ಮಧುಗಿರಿ: ಬಿಜೆಪಿ ಪಕ್ಷದವರಿಗೆ ಸ್ಥಳೀಯ ಸಂಘ ಸಂಸ್ಥೆಗಳ ಮೇಲೆೆ ವಿಶ್ವಾಸವಿಲ್ಲ ಆದ್ದರಿಂದಲೇ ತಾ.ಪಂ ಹಾಗೂ ಜಿ.ಪಂ ಚುನಾವಣೆಗಳನ್ನು ಮುಂದೂಡಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಪಟ್ಟಣದ ಎಂಎನ್‌ಕೆ ಸಮುದಾಯ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ವಿಧಾನ ಪರಿಷತ್ ಚುನಾವಣಾ ಪ್ರಚಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೀಸಲಾತಿ ತೆಗೆದುಹಾಕಲು ಬಿಜೆಪಿ ಮಸಲತ್ತು ಮಾಡುತ್ತಿದೆ ಆದ್ದರಿಂದ ಈ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಬುದ್ಧಿ ಕಲಿಸಬೇಕು. ಪ್ರವಾಹದಿಂದ ರಾಜ್ಯ ತತ್ತರಿಸುತ್ತಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೈಕಟ್ಟಿ ಕುಳಿತಿದ್ದಾರೆ. ಗ್ರಾಮೀಣ ಅಭಿವೃದ್ಧಿಗೆ ನೀಡುತ್ತಿದ್ದ ಹಣವನ್ನು ಕೇಂದ್ರ ಸರ್ಕಾರ ಕಡಿತಗೊಳಿಸಿದೆ. ಪೆಟ್ರೋಲ್ ಡೀಸೆಲ್ ಹಾಗೂ ಗ್ಯಾಸ್ ಬೆಲೆಗಳು ಹೆಚ್ಚುತ್ತಿದ್ದು, ಇದರಿಂದ ಮಹಿಳೆಯರು ಯಾವುದೇ ಕಾರಣಕ್ಕೂ ಬಿಜೆಪಿಗೆ ಮತ ನೀಡುವುದಿಲ್ಲ ಎಂದರು.
ಜೆಡಿಎಸ್ ಪಕ್ಷದವರು ಸಮಯ ಸಾಧಕರು ಯಾವಾಗ ಹೇಗೆ ಬೇಕಾದರೂ ಬದಲಾವಣೆ ಆಗುತ್ತಾರೆ. ಅವರು ಕಾಂಗ್ರೇಸ್ ಪಕ್ಷಕ್ಕೆ ಮಾಡಿರುವ ದ್ರೋಹವನ್ನು ನಮ್ಮ ಜನ ಎಂದಿಗೂ ಮರೆಯುವುದಿಲ್ಲ. ಎಲ್ಲೋ ಇರುವ ಅಭ್ಯರ್ಥಿಯನ್ನು ತಂದು ಇಲ್ಲಿ ಕಣಕ್ಕೆ ಇಳಿಸುತ್ತಾರೆ. ನಂತರ ಅವರು ಕ್ಷೇತ್ರದ ಕಡೆ ತಲೆಯೇ ಹಾಕುವುದಿಲ್ಲ ಎಂದ ಅವರು, ಬಿಜೆಪಿ ಹಾಗೂ ಜನತಾ ದಳದ ಅಭ್ಯರ್ಥಿಗಳು ಸಮರ್ಥರಲ್ಲ ಎಂದರು.
ಮಾಜಿ ಸಚಿವ ಟಿಬಿ ಜಯಚಂದ್ರ ಮಾತನಾಡಿ, ಸರ್ಕಾರದ ಯಾವುದೇ ಯೋಜನೆ ಅನುಷ್ಠಾನಗೊಳ್ಳುವ ಮೇಲ್ಮನೆ ಸದಸ್ಯರ ಪಾತ್ರ ಮಹತ್ವವಾಗಿದ್ದು ಅಂತಹ ಮೇಲ್ಮನೆಗೆ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ ಎಂದರು. ಜಾತಿ ಜಾತಿಗಳ ಮಧ್ಯೆ ವೈಷಮ್ಯ ಮೂಡಿಸುವ ಹಾಗೂ ಕೋಮುವಾದ ಬೆಳೆಸುವ ಪಕ್ಷಗಳಿಗೆ ಬುದ್ದಿ ಕಲಿಸಬೇಕು. ಜೆಡಿಎಸ್ ಮತ್ತು ಬಿಜೆಪಿ ಪಕ್ಷ ಒಳಒಪ್ಪಂದ ಮಾಡಿಕೊಂಡು ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ಅದಕ್ಕೆ ತಕ್ಕ ಉತ್ತರ ನೀಡಬೇಕು ಎಂದರು.
ಮಾಜಿ ಸಂಸದ ಮುದ್ದಹನುಮೇಗೌಡ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ವೈಫಲ್ಯತೆಗಳನ್ನು ಮನದಟ್ಟು ಮಾಡಿಕೊಂಡು ಈ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಮತ ನೀಡಬೇಕು. ಮಾಜಿ ಶಾಸಕ ಕೆ.ಎನ್.ರಾಜಣ್ಣನವರು ಕ್ಷೇತ್ರದಲ್ಲಿ ಅನೇಕ ಅಭಿವೃದ್ದಿ ಕೆಲಸಗಳ ಮಾಡುವುದರ ಜೊತೆಗೆ ವೈಯಕ್ತಿಕವಾಗಿಯೂ ಸಾರ್ವಜನಿಕರಿಗೆ ಸಹಾಯ ಮಾಡಿದ್ದಾರೆ. ತಾಲೂಕಿನ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಜೇಂದ್ರ ಪರ ಮತ ನೀಡಬೇಕು ಎಂದು ಮತಯಾಚನೆ ಮಾಡಿದರು.
ಮಾಜಿ ಶಾಸಕ ಕೆ ಎನ್ ರಾಜಣ್ಣ ಮಾತನಾಡಿ, ನಾವು ಕಳೆದ ಚುನಾವಣೆಯಲ್ಲಿ ಸೋತರೂ ಸಹ ಕ್ಷೇತ್ರದ ಜನತೆಯ ಕಷ್ಟ-ಸುಖಗಳಿಗೆ ಭಾಗಿಯಾಗಿದೇವೆ, ನಮ್ಮ ಅಧಿಕಾರ ಅವಧಿಯಲ್ಲಿ ಉತ್ತಮ ಕಾರ್ಯಗಳನ್ನು ಮಾಡಿದ್ದೇವೆ ಎಂಬ ತೃಪ್ತಿ ನನಗಿದ್ದು, ನಾನು ಶಾಸಕನಾಗಿದ್ದ ಅವಧಿಯಲ್ಲಿ ಶಕ್ತಿ ಮೀರಿ ನಿಮ್ಮ ಸೇವೆ ಮಾಡಿದ್ದೇವೆ ಎಂದರು. ಕಾಂಗ್ರೇಸ್ ಸರ್ಕಾರದಲ್ಲಿ ಪ್ರಾರಂಭವಾದ ಎತ್ತಿನಹೊಳೆ ಯೋಜನೆಗೆ ಈಗಿನ ಬಿಜೆಪಿ ಸರ್ಕಾರ ಹಣ ನೀಡದೆ ಕಾಮಗಾರಿ ಕುಂಠಿತವಾಗಿದೆ ಎಂದರು.
ಈ ಚುನಾವಣೆಯಲ್ಲಿ ಡಾ.ಜಿ.ಪರಮೇಶ್ವರ್ ಅವರ ನೇತೃತ್ವದಲ್ಲಿ ಎಲ್ಲ ನಾಯಕರು ಒಗ್ಗಟ್ಟಾಗಿ ರಾಜೇಂದ್ರ ಅವರ ಗೆಲುವಿಗೆ ಶ್ರಮಿಸುತ್ತಿದ್ದು, ಮತದಾರರು ಹೆಚ್ಚಿನ ಬಹುಮತ ನೀಡುವ ಮೂಲಕ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದರು.
ಮಾಜಿ ಸಂಸದ ಚಂದ್ರಪ್ಪ ಮಾತನಾಡಿ, ಜೆಡಿಎಸ್ ಅಭ್ಯಥೀ ಐಎಎಸ್‌ನಲ್ಲೇ ಸಮಾಜಸೇವೆ ಮಾಡಬಹುದಿತ್ತು. ಆದರೆ ಅದಕ್ಕೆ ರಾಜೀನಾಮೆ ನೀಡಿ ವಿಧಾನಪರಿಷತ್ತಿಗೆ ಸ್ಪರ್ಧಿಸುತ್ತಿರುವುದು ಏತಕ್ಕೆ ಎಂದು ಜನರೇ ಅರ್ಥ ಮಾಡಿಕೊಳ್ಳಬೇಕು ಎಂದ ಅವರು, ಸಾಮಾಜಿಕ ಬದ್ಧತೆ ಇರುವ ರಾಜಣ್ಣ ಕುಟುಂಬಕ್ಕೆ ಈ ಬಾರಿ ಜನರು ಆಶಿರ್ವಾದ ಮಾಡಲಿದ್ದಾರೆ ಎಂದರು.
