ತುಮಕೂರುಸಾಹಿತ್ಯ

ಆಡಳಿತದಲ್ಲಿ ಕನ್ನಡ ಅನುಷ್ಠಾನ: ತುಮಕೂರು ಜಿಲ್ಲಾಧಿಕಾರಿಗಳ ಕಾರ್ಯಕ್ಕೆ ಡಾ.ಟಿ.ಎಸ್.ನಾಗಾಭರಣ ಮೆಚ್ಚುಗೆ

ತುಮಕೂರು : ಜಿಲ್ಲಾಧಿಕಾರಿಗಳು ತಮ್ಮ ಇಲಾಖೆಯ ವ್ಯಾಪ್ತಿಯ ಆಡಳಿತದಲ್ಲಿ ಕನ್ನಡ ಅನುಷ್ಠಾನ ಕುರಿತಂತೆ ಮಾದರಿಯ ಕೆಲಸ ಮಾಡಿದ್ದಾರೆ,ಆದರೆ ಕನ್ನಡದಲ್ಲಿ ನಾಮಫಲಕ ಅಳವಡಿಕೆ ಕುರಿತಂತೆ ಅಂತಹ ಮಹತ್ವದ ಸಾಧನೆ ಆಗಿಲ್ಲ ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಡಾ.ಟಿ.ಎಸ್.ನಾಗಾಭರಣ ತಿಳಿಸಿದ್ದಾರೆ.
ತುಮಕೂರು ವಿವಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಂದು ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಕನ್ನಡ ಅನುಷ್ಠಾನ ಕುರಿತಂತೆ ಪರಿಶೀಲನೆ ನಡೆಸಿದ್ದು,ಜಿಲ್ಲಾಧಿಕಾರಿಗಳು ಒಂದು ಮಾದರಿ ಕ್ರಮವನ್ನು ಕೈಗೊಂಡಿದ್ದು,ಇದನ್ನು ಬೇರೆ ಜಿಲ್ಲೆಗಳಿಗೂ ವಿಸ್ತರಿಸುವ ಕುರಿತು ಸದ್ಯದಲ್ಲಿಯೇ ಚರ್ಚಿಸಲಾಗುವುದು ಎಂದರು.

