ಪಾತಗಾನಹಳ್ಳಿಯಲ್ಲಿ ಶ್ರೀ ಸಿದ್ದಾರ್ಥ ವೈದ್ಯಕೀಯ ಆಸ್ಪತ್ರೆ ಹಾಗೂ ಪಾತಗಾನಹಳ್ಳಿ ಗ್ರಾ.ಪಂ. ಸಂಯುಕ್ತಾಶ್ರಯದಲ್ಲಿ ಉಚಿತ ವೈದ್ಯಕೀಯ ಚಿಕಿತ್ಸಾ ಶಿಬಿರ

ತುಮಕೂರು: ನಗರದ ಶ್ರೀ ಸಿದ್ದಾರ್ಥ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಹಾಗೂ ಪಾತಗಾನಹಳ್ಳಿ ಗ್ರಾಮಪಂಚಾಯಿತಿಯ ಸಂಯುಕ್ತಾಶ್ರಯದಲ್ಲಿ ತಾಲ್ಲೂಕಿನ ಪಾತಗಾನಹಳ್ಳಿ ನಡೆದ ಉಚಿತ ವೈದ್ಯಕೀಯ ಚಿಕಿತ್ಸಾ ಶಿಬಿರದಲ್ಲಿ ಗ್ರಾಮದ 290 ಮಂದಿ ಚಿಕಿತ್ಸೆಯ ಪ್ರಯೋಜನ ಪಡೆದುಕೊಂಡರು.
ಗ್ರಾಮದ ಜನತಾ ಪ್ರೌಢಶಾಲಾ ಆವರಣದಲ್ಲಿ ಏರ್ಪಟ್ಟಿದ್ದ ಉಚಿತ ವೈದ್ಯಕೀಯ ಚಿಕಿತ್ಸಾ ಶಿಬಿರವನ್ನು ಪಾತಗಾನಹಳ್ಳಿ ಪಂಚಾಯಿತಿ ಅಧ್ಯಕ್ಷೆ ವೇದಾವತಿ ಉದ್ಘಾಟಿಸಿ ಮಾತನಾಡಿ, ಪಂಚಾಯಿತಿ ಮಟ್ಟದಲ್ಲಿ ಉಚಿತ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳುವುದರಿಂದ ಎಲ್ಲಾ ವರ್ಗದ ಜನರಿಗೂ ಉಪಯೋಗವಾಗಲಿದೆ. ಅಲ್ಲದೆ ಕಡಿಮೆ ಹಣದಲ್ಲಿ ಮುಂದಿನ ಚಿಕಿತ್ಸೆ ಪಡೆದುಕೊಳ್ಳಲು ಸಹಾಯವಾಗುತ್ತದೆ ಎಂದರು.


ಗ್ರಾಮ ಪಂಚಾಯಿತಿ ಸದಸ್ಯರಾದ ಪಿ.ಬಿಪಂಚಾಕ್ಷರಯ್ಯ, ಮಹಾಲಕ್ಷಿö್ಮ, ನರಸಿಂಹಮೂರ್ತಿ, ರಮೇಶ್, ಜಯಮ್ಮ, ಕಾಟಯ್ಯ, ತಾ.ಪಂ.ಮಾಜಿ ಅಧ್ಯಕ್ಷ ವಿ.ಎಂ.ಸುರೇಶ್,ಕಾಂಗ್ರೆಸ್ ಮುಖಂಡರಾದ ಹುಲಿಯಪ್ಪ, ವೆಂಕಟೆಶ್ಮೂರ್ತಿ ಕಾರ್ಯಕ್ರಮದಲ್ಲಿ ಹಾಜರಿದ್ದರು
ಅರ್ಥಿಕವಾಗಿ ಹಿಂದುಳಿದ ಜನರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರದಲ್ಲಿ ಕಣ್ಣಿನ ಪೊರೆ, ದಂತ, ಮಕ್ಕಳ ರೊಗ, ಕಿವಿ-ಮೂಗು-ಗಂಟಲು ಬೇನೆ, ಕೀಲು ಮತ್ತು ಮೂಳೆ ರೋಗ ಸೇರಿದಂತೆ ಸಾಮಾನ್ಯ ರೋಗಗಳ ತಪಾಸಣೆ ನಡೆಸಿ ಚಿಕಿತ್ಸೆಗಳನ್ನು ನೀಡಲಾಯಿತು. ಸ್ಥಳದಲ್ಲಿಯೇ ಅಗತ್ಯ ಔಷಧೋಪಚಾರ ನಡೆಸಿದ್ದು, ಗ್ರಾಮಸ್ಥರಿಗೆ ನೆರವಾಯಿತು.

ಶಿಬಿರದಲ್ಲಿ 120 ಮಂದಿ ಕಣ್ಣಿನ ಪೊರೆ ತಪಾಸಣೆಗೆ ಒಳಪಟ್ಟರೆ, 70 ಮಂದಿಗೆ ದಂತ ತಪಾಸಣೆ ಸೇರಿದಂತೆ ಒಟ್ಟು290 ಮಂದಿ ಇತರೆ ರೋಗಗಳ ತಪಾಸಣೆ ಮಾಡಿಸಿಕೊಂಡರು.
ಉಚಿತ ಆರೋಗ್ಯ ತಪಾಸಣೆಯಲ್ಲಿ ಔಷಧ ವಿಭಾಗದ ಮಖ್ಯಸ್ಥರಾದ ಡಾ.ಉಷರಾಣಿ, ದಂತ ವಿಭಾಗದ ಮುಖ್ಯಸ್ಥರಾದ ಡಾ.ಭರತೇಶ್, ಡಾ.ಮೋಹನ್, ಮೂಳೆ ವಿಭಾಗದ ತಜ್ಞರಾದ ಡಾ.ವೆಂಕಟೇಶ್,ಮಕ್ಕಳ ತಜ್ಞರಾದ ಡಾ.ದೀಪ್ತಿ ಡಾ,ಪ್ರಶಾಂತ್ ಡಾ.ಮೇಘಶ್ರೀ, ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಘವೇಂದ್ರ, ಸಂಯೋಜಕರಾದ ನಾಗಮ್ಮ ಮತ್ತು ತಾಂತ್ರಿಕ ಸಿಬ್ಬಂದಿ ಪಾಲ್ಗೊಂಡರು.



