ಒತ್ತಡ ಮಣಿದು ನಿಗಮದ ಹೆಸರು ಬದಲಿಸದಂತೆ ಕಾಡುಗೊಲ್ಲರ ಒತ್ತಾಯ
ತುಮಕೂರು: ಯಾರದೇ ಒತ್ತಡಕ್ಕೆ ಮಣಿದು ಸರಕಾರ ರಾಜ್ಯ ಕಾಡುಗೊಲ್ಲ ಅಭಿವೃದ್ದಿ ನಿಗಮದ ಹೆಸರನ್ನು ಬದಲಾಯಿಸಬಾರದು ಎಂದು ಕಾಡುಗೊಲ್ಲ ಸಂಘಟನೆಗಳ ಒಕ್ಕೂಟದಿಂದ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಕಾಡುಗೊಲ್ಲರ ಅಸ್ಮಿತೆ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಜಿ.ಕೆ.ನಾಗಣ್ಣ,ಕರ್ನಾಟಕ ರಾಜ್ಯದ ಚಿತ್ರದುರ್ಗ, ತುಮಕೂರು, ಚಿಕ್ಕಮಗಳೂರು, ಶಿವಮೊಗ್ಗ,ಹಾಸನ,ಮಂಡ್ಯ ಬೆಂಗಳೂರು ಗ್ರಾಮಾಂತರ ರಾಮನಗರ ಬೆಂಗಳೂರು ನಗರ ಮತ್ತು ದಾವಣಗೆರೆಯ ಗಡಿಭಾಗದಲ್ಲಿ ನೆಲೆಸಿರುವ ಕಾಡುಗೊಲ್ಲ ಬುಡಕಟ್ಟು ಜನಾಂಗದ ಒಟ್ಟು ಜನಸಂಖ್ಯೆ ಸುಮಾರು 10 ಲಕ್ಷ ಇದೆ.ಚಿತ್ರದುರ್ಗ, ತುಮಕೂರು ಮತ್ತು ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಮತ್ತು ರಾಜ್ಯದ 37 ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ಕಾಡುಗೊಲ್ಲ ಜನಾಂಗದವರ ಮತಗಳೇ ನಿರ್ಣಾಯಕವಾಗಿವೆ.ಆದರೂ ನಮಗೆ ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಇಲ್ಲಿಯವರೆಗೂ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ.ಸ್ವಾತಂತ್ರ‍್ಯ ಬಂದು 72 ವರ್ಷ ಕಳೆದರೂ ಕಾಡುಗೊಲ್ಲರಿಗೆ ಕರ್ನಾಟಕ ಸರಕಾರದಲ್ಲಿ ಜಾತಿ ಐಡೆಂಟಿಟಿ ಸಿಕ್ಕಿರಲಿಲ್ಲ.ಕರ್ನಾಟಕ ಸರಕಾರ ದಿನಾಂಕ 29/1/2018 ರಲ್ಲಿ ಕಾಡುಗೊಲ್ಲ ಜನಾಂಗವನ್ನು ಹಿಂದುಳಿದ ವರ್ಗ ಪ್ರವರ್ಗ 1 ರ ಜಾತಿಪಟ್ಟಿಯಲ್ಲಿ ಸೇರಿಸಿ ಆದೇಶ ಹೊರಡಿಸುವ ಮೂಲಕ ಪ್ರತ್ಯೇಕ ಜಾತಿಯ ಸ್ಥಾನ ನೀಡಿದೆ.ಆದರೆ ಇದನ್ನು ಕಬಳಿಸಲು ಪ್ರಬಲವಾಗಿರುವ ಗೊಲ್ಲ ಸಮುದಾಯ ಮುಂದಾಗಿ,ಸರಕಾರದಲ್ಲಿಯೇ ಗೊಂದಲ ಮೂಡಿಸಲು ಹೊರಟಿರುವುದು ಖಂಡನೀಯ ಎಂದರು.
ಈ ಹಿಂದೆ ಶಿರಾ ಉಪಚುನಾವಣೆಯ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿಯಾದ ಯಡಿಯೂರಪ್ಪ ಅವರು ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ಕಾಡುಗೊಲ್ಲರ ಸಮಗ್ರ ಅಭಿವೃದ್ಧಿಗಾಗಿ ಕರ್ನಾಟಕ ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸಿ ದಿನಾಂಕ: 28/09/2020 ರಂದು ಸರಕಾರಿ ಆದೇಶವನ್ನು ಹೊರಡಿಸಿ,ಐದು ಕೋಟಿ ಅನುಧಾನವನ್ನು ಬಿಡುಗಡೆ ಮಾಡಿ ನಿಗಮದ ಕಾರ್ಯಚಟುವಟಿಕೆಗಳನ್ನು ನಿರ್ವಹಿಸಲು ಸರಕಾರ ಉನ್ನತ ಮಟ್ಟದ ಅಧಿಕಾರಿಯನ್ನು ನೇಮಕ ಮಾಡಲಾಗಿದೆ.ಇಂತಹ ಸಂದರ್ಭದಲ್ಲಿ ಕಾಡುಗೊಲ್ಲ ಜಾತಿಗೆ ಸೇರದ ಹಿರಿಯೂರು ಶಾಸಕಿ ಪೂರ್ಣಿಮಾ ಅವರು ದಿನಾಂಕ 07/07/2021 ರಂದು ಮಾನ್ಯ ಮುಖ್ಯಮಂತ್ರಿಯವರಿಗೆ ಪತ್ರ ಬರೆದು ಕಾಡುಗೊಲ್ಲ ಅಭಿವೃದ್ಧಿ ನಿಗಮದ ಹೆಸರನ್ನು ಗೊಲ್ಲ-ಕಾಡುಗೊಲ್ಲ ಅಭಿವೃದ್ಧಿ ನಿಗಮ ಎಂದು ಬದಲಾವಣೆ ಮಾಡಬೇಕೆಂದು ಕೋರಿಕೊಂಡಿದ್ದಾರೆ.ಇದು ಕಾಡುಗೊಲ್ಲರ ಅವನತಿಗೆ ಕಾರಣವಾಗಲಿದೆ ಎಂದರು.
