ಗುಬ್ಬಿತುಮಕೂರು

ದೇವೇಗೌಡರು ಮತ್ತು ಎಂ.ಟಿ.ಕೃಷ್ಣಪ್ಪ ಸೋಲಿಗೆ ಗುಬ್ಬಿ ಶಾಸಕರೇ ಕಾರಣ : ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ

ಗುಬ್ಬಿ : ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರನ್ನು ಮುಗಿಸಲು ಯಾರ ಮನೆಗಳಲ್ಲಿ ರಾತ್ರಿ ನಡೆದ ಸಭೆಗಳು ಹಾಗೂ ತುರುವೇಕೆರೆ ಕೃಷ್ಣಪ್ಪ ಅವರ ಸೋಲಿಸಲು ನಡೆಸಿದ ಕುತಂತ್ರ ಎಲ್ಲವೂ ತಿಳಿದಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಗುಬ್ಬಿ ಶಾಸಕ ಶ್ರೀನಿವಾಸ್ ವಿರುದ್ದ ಸಿಡಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆದ ಜೆಡಿಎಸ್ ಸೇರ್ಪಡೆ ಸಮಾವೇಶ ಕಾರ್ಯಕ್ರಮದಲ್ಲಿ ಮುಖಂಡ ಬಿ.ಎಸ್.ನಾಗರಾಜು ಸೇರಿದಂತೆ ಬಿಜೆಪಿ ತೊರೆದ ಮೂವರು ಮಾಜಿ ಜಿಪಂ ಸದಸ್ಯರನ್ನು  ಸೇರ್ಪಡೆ ಮಾಡಿಕೊಂಡು ಮಾತನಾಡಿದ ಅವರು ಪಕ್ಷದಲ್ಲೇ ಇದ್ದು ನಂಬಿಸಿ ಕುತ್ತಿಗೆ ಕುಯ್ಯುವ ಕೆಲಸ ಮಾಡುವುದು ಬೇಡ. ಬೇರೆ ಪಕ್ಷಕ್ಕೆ ಹೋಗುವರು ಹೋಗಲಿ ಅವರಿಗೆ ಶುಭ ಹಾರೈಕೆಗಳು ಎಂದು ಭಾವುಕರಾಗಿ ಕಣ್ಣಲ್ಲಿ ನೀರು ತುಂಬಿಕೊಂಡರು.
23 ಸ್ಥಾನ ಗೆಲ್ಲುವುದು ಜೆಡಿಎಸ್ ಗೆ ಬೇಕಿಲ್ಲ. ಕೇವಲ 23 ಸಾಕು ಎಂದು ಲೇವಡಿ ಮಾಡಿದ ಶ್ರೀನಿವಾಸ್ ಅವರನ್ನು ಮಂತ್ರಿ ಮಾಡಲು ಕುಂಚಿಟಿಗ ಸಮುದಾಯವನ್ನೇ ಎದುರು ಹಾಕಿಕೊಳ್ಳಬೇಕಾಯಿತು. ಇದೇ ಗುಬ್ಬಿಯಲ್ಲಿ ಮೂರು ಬಾರಿ ಶಾಸಕರಾಗಿ ಆಯ್ಕೆ ಆಗಲು ಪಕ್ಷದ ಪ್ರಾಮಾಣಿಕ ಕಾರ್ಯಕರ್ತರೇ ಕಾರಣ. 2004 ರಲ್ಲಿ ಜೆಡಿಎಸ್ ಟಿಕೆಟ್ ತಪ್ಪಿಸಿದ್ದರು ಎನ್ನುವ ಮುನ್ನ ಆಲೋಚನೆ ಮಾಡಬೇಕಿದೆ. ಆ ಸಂದರ್ಭದಲ್ಲಿ ನಾನು ಪಕ್ಷದ ಜವಾಬ್ದಾರಿ ಹೊತ್ತಿರಲಿಲ್ಲ. ದೇವೇಗೌಡರು ಲಿಂಗಾಯಿತ ಸಮುದಾಯದ ಶಿವನಂಜಪ್ಪ ಅವರಿಗೆ ಕೊಟ್ಟ ಮಾತಿನಂತೆ ಟಿಕೆಟ್ ನೀಡಿದ್ದರು. ನಂತರ ಅವರಿಗೆ ಪಕ್ಷಾಂತರ ನಿಲ್ಲಲು ನಾನೇ ಸಲಹೆ ನೀಡಿದ್ದೆ ಎಂದ ಅವರು ಈಚೆಗೆ ನನ್ನ ಮೇಲೆ ಅಸಮಾಧಾನಗೊಳ್ಳಲು ಡಿಕೆಶಿ ಅವರೇ ನೇರ ಕಾರಣ. ಬ್ರೈನ್ ವಾಶ್ ಮಾಡಿರುವ ಶಿವಕುಮಾರ್ ಮಾತು ಕೇಳಿದ ಗುಬ್ಬಿ ಶಾಸಕರು ಜೆಡಿಎಸ್ ಜಿಲ್ಲೆಯಲ್ಲಿ ಕಳೆದುಹೋಗಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. 2023 ಕ್ಕೆ ಪ್ರಾದೇಶಿಕ ಪಕ್ಷದ ಆಳ್ವಿಕೆಗೆ ತರಲು ಪಕ್ಷದ ಎಲ್ಲಾ ಕಾರ್ಯಕರ್ತರು ಶ್ರಮಿಸಲಿದ್ದಾರೆ. ಈ ನಿಟ್ಟಿನಲ್ಲಿ ಗುಬ್ಬಿ ಮತದಾರರು ಜೆಡಿಎಸ್ ಪರ ಮತ ನೀಡಲು ಮನವಿ ಮಾಡಿದರು.
ಮಿಷನ್ 123 ಕಾರ್ಯಾಗಾರಕ್ಕೆ ಎರಡನೇ ದಿನ ಬಂದು ನನ್ನನ್ನು ಮಾತು ಆಡಿಸದ ಶ್ರೀನಿವಾಸ್ ಅವರಿಗೆ ನಾನೇ ಖುದ್ದು ಎನ್ ಸಮಸ್ಯೆ ಎಂದು ವಿಚಾರಿಸಿದ್ದೆ. ಕುಳಿತು ಮಾತನಾಡಲು ತಾಲ್ಲೂಕು ಘಟಕಕ್ಕೂ ತಿಳಿಸಿದ್ದೆ. ಯಾರು ಬರದೇ ನನ್ನ ವಿರುದ್ದ ಹರಿಹಾಯ್ದ ಹಿನ್ನಲೆ ಬೇರೆ ತಿಳಿಸುತ್ತದೆ. ಕಾಂಗ್ರೆಸ್ ಸಖ್ಯದ ಬಗ್ಗೆ ಚೆನ್ನಾಗಿ ತಿಳಿದಿದೆ ಎಂದ ಅವರು ಜಿಲ್ಲೆಯ ಪ್ರಭಾವಿ ಎನಿಸಿಕೊಂಡು ಸಚಿವರಾದಾಗ ಕೂಡಾ ಯಾವುದೇ ರೈತ ಪರ ಕೆಲಸ ಮಾಡಲಿಲ್ಲ. ತೆಂಗು ಪರಿಹಾರಕ್ಕಾಗಿ ಕಾಳಜಿ ವಹಿಸಲಿಲ್ಲ. 11 ತಾಲ್ಲೂಕಿನ ಈ ದೊಡ್ಡ ಜಿಲ್ಲೆ ತೆಂಗಿನನಾಡು ಎನಿಸಿದೆ. ಅಲ್ಲಿ ರೈತರ ಬಗ್ಗೆ ಆಲೋಚನೆ ಮಾಡಲಿಲ್ಲ. ಈ ಜತೆಗೆ ಜನಪರ ಕಾರ್ಯಕ್ರಮ, ನೀರಾವರಿ ಯೋಜನೆಗೂ ಮುಂದಾಗಲಿಲ್ಲ. ಈಗ ಜೆಡಿಎಸ್ ತೆಗಳುವ ಮುನ್ನ ಪಕ್ಷದಿಂದ ಪಡೆದ ಅಧಿಕಾರ ತಿಳಿದುಕೊಳ್ಳಬೇಕು ಎಂದು ಛೇಡಿಸಿದರು.
14 ತಿಂಗಳಲ್ಲಿ 25 ಸಾವಿರ ಕೋಟಿ ರೂಗಳ ಸಾಲಮನ್ನ ಎಲ್ಲಾ ಪಕ್ಷದ ಮತದಾರರಿಗೆ ದಕ್ಕಿದೆ. ಅಭಿವೃದ್ಧಿಗೆ ಪ್ರಾದೇಶಿಕ ಪಕ್ಷದ ಅವಶ್ಯಕತೆ ಜನತೆಗೆ ಈಗ ತಿಳಿದಿದೆ. ನೆರೆ ರಾಜ್ಯಗಳಲ್ಲಿ ಈಗಾಗಲೇ ಪ್ರಾದೇಶಿಕ ಆಳ್ವಿಕೆ ಜನ ಮನ್ನಣೆ ಗಳಿಸಿದೆ. ಈ ಹಿಂದೆ ಎರಡು ಬಾರಿ ಪರಾವಲಂಬಿ ಮುಖ್ಯಮಂತ್ರಿಯಾಗಿ ಕೂಡ ಹಲವು ಜನಮನ ಗೆದ್ದ ಯೋಜನೆ ಇಂದಿಗೂ ಪ್ರಸ್ತುತ. ಈ ನಿಟ್ಟಿನಲ್ಲಿ ಮತ್ತೇ ಜೆಡಿಎಸ್ ಅಧಿಕಾರ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು ಪಂಚರತ್ನ ಯೋಜನೆ ಮೂಲಕ ಜನರಿಗೆ ಅವಶ್ಯ ಇರುವ ಆರೋಗ್ಯ ಮತ್ತು ಶಿಕ್ಷಣವನ್ನು ಉಚಿತವಾಗಿ ಜನರಿಗೆ ನೀಡುವ ಯೋಜನೆ ಪ್ರಣಾಳಿಕೆಯಾಗಿ ಜನರಿಗೆ ತಲುಪಲಿದೆ ಎಂದರು.
