ಕುಣಿಗಲ್
ಯಲಿಯೂರು ಸರ್ಕಾರಿ ಶಾಲಾ ಆವರಣದಲ್ಲಿ ಎರಡೂವರೆ ಲಕ್ಷ ರೂ ವೆಚ್ಚದ ಶೌಚಾಲಯ ಉದ್ಘಾಟನೆ
ಕುಣಿಗಲ್ : ಸರ್ಕಾರಿ ಶಾಲಾ ಆವರಣದಲ್ಲಿ ನೂತನವಾಗಿ ಅತ್ಯಾಧುನಿಕವಾಗಿ ನಿರ್ಮಾಣಗೊಂಡಿರುವ ಶೌಚಾಲಯವನ್ನು ಇಂಡೋ ಸ್ಪ್ಯಾನಿಶ್ ಖಾಸಗಿ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಶಿವರಾಮ್ ರವರು ಉದ್ಘಾಟನೆ ನೆರವೇರಿಸಿದರು.
ತಾಲೂಕಿನ ಹುತ್ರಿದುರ್ಗ ಹೋಬಳಿ ಯಲಿಯೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಇಂಡೋ ಸ್ಪ್ಯಾನಿಶ್ ಖಾಸಗಿ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾದ ಶಿವರಾಮ ಹಾಗೂ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ವೈ ಎಚ್ ರವೀಶ್ ರವರು ತಮ್ಮ ಸ್ವಂತ ಖರ್ಚಿನಲ್ಲಿ ಸುಮಾರು ಎರಡೂವರೆ ಲಕ್ಷ ರೂಗಳ ವೆಚ್ಚದಲ್ಲಿ ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳಿಗೆಂದು ಆಧುನಿಕವಾಗಿ ನಿರ್ಮಾಣ ಮಾಡಿರುವ ಶೌಚಾಲಯವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಶಿವರಾಮ್ ರವರು ಮನುಷ್ಯನಿಗೆ ಹುಟ್ಟು ಸಾವು ಸಹಜ ಆದರೆ ನಾವು ಜೀವಂತ ವಿರುವ ವೇಳೆಯಲ್ಲಿ ನಾವು ಕಷ್ಟಪಟ್ಟು ದುಡಿಯುವ ಹಣದಲ್ಲಿ ಅಲ್ಪಸ್ವಲ್ಪವಾದರೂ ಸಮಾಜ ಸೇವೆಗೆ ಬಳಕೆ ಮಾಡಿ ಜೀವನ ಸಾರ್ಥಕ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ವೈ, ಎಚ್, ರವೀಶ್ ಮಾತನಾಡಿ ಶೌಚಾಲಯ ನಿರ್ಮಾಣಕ್ಕೆ ಇಂಡೋ ಸ್ಪಾನಿಷ್ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾದ ಶಿವರಾಮ್ ರವರನ್ನು ಭೇಟಿ ಮಾಡಿ ನಮ್ಮ ಗ್ರಾಮದ ಸರ್ಕಾರಿ ಶಾಲೆಗೆ ಶೌಚಾಲಯದ ಅವಶ್ಯಕತೆ ಇದೆ ತಾವು ಸಹಾಯ ಮಾಡಬೇಕೆಂದು ಕೇಳಿಕೊಂಡಾಗ ಉದಾರ ಮನಸ್ಸಿನಿಂದ ಶೌಚಾಲಯ ನಿರ್ಮಾಣಕ್ಕೆ ಆರ್ಥಿಕ ಸಹಾಯ ಮಾಡಿದ್ದಾರೆ ಇವರಿಗೆ ನಮ್ಮ ಗ್ರಾಮದ ಪರವಾಗಿ ಮತ್ತು ವೈಯಕ್ತಿಕವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು. ಈ ಸಂದರ್ಭದಲ್ಲಿ ಶಿವರಾಮ ಹಾಗೂ ಕಾರ್ಖಾನೆಯ ವ್ಯವಸ್ಥಾಪಕ ಜಗದೀಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ದೇವರಾಜಮ್ಮ ಹಾಗೂ ಶಿಕ್ಷಕರು ಗ್ರಾಮದ ಮುಖಂಡರಾದ ಲೋಕೇಶ್, ನಂಜಪ್ಪ, ಗ್ರಾಮಸ್ಥರು, ವಿದ್ಯಾರ್ಥಿಗಳು, ಉಪಸ್ಥಿತರಿದ್ದರು.