ಕಾಡುಗೊಲ್ಲ ಸಮುದಾಯದ ಡಾ.ಶಿವಕುಮಾರಸ್ವಾಮಿ ಮಾತನಾಡಿ,ಕಾಡುಗೊಲ್ಲರ ಸಾಮಾಜಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಗಾಗಿ ಪ್ರತ್ಯೇಕವಾಗಿ ರಚನೆಯಾಗಿರುವ ಕಾಡುಗೊಲ್ಲ ಅಭಿವೃದ್ಧಿ ನಿಗಮಕ್ಕೆ ಪ್ರವರ್ಗ1ರಲ್ಲಿ ಇರುವ ಗೊಲ್ಲ ಜಾತಿಯನ್ನುಸೇರಿಸಿದರೆ ಸಾಮಾಜಿಕ,ಶೈಕ್ಷಣಿಕ,ಆರ್ಥಿಕ ಹಾಗೂ ರಾಜಕೀಯವಾಗಿ ಕಾಡುಗೊಲ್ಲ ರಿಗಿಂತ ಹೆಚ್ಚು ಅಭಿವೃದ್ಧಿ ಹೊಂದಿರುವ ಈ ಜನಾಂಗ ತಮ್ಮ ಪ್ರಭಾವ ಬಳಸಿ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ.ಇದರಿಂದ ಕಾಡುಗೊಲ್ಲರು ಅವಕಾಶ ವಂಚಿತರಾಗುತ್ತಾರೆ. ಆದ್ದರಿಂದ ಮಾನ್ಯ ಮುಖ್ಯಮಂತ್ರಿಯವರು ಹಿರಿಯೂರು ಕ್ಷೇತ್ರದ ಶಾಸಕಿ ಪೂರ್ಣಿಮಾ ಅವರ ರಾಜಕೀಯ ಒತ್ತಡಕ್ಕೆ ಮಣಿದು ಅಮಾಯಕ ಕಾಡುಗೊಲ್ಲ ಬುಡಕಟ್ಟು ಜನರ ಅಭಿವೃದ್ಧಿಗಾಗಿ ರಚಿಸಿರುವ ಕರ್ನಾಟಕ ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಹೆಸರನ್ನು ಬದಲಾವಣೆ ಮಾಡಬಾರದು. ಶಾಸಕಿ ಪೂರ್ಣಿಮಾ ಅವರು ಮುಖ್ಯಮಂತ್ರಿ ಕಛೇರಿಗೆ ಬರೆದಿರುವ ಪತ್ರದ ಆಧಾರದ ಮೇಲೆ ಮುಖ್ಯಮಂತ್ರಿ ಕಛೇರಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನಡುವೆ ನಡೆದಿರುವ ಎಲ್ಲಾ ಪತ್ರ ವ್ಯವಹಾರಗಳನ್ನು ಕೂಡಲೇ ರದ್ದುಪಡಿಸಬೇಕು.ಮತ್ತು ಮುಖ್ಯಮಂತ್ರಿ ಯವರು ಯಾವುದೇ ಒತ್ತಡಕ್ಕೆ ಮಣಿದು ಕರ್ನಾಟಕ ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಹೆಸರನ್ನು ಬದಲಾವಣೆ ಮಾಡಬಾರದೆಂದು ಮನವಿ ಮಾಡುವುದಾಗಿ ತಿಳಿಸಿದರು.
ಈ ವೇಳೆ ಕಾಡುಗೊಲ್ಲ ಸಂಘಟನೆಗಳ ಒಕ್ಕೂಟದ ಮಹಾಲಿಂಗಯ್ಯ, ಡಿ, ಕಾಡುಗೊಲ್ಲ ಯುವ ಸೈನ್ಯದ ರಾಜ್ಯಾಧ್ಯಕ್ಷ ರಮೇಶ್, ಪ್ರಕಾಶ್.ಆರ್, ಮುತ್ತುರಾಜ್, ಗೋಪಿ ಹಿರಿಯೂರು, ಸುನಂದ್, ಶೋಭಾ ಮತ್ತಿತರರು ಉಪಸ್ಥಿತರಿದ್ದರು