ಜಿಲ್ಲೆತುಮಕೂರುರಾಜ್ಯ

ಛಲವಾದಿ ಸಮುದಾಯ ಒಗ್ಗೂಡಿಸುವ ಕೆಲಸ ಮಾಡಬೇಕಾಗಿದೆ : ಡಾ.ಜಿ.ಪರಮೇಶ್ವರ್

ಛಲವಾದಿ ಕಲೆ ಮತ್ತು ಸಾಂಸ್ಕೃತಿಕ ವೇದಿಕೆ ಯಿಂದ ವೀರವನಿತೆ ಒನಕೆ ಓಬವ್ವ ಜಯಂತಿ ಆಚರಣೆ ಹಾಗೂ ಕುರುಕ್ಷೇತ್ರ ನಾಟಕ ಪ್ರದರ್ಶನ

ತುಮಕೂರು : ತನ್ನ ಧೈರ್ಯ ಮತ್ತು ಸಮಯ ಪ್ರಜ್ಞೆಯಿಂದ ರಾಣಿ ಅಬ್ಬಕ್ಕ,ಝಾನ್ಸಿರಾಣಿ ಲಕ್ಷ್ಮೀಬಾಯಿ,ಕಿತ್ತೂರು ರಾಣಿ ಚನ್ನಮ್ಮ ಅವರ ಸಾಲಿಗೆ ವೀರ ವನಿತೆ ಒನಕೆ ಒಬವ್ವ ಅವರು ಸೇರಿದ್ದು,ಇಡೀ ನಾಡಿನ ಹೆಣ್ಣು ಕುಲಕ್ಕೆ ಮಾದರಿ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಛಲವಾದಿ ಕಲೆ ಮತ್ತು ಸಾಂಸ್ಕೃತಿಕ ವೇದಿಕೆವತಿಯಿಂದ ಆಯೋಜಿಸಿದ್ದ ವೀರವನಿತೆ ಒನಕೆ ಓಬವ್ವ ಜಯಂತಿ ಹಾಗೂ ಕುರುಕ್ಷೇತ್ರ ನಾಟಕ ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದ ಅವರು, ಊಟ ಮಾಡುತ್ತಿರುವ ತನ್ನ ಗಂಡನಿಗೆ ತೊಂದರೆ ಕೊಡದೆ,ತಾನೇ ಕೈಗೆ ಸಿಕ್ಕ ಒನಕೆ ಹಿಡಿದು,ಶತೃಗಳ ರುಂಡವನ್ನು ಚಂಡಾಡುವ ಮೂಲಕ ಹೈದಾರಾಲಿ ಸೈನ್ಯ ಕೋಟೆಯನ್ನು ಪ್ರವೇಶಿಸದಂತೆ ತಡೆದು, ಚಿತ್ರದುರ್ಗ ಕೋಟೆಯನ್ನು ರಕ್ಷಿಸಿದ್ದಾರೆ ಎಂದರು.

ಛಲವಾದಿ ಕಲೆ ಮತ್ತು ಸಾಂಸ್ಕೃತಿಕ ವೇದಿಕೆ ಮೂಲಕ ವೀರ ವನಿತೆ ಒನಕೆ ಓಬವ್ವ ಅವರ ಜಯಂತಿ ಆಚರಿಸುವ ಮೂಲಕ ಇಡೀ ರಾಜ್ಯದ ಜನತೆರಿಗೆ ತುಮಕೂರಿನಿಂದ ಛಲವಾದಿಗಳು ಸಂಘಟಿತರಾಗುತ್ತಿದ್ದಾರೆ ಎಂಬ ಒಂದು ಸಂದೇಶವನ್ನು ಕಳುಹಿಸ ಲಾಗುತ್ತಿದೆ.ನನ್ನನು ಸೇರಿದಂತೆ ಅನೇಕ ರಾಜಕಾರಣಿಗಳು ಬಂದು ಹೋದರು ಒನಕೆ ಓಬವ್ವನನ್ನು ಸ್ಮರಿಸುವ ಕೆಲಸ ಮಾಡಲಿಲ್ಲ. ಆದರೆ ನೆಹರು ಓಲೇಕಾರ್ ಈ ವಿಚಾರವಾಗಿ ಅಧಿಕಾರಸ್ಥರ ಗಮನ ಸೆಳೆದು,ನಾಡ ಹಬ್ಬವಾಗಿ ಆಚರಿಸಲು ಆದೇಶ ಮಾಡಿಸಿ ದ್ದಾರೆ.ಇದಕ್ಕೆ ಅವರಿಗೆ ಮತ್ತು ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಇಂದು ಸಮಾಜವನ್ನು ಒಡೆದು,ಛಿದ್ರ ಛಿದ್ರವನ್ನಾಗಿಸುವ ನಾಟಕ ನಡೆಯುತ್ತಿದೆ.ಆದರೆ ಛಲವಾದಿ ಮಹಾಸಭಾ ಎಲ್ಲರೂ ಒಂದೇ ಎಂದು ಹೇಳಿದ ಭಗವಾನ್ ಬುದ್ದ,ಬಸವಣ್ಣ ಹಾಗು ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಮುಂದಿಟ್ಟುಕೊಂಡು ಎಲ್ಲರೂ ಒಂದೇ ಎಂಬ ಭಾವನೆಯಿಂದ ಹೋಗುವ ಕೆಲಸ ಮಾಡಲಾಗುತ್ತಿದೆ.ಅಂಬೇಡ್ಕರ್ ಓರ್ವ ಪ್ರತಿಭಾವಂತ ಎಂದು ಒಪ್ಪಿಕೊಳ್ಳಲು ಕೆಲವು ಹಿಂಜರಿಯುವ ಸ್ಥಿತಿಯಲ್ಲಿದೆ.ಇಂತಹ ಹೊತ್ತಿನಲ್ಲಿ ನಾವು ಯಾವುದೇ ಪಕ್ಷದಲ್ಲಿರಲಿ,ನಮ್ಮ ಸಮುದಾಯವನ್ನು ಒಗ್ಗೂಡಿಸುವ ಕೆಲಸ ಮಾಡಬೇಕಾಗಿದೆ.ಶಿವಮೊಗ್ಗದಲ್ಲಿ ಛಲವಾದಿ ಮಹಾಸಭಾದಿಂದ ನಡೆದ ಐತಿಹಾಸಿಕ ಸಮಾವೇಶದ ರೀತಿ ಮತ್ತೊಂದು ಸಮಾವೇಶದ ಅವಶ್ಯಕತೆ ಇದೆ.ಇದರ ಜವಾಬ್ದಾರಿಯನ್ನು ಮಹಾಸಭಾದ ಸಂಸ್ಥಾಪಕ ಅಧ್ಯಕ್ಷರಾದ ಕೆ.ಶಿವರಾಮ್ ಅವರಿಗೆ ವಹಿಸುತ್ತೇನೆ. ಅವರ ಬೆನ್ನಿಗೆ ನಿಂತು ನಾವು ಕೆಲಸ ಮಾಡಲು ಸಿದ್ದ ಎಂದು ಡಾ.ಜಿ.ಪರಮೇಶ್ವರ್ ನುಡಿದರು.
ಕಾರ್ಯಕ್ರಮದ ಉದ್ಘಾಟಿಸಿದ ಛಲವಾದಿ ಮಹಾಸಭಾದ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಕೆ.ಶಿವರಾಮ್ ಮಾತನಾಡಿ,ಸರಕಾರ ವೀರ ವನಿತೆ ಒನಕೆ ಓಬವ್ವನ ಜಯಂತಿಯನ್ನು ನಾಡ ಹಬ್ಬವಾಗಿ ಆಚರಿಸಲು ಆದೇಶಿಸುವ ಮೂಲಕ ಒಳ್ಳೆಯ ಕೆಲಸ ಮಾಡಿದೆ. ಅದೇ ರೀತಿ ಛಲವಾದಿ ಮಹಾಸಭಾದ ಉಳಿದ ಬೇಡಿಕೆಗಳಾದ ಒನಕೆ ಓಬವ್ವ ಸಮಾಧಿ ಜೀರ್ಣೋದ್ಧಾರ ಹಾಗೂ ಓಬವ್ವ ಸ್ಮಾರಕ ನಿರ್ಮಾಣ ಮಾಡಬೇಕೆಂಬುದಾಗಿದೆ.ಇದು ಪುರಾತತ್ವ ಇಲಾಖೆಯಿಂದ ಆಗಬೇಕಿದೆ.ಇದರ ಜೊತೆಗೆ ಬಾಬಾ ಸಾಹೇಬರ ಜಯಂತಿ ರೀತಿ ಛಲವಾದಿ ಸಮುದಾಯದ ಬಂಧುಗಳು ಅವರ ಜಯಂತಿಯನ್ನು ನಾಡಿನೆಲ್ಲೆಡೆ ಆಚರಿಸುವಂತಾಗಬೇಕು ಎಂದರು.

ಹೈದರಾಲಿಯ ನಂತರ ಮೈಸೂರು ಸಂಸ್ಥಾನಕ್ಕೆ ಸೇರಿದ ಚಿತ್ರದುರ್ಗದಲ್ಲಿ ಕೋಟೆಯನ್ನು ರಕ್ಷಿಸಿದ ಓಬವ್ವನ ಕುರಿತು ವಿಚಾರಿಸಲು ಬಂದ ಮೈಸೂರು ಸಂಸ್ಥಾನದ ಅಧಿಕಾರಿಗೆ ತಪ್ಪು ಮಾಹಿತಿ ನೀಡುವ ಮೂಲಕ ಅವರ ವಂಶಸ್ಥರೆ ಇಲ್ಲ ಎಂದು ಹೇಳುವ ಮೂಲಕ ಅವಮಾನ ಮಾಡಿರುವುದನ್ನು ನಾವು ಕಾಣುತ್ತವೆ.ಇಂತಹ ಪರಿಸ್ಥಿತಿಯಿಂದ ಮುಕ್ತರಾಗಬೇಕೆಂದರೆ ನಾವೆಲ್ಲರೂ ಒಂದಾಗಬೇಕಿದೆ.ಎಡ,ಬಲ,ಲಂಬಾಣಿ,ಬೋವಿ ಸೇರಿದಂತೆ ದಲಿತರ ಜನಸಂಖ್ಯೆ 1.08 ಕೋಟಿಯಷ್ಟಿದೆ. ಆದರೂ ಇದುವರೆಗೂ ಒರ್ವ ಮುಖ್ಯಮಂತ್ರಿಯನ್ನು ಕಾಣಲು ಸಾಧ್ಯವಾಗುತ್ತಿಲ್ಲ.ವೇದಿಕೆಗಳಲ್ಲಿ,ಸಮಾರಂಭಗಳಲ್ಲಿ ಒಗ್ಗೂಡಿದರೆ ಸಾಲದು, ಚುನಾವಣೆ ಸಂದರ್ಭದಲ್ಲಿಯೂ ಹಣ, ಅಮೀಷಗಳಿಗೆ ಬಲಿಯಾಗದೆ ಮತ ಹಾಕುವ ಮೂಲಕ ನಮಗೆ ನಾವು ರಾಜಕೀಯ ಅಧಿಕಾರ ಪಡೆದುಕೊಳ್ಳುವತ್ತ ಮುಂದಾಗಬೇಕಾಗಿದೆ ಎಂದು ಕೆ.ಶಿವರಾಮ್ ತಿಳಿಸಿದರು.
ಇದೇ ವೇಳೆ ಜಾನಪದ ಕಲಾವಿದೆ ಶ್ರೀಮತಿ ಗಂಗಹುಚ್ಚಮ್ಮ, ಇತಿಹಾಸ ಉಪನ್ಯಾಸಕಿ ಡಾ.ಕಾವಾಲಮ್ಮ,ಈಶ್ವರಿ ಮಹಿಳಾ ಸಂಘದ ಅಧ್ಯಕ್ಷ ಶ್ರೀಮತಿ ಕರಿಯಮ್ಮ ಅವರುಗಳಿಗೆ ಒನಕೆ ಓಬವ್ವ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಒನಕೆ ಓಬವ್ವ ವಂಶಸ್ಥರಾದ ಎ.ಎಸ್.ಸೋಮಶೇಖರ್ ಹಾಗೂ ಚಿತ್ರದುರ್ಗ ನಗರಸಭೆ ಮಾಜಿ ಅಧ್ಯಕ್ಷ ನಿರಂಜನ್ ಅವರುಗಳನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ನೆಲಮಂಗಲ ಶಾಸಕ ಡಾ.ಶ್ರೀನಿವಾಸಮೂರ್ತಿ,ಹರಿಕಥಾ ವಿದ್ವಾನ್ ಡಾ.ಲಕ್ಷ್ಮಣ್‌ದಾಸ್ ಮಾತನಾಡಿ, ಪೌರಾಣಿಕ ನಾಟಕದ ಪದ್ಯವನ್ನು ಹಾಡಿ ರಂಜಿಸಿದರು.ವೇದಿಕೆಯಲ್ಲಿ ಡಾ. ಪಿ.ಚಂದ್ರಪ್ಪ, ಎಡಿಎಲ್‌ಆರ್ ಪರಮೇಶ್ವರ್,ಛಲವಾದಿ ಕಲೆ ಮತ್ತು ಸಾಂಸ್ಕೃತಿಕ ವೇದಿಕೆಯ ಎಸ್.ರಾಜಣ್ಣ,ಎನ್.ಜಗನ್ನಾಥ್, ಹೆಚ್.ಎಸ್.ಪರಮೇಶ್,ಹರ್ತಿಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಹುನುಮಂತರಾಯಪ್ಪ, ಮುಖಂಡರಾದ ದೊಡ್ಡಸಿದ್ದಯ್ಯ,ನಿರಂಜನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker