ತುಮಕೂರುರಾಜ್ಯ

ಡಾ.ಜಿ.ಪರಮೇಶ್ವರ್ ವಿರುದ್ದ ಅಪಪ್ರಚಾರಕ್ಕೆ ಪರಮೇಶ್ವರ್ ಯುವಸೈನ್ಯ ಖಂಡನೆ

ತುಮಕೂರು : ಜಿಲ್ಲೆಯಲ್ಲಿ ನಡೆದ ಮೂರು ವಿವಿಧ ಸಮುದಾಯಗಳ ಸಮಾವೇಶಕ್ಕೆ ಗೈರಾಗಿದ್ದರೂ ಎಂಬುದನ್ನೇ ನೆಪ ಮಾಡಿಕೊಂಡು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಕಾಂಗ್ರೆಸ್ ಪಕ್ಷದ ತೊರೆಯಲಿದ್ದಾರೆ ಎಂದು ಗುಲ್ಲೆಬ್ಬಿಸುವ ಕೆಲಸವನ್ನು ಕೆಲವರು ಮಾಡುತ್ತಿದ್ದು, ಇದು ಖಂಡನೀಯ ಎಂದು ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ್ ಯುವಸೈನ್ಯದ ರಾಜ್ಯಾಧ್ಯಕ್ಷ ನಗುತಾ ರಂಗನಾಥ್ ತಿಳಿಸಿದ್ದಾರೆ.
ಖಾಸಗಿ ಹೊಟೇಲ್‌ವೊಂದರಲ್ಲಿ ಸಂಘದ ಸಭೆ ನಡೆಸಿ ಮಾತನಾಡಿದ ಅವರು,ಡಾ.ಜಿ.ಪರಮೇಶ್ವರ್ ಅವರ ತಂದೆಯ ಕಾಲದಿಂದಲೂ ಕಾಂಗ್ರೆಸ್ ಪಕ್ಷವನ್ನು ಅಪ್ಪಿ,ಒಪ್ಪಿ, ಅದರ ಸಂಘಟನೆಗೆ ಹಗಲಿರುಳೆನ್ನದೆ ದುಡಿದ್ದಾರೆ. ಬೇರೆ ನಾಯಕರಂತೆ ಅಧಿಕಾರಕ್ಕಾಗಿ, ರಾಜಕೀಯ ಅವಕಾಶಕ್ಕಾಗಿ ಮತ್ತೊಂದು ಪಕ್ಷಕ್ಕೆ ಹೋಗಿಲ್ಲ. ಅನಾರೋಗ್ಯದ ಸಂಬಂಧ ಮೇ.22 ರಂದು ನಡೆದ ಮಡಿವಾಳರ ರಾಜ್ಯ ಸಮಾವೇಶ ಹಾಗೂ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಸಮಾವೇಶ ಮತ್ತು ಮೇ.28 ರಂದು ನಡೆದ ಕುರುಬ ಸಮುದಾಯದ ಜಿಲ್ಲಾ ಸಮಾವೇಶಕ್ಕೆ ಬರಲು ಆಗಿಲ್ಲ.ಇದನ್ನೇ ನೆಪ ಮಾಡಿಕೊಂಡ ಕೆಲವರು ಡಾ.ಜಿ.ಪರಮೇಶ್ವರ್ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಪಕ್ಷ ಸೇರಲಿದ್ದಾರೆ.ಹಾಗಾಗಿ ಮೂರು ಸಮಾವೇಶಗಳಿಗೆ ಗೈರಾಗಿದ್ದಾರೆ.ರಾಜ್ಯದ ನಾಯಕರೊಂದಿಗೆ ಭಿನ್ನಾಭಿಪ್ರಾಯವಿದೆ ಎಂಬ ಅರ್ಥ ಬರುವ ರೀತಿಯಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿ,ಜನರಲ್ಲಿ ಅದರಲ್ಲಿಯೂ ಕೊರಟಗೆರೆ ಕ್ಷೇತ್ರದ ಮತದಾರರಲ್ಲಿ ಗೊಂದಲ ಮೂಡುವಂತೆ ಮಾಡಿದ್ದಾರೆ.ಇದನ್ನು ಡಾ.ಜಿ.ಪರಮೇಶ್ವರ್ ಅನುಯಾಯಿಗಳಾದ ನಾವುಗಳು ಖಂಡಿಸುತ್ತೇವೆ ಎಂದು ರಂಗನಾಥ್ ನುಡಿದರು.
