ತುಮಕೂರು : ಕಾಂಗ್ರೆಸ್ ಪಕ್ಷದ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ ಕಾಂಗ್ರೆಸ್ ಪಕ್ಷದ ಸಾಧನೆ ಶೂನ್ಯ ಎಂದು ಸುಳ್ಳು ಹೇಳುತ್ತಿರುವ ಬಿಜೆಪಿ ಪಕ್ಷದ ಹೇಳಿಕೆಯ ವಿರುದ್ದ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ,ಕಾಂಗ್ರೆಸ್ ಪಕ್ಷ ದೇಶಕ್ಕೆ ಏನು ಕೊಡುಗೆ ನೀಡಿದೆ ಎಂದು ತಿಳಿಸುವ ನಿಟ್ಟಿನಲ್ಲಿ,ಕಾಂಗ್ರೆಸ್ ಪಕ್ಷ ನವೆಂಬರ್ 21ಕ್ಕೆ ತುಮಕೂರಿನಿಂದ ಜನಜಾಗೃತಿ ಅಭಿಯಾನವನ್ನು ಆರಂಭಿಸಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ, ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಸ್ವತಂತ್ರ ನಂತರ ದೇಶಕ್ಕೆ ಕಾಂಗ್ರೆಸ್ ನೀಡಿರುವ ಕೊಡುಗೆ ಬಗ್ಗೆ ಜನರಿಗೆ ತಿಳಿಸುವುದು ಅನಿವಾರ್ಯವಾಗಿದೆ, ಬಿಜೆಪಿ ಜನರಿಗೆ ತಪ್ಪು ಮಾಹಿತಿ ನೀಡುವ ಅಭಿಯಾನ ಮಾಡುವ ಮೂಲಕ ಜನರ ದಾರಿ ತಪ್ಪಿಸುತ್ತಿದ್ದು, ಜನರಿಗೆ ಸತ್ಯ ತಿಳಿಸುವ ನಿಟ್ಟಿನಲ್ಲಿ ಜನಜಾಗೃತಿ ಅಭಿಯಾನ ನಡೆಯಲಿದೆ ಎಂದರು.
ನ.21ರಂದು ರಾಜ್ಯದಲ್ಲೇ ಮೊದಲ ಬಾರಿಗೆ ಜನಜಾಗೃತಿ ಅಭಿಯಾನ ನಡೆಯಲಿದ್ದು,ಪ್ರತಿ ಬ್ಲಾಕ್ ಮತ್ತು ಗ್ರಾಮಕ್ಕೆ ಪಕ್ಷದ ಸಾಧನೆ ತಿಳಿಸುವ ನಿಟ್ಟಿನಲ್ಲಿ ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಅಭಿಯಾನ ನಡೆಯಲಿದೆ ಎಂದು ತಿಳಿಸಿದರು.
ಜನಜಾಗೃತಿ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ,ವೀರಪ್ಪ ಮೊಯಿಲಿ ಸೇರಿದಂತೆ ರಾಜ್ಯ ಹಾಗೂ ಕೇಂದ್ರದ ನಾಯಕರುಗಳು, ಪಕ್ಷದ ಕಾರ್ಯಕರ್ತರು ಭಾಗವಹಿಸಲಿದ್ದು, ನ.21ರಂದು ಟೌನ್ ಹಾಲ್ ನಿಂದ ಗಾಜಿನ ಮನೆಯವರೆಗೆ ಪಕ್ಷದ ಮುಖಂಡರ ಪಾದಯಾತ್ರೆ ನಡೆಯಲಿದ್ದು, ನಂತರ ಗಾಜಿನಮನೆಯಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ರಾಜ್ಯ,ಕೇಂದ್ರ ನಾಯಕರುಗಳು ಮಾತನಾಡಲಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷದ ಆಡಳಿತ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಕ್ರಮ ಮತ್ತು ಪಕ್ಷ ಕಾರ್ಯಕ್ರಮದ ಬಗ್ಗೆ ಜನರಿಗೆ ತಿಳಿಸಲು ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದು ರಾಜ್ಯಾದಾದ್ಯಂತ ಈ ಅಭಿಯಾನ ನಡೆಯಲಿದೆ ಎಂದು ಹೇಳಿದರು.