ತುಮಕೂರು ಬೆಂಗಳೂರಿಗೆ ಹತ್ತಿರದಲ್ಲಿರುವ ನಗರ.ಸ್ಮಾರ್ಟ್ಸಿಟಿಯಾಗಿ ರೂಪಾಂತರಗೊಳ್ಳುತ್ತಿದೆ.ಕೆಲವರ ತಪ್ಪು ತಿಳುವಳಿಕೆ ಯಿಂದಾಗಿ ಕರ್ನಾಟಕದಲ್ಲಿ ಕನ್ನಡ ನಾಮಫಲಕ ಅಳವಡಿಕೆ ಸಂಬಂಧ ಅಂತಹ ಮಹತ್ವದ ಬೆಳವಣಿಗೆ ಕಂಡು ಬಂದಿಲ್ಲ. ಒಮ್ಮೆ ಕರ್ನಾಟಕ ಹೈಕೋರ್ಟು ನಾಮಫಲಕ ಅಳವಡಿಕೆ ಕುರಿತಂತೆ ತಡೆಯಾಜ್ಞೆ ನೀಡಿದ್ದನ್ನೇ ಕೆಲವರು ತಪ್ಪು ತಿಳಿದು ಆದೇಶ ರದ್ದಾಗಿದೆ ಎಂದು ತಿಳಿದಿದ್ದಾರೆ.ಆದರೆ ಆದೇಶ ಜಾರಿಯಲ್ಲಿದೆ.ಇದನ್ನು 2017ರ ಕನ್ನಡ ಅನುಷ್ಠಾನ ಕಾಯ್ದೆ ಕುರಿತಂತೆ ಅಭಿವೃದ್ದಿ ಪ್ರಾಧಿಕಾರ ಹೊರತರುತ್ತಿರುವ ಪ್ರಕಟಣೆಯಲ್ಲಿ ಬಹಳ ಸ್ಪಷ್ಟವಾಗಿ ಆದೇಶಿಸಲಾಗಿದೆ ಎಂದರು.
ಕನ್ನಡ ಶಾಲೆಗಳು ದಿನದಿಂದ ದಿನಕ್ಕೆ ಕುಸಿಯುತ್ತಿರುವ ಬಗ್ಗೆ ಪ್ರಾಧಿಕಾರ ಸಾಕಷ್ಟು ಚರ್ಚೆ ನಡೆಸಿದೆ.ಹಲವಾರು ಶಿಫಾರಸ್ಸುಗಳನ್ನು ಮಾಡಿದೆ.ಆದರೆ ರಾಜ್ಯದ ಎಲ್ಲಾ ಕನ್ನಡ ಶಾಲೆಗಳನ್ನು ಅಭಿವೃದ್ದಿ ಪಡಿಸಬೇಕೆಂದರೆ ಕನಿಷ್ಠ 3000 ಕೋಟಿ ರೂ ಬೇಕು.ಪ್ರಾಧಿಕಾರದ ಬಳಿ ಹಣವಿಲ್ಲ.1980ರಲ್ಲಿ ಇಂಗ್ಲೀಷ್ ಶಾಲೆಗಳಿಗೆ ಒತ್ತು ನೀಡಿದ್ದೆ ಇಂದಿನ ದುಸ್ಥಿತಿಗೆ ಕಾರಣ ಎಂದರು.
ರಾಜ್ಯದ ಪಠ್ಯ ಪುಸ್ತಕಗಳ ಪರಿಷ್ಕರಣೆಯ ಬಗ್ಗೆ ಸರಿಯಾಗಿ ತಿಳಿದಿಲ್ಲ. ಒಬ್ಬೊಬ್ಬರು ಒಂದೊಂದು ಹೇಳುತಿದ್ದಾರೆ.ಆದರೆ ಪುಸ್ತಕ ಹೊರಬಂದರೆ ಮಾತ್ರ ಏನಾದರೂ ತಿಳಿಯಲು ಸಾಧ್ಯ.ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ, ಉನ್ನತ ಶಿಕ್ಷಣ ಸಚಿವ ತೆಗೆದುಕೊಂಡ ನಿರ್ಧಾರಗಳಲ್ಲಿ ಕನ್ನಡ ವಿರೋಧಿಯಾಗಿದ್ದರೆ ಖಂಡಿಸುತ್ತೇವೆ,ಪರ ಇದ್ದರೆ ಗೌರವಿಸುತ್ತೇವೆ.ತಾಂತ್ರಿಕ ಕಾಲೇಜುಗಳಲ್ಲಿ ಕನ್ನಡ ಬಳಕೆಯ ಕುರಿತು ತಾಂತ್ರಿಕ ಶಿಕ್ಷಣ ಇಲಾಖೆಗೆ ಮೂರು ಬಾರಿ ನೋಟೀಸ್ ನೀಡಲಾಗಿದೆ ಎಂದು ತಿಳಿಸಿದರು.
ಭಾಷಾ ವೈವಿದ್ಯತೆಯ ಬಗ್ಗೆ ಪ್ರಧಾನ ಮಂತ್ರಿಗಳ ಮಾತನ್ನು ಒಪ್ಪುತ್ತೇನೆ.ಆದರೆ ಅಮಿತ್ ಷಾ ಅವರ ಮಾತನ್ನು ಒಪ್ಪಲು ಸಾಧ್ಯವಿಲ್ಲ.ಹೊಸ ಶಿಕ್ಷಣ ನೀತಿಯಲ್ಲಿ ಕನ್ನಡ ಕಲಿಕೆಗೆ ಹೆಚ್ಚಿನ ಅವಕಾಶವಿದೆ. ಬ್ಯಾಂಕಿಂಗ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡಿಗರು ಹೆಚ್ಚಿನ ಪ್ರಾತಿನಿಧ್ಯ ಪಡೆಯಲು ಕನ್ನಡದಲ್ಲಿಯೇ ತಂತ್ರಾಂಶ ಬಳಸಿಕೊಂಡು ಕೌಶಲ್ಯಭರಿತ ಯುವಜನರನ್ನು ಸೃಷ್ಟಿಸುವ ಕೆಲಸ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಕೌಶಲ್ಯಾಭಿವೃದ್ದಿ ಪ್ರಾಧಿಕಾರಕ್ಕೂ ಪತ್ರ ಬರೆಯಲಾಗಿದೆ ಎಂದರು.
ಕನ್ನಡಿಗರಿಗೆ ಉದ್ಯೋಗ ನೀಡುವ ಸಂಬಂಧ ಸರೋಜಿನಿ ಮಹಿಷಿ ವರದಿಗೆ ಸಂಬಂಧಿಸಿದಂತೆ ಹಲವರು ಲೋಪ ದೋಷಗಳಿಗೆ,ಕನ್ನಡಿಗರಿಗೆ ಮೀಸಲಾತಿ ಎಂದರೆ ಸಾಧ್ಯವಿಲ್ಲ.ಅದ್ಯತೆಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ.ಈ ನಿಟ್ಟಿನಲ್ಲಿ ನಾವೆಲ್ಲರೂ ಕ್ರಮ ವಹಿಸಬೇಕಾಗಿದೆ.ತುಮಕೂರು ವಿವಿಯಲ್ಲಿ ಕನ್ನಡ ಅನುಷ್ಠಾನದ ಬಗ್ಗೆ ಅಷ್ಟಾಗಿ ಗಮನಹರಿಸಿದಂತೆ ಕಂಡು ಬರುತ್ತಿಲ್ಲ.ಈ ನಿಟ್ಟಿನಲ್ಲಿ ಮೇಲುಸ್ತುವಾರಿ ವಹಿಸಲು ಒಬ್ಬರಿಗೆ ಕುಲಪತಿಗಳ ಒಪ್ಪಿಗೆ ಪಡೆದು ಒಬ್ಬರನ್ನು ನೇಮಕ ಮಾಡಲಾಗಿದೆ ಎಂದು ಡಾ.ಟಿ.ಎಸ್.ನಾಗಾಭರಣ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್,ಅಧ್ಯಕ್ಷರ ಅಪ್ತ ಕಾರ್ಯದರ್ಶಿ ಮಹೇಶ್ ಎನ್. ಹಾಗೂ ಕನ್ನಡ ಕಾವಲು ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker