ಕೇಂದ್ರ ಸಚಿವ ಅಜಯ್ ಮಿಶ್ರಾರನ್ನು ಸಚಿವ ಸಂಪುಟದಿಂದ ಕೈ ಬಿಡಿ : ಹೊಸಹಳ್ಳಿಚಂದ್ರಣ್ಣ

ಹುಳಿಯಾರು: ಉತ್ತರ ಪ್ರದೇಶದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತ ಚಳವಳಿಗಾರರ ಮೇಲೆ ಕಾರು ಹರಿಸಿ ಮೂವರು ಹೋರಾಟಗಾರರ ಸಾವಿಗೆ ಕಾರಣವಾಗಿರುವ ಆರೋಪಿಗಳನ್ನು ಕೂಡಲೆ ಬಂಧಿಸಬೇಕು. ಕೇಂದ್ರ ಅಜಯ್ ಮಿಶ್ರಾ ಅವರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕು ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಹೊಸಹಳ್ಳಿಚಂದ್ರಣ್ಣ ಒತ್ತಾಯಿಸಿದ್ದಾರೆ.
ರೈತರ ಹೆಸರಿನಲ್ಲೇ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದರೂ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ರೈತ ತನಗಾದ ನೋವನ್ನು ಹೇಳಿಕೊಳ್ಳಲು ಬಿಜೆಪಿ ಸರ್ಕಾರ ಅವಕಾಶ ಕೊಡುತ್ತಿಲ್ಲ, ಕೇಂದ್ರ ಸರ್ಕಾರವು ಬಿಜೆಪಿ ಪಕ್ಷವಿರುವ ರಾಜ್ಯ ಸರ್ಕಾರಗಳ ಮೂಲಕ ರೈತರ ಹೋರಾಟವನ್ನು ಹತ್ತಿಕ್ಕುತ್ತಿದೆ ಎಂದು ದೂರಿದರು.
ರಾಜಕೀಯ ಪಕ್ಷಗಳ ಅಧಿಕಾರ ಏನಿದ್ದರೂ 5 ವರ್ಷ ಮಾತ್ರ. ಗ್ರಾಮ ಪಂಚಾಯಿತಿಯಿಂದ ದೆಹಲಿಯ ಸಂಸತ್‌ವರೆಗೂ ಅವಧಿ ಮುಗಿದ ಮೇಲೆ ಸರ್ಕಾರವನ್ನಾಳಿದ ಪಕ್ಷಗಳು ರೈತರ ಬಳಿ ಬರಲೇಬೇಕಾಗುತ್ತದೆ. ಆ ಸಂದರ್ಭದಲ್ಲಿ ರೈತ ವಿರೋಧಿಗಳನ್ನು ಅಧಿಕಾರದಿಂದ ದೂರ ಇಡಬೇಕು ಕರೆ ನೀಡಲಾಗುವುದು ಎಂದರು.
ಹರಿಯಾಣದಲ್ಲಿ ಪ್ರತಿಭಟನೆನಿರತ ಚಳವಳಿಗಾರರ ಮೇಲೆ ಪೊಲೀಸರ ಮೂಲಕ ದಬ್ಬಾಳಿಕೆ ಮಾಡಲಾಗಿದೆ. ಉತ್ತರ ಪ್ರದೇಶದಲ್ಲಿ ಹೋರಾಟಗಾರರ ಮೇಲೆ ಕಾರುಹರಿಸಿ ಕೊಲೆಗೈಯಲಾಗಿದೆ. ರಾಷ್ಟçಪತಿಗಳು ಎರಡೂ ಪ್ರಕರಣದಲ್ಲೂ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು, ಘಟನೆ ಕುರಿತು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ನ್ಯಾಯಾಂಗ ತನಿಖೆ ಆಗಬೇಕು ಎಂದು ಚಂದ್ರಣ್ಣ ಒತ್ತಾಯಿಸಿದರು.