ತುಮಕೂರುರಾಜಕೀಯರಾಜ್ಯ

ಸುದ್ದಿ ಬಿತ್ತರಿಸುವಲ್ಲಿ ವಾಸ್ತವತೆ ಮರೆಮಾಚಬಾರದು : ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಪದಗ್ರಹಣ, ಬಿಎಸ್‌ವೈಗೆ ಅಭಿನಂದನೆ

ತುಮಕೂರು : ಸಮಾಜದಲ್ಲಿ ಪತ್ರಕರ್ತರೆಂದರೆ ಕೇವಲ ಟೀಕೆ ಮಾಡುವವರಲ್ಲ. ತಪ್ಪಾದಾಗ ಎಚ್ಚರಿಸಿ, ಒಳ್ಳೆಯ ಕೆಲಸ ಮಾಡಿದಾಗ ಬೆನ್ನು ತಟ್ಟುವ ನೇರ ಮತ್ತು ನಿಷ್ಠುರವಾದಿಗಳು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಬುಧವಾರ ಏರ್ಪಡಿಸಿದ್ದ ಸಂಘದ ಜಿಲ್ಲಾ ಘಟಕಕ್ಕೆ ಆಯ್ಕೆಯಾದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು ಸುದ್ದಿ ಮಾಧ್ಯಮಗಳು ಸುದ್ದಿ ಬಿತ್ತರಿಸುವ ರಭಸದಲ್ಲಿ ವಸ್ತುಸ್ಥಿತಿ, ಸುದ್ದಿಸಾರವನ್ನು ಮರೆಮಾಚಬಾರದು ಎಂದು ಕಿವಿ ಮಾತು ಹೇಳಿದರು.
ಮೊದಲಿನಿಂದಲೂ ಪತ್ರಕರ್ತರೊಂದಿಗೆ ನಾನು ಉತ್ತಮ ಬಾಂಧವ್ಯವನ್ನು ಹೊಂದಿದ್ದೇನೆ. ಅಧಿಕಾರದಲ್ಲಿದ್ದಾಗ ಪತ್ರಕರ್ತರ ಅಭ್ಯುದಯಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದೇನೆಂಬ ಆತ್ಮತೃಪ್ತಿ, ಸಂತಸ ನನಗಿದೆ. ಕೋವಿಡ್ ಸಂದರ್ಭದಲ್ಲಿ ಪತ್ರಕರ್ತರನ್ನು ಕೋವಿಡ್ ವಾರಿಯರ್‌ಗಳೆಂದು ಘೋಷಿಸಿ ಪತ್ರಿಕಾ ವಿತರಕರೂ ಸೇರಿದಂತೆ ಸುಮಾರು 25000ಕ್ಕೂ ಹೆಚ್ಚು ಪತ್ರಕರ್ತರು ಹಾಗೂ ಅವರ ಕುಟುಂಬದವರಿಗೆ ಉಚಿತ ಕೋವಿಡ್ ಲಸಿಕೆಯನ್ನು ಹಾಕಿಸಲು ಕ್ರಮ ಕೈಗೊಳ್ಳಲಾಗಿತ್ತು.
ಇದೇ ವೇಳೆ ಸೋಂಕಿನಿಂದ ಮೃತಪಟ್ಟ ರಾಜ್ಯದ ಅರ್ಹ ಪತ್ರಕರ್ತ ಕುಟುಂಬಗಳಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ 5ಲಕ್ಷ ರೂ.ಗಳ ಪರಿಹಾರವನ್ನು ನೀಡಲಾಗಿದೆ ಎಂದು ಹೇಳಿ, ಕೋರೋನಾ ಸಂಕಷ್ಟದ ಸಂದರ್ಭದಲ್ಲಿ ಪತ್ರಕರ್ತರ ಸಂಘದ ವತಿಯಿಂದ ಪತ್ರಕರ್ತರಿಗೆ ದಿನಸಿ ಕಿಟ್‌ಗಳನ್ನು ವಿತರಿಸಿ ನೆರವಿಗೆ ಧಾವಿಸಿದ್ದು ನಿಜಕ್ಕೂ ಅಭಿನಂದನಾರ್ಹ ಎಂದರು.
ನಾನು ಮುಖ್ಯ ಮಂತ್ರಿಯಾಗಿದ್ದಾಗ ತುಮಕೂರು ನಗರದಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕಾಗಿ 25ಲಕ್ಷ ರೂ.ಗಳನ್ನು ನೀಡಲಾಗಿತ್ತು. ಎಲ್ಲರ ಸಹಕಾರದಿಂದ ಪತ್ರಿಕಾಭವನ ಕಟ್ಟಡ ನಿರ್ಮಾಣ ಪೂರ್ಣವಾಗಿದ್ದರೂ ಹಲವಾರು ತಾಂತ್ರಿಕ ಕಾರಣಗಳಿಂದ ಮುಚ್ಚಲಾಗಿತ್ತು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ.ನೀ. ಪುರುಷೋತ್ತಮ್ ಹಾಗೂ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ಕೋರಿಕೆ ಮೇರೆಗೆ ಮುಚ್ಚಿದ್ದ ಪತ್ರಿಕಾಭವನವನ್ನು ಮತ್ತೆ ತೆಗೆಸಿದ್ದು, ನನ್ನ ಅಧಿಕಾರವಧಿಯಲ್ಲಿನ ಕೊಡುಗೆ ಸ್ಮರಿಸಿ ನನ್ನನ್ನು ಗೌರವಿಸಿದಕ್ಕಾಗಿ ಅಭಾರಿಯಾಗಿದ್ದೇನೆ. ಪತ್ರಕರ್ತರ ಹಿತರಕ್ಷಣೆಗೆ ಸದಾ ಜೊತೆಗಿರುವೆ ಎಂದು ಹೇಳಿ ನೂತನ ಪದಾಧಿಕಾರಿಗಳಿಗೆ ಶುಭಕೋರಿದರು.
ಪತ್ರಿಕಾವೃತ್ತಿ, ರಾಜಕಾರಣಕ್ಕೆ ಹಣಗಳಿಕೆಗೆ ಬರಬಾರದು:- ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಿ ಮಾತನಾಡಿದ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅರಗ ಜ್ಞಾನೇಂದ್ರ ಅವರು ಪತ್ರಕರ್ತರ ಲೇಖನಗಳಿಗೆ ಸರ್ಕಾರಗಳೇ ಉರುಳಿ ಹೋದ ನಿದರ್ಶನಗಳಿವೆ. ಪತ್ರಕರ್ತನು ಪ್ರಜೆಗಳ ದನಿಯಾಗಿ ಅವರ ತುಡಿತಗಳನ್ನು ಸರ್ಕಾರಕ್ಕೆ ಮುಟ್ಟಿಸುವ ಕೆಲಸ ಮಾಡಬೇಕಾಗುತ್ತದೆ. ಪತ್ರಿಕಾ ವೃತ್ತಿಗೆ, ರಾಜಕಾರಣಕ್ಕೆ ಹಣ ಮಾಡಲು ಬರುವವರು ಕ್ಷಣಿಕ ಆನಂದವನ್ನಷ್ಟೆ ಹೊಂದಬಹುದು. ನೈತಿಕವಾಗಿ ಕುಗ್ಗಿ ಹೋಗುತ್ತಾರೆ. ಪತ್ರಿಕಾ ವೃತ್ತಿಯನ್ನು ವ್ಯವಹಾರ/ವ್ಯಾಪಾರದ ದೃಷ್ಟಿಯಲ್ಲಿ ನೋಡದೆ ಅರ್ಪಣಾ ಮನೋಭಾವದಿಂದ ಅಪ್ಪಿಕೊಂಡಾಗ ಮಾತ್ರ ಪಾವಿತ್ರ್ಯತೆ ಉಳಿಯುತ್ತದೆ ಎಂದು ಹೇಳಿ ಬಿಎಸ್‌ವೈ ಅವರನ್ನು ಕರೆದು ಗೌರವಿಸಿದಕ್ಕೆ ಶ್ಲಾಘಿಸಿದರು.

