ಮದ್ಯಪಾನ ಹಾಗೂ ಮಾದಕ ವಸ್ತುಗಳ ಸೇವನೆ ತಡೆಗಟ್ಟುವಿಕೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕಿದೆ : ನ್ಯಾ.ರಾಘವೇಂದ್ರ ಶೆಟ್ಟಿಗಾರ್
ತುಮಕೂರು : ಯುವಜನರು ಮಾಡುತ್ತಿರುವ ಅಪರಾಧಗಳ ಹಿಂದೆ ಮದ್ಯಪಾನ,ಮಾದಕ ವಸ್ತುಗಳ ಸೇವನೆ ಕಂಡು ಬರುತ್ತಿದ್ದು,ಇದನ್ನು ತಹಬದಿಗೆ ತರುವ ನಿಟ್ಟಿನಲ್ಲಿ ನಾವೆಲ್ಲರೂ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ರಾಘವೇಂದ್ರ ಶೆಟ್ಟಿಗಾರ್ ತಿಳಿಸಿದ್ದಾರೆ.
ಜಿಲ್ಲಾ ಕಾರಾಗೃಹದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ,ಜಿಲ್ಲಾ ಕಾರಾಗೃಹ, ಜಿಲ್ಲಾ ವಕೀಲರ ಸಂಘ,ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ದಿ ಯೋಜನೆ ಮತ್ತು ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ತುಮಕೂರು ವತಿಯಿಂದ ಆಯೋಜಿಸಿದ್ದ ಮದ್ಯಪಾನ ಮತ್ತು ಮಾದಕ ವಸ್ತುಗಳ ಸೇವನೆಯಿಂದ ಆಗುವ ದುಷ್ಪರಿಣಾಮ ಮತ್ತು ತಡೆಗಟ್ಟುವಿಕೆ ಕುರಿತ ಜಾಗೃತಿ ಅರಿವು ಮತ್ತು ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತಿದ್ದ ಅವರು,ಮದ್ಯಪಾನ, ಮಾದಕವಸ್ತು ಸೇವನೆ ಸಂದರ್ಭಗಳಲ್ಲಿ ಕೆಲವರು ತಮಗೆ ಅರಿವಿಲ್ಲದಂತೆಯೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಾರೆ.ಇದರ ಬಗ್ಗೆ ಅರಿವು ಎಲ್ಲರಿಗೂ ಅಗತ್ಯ.ಹಾಗಾಗಿ ಇಂತಹ ಕಾರ್ಯಕ್ರಮವನ್ನು ಕಾನೂನು ಸೇವಾ ಪ್ರಾಧಿಕಾರ ಇತರೆ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದೆ ಎಂದರು.
ಕೆಲವು, ಕೊಲೆ ಕಳ್ಳತನ ಪ್ರಕರಣಗಳ ಹಿಂದೆ ಮದ್ಯಪಾನ ಮತ್ತು ಮಾದಕ ವಸ್ತು ಸೇವೆ ಇರುವುದನ್ನು ಕಂಡಿದ್ದೇವೆ.ಹಾಗಾಗಿ ಕೆಲವರು ಕಾರಾಗೃಹ ವಾಸ ಅನುಭವಿಸುವಂತಾಗಿದ್ದಾರೆ.ಅವರು ಇಲ್ಲಿಂದ ಬಿಡುಗಡೆಯಾಗಿ ಹೋದ ನಂತರ ಮೊದಲಿನಂತೆ ಬಾಳಬೇಕಾದರೆ ಮದ್ಯಪಾನ, ಮಾದಕ ವಸ್ತುವಿನ ಚಟವನ್ನು ಬಿಡಬೇಕಾಗುತ್ತದೆ.ಈ ಉದ್ದೇಶದಿಂದಲೇ ಶ್ರೀಧರ್ಮಸ್ಥಳ ಗ್ರಾಮೀಣ ಅಭಿವೃದ್ದಿ ಯೋಜನೆಯ ಜೊತೆ ಸೇರಿ, ಅರಿವು ಕಾರ್ಯಕ್ರಮ ಆಯೋಜಿಸಿದ್ದವೆ. ಸಂಪನ್ಮೂಲ ವ್ಯಕ್ತಿಗಳು ಹೇಳುವ ಮಾತುಗಳನ್ನು ಸಮಚಿತ್ತದಿಂದ ಕೇಳಿ, ಅದನ್ನು ಅಳವಡಿಸಿಕೊಳ್ಳುವ ಮೂಲಕ ಶಿಕ್ಷೆ ಮುಗಿದು,ಹೊರಬಂದ ನಂತರ ಸಾಮಾನ್ಯ ಮನುಷ್ಯರಂತೆ ಬಾಳಿ ಎಂದು ನ್ಯಾ.ರಾಘವೇಂದ್ರ ಶೆಟ್ಟಿಗಾರ್ ಸಲಹೆ ನೀಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಜನಜಾಗೃತಿ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ.ಪಾಯಸ್ ಮಾತನಾಡಿ,ಕಾರಾಗೃಹ ಇರುವುದು ತಪ್ಪು ಮಾಡಿ ಶಿಕ್ಷೆಗೆ ಒಳಗಾಗಿ ಬರುವ ಅಪರಾಧಿಗಳ ಮನಃ ಪರಿವರ್ತನೆಗಾಗಿ,ತಾನು ಮಾಡಿದ ತಪ್ಪಿನ ಅರಿವಾಗಿ,ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸಿದರೆ,ಮುಂದಿನ ಬದುಕು ಸುಂದರವಾಗಿರುತ್ತದೆ.ತಪ್ಪು ಸಹಜ. ಪುರಾಣದಲ್ಲ ದೇವರೆಂದು ಹೆಸರಿಸುವ ಅನೇಕರು ತಪ್ಪು ಮಾಡಿರುವುದನ್ನು ಓದಿದ್ದೇವೆ.ಆದರೆ ಒಮ್ಮೆ ಮಾಡಿದ ತಪ್ಪನ್ನು ಪುನರಾವರ್ತಿಸುವುದು ದೊಡ್ಡ ತಪ್ಪು. ಪಶ್ಚಾತಾಪಕ್ಕಿಂತ ದೊಡ್ಡ ಶಿಕ್ಷೆಯಿಲ್ಲ.ಜೀವನವನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಸಲಹೆ ನೀಡಿದರು.
ಅಧ್ಯಕ್ಷತೆಯನ್ನು ಜಿಲ್ಲಾ ಕಾರಾಗೃಹದ ಅಧೀಕ್ಷಕಿ ಶ್ರೀಮತಿ ಶಾಂತಮ್ಮ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಹಿಮಾನಂದ.ಡಿ.ಸಿ, ಶ್ರೀಧರ್ಮಸ್ಥಳ ಗ್ರಾಮೀಣ ಅಭಿವೃದ್ದಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಶೀನಪ್ಪ.ಎಂ., ಜಿಲ್ಲಾ ನಿರ್ದೇಶಕಿ ಶ್ರೀಮತಿ ದಯಾಶೀಲ, ಜನಜಾಗೃತಿ ವೇದಿಕೆಯ ಪ್ರಾದೇಶಿಕ ಯೋಜನಾಧಿಕಾರಿ ಗಣೇಶ್ ಆಚಾರ್ಯ,ವಕೀಲರಾದ ಗಣೇಶ್ ಪ್ರಸಾದ್.ಕೆ. ಅವರುಗಳು ಉಪಸ್ಥಿತರಿದ್ದರು.
ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಪ್ರೆಸ್ ರಾಜಣ್ಣ ಸ್ವಾಗತಿಸಿದರು.ದಂತ ವೈದ್ಯ ಡಾ.ಸಂಜಯ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.