ತುಮಕೂರು : ರಕ್ತದಾನ ಮಾಡುವುದರಿಂದ ಇನ್ನೊಂದು ಜೀವವನ್ನು ಉಳಿಸಬಹುದಾಗಿದ್ದು, 60 ವರ್ಷದೊಳಗಿನ ಎಲ್ಲ ಆರೋಗ್ಯವಂತ ನಾಗರೀಕರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಬೇಕೆಂದು ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಸನತ್ ಕುಮಾರ್ ಮನವಿ ಮಾಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಆಸ್ಪತ್ರೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಜಿಲ್ಲಾ ಸರ್ಕಾರಿ ರಕ್ತ ನಿಧಿ ಕೇಂದ್ರ ಹಾಗೂ ಖಾಸಗಿ ರಕ್ತನಿಧಿ ಕೇಂದ್ರಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿಂದು ಆಯೋಜಿಸಲಾಗಿದ್ದ ರಾಷ್ಟೀಯ ಸ್ವಯಂಪ್ರೇರಿತ ರಕ್ತದಾನ ದಿನಾಚರಣೆಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು 1975 ರಿಂದ ಪ್ರಾರಂಭವಾದ ಈ ದಿನಾಚರಣೆಯು ರಕ್ತದಾನದ ಮಹತ್ವ ಹಾಗೂ ಇದರಿಂದಾಗುವ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸುತ್ತದೆ. ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಬೇಕೆಂಬುದು ಈ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಬಾರಿ “ರಕ್ತದಾನ ಮಾಡಿ ಜಗತ್ತನ್ನು ಗೆಲ್ಲಿಸಿ” ಎಂಬ ಘೋಷವಾಕ್ಯದೊಂದಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಗರ್ಭಿಣಿಯರಿಗೆ, ಅಪಘಾತಕ್ಕೊಳಗಾದವರಿಗೆ, ಅನಿಮಿಯಾ ರೋಗಿಗಳಿಗೆ ರಕ್ತದ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ಹೆಚ್ಚು ರಕ್ತದಾನ ಶಿಬಿರಗಳನ್ನು ಏರ್ಪಡಿಸಲಾಗುತ್ತಿದೆ. ಈ ಶಿಬಿರಗಳಿಂದಾಗಿ ಕೋವಿಡ್ ಸಂದರ್ಭದಲ್ಲಿಯೂ ಸಹ ರಕ್ತದ ಕೊರತೆ ಕಂಡು ಬಂದಿಲ್ಲ ಎಂದು ತಿಳಿಸಿದರು.
ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರವು ಅತಿ ಹೆಚ್ಚು ರಕ್ತ ಸಂಗ್ರಹಿಸುವ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಒಟ್ಟು 9 ರಕ್ತನಿಧಿ ಕೇಂದ್ರಗಳಿದ್ದು ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ ರಕ್ತ ಶೇಖರಣ ಘಟಕಗಳು ಕಾರ್ಯನಿರ್ವಹಿಸುತ್ತಿವೆ.
ಗ್ರಾಮೀಣ ಪ್ರದೇಶಗಳಲ್ಲಿ ರಕ್ತದಾನದ ಬಗ್ಗೆ ಅರಿವು ಮೂಡಿಸಲು ಶಿಬಿರಗಳು, ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಕಾಲೇಜುಗಳಲ್ಲಿ ರೆಡ್ ರಿಬ್ಬನ್ ಕ್ಲಬ್‌ಗಳನ್ನು ಆಯೋಜಿಸಲಾಗಿದೆ ಎಂದರು.
ನಂತರ 12ನೇ ಬೆಟಾಲಿಯನ್ ಕೆಎಸ್‌ಆರ್‌ಪಿ ಕಮಾಂಡೆಂಟ್ ಯುವಕುಮಾರ್ ಮಾತನಾಡಿ ದಾನಗಳಲ್ಲಿ ಶ್ರೇಷ್ಟವಾದ ದಾನ ರಕ್ತದಾನ. ರಕ್ತದಾನದಿಂದ ಜೀವ ಉಳಿಸುವ ಮೂಲಕ ಒಂದು ಕುಟುಂಬಕ್ಕೆ ಆಸರೆಯಾಗಬಹುದು ಎಂದು ತಿಳಿಸಿದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವೀರಭದ್ರಯ್ಯ ಮಾತನಾಡಿ ಗರ್ಭಿಣಿಯರಿಗೆ ಅತಿ ಹೆಚ್ಚು ರಕ್ತದ ಅವಶ್ಯಕತೆ ಇರುತ್ತದೆ. ಗರ್ಭಿಣಿಯರ ಸಾವು ಸಂಭವಿಸಲು ರಕ್ತಹಿನತೆಯೇ ಮುಖ್ಯ ಕಾರಣವಾಗಿದೆ. ಇಂತಹ ಸಂದರ್ಭದಲ್ಲಿ ರಕ್ತದಾನ ಮಾಡುವುದರಿಂದ ಸಾವಿನಂಚಿನಿಂದ ಅವರನ್ನು ಪಾರು ಮಾಡಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಕ್ತದಾನ ಶಿಬಿರದ ಸ್ಪರ್ಧಾ ಕಾರ್ಯಗಾರದಲ್ಲಿ ವಿಜೇತರಾದ ವೈದ್ಯಕೀಯ ವಿದ್ಯಾರ್ಥಿಗಳು, ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದ ಸ್ವಯಂಪ್ರೇರಕರು, ಹೆಚ್ಚು ರಕ್ತದಾನ ಶಿಬಿರಗಳನ್ನು ಏರ್ಪಡಿಸಿದವರಿಗೆ ಪ್ರಶಸ್ತಿ ಪತ್ರ ಹಾಗೂ ಸನ್ಮಾನಿಸಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಆರ್.ಸಿ.ಹೆಚ್ ಅಧಿಕಾರಿ ಡಾ.ಕೇಶವ್ ರಾಜ್, ನರ್ಸಿಂಗ್ ವಿದ್ಯಾರ್ಥಿಗಳು ಮತ್ತು ರಕ್ತದಾನ ಸ್ವಯಂ ಸೇವಕರು ಇತರರು ಭಾಗವಹಿಸಿದ್ದರು.