ರಾಜಕೀಯ ಪಕ್ಷ ಕಾರ್ಯಕ್ರಮ ಇದಾಗಿದ್ದು,ನೀತಿ ಸಂಹಿತೆ ಅಡ್ಡಿಬರುವುದಿಲ್ಲ, ಜಿಲ್ಲಾಡಳಿತ ನೀಡುವ ನಿಬಂಧನೆಗೆ ಒಳಗೆ ಸಭೆ ನಡೆಸುವುದಾಗಿ ಹೇಳಿದ ಅವರು,ಕಾಂಗ್ರೆಸ್ ಪಕ್ಷದ ಸದಸ್ಯತ್ವ ನೋಂದಣಿ ವಿಚಾರದಲ್ಲಿ ಪಕ್ಷವೇ ಮುಂದಿದ್ದು, ಬಿಜೆಪಿ ಪೈಪೋಟಿ ಮಾಡುವುದಕ್ಕೆ ಸಾಧ್ಯವಿಲ್ಲ ಎಂದರು.
ಮುಂದಿನ ವರ್ಷ ಅಂದರೆ 2022ರ ಸೆಪ್ಟಂಬರ್‌ಗೆ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಚುನಾವಣೆ ನಡೆಯಲಿದ್ದು, ಅದಕ್ಕಿಂತ ಮುಂಚೆಯೇ ಬ್ಲಾಕ್ ಕಾಂಗ್ರೆಸ್,ತಾಲ್ಲೂಕು ಕಾಂಗ್ರೆಸ್, ಜಿಲ್ಲಾ ಕಾಂಗ್ರೆಸ್, ಪ್ರದೇಶ ಕಾಂಗ್ರೆಸ್ ಚುನಾವಣೆ ನಡೆಯಲಿದ್ದು, ಅದಕ್ಕಿಂತ ಮುಂಚೆ ಪಕ್ಷದ ಸದಸ್ಯತ್ವ ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು.ಈಗಾಗಲೇ ಸದಸ್ಯ ಅಭಿಯಾನ ಆರಂಭವಾಗಿದೆ.ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತವನ್ನು ಒಪ್ಪಿ ಯಾರು ಬೇಕಾದರೆ ಐದು ರೂ ನೀಡಿ, ಸದಸ್ಯತ್ವ ಪಡೆಯಬಹುದು. ಸದಸ್ಯತ್ವ ಇಂತಿಷ್ಟೆ ಮಾಡಬೇಕೆಂಬುದಿಲ್ಲ. ಎಷ್ಟು ಜನರನ್ನು ಬೇಕಾದರೂ ಸೇರಿಸಬಹುದು ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.
ಡಿಸೆಂಬರ್ 10 ರಂದು ನಡೆಯುವ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಲು ಜಿಲ್ಲೆಯಿಂದ ಐದು ಮಂದಿ ಅರ್ಜಿ ಸಲ್ಲಿಸಿದ್ದಾರೆ.ಯಲಚವಾಡಿ ನಾಗರಾಜು,ಡಾ.ಇಂತಿಯಾಜ್,ಕೆಂಚಮಾರಯ್ಯ,ರಾಜೇಂದ್ರ.ಆರ್,ಮತ್ತು ಮಾಜಿ ಶಾಸಕ ಆರ್.ನಾರಾಯಣ್ ಅವರು ಅರ್ಜಿಸಲ್ಲಿಸಿದ್ದು ಶೀಘ್ರ ಹೈಕಮಾಂಡ್ ಆಯ್ಕೆ ಪಟ್ಟಿ ಪ್ರಕಟಿಸಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಲೀಂ ಅಹಮದ್,ಮಾಜಿ ಸಚಿವರಾದ ಟಿ.ಬಿ.ಜಯಚಂದ್ರ,ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ,ಮಾಜಿ ಶಾಸಕರಾದ ಕೆ.ಷಡಕ್ಷರಿ,ಡಾ.ಎಸ್.ರಫೀಕ್ ಅಹಮದ್, ಎಸ್.ಷಪಿ ಅಹಮದ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ, ವಿ.ವೆಂಕಟೇಶ್,ಮುರುಳೀಧರ ಹಾಲಪ್ಪ, ಹೊನ್ನಗಿರಿಗೌಡ, ರಾಯಸಂದ್ರ ರವಿಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದರು.