ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ತಿರಸ್ಕರಿಸಲು ಎಸ್.ಮಂಜುನಾಥ್ ಒತ್ತಾಯ
ತುಮಕೂರು : ಪರಿಶಿಷ್ಟ ಜಾತಿಯನ್ನು ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ಮುಂದಿಟ್ಟುಕೊಂಡು ಛಿದ್ರಗೊಳಿಸುವ ಹುನ್ನಾರವನ್ನು ಮಾಡುವ ಮೂಲಕ ಪರಿಶಿಷ್ಟರಲ್ಲಿಯೇ ಪರಸ್ಪರ ದ್ವೇಷವನ್ನು ಬಿತ್ತುವ ಕೆಲಸ ಮಾಡಲಾಗುತ್ತಿದೆ ಎಂದು ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹಾಗೂ ಮಹಾನಗರ ಪಾಲಿಕೆ ಸದಸ್ಯ ಎಸ್.ಮಂಜುನಾಥ್ ಆರೋಪಿಸಿದರು.
ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕರ್ನಾಟಕ ಮೀಸಲಾತಿ ಸಂರಕ್ಷಣಾ ಸಮಿತಿ ಒಕ್ಕೂಟದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸದಾಶಿವ ಆಯೋಗದ ವರದಿ ತಿರಸ್ಕರಿಸಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪರಿಶಿಷ್ಟರು ಅಸ್ಪೃಶ್ಯತೆ, ದೌರ್ಜನ್ಯಕ್ಕೆ ಒಳಗಾಗಿದ್ದರಿಂದ 1935ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ದಮನಿತ ಜಾತಿಗಳ ಪಟ್ಟಿಯಲ್ಲಿ ಅಲೆಮಾರಿ ಸಮುದಾಯಗಳಾದ ಭೋವಿ, ಕೊರಮ, ಕೊರಚ, ಬಂಜಾರ ಸಮುದಾಯಗಳನ್ನು ಸೇರಿಸಿ ಸಾಮಾಜಿಕ ನ್ಯಾಯವನ್ನು ನೀಡಿದ್ದರು, ಅದನ್ನೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮುಂದುವರೆಸಿದ್ದಾರೆ ಎಂದು ಹೇಳಿದರು.
ಬಾಬಾ ಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿರುವ ಮೀಸಲಾತಿಯನ್ನು ನ್ಯಾ.ಸದಾಶಿವ ಆಯೋಗದ ವರದಿಯನ್ನು ಮುಂದಿಟ್ಟು ತಪ್ಪಿಸುವ ಹುನ್ನಾರ ನಡೆಯುತ್ತಿದ್ದು, ಸೋರಿಕೆಯಾಗಿರುವ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯಲ್ಲಿನ ವಿಚಾರಗಳನ್ನು ಸಾರ್ವಜನಿಕ ಚರ್ಚೆಗೆ ಲಭ್ಯ ಮಾಡಬೇಕು ಇದರಿಂದ ಪರಿಶಿಷ್ಟರಲ್ಲಿಯೇ ಉಂಟಾಗಿರುವ ಗೊಂದಲಗಳಿಗೆ ತೆರೆ ಎಳೆಯಬೇಕು ಎಂದು ಅವರು ಆಗ್ರಹಿಸಿದರು.
ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಜಿಲ್ಲಾಧ್ಯಕ್ಷ ಉಮೇಶ್ ಮಾತನಾಡಿ ಪರಿಶಿಷ್ಟರಲ್ಲಿ ಒಡಕು ಉಂಟು ಮಾಡುವ ಸದಾಶಿವ ಆಯೋಗದ ವರದಿ ಜಾರಿ ಮಾಡಲು ಮುಂದಾಗಿರುವ ಸರ್ಕಾರ ಯಾವುದೇ ಕಾರಣಕ್ಕೂ ಸಹ ವರದಿಯನ್ನು ಶಿಫಾರಸ್ಸು ಮಾಡಬಾರದು, ಸರ್ಕಾರ ಶಿಫಾರಸ್ಸು ಮಾಡಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪರಿಶಿಷ್ಟ ಜಾತಿಗಳ ನಡುವೆ ತಾರತಮ್ಯವನ್ನು ಉಂಟು ಮಾಡುವಂತಿರುವ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಅವೈಜ್ಞಾನಿಕವಾಗಿದ್ದು, ಆಯೋಗ ಪಾರದರ್ಶಕತೆ ಮತ್ತು ವೈಜ್ಞಾನಿಕವಾಗಿ ಸಮೀಕ್ಷೆಯನ್ನು ಮಾಡದೇ ಅಲೆಮಾರಿ ಸಮುದಾಯಗಳಾದ ಬಂಜಾರ, ಭೋವಿ, ಛಲವಾದಿ, ಕೊರಚ, ಕೊರಮ ಮತ್ತು ಅಲೆಮಾರಿ ಸಮುದಾಯಗಳನ್ನು ಸೌಲಭ್ಯಗಳಿಂದ ಹೊರಗಿಡುವ ಪ್ರಯತ್ನ ಮಾಡುತ್ತಿದೆ, ಆಯೋಗದ ಅಸಂವಿಧಾನಿಕ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬೇಕು ಎಂದು ಆಗ್ರಹಿಸಿದರು.
ಕೊರಚ-ಕೊರಮ ಸಮುದಾಯದ ಮುಖಂಡರು, ಪಾಲಿಕೆ ಸದಸ್ಯರಾದ ಶಿವರಾಮ್, ವಿಶ್ವನಾಥ್, ಓಸಿಸಿಐ ಜಿಲ್ಲಾಧ್ಯಕ್ಷ ಪುರುಷೋತ್ತಮ್, ಕುಬೇರನಾಯಕ್, ಸೇವಂತ್ ವಾಸುದೇವ್, ಕರ್ನಾಟಕ ಬಂಜಾರ ಜಾಗೃತದಳದ ರಾಜ್ಯಾಧ್ಯಕ್ಷ ತಿಪ್ಪಸರ್‌ನಾಯಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.