ನಾಳೆ 75ನೇ ಸ್ವಾತಂತ್ರ್ಯೋತ್ಸವದ “ತಿರಂಗ ಯಾತ್ರೆ” : ಹೆಚ್. ಎಸ್. ರವಿಶಂಕರ್ ಹೆಬ್ಬಾಕ
ತುಮಕೂರು : 75ನೇ ಸ್ವಾತಂತ್ರ್ಯೋತ್ಸ ಅಮೃತ ಮಹೋತ್ಸವವನ್ನು ದೇಶೆದೆಲ್ಲೆಡೆ ವಿಜೃಂಭಣೆಯಿಂದ ಆಚರಿಸುತ್ತಿದ್ದು, ಇದರ ಭಾಗವಾಗಿ ತುಮಕೂರು ನಗರದಲ್ಲೂ ಸಹ ಆ.15 ರಂದು ಮಧ್ಯಾಹ್ನ 3 ಗಂಟೆಗೆ ಸ್ವಾತಂತ್ರ್ಯೋತ್ಸವದ“ತಿರಂಗ ಯಾತ್ರೆ” ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ತಿರಂಗ ಯಾತ್ರಾ ಸಮಿತಿ ಸಂಚಾಲಕರಾದ ಹೆಚ್.ಎಸ್. ರವಿಶಂಕರ್ ಹೆಬ್ಬಾಕ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ವಿಶೇಷ ಕಾರ್ಯಕ್ರಮಗಳನ್ನು ನಡೆಸುವುದರ ಮೂಲಕ ಭಾರತ ಮಾತೆಗೆ ನಮನ ಸಲ್ಲಿಸಲಾಗುವುದು ಎಂದು ಹೇಳಿದರು.
ಅಂದು ಮಧ್ಯಾಹ್ನ 3 ಗಂಟೆಗೆ ತಿರಂಗ ಯಾತ್ರೆಯು ನಗರದ ಎಸ್‌ಐಟಿ ಮುಂಭಾಗದಿಂದ ಹೊರಡಲಿದ್ದು, ಗಂಗೋತ್ರಿ ರಸ್ತೆ, ಎಸ್‌ಐಟಿ ಮುಖ್ಯರಸ್ತೆ ಮೂಲಕ ಸಾಗಲಿರುವ ಈ ಯಾತ್ರೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 13ಕ್ಕೂ ಹೆಚ್ಚು ಕಲಾತಂಡಗಳು ಭಾಗವಹಿಸಲಿವೆ. ವಿವಿಧತೆಯಲ್ಲಿ ಏಕತೆಯನ್ನು ಸಾರುವ ಈ ತಿರಂಗ ಯಾತ್ರೆಯಲ್ಲಿ ನಮ್ಮ ದೇಶದ ಸಂಸ್ಕೃತಿ ಪರಂಪರೆಯನ್ನು ಬಿಂಬಿಸುವ ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ, ಕಲಾತಂಡಗಳಾದ ತಮಟೆ, ಹರೆ, ಕೋಲಾಟ, ಮೈಸೂರು
ನಗಾರಿ, ಕೇರಳದ ಚಂಡೆ, ಪೂಜಾಪಟ, ಡೊಳ್ಳು ಕುಣಿತ, ಮಂಗಳೂರು ನಾಸಿಕ್ ಬ್ಯಾಂಡ್, ಗುಬ್ಬಿಯ ಹೆಸರಾಂತ ಸಿಡಿಮದ್ದಿನ ಪ್ರದರ್ಶನಗಳೊಂದಿಗೆ ಸರ್ಕಾರಿ ಕಿರಿಯ ಕಾಲೇಜು ಆವರಣದವರೆಗೆ ಭಾರತ ಮಾತೆಯ ತಿರಂಗ ಯಾತ್ರೆ ಸಾಗಲಿದೆ ಎಂದು ತಿಳಿಸಿದರು.
ನಗರದ ಎಸ್‌ಐಟಿ ಮುಂಭಾಗ ಮಧ್ಯಾಹ್ನ 3 ಗಂಟೆಗೆ ಆರಂಭಗೊಳ್ಳುವ ತಿರಂಗ ಯಾತ್ರೆಗೆ ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗಸ್ವಾಮೀಜಿ, ಹಿರೇಮಠಾಧ್ಯಕ್ಷರಾದ ಡಾ.ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಸರಪಳಿ ಮಠದ ಶ್ರೀ ಜ್ಞಾನಾನಂದ ಪುರಿ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು, ಭಾಗವಹಿಸಿ ಚಾಲನೆ ನೀಡುವರು ಎಂದರು.
ನಗರದಲ್ಲಿ ಸುಮಾರು 2 ಗಂಟೆಗಳ ಕಾಲ ಭಾರತ ಮಾತೆಯ ಉತ್ಸವ ನಡೆಯಲಿದ್ದು, ನಾಲ್ಕು ಸಾವಿರದಿಂದ 5 ಸಾವಿರ ಜನ ಸೇರುವ ನಿರೀಕ್ಷೆ ಇದೆ. ನಗರದ ಜೂನಿಯರ್ ಕಾಲೇಜು ಮೈದಾನಕ್ಕೆ ಸಂಜೆ 5 ಗಂಟೆಗೆ ತಲುಪಿ ಸಮಾರೋಪಗೊಳ್ಳಲಿದೆ. ನಂತರ ಸಿಡಿಮದ್ದಿನ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.
ನಗರದ ಎಲ್ಲಾ ಸಂಘ ಸಂಸ್ಥೆಗಳು, ಸಾರ್ವಜನಿಕರು, ದೇಶಭಕ್ತರು ಈ ತಿರಂಗ ಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರ ಮೂಲಕ ಭಾರತ ಮಾತೆಗೆ ನಮನ ಸಲ್ಲಿಸಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಎಸ್.ವಿಶ್ವನಾಥ್, ಜಿ.ಮಲ್ಲಿಕಾರ್ಜುನ್, ಬಾಲಾಜಿ, ಸುರೇಂದ್ರ ಷಾ, ಶಂಕರ್, ಸುಮಾ, ಹಿಮಾನಂದ್, ಶಂಕರ್, ಡಾ.ಸಂಜಯ್ ಮಹದೇವಪ್ಪ, ಕೆ.ಪಿ.ಮಹೇಶ್, ಜೆ.ಜಗದೀಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.