ಸ್ವಂತ ಕಟ್ಟಡ, ನಿವೇಶನ ಒದಗಿಸಲು ಬದ್ಧ:-
ಸ್ವಂತ ಕಟ್ಟಡಕ್ಕೆ ನಿವೇಶನ ಒದಗಿಸಲು ತುಮಕೂರು ಜಿಲ್ಲೆಯ ಪತ್ರಕರ್ತರ ಸಂಘದ ಬೇಡಿಕೆಯಂತೆ ಶಾಸಕರು, ಸಂಸದರು, ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಸಾಮಾಜಿಕ ಜಾಲತಾಣಗಳ ಭರಾಟೆ ಹೆಚ್ಚುತ್ತಿರುವುದರಿಂದ ಪತ್ರಕರ್ತರು ತಂತ್ರಜ್ಞಾನದಲ್ಲಿ ಅಪ್‌ಡೇಟ್ ಆಗಬೇಕು. ಈ ನಿಟ್ಟಿನಲ್ಲಿ ಸಂಘದ ವತಿಯಿಂದ ಪತ್ರಕರ್ತರಿಗೆ ವೃತ್ತಿ ನೈಪುಣ್ಯತೆ ತರಬೇತಿ, ಸಂವಾದ, ಮತ್ತಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಸಲಹೆ ನೀಡಿದರಲ್ಲದೆ ಪತ್ರಕರ್ತರ ಹಿತರಕ್ಷಣೆಗಾಗಿ ನೆರವು ನೀಡುವಲ್ಲಿ ನಮ್ಮ ಸರ್ಕಾರ ಬದ್ಧವಾಗಿದೆ. ತುಮಕೂರಿನ ಪತ್ರಕರ್ತರು ಸೌಜನ್ಯ, ಬುದ್ದಿವಂತರೆನಿಸಿದ್ದಾರೆಂದು ಗೃಹಸಚಿವರು ಬಣ್ಣಿಸಿದರು.

ಅಭಿನಂದನಾ ನುಡಿ:- ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಅಭಿನಂದನೆ ನುಡಿಗಳನ್ನಾಡಿ ಬಿ.ಎಸ್.ವೈ. ಅವರು ತಮ್ಮ ಅಧಿಕಾರಾವಧಿಯಲ್ಲಿ ಪತ್ರಕರ್ತ ಸ್ನೇಹಿಯಾಗಿ ಹಲವಾರು ಯೋಜನೆಗಳನ್ನು ರೂಪಿಸಿದ್ದರು. ತಮ್ಮ ಸುರಕ್ಷತೆಯನ್ನೇ ಪಣಕ್ಕಿಟ್ಟು ಮೃತಪಟ್ಟ ರಾಜ್ಯದ ಸುಮಾರು 55 ಪತ್ರಕರ್ತ ಕುಟುಂಬಗಳಿಗೆ ತಲಾ 5ಲಕ್ಷ ರೂ.ಗಳ ಪರಿಹಾರ ಮಂಜೂರು ಮಾಡಿದ ಏಕೈಕ ಸಿಎಂ ಎನಿಸಿದರು ಎಂದು ಹೇಳಿ ಪತ್ರಿಕಾ ಭವನ ನಿರ್ಮಾಣಕ್ಕೆ ಅನುದಾನ, ಆರೋಗ್ಯ ಕಾರ್ಡ್ ಕಲ್ಪಿಸಿದರು. 56 ಕೋಟಿ ಜಾಹೀರಾತು ಮೊತ್ತವನ್ನು ಒಂದೇ ಕಂತಿನಲ್ಲಿ ಪತ್ರಿಕೆಗಳಿಗೆ ಬಿಡುಗಡೆಗೊಳಿಸಿದರು. ಇವರ ಸೇವೆ ಗುರುತಿಸಿ ಪತ್ರಕರ್ತರ ಸಂಘ ಗೌರವ ಪೂರ್ವಕವಾಗಿ ಅಭಿನಂದಿಸುತ್ತಿದೆ. ಕೋವಿಡ್ ವೇಳೆ ಪತ್ರಕರ್ತರು, ಮತ್ತವರ ಕುಟುಂಬದವರು ಎದುರಿಸಿದ ಸಂಕಷ್ಟವನ್ನು ಎಳೆಎಳೆಯಾಗಿ ಬಿಡಿಸಿಟ್ಟರು.
ಸಂಸದ ಜಿ.ಎಸ್. ಬಸವರಾಜು ಮಾತನಾಡಿ, ಬಿಎಸ್‌ವೈ ಅವರಂತೆ ದಾನ-ಧರ್ಮ ಮಾಡಿದ ಮುಖ್ಯಮಂತ್ರಿಗಳು ಮತ್ತಾರು ಇಲ್ಲ. ಹೇಮಾವತಿ ನಾಲೆ ಆಧುನೀಕರಣಕ್ಕೆ ಯಡಿಯೂರಪ್ಪ ಅವರೇ ಮುಖ್ಯ ಕಾರಣ. ನದಿ ನೀರು ಜೋಡಣೆ, ನೀರಾವರಿಯೋಜನೆಗಳ ಜಾರಿ ಇಂದಿನ ತುರ್ತು ಅಗತ್ಯವಾಗಿದ್ದು, ಫಿಜಿಬಲಿಟಿ ರಿಪೋರ್ಟ್ ಅನ್ನು ರಾಜ್ಯ ಸರಕಾರದಿಂದ ಬೇಗ ಕಳುಹಿಸಿಕೊಟ್ಟರೆ ಕೇಂದ್ರದಿಂದ ಬೇಗ ನೀರಾವರಿ ಯೋಜನೆಗಳಿಗೆ ಅನುದಾನ, ಮಂಜೂರಾತಿ ದೊರಕಲಿದೆ ಎಂದು ಹೇಳಿ ಯಡಿಯೂರಪ್ಪ ಅವರು ನಿರಪರಾಧಿಯಾಗಿದ್ದರೂ ಅಧಿಕಾರದಿಂದ ನಿರ್ಗಮಿಸಿದ್ದು ನಮಗೆಲ್ಲ ಬೇಸರ ತರಿಸಿದೆ ಎಂದರು.
ಸಿದ್ಧರಬೆಟ್ಟದ ರಂಭಾಪುರಿ ಖಾಸಾ ಶಾಖಾ ಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ದಿವ್ಯಸಾನಿಧ್ಯವಹಿಸಿ ಆಶೀರ್ವಚನ ನೀಡಿ ಪತ್ರಕರ್ತರ ಸಂಘವು ಗ್ರಾಮೀಣ ಭಾಗದ ಪತ್ರಕರ್ತರ ಶ್ರೇಯೋಭಿವೃದ್ಧಿಯತ್ತ ಗಮನಹರಿಸಬೇಕು. ಪತ್ರಕರ್ತರು ನಕರಾತ್ಮಕ ವಿಷಯವನ್ನಷ್ಟೆ ಅಲ್ಲದೆ ಉತ್ತಮ ವಿಷಯ, ಸಾಧನೆಗಳ ಬಗ್ಗೆ ವರದಿ ಮಾಡುವತ್ತ ಒಲವು ತೋರಬೇಕು. ಇಂತಹ ವರದಿಗಳು ಸಮಾಜಕ್ಕೆ ಪ್ರೇರಕವಾಗುತ್ತವೆ ಎಂದು ಹೇಳಿ ರಡನೇ ಬಾರಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಚಿ.ನೀ. ಪುರುಷೋತ್ತಮ್ ಮತ್ತವರ ತಂಡಕ್ಕೆ ಶುಭ ಹಾರೈಸಿದರು.