ರಾಜ್ಯದಲ್ಲಿ ದಲಿತ ಸಿ.ಎಂ. ಎಂಬ ಮಾತುಗಳು ಕಾಂಗ್ರೆಸ್ ಪಕ್ಷದಲ್ಲಿ ಮುನ್ನೆಲೆಗೆ ಬರುತ್ತಿರುವ ಕಾಲದಲ್ಲಿ ಹೇಗಾದರೂ ಮಾಡಿ ಡಾ.ಜಿ.ಪರಮೇಶ್ವರ್ ಅವರನ್ನು ಹಣಿಯಬೇಕೆಂದು ಹುನ್ನಾರ ನಡೆಸಿರುವ ಕೆಲ ಅವಕಾಶವಾದಿ ರಾಜಕಾರಣಿಗಳು, ಅವರ ವಿರುದ್ದ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ, ಅವರ ತೇಜೋವಧೆಗೆ ಮುಂದಾಗಿದ್ದಾರೆ. ಕಾಂಗ್ರೆಸ್ ಪಕ್ಷದ ನಿಷ್ಠಾವಂತ ರಾಜಕಾರಣಿಯಾಗಿರುವ ಅವರು ಎಂದಿಗೂ ಅಧಿಕಾರಕ್ಕೆ ಆಸೆ ಪಟ್ಟವರಲ್ಲ.ಕೆಪಿಸಿಸಿ ರಾಜ್ಯಾಧ್ಯಕ್ಷರಾಗಿ 2013ರ ಚುನಾವಣೆಯಲ್ಲಿ ತಾನು ಸೋತು ಪಕ್ಷವನ್ನು ಅಧಿಕಾರಕ್ಕೆ ತಂದರು.ಮಂತ್ರಿ ಮಾಡಲು ಪಕ್ಷದ ಕೆಲ ಮುಖಂಡರು ಅಡ್ಡಿ ಪಡಿಸಿದಾಗಲು ಪಕ್ಷದ ವಿರುದ್ದವಾಗಲಿ, ಪಕ್ಷದ ಮುಖಂಡರ ವಿರುದ್ದವಾಗಲಿ ಮಾತನಾಡದೆ ಪಕ್ಷದಲ್ಲಿ ಭಿನ್ನಮತಕ್ಕೆ ಅವಕಾಶ ನೀಡಲಿಲ್ಲ.ಅವರ ಪಕ್ಷ ನಿಷ್ಠೆಯನ್ನು ಸಹಿಸದ ಕೆಲವರು ಭವಿಷ್ಯದಲ್ಲಿ ಒಂದಿಲೊಂದು ದಿನ ಮುಖ್ಯಮಂತ್ರಿಯಾಗುವ ಆಶಯದೊಂದಿಗೆ ಪಕ್ಷದ ಏಳಿಗೆಗೆ ದುಡಿಯುತ್ತಿರುವ ಡಾ.ಜಿ.ಪರಮೇಶ್ವರ್ ವಿರುದ್ದ ಅಪಪ್ರಚಾರ ಮಾಡುತ್ತಿದ್ದಾರೆ.ಇದನ್ನು ಜಿಲ್ಲೆಯ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಅದರಲ್ಲಿಯೂ ಕೊರಟಗೆರೆ ಕ್ಷೇತ್ರದ ಮತದಾರರು ಗಂಭೀರವಾಗಿ ತೆಗೆದುಕೊಳ್ಳಬಾರದು ಎಂದು ನಗುತಾ ರಂಗನಾಥ್ ಮನವಿ ಮಾಡಿದರು.
ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ್ ಯುವಸೈನ್ಯದ ರಾಜ್ಯ ಕಾರ್ಯದರ್ಶಿ ಎನ್.ಕೆ.ನಿಧಿಕುಮಾರ್ ಮಾತನಾಡಿ, 1979ರಲ್ಲಿ ಅಂದಿನ ಕಾಂಗ್ರೆಸ್‌ನ ಅಧಿನಾಯಕ ರಾಜೀವ್‌ಗಾಂಧಿ ಅವರ ಕೋರಿಕೆಯ ಮೇರೆಗೆ,ತಮ್ಮ ತಂದೆಯ ಆಶಯದಂತೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಡಾ.ಜಿ.ಪರಮೇಶ್ವರ್ ಕಾಯಾ,ವಾಚಾ ಆ ಪಕ್ಷದ ಸಂಘಟನೆಗೆ ದುಡಿಯುತ್ತಿದ್ದಾರೆ.ನಾಲ್ಕು ಭಾರಿ ಶಾಸಕರಾಗಿ,ಎರಡು ಬಾರಿ ಮಂತ್ರಿಯಾಗಿ ಉನ್ನತ ಶಿಕ್ಷಣ, ವೈದ್ಯಕೀಯ ಶಿಕ್ಷಣ,ಗೃಹ ಮಂತ್ರಿಯಂತಹ ಹುದ್ದೆಗಳನ್ನು ಅಲಂಕರಿಸಿ, ಕಪ್ಪುಚುಕ್ಕೆ ಇಲ್ಲದಂತೆ ರಾಜಕಾರಣ ಮಾಡಿಕೊಂಡು ಬರುತ್ತಿದ್ದಾರೆ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ನಡುವಿನ ಮುಖ್ಯಮಂತ್ರಿ ಕುರ್ಚಿ ಪೈಪೋಟಿಯಲ್ಲಿ,ಅದು ಪಕ್ಷ ನಿಷ್ಠರು,ದಕ್ಷರು, ಪ್ರಾಮಾಣಿಕರು ಆಗಿರುವ ಡಾ.ಜಿ.ಪರಮೇಶ್ವರ್ ಅವರಿಗೆ ಒಲಿದು ಬಿಡುತ್ತದೆಯೋ ಎಂಬ ಭಯದಲ್ಲಿ ಕೆಲವರು ಅವರ ಇಲ್ಲಸಲ್ಲದ,ಊಹಾಪೋಹದ ಸುದ್ದಿಗಳನ್ನು ಹರಿಯ ಬೀಡುತ್ತಿದ್ದು, ಇವೆಲ್ಲಾ ಸತ್ಯಕ್ಕೆ ದೂರವಾದ ಸಂಗತಿಗಳಾಗಿವೆ.ಡಾ.ಜಿ.ಪರಮೇಶ್ವರ್ ಅವರು ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಬೇರೆ ಪಕ್ಷ ಸೇರುವ ಪ್ರಮಯ ಬರುವುದಿಲ್ಲ.ಇದನ್ನು ಡಾ.ಜಿ.ಪರಮೇಶ್ವರ್ ಯುವಸೈನ್ಯದ ಕಾರ್ಯಕರ್ತರು ಜನತೆಗೆ ತಿಳಿಸಬೇಕೆಂದು ಎನ್.ಕೆ.ನಿಧಿಕುಮಾರ್ ಮನವಿ ಮಾಡಿದರು.
ಸಭೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಮುರುಳಿ ರಾಚಯ್ಯ,ಮುಖಂಡರಾದ ಮಲ್ಲಿಕಾರ್ಜುನ್, ಸಾಗರ್,ಓಬಣ್ಣ, ಬಸವರಾಜು, ಮಾರುತಿ ಸೇರಿದಂತೆ ವಿವಿಧ ಜಿಲ್ಲೆಗಳ ಮುಖಂಡರು ಉಪಸ್ಥಿತರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker