ಗುಬ್ಬಿ : ಶಾಸಕ ಎಸ್.ಆರ್.ಶ್ರೀನಿವಾಸ್ ಜೆಡಿಎಸ್ ಪಕ್ಷವನ್ನು ತೊರಯುವ ಮಾತಿಲ್ಲ. ಎಲ್ಲಿಯೂ ಹೇಳಿಕೆ ನೀಡಿಲ್ಲ. ಕೇವಲ ಗೊಂದಲ ಮೂಡಿಸುವ ವದಂತಿ ಹಬ್ಬಿದೆ. ಇಂದಿಗೂ ಪಕ್ಷ ಸಂಘಟನೆ ನಡೆದಿದೆ. ಬಿಜೆಪಿ ತೊರೆದು ಜೆಡಿಎಸ್ ಸೇರಬಯಸಿರುವ ಉದ್ಯಮಿ ನಾಗರಾಜು ಅವರಿಂದ ಪಕ್ಷ ಮತ್ತಷ್ಟು ಬಲವರ್ಧನೆ ಆಗಲಿದೆ ಎಂದು ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಎಚ್.ಆರ್.ಗುರುರೇಣುಕಾರಾಧ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ನಡೆದ ಸದಸ್ಯತ್ವ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕೆಲ ತಿಂಗಳಿಂದ ಸುಳ್ಳು ವದಂತಿ ಜಿಲ್ಲೆಯಾದ್ಯಂತ ಹಬ್ಬಿದೆ. ಜೆಡಿಎಸ್ ಪಕ್ಷ ಬಿಡುವುದಾಗಿ ಶಾಸಕರು ಮಾತನಾಡಿಲ್ಲ. ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳು ಸಹ ಸತ್ಯಕ್ಕೆ ದೂರ. ಜೆಡಿಎಸ್ ಪಕ್ಷ ಸಂಘಟನೆಗೆ ಇಂದಿಗೂ ಮಹತ್ವ ನೀಡಲಾಗಿದೆ. ಸದಸ್ಯತ್ವ ನೋಂದಣಿ ಕೆಲಸಕ್ಕೂ ಚಾಲನೆ ನೀಡಿ ತಾಲ್ಲೂಕಿನಾದ್ಯಂತ ನೋಂದಣಿ ಪುಸ್ತಕಗಳು ಮುಖಂಡರ ಕೈ ಸೇರಲಿದೆ ಎಂದರು.
ಉದ್ಯಮಿ ನಾಗರಾಜು ಬಗ್ಗೆ ಸ್ಥಳೀಯ ಜೆಡಿಎಸ್ ಪಕ್ಷಕ್ಕೆ ಮಾಹಿತಿ ಬಂದಿಲ್ಲ. ಈವರೆವಿಗೂ ಪಕ್ಷದ ಪ್ರಮುಖ ಪದಾಧಿಕಾರಿಗಳನ್ನು ಭೇಟಿ ಮಾಡದ ಇವರ ಬಗ್ಗೆ ಪರಿಚಯವಿಲ್ಲ. ಶಾಸಕ ಶ್ರೀನಿವಾಸ್ ಅವರು ಸತತ ನಾಲ್ಕು ಬಾರಿ ಶಾಸಕರಾಗಿ ಆಯ್ಕೆ ಆಗುವಲ್ಲಿ ವೈಯಕ್ತಿಕ ವರ್ಚಸ್ಸು ಜೊತೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಶ್ರಮವಿದೆ. ಈ ಬಗ್ಗೆ ತಿಳಿದ ಶಾಸಕರು ಜೆಡಿಎಸ್ ತೊರೆಯುವ ಮಾತುಗಳಾಡಿಲ್ಲ. ಭಿನ್ನಾಭಿಪ್ರಾಯ, ಅಸಮಾಧಾನ ಇದ್ದಲ್ಲಿ ಪಕ್ಷದೊಳಗೆ ಇತ್ಯರ್ಥವಾಗಲಿದೆ ಎಂದರು.
ಜೆಡಿಎಸ್ ಎಸ್‌ಟಿ ಘಟಕದ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ ಜೆಡಿಎಸ್ ವರಿಷ್ಠರಿಂದ ಅಭ್ಯರ್ಥಿಗಳ ಬಗ್ಗೆ ಯಾವುದೇ ಮಾಹಿತಿ ರವಾನೆಯಾಗಿಲ್ಲ. ಶಾಸಕ ಶ್ರೀನಿವಾಸ್ ಕೂಡಾ ಎಂದೂ ಪಕ್ಷ ಬಿಡುವ ಮಾತುಗಳಾಡಿಲ್ಲ. ಎಲ್ಲವೂ ಮಾಧ್ಯಮ ಸೃಷ್ಟಿ ಎನಿಸಿದೆ. ಕಾಂಗ್ರೆಸ್ ಮುಖಂಡರೊಂದಿಗೆ ಸಂಪರ್ಕವೆಂದು ಕೆ.ಎನ್.ರಾಜಣ್ಣ ಅವರ ಭೇಟಿಗೆ ಬಣ್ಣ ಹಚ್ಚಲಾಗಿದೆ. ಆದರೆ ಸಹಕಾರ ಕ್ಷೇತ್ರದಲ್ಲೇ ಜವಾಬ್ದಾರಿ ಹೊತ್ತ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ರಾಜಣ್ಣ ಅವರೊಟ್ಟಿಗೆ ಬ್ಯಾಂಕ್ ಉಪಾಧ್ಯಕ್ಷ ಎಸ್.ಆರ್.ಶ್ರೀನಿವಾಸ್ ಭೇಟಿ ಸಹಜ ಎನಿಸುತ್ತದೆ. ಇದಕ್ಕೆ ಸಲ್ಲದ ರಾಜಕಾರಣ ಬೇಕಿಲ್ಲ ಎಂದರು.
ಜಿಪಂ ಮಾಜಿ ಉಪಾಧ್ಯಕ್ಷ ಕೆ.ಸಿ.ಕೃಷ್ಣಮೂರ್ತಿ ಮಾತನಾಡಿ ಪಕ್ಷದಲ್ಲೇ ಕೆಲವು ಅತೃಪ್ತರು ಶಾಸಕರ ವಿರುದ್ದ ಸಲ್ಲದ ಹೇಳಿಕೆಗೆ ಕಾರಣವಾಗುತ್ತಿದ್ದಾರೆ. ಅಭ್ಯರ್ಥಿ ಘೋಷಣೆ ಬಗ್ಗೆ ಸುಳ್ಳು ವದಂತಿ ಹಬ್ಬಿಸಿರುವ ಕೆಲ ಪಕ್ಷದಲ್ಲಿನ ಭಿನ್ನ ಮುಖಂಡರು ಜೆಡಿಎಸ್ ಪಕ್ಷದ ವರಿಷ್ಠರ ಭೇಟಿ ಮಾಡಿ ನೀರಾವರಿ ವಿಚಾರ ಚರ್ಚಿಸಿ ನಂತರ ಮರಳಿ ಬಂದು ತಾಲ್ಲೂಕಿನಲ್ಲಿ ಸಲ್ಲದ ರಾಜಕಾರಣ ತಂತ್ರಕ್ಕೆ ಮೂಲವಾಗುತ್ತಿದ್ದಾರೆ. ಇದು ಶಾಸಕರ ಮೇಲಿನ ಅವರ ಅಸಮಾಧಾನ ಹೊರಬಂದಿದೆ. ಒಟ್ಟಾರೆ ಹೊಸಬರು ಪಕ್ಷಕ್ಕೆ ಎಂಟ್ರಿಕೊಟ್ಟು ಪಕ್ಷ ಸಂಘಟನೆಗೆ ಮುಂದಾದರೆ ಸ್ವಾಗತ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕಿನ ಎಲ್ಲಾ ಹೋಬಳಿ ಮಟ್ಟದ ಮುಖಂಡರಿಗೆ ಪಕ್ಷ ನೋಂದಣಿ ಪುಸ್ತಕ ವಿತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಜೆಡಿಎಸ್ ಯುವ ಘಟಕ ಅಧ್ಯಕ್ಷ ಕೆ.ಆರ್.ವೆಂಕಟೇಶ್, ಮುಖಂಡರಾದ ಎಚ್.ಡಿ.ರಂಗಸ್ವಾಮಿ, ಹೊದಲೂರು ವಿಜಯ್‌ಕುಮಾರ್, ಶಿವಕುಮಾರ್, ಪಟೇಲ್ ಶಶಿಕುಮಾರ್, ಶಿವಪ್ಪ, ಸತೀಶ್ ಇತರರು ಇದ್ದರು.