ಸಚಿವರು, ಬಿಎಸ್ ವೈ ಅವರಲ್ಲಿ ಮನವಿ: ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ.ನಿ. ಪುರುಷೋತ್ತಮ್ ಪ್ರಾಸ್ತಾವಿಕವಾಗಿ ಮಾತನಾಡಿ ಕೋವಿಡ್ ಸಂದರ್ಭದಲ್ಲಿ ಪತ್ರಕರ್ತರ ಸಂಕಷ್ಟಕ್ಕೆ ನೆರವಾದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ತುಮಕೂರಿನಲ್ಲಿ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ. ಸಂಘದ ಮನವಿ ಮೇರೆಗೆ ಕೋವಿಡ್‌ನಲ್ಲಿ ಮೃತರಾದ ಗುಬ್ಬಿ ಜಯಣ್ಣ ಸೇರಿ ಐದಾರು ಪತ್ರಕರ್ತ ಕುಟುಂಬದವರಿಗೆ ನೆರವು ನೀಡಿದ್ದು, ಸೋಂಕಿನ ಸಂದರ್ಭದಲ್ಲಿ ಸಂಕಷ್ಟಕ್ಕೊಳಗಾಗಿದ್ದ ಪತ್ರಕರ್ತರಿಗೆ ದಿನಸಿಕಿಟ್ ಕೊಡಿಸುವ ಮೂಲಕ ಸಂಘ ಇಡೀ ರಾಜ್ಯಕ್ಕೆ ಮಾದರಿಯಾಯಿತು ಎಂದು ಹೇಳಿ ಸಂಘದ ಸಮುದಾಯ ಭವನಕ್ಕೆ ಸ್ವಂತ ನಿವೇಶನ, ಆರೋಗ್ಯ ಸೌಲಭ್ಯ ಯೋಜನೆ ಕಲ್ಪಿಸುವಂತೆ ಬಿಎಸ್‌ವೈ, ಗೃಹಸಚಿವರಲ್ಲಿ ಕೋರಿದರು.
ಐ.ಎಫ್.ಡಬ್ಲ್ಯೂಜೆ ರಾಷ್ಡ್ರೀಯ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ ನೂತನ ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿ ಜಾತ್ಯಾತೀತವಾಗಿ ಎಲ್ಲರಿಗೂ ಸಮಾನ ಸ್ಥಾನಮಾನ ಹಾಗೂ ಹಕ್ಕು ನೀಡಲು ಸಂಕಲ್ಪ ಮಾಡಿದ ಮೊಟ್ಟ ಮೊದಲ ಮುಖ್ಯಮಂತ್ರಿ ಯಡಿಯೂರಪ್ಪ ಎಂದು ಬಣ್ಣಿಸಿ ಡಿ.ವಿ. ಗುಂಡಪ್ಪ ಅವರಂತಹ ಮಹಾನ್ ವ್ಯಕ್ತಿ ಸ್ಥಾಪಿಸಿದ ಈ ಸಂಘಕ್ಕೆ ಕಳಂಕ ತರುವಂತಹ ಕೆಲಸ ಯಾರೂ ಮಾಡಬಾರದು ಎಂದರು.
ಕೋವಿಡ್ ಸೋಂಕಿನಿಂದ ಮೃತಪಟ್ಟ ಗುಬ್ಬಿ ಜಯಣ್ಣ ಅವರು ಪತ್ನಿ ಜ್ಯೋತಿ ಮಾತನಾಡಿ ಪತಿಯನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ನನ್ನ ಹಾಗೂ ಕುಟುಂಬಕ್ಕೆ ನೆರವಾದ ಬಿ.ಎಸ್.ವೈ ಹಾಗೂ ಪತ್ರಕರ್ತರ ಸಂಘಕ್ಕೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್, ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಶಾಸಕ ಗಂಗಹನುಮಯ್ಯ, ಮೇಯರ್ ಬಿ.ಜಿ. ಕೃಷ್ಣಪ್ಪ, ಟೂಡಾ ಅಧ್ಯಕ್ಷ ಬಾವಿಕಟ್ಟೆ ನಾಗಣ್ಣ, ಮಾಜಿ ವಿಧಾನ ಪರಿಷತ್ ಸದಸ್ಯ ಡಾ|| ಎಂ.ಆರ್. ಹುಲಿನಾಯ್ಕರ್, ಜಿಲ್ಲಾ ಪತ್ರಕರ್ತರ ಸಂಘದ ಪದಾಧಿಕಾರಿಗಳು, ನೂತನ ನಿರ್ದೇಶಕರು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಕಲಬುರ್ಗಿಯಲ್ಲಿ ಜರುಗಿದ ಪತ್ರಕರ್ತರ ಸಮ್ಮೇಳನದ ಸ್ಮರಣಾರ್ಥ ಹೊರತಂದಿರುವ “ಪತ್ರಕರ್ತ” ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಸಂಘದ ಚಟುವಟಿಕೆಗಳಿಗೆ ಸ್ವಂತ ನಿವೇಶನ ಹಾಗೂ ಪತ್ರಕರ್ತರ ಆರೋಗ್ಯ ವಿಮೆ ಒದಗಿಸಲು ಕ್ರಮ ಕೈಗೊಳ್ಳಬೇಕೆಂಬ ಮನವಿ ಪತ್ರವನ್ನು ಯಡಿಯೂರಪ್ಪ ಅವರಿಗೆ ಸಲ್ಲಿಸಲಾಯಿತು.
ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಇ. ರಘುರಾಮ್ ಸ್ವಾಗತಿಸಿದರು. ಪತ್ರಕರ್ತ ಪ್ರಸನ್ನ ದೊಡ್ಡಗುಣಿ ನಿರೂಪಿಸಿದರು. ಸವಿತಾ ಉಮಾಶಂಕರ್ ಪ್ರಾರ್ಥಿಸಿದರು. ಇದಕ್ಕೂ ಮುನ್ನ ದಿಬ್ಬೂರು ಮಂಜುನಾಥ ಮತ್ತು ಸಂಗಡಿಗರಿಂದ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಪದಗ್ರಹಣ ಸ್ವೀಕಾರ:- ಸಮಾರಂಭದಲ್ಲಿ ಚಿ.ನಿ.ಪುರುಷೋತ್ತಮ್ ಅಧ್ಯಕ್ಷರಾಗಿ, ಎಲ್.ಚಿಕ್ಕೀರಪ್ಪ, ಶ್ಯಾ.ನ.ಪ್ರಸನ್ನಮೂರ್ತಿ, ತಿಪಟೂರು ಕೃಷ್ಣ(ಉಪಾಧ್ಯಕ್ಷರುಗಳಾಗಿ), ಟಿ.ಇ.ರಘುರಾಂ(ಪ್ರಧಾನ ಕಾರ್ಯದರ್ಶಿ), ದೇವಪ್ರಕಾಶ್ ಖಜಾಂಚಿಯಾಗಿ, ಎಲ್.ರಂಗಧಾಮಯ್ಯ, ಸತೀಶ್ ಹಾರೋಗೆರೆ, ದಶರಥ ಕಾರ್ಯದರ್ಶಿಗಳಾಗಿ, ಸಿದ್ದಲಿಂಗಸ್ವಾಮಿ ರಾಜ್ಯ ಸಮಿತಿ ಸದಸ್ಯರಾಗಿ ಹಾಗೂ ನಿರ್ದೇಶಕರುಗಳಾಗಿ ಹೆಚ್.ಎಸ್.ಪರಮೇಶ್, ಮಂಜುನಾಥ್‌ನಾಯ್ಕ್(ತಾಳಮಕ್ಕಿ), ಕೆ.ನರಸಿಂಹಮೂರ್ತಿ, ನಂದೀಶ್ ಬಿ.ಎಲ್, ಟಿ.ಎಸ್.ಕೃಷ್ಣಮೂರ್ತಿ, ಪ್ರಸನ್ನದೊಡ್ಡಗುಣಿ, ಮಂಜುನಾಥ್(ಹಾಲ್ಕುರಿಕೆ), ಯಶಸ್.ಕೆ.ಪದ್ಮನಾಭ್, ಸಿ.ಜಯಣ್ಣ, ಎಸ್.ಡಿ.ಚಿಕ್ಕಣ್ಣ, ಭೈರೇಶ್ ಎಂ.ಬಿ., ನಾಗೇಂದ್ರಪ್ಪ ಎಚ್.ಕೆ., ಶಂಕರ್ ಸಿರಾ, ನಾಗರಾಜು ಎನ್.ಎನ್, ಪಿ.ಎಸ್.ಮಲ್ಲಿಕಾರ್ಜುನಸ್ವಾಮಿ ಅಧಿಕಾರ ಸ್ವೀಕರಿಸಿದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker