ಬರಪೀಡಿತ ತಾಲ್ಲೂಕಿನ ಅಭಿವೃದ್ದಿಗಾಗಿ ನಾಗರೀಕರು ಕೈ ಜೋಡಿಸಿ : ಸಮಾಜ ಸೇವಕ ನಾಗೇಂದ್ರ ಕುಮಾರ್

ಪಾವಗಡ : ಬರಪೀಡಿತ ತಾಲೂಕಿಗೆ ಆರೇಳು ದಶಕಗಳಿಂದ ಬರೀ ಭರವಸೆಗಳನ್ನೇ ನೀಡಿ ಇಲ್ಲಿನ ಜನರನ್ನು ಮೂಲಭೂತ ಸೌಕರ್ಯಗಳಿಂದ ವಂಚಿತರನ್ನಾಗಿ ಮಾಡಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ಸಮಾಜ ಸೇವಕ ಹಾಗೂ ವಿಧಾನ ಸಭಾ ಕ್ಷೇತ್ರದ ಪ್ರಭಲ ಆಕಾಂಕ್ಷಿ ನಾಗೇಂದ್ರ ಕುಮಾರ್ ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರವರು ಪಾವಗಡ ತಾಲೂಕಿನ ನೀರಿನ ಸಮಸ್ಯೆ ಕುರಿತು ಸದನದಲ್ಲಿ ಧ್ವನಿ ಎತ್ತಿರುವುದು ಈ ಭಾಗದ ಜನರಿಗೆ ಅತ್ಯಂತ ಸಂತಸ ಉಂಟುಮಾಡಿದೆ, ತಾಲೂಕಿನ ಸಮಸ್ಯೆಗಳನ್ನು ಗ್ರಾಮವಾಸ್ತವ್ಯದ ವೇಳೆ ತಿಳಿದಿದ್ದ ಅವರು ಈ ಭಾಗದ ಜನರ ಧ್ವನಿಯಾಗಿ ಮಾತನಾಡಿರುವುದು ನಮ್ಮ ಹೋರಾಟಕ್ಕೆ ಮತ್ತಷ್ಟು ಶಕ್ತಿ ತುಂಬಿದಂತಾಗಿದೆ ಎಂದರು.
ತಾಲೂಕು ಬರದಿಂದ ತತ್ತರಿಸಿದ್ದು, ಸರ್ಕಾರ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷದಿಂದಾಗಿ ಅಭಿವೃದ್ದಿ ಮರೀಚಿಕೆಯಾಗಿದೆ, ಹಲವಾರು ವರ್ಷಗಳಿಂದ ತಾಲೂಕಿನ ವಿವಿಧ ಸಂಘ ಸಂಸ್ಥೆಗಳ ನಿರಂತರ ಹೋರಾಟದಿಂದಾಗಿ ಸರ್ಕಾರ ತಾಲೂಕಿಗೆ ಕುಡಿಯುವ ನೀರು ಮತ್ತು ಕೆರೆತುಂಬಿಸುವ ಯೋಜನೆ ನೆರವೇರಿಸಲು ಅಗತ್ಯ ನೆರೆವು ಒದಗಿಸಿದೆ, ಆದರೆ ಎಷ್ಟು ಕೆರೆಗಳಿಗೆ ಎಷ್ಟು ಪ್ರಮಾಣದ ನೀರು ಬಿಡುವುದು ಎಂದಬುದು ನಿಗೂಡವಾಗಿದ್ದು ತಾಲೂಕಿನ ಜನತೆ ಎಚ್ಚೆತ್ತುಕೊಳ್ಳುವ ಅನಿವಾರ್ಯವಿದೆ ಎಂದರು.
ತಾಲೂಕಿನಲ್ಲಿ ಸಣ್ಣ, ದೊಡ್ಡ ಕೆರೆಗಳು ಸೇರಿದಂತೆ ಒಟ್ಟು 125 ಕೆರೆಗಳಿದ್ದು ಕೇವಲ 28 ಕೆರೆಗಳಿಗೆ ನೀರು ಒದಗಿಸಿದರೆ ಈ ಭಾಗದ ರೈತರಿಗೆ ನ್ಯಾಯ ಸಿಗಲು ಸಾಧ್ಯವಿಲ್ಲ, ಆದ್ದರಿಂದ ಸರ್ಕಾರದ ತಾರತಮ್ಯ ವಿರೋಧಿಸಿ ತಾಲ್ಲೂಕಿನಲ್ಲಿ ಹೆಚ್ಚು ನೀರು ಪಡೆಯುವ ಸಲುವಾಗಿ ಒಂದು ಲಕ್ಷ ಜನರ ಸಹಿ ಸಂಗ್ರಹಿಸಲಾಗಿದ್ದು ಶೀರ್ಘದಲ್ಲೇ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.
ಎತ್ತಿನ ಹೊಳೆ ಯೋಜನೆ ಸಂಪೂರ್ಣವಾಗಿ ಅವೈಜ್ಞಾನಿಕವಾಗಿದ್ದು ಎಷ್ಟು ನೀರು, ಯಾರಿಗೆ, ಯಾವಾಗ ನೀಡುತ್ತಾರೆ ಎಂಬುದು ಸರ್ಕಾರಕ್ಕೆ ಸ್ಪಷ್ಟತೆಯಿಲ್ಲ ಎಂದರು.
ಒಂದು ವೇಳೆ ಸರ್ಕಾರ ತಾಲೂಕಿಗೆ ನೀರು ಹಂಚಿಕೆ ವಿಚಾರದಲ್ಲಿ ನಿರ್ಲಕ್ಷ ಮುಂದುವರೆಸಿದರೆ ತಾಲೂಕಿನ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರೈತ ಸಂಘದ ಅಧ್ಯಕ್ಷ ಪೂಜಾರಪ್ಪ, ಮುಖಂಡರಾದ, ಮಂಜುನಾಥ್, ಗೋವರ್ಧನ್, ಕಿರಣ್ ಸೇರಿದಂತೆ ಇತರರು ಇದ್ದರು.