ.ಬಿ. ಕ್ರಾಸ್‌ನಿಂದ ಬರಕನಾಳ್‌ವರೆಗೆ ಪಾದಯಾತ್ರೆ ನಡೆಯಲಿದ್ದು,ಸೋಮವಾರ ಹುಳಿಯಾರು ಮೂಲಕ ಹಿರಿಯೂರು ತಾಲೂಕಿಗೆ ಪಾದಯಾತ್ರೆಗೆ ಸಾಗಲಿದೆ.ಕೆಂಕೆರೆಯಿಂದ ಹಿರಿಯೂರುವರೆಗೆ ಯಾವುದೇ ಊರು ಇಲ್ಲದ ಕಾರಣ ಮತ್ತು ಅರಣ್ಯ ಪ್ರದೇಶವಾದ ಕಾರಣ ಭಾರತ್ ಜೋಡೋ ಯಾತ್ರೆ ವಾಹನದಲ್ಲಿ ಪ್ರಯಾಣ ಮಾಡಲಿದ್ದಾರೆ ಎಂದು ಡಾ.ಜಿ.ಪರಮೇಶ್ವರ್ ವಿವರಿಸಿದರು.
ಪಾದಯಾತ್ರೆಯಲ್ಲಿ ಆಗಮಿಸುವ ತಂಡಕ್ಕೆ ಬೇಕಾದ ಅಗತ್ಯ ತಯಾರಿ ಮಾಡಿಕೊಂಡಿದೆ,ರಾಹುಲ್‌ಗಾಂಧಿ ಅವರೊಂದಿಗೆ 3570 ಕಿ.ಮಿ.ವರಗೆ ಪಾದಯಾತ್ರೆಯಲ್ಲಿ ತೆರಳಲು 300 ಜನರು ಆಗಮಿಸಿದ್ದಾರೆ. ರಾಜ್ಯದಲ್ಲಿ 521 ಕಿಮೀ ಯಾತ್ರೆ ಸಾಗಲಿದ್ದು,ರಾಜ್ಯದ 500 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ, ಬೇರೆ ಜಿಲ್ಲೆ ಮತ್ತು ತಾಲೂಕಿನಿಂದ ಯಾತ್ರೆಯಲ್ಲಿ ಭಾಗವಹಿಸಲಿದ್ದು ಕನಿಷ್ಠ 25 ಸಾವಿರ ಮಂದಿ ಯಾತ್ರೆಯಲ್ಲಿ ಇರಲಿದ್ದಾರೆ ಎಂದರು.
ತುರುವೇಕೆರೆ ತಾಲೂಕಿನ ಅರಳೀಕೆರೆ ಪಾಳ್ಯದಲ್ಲಿ ತೆಂಗು ಮತ್ತು ಅಡಿಕೆ ಬೆಳೆಗಾರರೊಂದಿಗೆ ರಾಹುಲ್ ಮಾತುಕತೆ ನಡೆಸಲಿದ್ದು, ತೆಂಗು ಮತ್ತು ಅಡಿಕೆಯ ಪ್ರಗತಿಪರ ರೈತರೊಂದಿಗೆ ಒಂದು ಗಂಟೆ ಸಂವಾದ ನಡೆಸಲಿದ್ದಾರೆ.ತಿಪಟೂರು ತಾಲೂಕಿನ ಕಾಡೇನಹಳ್ಳಿ ಗೇಟ್ ಬಳಿ ಅಂಗನವಾಡಿ ಮತ್ತು ಆಶಾಕಾರ್ಯಕರ್ತೆ ಬೀಡಿ ಕಾರ್ಮಿಕರ ಜೊತೆಗೆ,ಹಕ್ಕಿಪಿಕ್ಕಿ,ಲಂಬಾಣಿ ಜನಾಂಗ ದೊಂದಿಗೆ ಚರ್ಚೆ ನಡೆಸುವ ಸಾಧ್ಯತೆ ಇದೆ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.
ಅಕ್ಟೋಬರ್ 09 ರಂದು ಚಿಕ್ಕನಾಯಕನಹಳ್ಳಿಯಲ್ಲಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ರಾಹುಲ್ ಅವರು ಪಾಲ್ಗೊಳ್ಳಲಿದ್ದು, ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯದೊಂದಿಗೆ ಚರ್ಚೆ ನಡೆಸುವ ನಿಟ್ಟಿನಲ್ಲಿ ಮನವಿ ಮಾಡಿಸ್ದು, ಕೇಂದ್ರ ಕಚೇರಿ ಒಪ್ಪಿಗೆ ನಂತರ ಅಂತಿಮಗೊಳ್ಳಲಿದೆ ಎಂದು ಹೇಳಿದರು.
ಭಾರತೀಯ ಜನತಾ ಪಾರ್ಟಿಯವರಿಗೆ ಇತಿಹಾಸ ಗೊತ್ತಿಲ್ಲ. ಕಾಂಗ್ರೆಸ್ ಪಕ್ಷದ ತ್ಯಾಗದ ಬಗ್ಗೆ ಅರಿವಿಲ್ಲ. ಹಾಗಾಗಿ ಇಲ್ಲ,ಸಲ್ಲದ ಟೀಕೆಗಳನ್ನು ಮಾಡುತ್ತಿದ್ದಾರೆ.ಇವುಗಳಿಗೆ ಉತ್ತರಿಸುವ ಅಗತ್ಯವಿಲ್ಲ.ಭಾರತದ ಸ್ವಾತಂತ್ರಕ್ಕೆ,ಆನಂತರ ಭಾರತದ ಏಕೀಕರಣಕ್ಕೆ, ಪ್ರಜಾಪ್ರಭುತ್ವ ವ್ಯವಸ್ಥೆಯ ಜಾರಿಗೆ ಹೋರಾಡಿದ್ದೇ ಕಾಂಗ್ರೆಸ್, ಮೊದಲು ಇತಿಹಾಸ ತಿಳಿಯಲಿ ಎಂದರು.
ಈ ವೇಳೆ ಆರ್.ರಾಮಕೃಷ್ಣ, ಮಾಜಿ ಶಾಸಕ ಡಾ.ರಫೀಕ್ ಅಹಮದ್,ಕೆಪಿಸಿಸಿ ವೀಕ್ಷಕ ಕೇಶವಮೂರ್ತಿ, ಮುರುಳೀಧರ ಹಾಲಪ್ಪ, ಇಕ್ಬಾಲ್‌ಅಹಮದ್,ಹೊನ್ನಗಿರಿಗೌಡ,ಯಲಚವಾಡಿ ನಾಗರಾಜು,ರಾಯಸಂದ್ರರವಿಕುಮಾರ್,ಶಶಿಹುಲಿಕುಂಟೆಮಠ,ರೆಡ್ಡಿಚಿನ್ನಯಲ್ಲಪ್ಪ, ನರಸೀಯಪ್ಪ, ಪ್ರಸನ್ನಕುಮಾರ್, ಶಂಕರಾನಂದ ಸೇರಿದಂತೆ ಇತರರಿದ್ದರು.