ವಿಧಾನಪರಿಷತ್ ಅಭ್ಯರ್ಥಿ ರಾಜೇಂದ್ರ ರಾಜಣ್ಣ ಮಾತನಾಡಿ, ಜಿಲ್ಲೆಯಲ್ಲಿ ಎಲ್ಲಾ ಕಾಂಗ್ರೇಸ್ ಮುಖಂಡರು ಒಗ್ಗಟ್ಟಾಗಿ ನನ್ನನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದಾರೆ. ಕಳೆದ ವಿಧಾನಪರಿಷತ್ ಚುನಾವಣೆಯಲ್ಲಿ ನಾನು ಸೋತರೂ ಸಹ ಕ್ಷೇತ್ರದ ಜನತೆಯ ಜೊತೆಯಲ್ಲೇ ಇದ್ದೇನೆ. ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ 450ಕ್ಕೂ ಹೆಚ್ಚು ಗ್ರಾಮ ಪಂಚಾಯತಿ ಸದಸ್ಯರು ಕಾಂಗ್ರೆಸ್ ಬೆಂಬಲದಿಂದ ಗೆದ್ದಿದ್ದು, ಈ ಚುನಾವಣೆಯಲ್ಲಿ ಅತಿ ಹೆಚ್ಚು ಬಹುಮತ ಬರಲಿದೆ ಎಂಬ ಭರವಸೆ ಇದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಮಾಜಿ ಜಿಪಂ ಸದಸ್ಯರಾದ ಜಿ.ಜೆ.ರಾಜಣ್ಣ, ಎಸ್.ಡಿ.ಕೃಷ್ಣಪ್ಪ, ಇಂದಿರಾ ದೇನಾನಾಯ್ಕ್, ಡಿಸಿಸಿ ಬ್ಯಾಂಕ್ ನಿರ್ಧೇಶಕ ನಾಗೇಶ್ ಬಾಬು, ಪುರಸಭಾ ಅಧ್ಯಕ್ಷ ತಿಮ್ಮರಾಜು, ಮಾಜಿ ಅಧ್ಯಕ್ಷರುಗಳಾದ ಎನ್.ಗಂಗಣ್ಣ, ಎಂ.ಕೆ.ನಂಜುಂಡರಾಜು, ಕೆ.ಪ್ರಕಾಶ್, ಅಯೂಬ್, ಸದಸ್ಯರಾದ ಎಂ.ಎಸ್.ಚಂದ್ರಶೇಖರ್, ಮಂಜುನಾಥ್ ಆಚಾರ್, ಲಾಲಾಪೇಟೆ ಮಂಜುನಾಥ್, ಅಲೀಂ, ಪಾವಗಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ರಾಮಕರಷ್ಣ, ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ಶಶಿಧರ್ ಹುಲಿಕುಂಟೆ, ತಾಲೂಕು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರುಗಳಾದ ಮಲ್ಲಿಕಾರ್ಜುನಯ್ಯ, ರಾಜಗೋಪಾಲ್, ತಾ.ಪಂ ಮಾಜಿ ಸದಸ್ಯರುಗಳಾದ ಸೊಸೈಟಿ ರಾಮಣ್ಣ, ಜೆ.ಡಿ.ವೆಂಕಟೇಶ್, ಮುಖಂಡರುಗಳಾದ ಸುವರ್ಣಮ್ಮ, ಗೋಪಾಲಯ್ಯ, ಎಂ.ಜಿ.ಶ್ರೀನಿವಾಸ್‌ಮೂರ್ತಿ, ಭೈರಪ್ಪ, ಬಿ.ಎನ್.ನರಸಿಂಹಮೂರ್ತಿ, ಆದಿನಾರಾಯಣರೆಡ್ಡಿ, ಪಿ.ಟಿ.ಗೋವಿಂದಪ್ಪ, ಎಂ.ಬಿ.ಮರಿಯಣ್ಣ, ವಿ.ಆರ್.ಬಾಸ್ಕರ್, ಸಿದ್ದಾಪುರ ವೀರಣ್ಣ, ಆನಂದ್, ಸಾಧಿಕ್, ಉಮೇಶ್, ಎಸ್ಬಿಟಿ ರಾಮು, ಹನುಮಂತಪ್ಪ, ರಂಗಶ್ಯಾಮಣ್ಣ, ಪಿಸಿ ಕೃಷ್ಣಾರೆಡ್ಡಿ, ನರಸಿಂಹಮೂರ್ತಿ, ಸಿದ್ದಲಿಂಗಪ್ಪ, ಸಂಜೀವಗೌಡ, ಕೆಂಚಣ್ಣ ಹಾಗೂ ಮುಂತಾದವರು ಇದ್ದರು.