ನೆಲಮಂಗಲದಿಂದ ಎಂಎಲ್ಸಿ ಮಾಡಿದ ತಪ್ಪಿಗೆ ಕಾಂತರಾಜುಗೆ ತುರುವೇಕೆರೆಯಲ್ಲಿ ಟಿಕೆಟ್ ನೀಡಬೇಕೆಂತೆ. ಈ ಹಿಂದೆ ಗುಬ್ಬಿ ಶಾಸಕರ ಜೊತೆ ಸೇರಿ ಕಾಂತರಾಜು ತಮ್ಮ ಸಂಬಂಧಿಯನ್ನು ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಿಸಿ ಕೃಷ್ಣಪ್ಪ ಅವರನ್ನು ಸೋಲಿಸಿದ್ದರು. ಸಚಿವ ಸ್ಥಾನದ ಆಸೆಗೆ ತುರುವೇಕೆರೆ ಕ್ಷೇತ್ರ ಬಲಿಕೊಟ್ಟು ಇವರಿಗೆ ಪಕ್ಷ ನಿಷ್ಠೆ ಎಲ್ಲಿಂದ ಬರುತ್ತದೆ ಎಂದು ಕಿಡಿಕಾರಿದ ಅವರು ಮಠದಹಳ್ಳ ಕೆರೆಗೆ ಹೇಮೆ ಹರಿಸುವ ಯೋಜನೆ ನನ್ನ ಕಾಲದಲ್ಲಿ 25 ಕೋಟಿಗೆ ಮಂಜೂರು ಆಗಿತ್ತು. ತಾಂತ್ರಿಕ ಸಮಸ್ಯೆ ನೆಪದಲ್ಲಿ ನಿಂತ ಈ ಕಾಮಗಾರಿಗೆ ಸಚಿವರ ಜೊತೆ ಮಾತನಾಡಿ ಶೀಘ್ರದಲ್ಲೇ ಕಾರ್ಯಗತವಾಗಲಿದೆ. ಈ ಜತೆಗೆ ಪಟ್ಟಣದ ಪೊಲೀಸ್ ಠಾಣೆ ಹಿಂಬದಿಯ ಕಾಲೋನಿಗೆ ಭೇಟಿ ನೀಡಿ ಆ ಜನರ ಕಷ್ಟ ಕಾರ್ಪಣ್ಯ ಅಳಿಸುವುದಾಗಿ ತಿಳಿಸಿದರು.
ಬಿಜೆಪಿ ತೊರೆದು ಜೆಡಿಎಸ್ ಪಕ್ಷ ಸೇರ್ಪಡೆಯಾದ ಮುಖಂಡ ಬಿ.ಎಸ್.ನಾಗರಾಜು ಮಾತನಾಡಿ ಪ್ರಾದೇಶಿಕ ಪಕ್ಷ ಜೆಡಿಎಸ್ ತತ್ವಸಿದ್ದಾಂತ ಒಪ್ಪಿ ಪಕ್ಷ ಸೇರಿದ್ದು ಮುಂದಿನ 2023 ಕ್ಕೆ ಕುಮಾರಣ್ಣನ ಪರ್ವ ಬಲಗೊಳ್ಳಲಿದೆ. ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಅವರ ಆಯ್ಜೆಗೆ ಗುಬ್ಬಿ ಕ್ಷೇತ್ರದಲ್ಲಿ ಸಂಘಟನೆ ಮಾಡುವುದಾಗಿ ತಿಳಿಸಿದರು.
ಈ ಸಮಾವೇಶದಲ್ಲಿ ಶಾಸಕರಾದ ಗೌರಿಶಂಕರ್, ವೀರಭದ್ರಯ್ಯ, ಎಂಎಲ್ಸಿ ತಿಪ್ಪೇಸ್ವಾಮಿ, ಮಾಜಿ ಶಾಸಕರಾದ ಎಂ.ಟಿ.ಕೃಷ್ಣಪ್ಪ, ಸುಧಾಕರಲಾಲ್, ಸುರೇಶ್ ಬಾಬು, ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ, ಮುಖಂಡರಾದ ಕರಿಯಪ್ಪ, ಸಿದ್ಧಗಂಗಮ್ಮ, ಗಾಯತ್ರಿದೇವಿ, ರಾಮಾಂಜಿನಪ್ಪ, ಯಶೋಧಮ್ಮ ಇತರರು ಇದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker