ಎಪಿಎಂಸಿಯಿಂದ ರೈತರಿಗೆ ಉತ್ತಮ ಸೇವೆ ನೀಡಿ : ಬಿ.ಸುರೇಶ್‌ಗೌಡ
ಎಪಿಎಂಸಿ ಅಧ್ಯಕ್ಷರಾಗಿ ಕೆ.ಎಂ. ಉಮೇಶ್‌ಗೌಡ ಅಧಿಕಾರ ಸ್ವೀಕಾರ
ತುಮಕೂರು: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರುಗಳನ್ನಾಗಿ ನಾಮ ನಿರ್ದೇಶಗೊಳಿಸಿ ಸರ್ಕಾರ ಆದೇಶ ಹೊರಡಿಸಿರುವ ಹಿನ್ನಲೆಯಲ್ಲಿ ಸೋಮವಾರ ಮಾಜಿ ಶಾಸಕ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಸುರೇಶ್‌ಗೌಡರನ್ನು ಅಭಿನಂದಿಸಿ, ಅವರ ಸಮ್ಮುಖದಲ್ಲಿ ಎಪಿಎಂಸಿ ನೂತನ ಅಧ್ಯಕ್ಷ ಕುಂಟರಾಯನಪಾಳ್ಯದ ಕೆ.ಎಂ. ಉಮೇಶ್‌ಗೌಡ ಮತ್ತು ನೂತನ ಉಪಾಧ್ಯಕ್ಷ ಕೊಟ್ಟನಹಳ್ಳಿ ಗೊಲ್ಲರಹಟ್ಟಿಯ ಶಿವರಾಜು ಮತ್ತು ಸದಸ್ಯರುಗಳು ಕಚೇರಿಯಲ್ಲಿ ಪೂಜೆ ಸಲ್ಲಿಸುವ ಮೂಲಕ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸದಸ್ಯರಿಗೆ ಶುಭ ಕೋರಿ ಮಾತನಾಡಿದ ಮಾಜಿ ಶಾಸಕ ಬಿ.ಸುರೇಶ್‌ಗೌಡ ಅವರು, ಎಪಿಎಂಸಿ ಕಾಯ್ದೆ ಜಾರಿಗೊಳಿಸಿದ್ದರಿಂದ ರೈತರಿಗೆ ವರದಾನವಾಗಿದೆ. ರೈತರಿಗೆ ಎಪಿಎಂಸಿಯಿಂದ ಉತ್ತಮ ಸೇವೆ ನೀಡುವಂತೆ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಕಿವಿಮಾತು ಹೇಳಿದರು.
ರೈತರ ಆದಾಯವನ್ನು ದ್ವಿಗುಣ ಮಾಡಬೇಕೆನ್ನುವ ನಿಟ್ಟಿನಲ್ಲಿ ಪ್ರದಾನಿ ನರೇಂದ್ರ ಮೋದಿಯವರು ಧ್ಯೇಯ, ಸಂಕಲ್ಪವನ್ನಿಟ್ಟುಕೊಂಡು ಎಪಿಎಂಸಿಯಲ್ಲಿ ಸಾಕಷ್ಟು ಸುಧಾರಣೆ ಕಾನೂನುಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಜಾರಿಗೆ ತಂದಿದ್ದಾರೆ ಎಂದರು.
ತುಮಕೂರು ಎಪಿಎಂಸಿಯೂ ಕೂಡ ರೈತರ ಸ್ನೇಹಿಯಾಗಿರಬೇಕು, ರೈತರ ವಿಶ್ವಾಸವನ್ನು ಇಟ್ಟುಕೊಂಡಿರಬೇಕು, ರೈತರ ಸಮಸ್ಯೆಗಳನ್ನು ಬಗೆಹರಿಸಬೇಕೆನ್ನುವುದೇ ನಮ್ಮ ಸಂಕಲ್ಪವಾಗಿದ್ದು, ತುಮಕೂರು ಮತ್ತು ಕೊರಟಗೆರೆ ಎರಡೂ ಒಂದಾಗಬೇಕು ಎಂಬ ಅಪೇಕ್ಷೆ ನಮ್ಮದಾಗಿತ್ತು. ತುಮಕೂರು ಎಪಿಎಂಸಿ ಎಂದರೆ ಇಡೀ ರಾಜ್ಯದಲ್ಲೇ ವಿಶೇಷವಾದ ಎಪಿಎಂಸಿ ಸಂಸ್ಥೆಯಾಗಿದೆ. ಸಾಕಷ್ಟು ವಹಿವಾಟುಗಳನ್ನು ನಡೆಸಿದ್ದು, ಸಾಕಷ್ಟು ಲಾಭದಾಯವಾಗಿ, ರೈತರ ಸ್ನೇಹಿಯಾಗಿ ಉತ್ತಮವಾಗಿ ಕೆಲಸ ಮಾಡುತ್ತಿತ್ತು ಎಂದರು.
ಹಿಂದೆ ತುಮಕೂರು ಮತ್ತು ಕೊರಟಗೆರೆ ಎರಡನ್ನೂ ಸೇರಿಸಿ ತುಮಕೂರು ಎಪಿಎಂಸಿ ಮಾಡಲಾಗಿತ್ತು, ತದನಂತರ ಕೊರಟಗೆರೆ ವಿಭಾಗ ಮಾಡಲಾಯಿತು. ವಿಭಾಗ ಮಾಡಿದಂತಹ ಸಂದರ್ಭದಲ್ಲಿ ಅಲ್ಲಿಂದ ಯಾವುದೇ ಪ್ರಯೋಜನ ಕೊರಟಗೆರೆ ಭಾಗದ ಜನರಿಗೆ ಆಗಲಿಲ್ಲ, ತುಮಕೂರು ಕೇಂದ್ರ ಸ್ಥಾನವಾಗಿರುವುದರಿಂದ ಇಲ್ಲಿ ಹೆಚ್ಚಿನ ಆದಾಯ ಬರುವಂತಹ ವ್ಯವಸ್ಥೆ ಆಗಬೇಕೆಂಬ ಹಿನ್ನಲೆಯಲ್ಲಿ ತುಮಕೂರು ಮತ್ತು ಕೊರಟಗೆರೆ ಎರಡನ್ನೂ ಒಂದು ಮಾಡಿ ನಾವು ಪುನಃ ತುಮಕೂರು ಎಪಿಎಂಸಿಯನ್ನು ಅಸ್ಥಿತ್ವಕ್ಕೆ ತಂದಿದ್ದೇವೆ ಎಂದು ಹೇಳಿದರು.
ರೈತರ ಹಿತದೃಷ್ಟಿಯಿಂದ ಎಪಿಎಂಸಿ ಕಾನೂನುಗಳನ್ನು ಬದಲಾವಣೆ ಮಾಡಲಾಗಿದ್ದು, ಯಾವುದೇ ವರ್ತಕ ಅಥವಾ ಮದ್ಯವರ್ತಿ ಒಬ್ಬ ರೈತನ ಬಳಿಗೆ ಹೋಗಿ ನೇರವಾಗಿ ಮಾಲನ್ನು ಕೊಂಡುಕೊಳ್ಳುವ ವ್ಯವಸ್ಥೆ ಜಾರಿಗೆ ಬಂದಿದೆ. ಈ ಹಿಂದೆ ತೆಂಗು ಬೆಳೆದ ರೈತ ನೇರವಾಗಿ ಕೊಬ್ಬರಿಯನ್ನು ಕಡ್ಡಾಯವಾಗಿ ಎಪಿಎಂಸಿಗೆ ಹಾಕಬೇಕಿತ್ತು, ಆದರೆ ಈಗ ಹಾಗಿಲ್ಲ, ತೆಂಗು ಬೆಳೆದ ರೈತನ ತೋಟಕ್ಕೆ ಮದ್ಯವರ್ತಿ ಅಥವಾ ವ್ಯಾಪಾರಸ್ಥ ನೇರವಾಗಿ ಹೋಗಿ ರೈತ ನಿಗಧಿ ಮಾಡಿರುವ ಬೆಲೆಯನ್ನು ಕೊಟ್ಟು ಖರೀಧಿ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಇದರಿಂದ ರೈತರಿಗೆ ಸಾಕಷ್ಟು ಅನುಕೂಲ ಮತ್ತು ತಾನು ಬೆಳೆದ ಬೆಳೆಯ ಬೆಲೆಯನ್ನು ತಾನೇ ನಿಗಧಿ ಮಾಡಿ ತನ್ನ ತೋಟದಲ್ಲೇ ಮಾರಾಟ ಮಾಡುವ ವ್ಯವಸ್ಥೆಯನ್ನು ಪ್ರದಾನಿ ನರೇಂದ್ರ ಮೋದಿಯವರು ಜಾರಿಗೆ ತಂದಿದ್ದಾರೆ ಎಂದು ತಿಳಿಸಿದರು.
ಹಿಂದೆ ಕೃಷಿ ಮಾರುಕಟ್ಟೆಗಳು ಮಹಾರಾಷ್ಟçದಲ್ಲಿದ್ದ ಶರದ್ ಪವಾರ್, ಸುಪ್ರಿಯಾ ಸುಳೆ, ಪಂಜಾಬ್‌ನಲ್ಲಿ ಅಕಾಲಿದಳದ ಪ್ರಮುಖ ನಾಯಕ ಶಿರೋಮಣಿ ಅಕಾಲಿದಳ್ ಅವರ ಕಪಿಮುಷ್ಠಿಯಲ್ಲಿತ್ತು, ಇಂದು ಕೃಷಿ ಮಾರುಕಟ್ಟೆಯನ್ನು ಪಾರದರ್ಶಕವಾಗಿ ದೇಶದ ಜನರ ಬಳಿಗೆ ಮೋದಿಯವರು ತೆಗೆದುಕೊಂಡು ಹೋದರು. ಅಂತಹ ವಿಶೇಷವಾದ ಎಪಿಎಂಸಿ ಕಾಯ್ದೆಯನ್ನು ಜಾರಿಗೆ ತಂದಿದ್ದಾರೆ. ಅದರಡಿ ಎಲ್ಲಾ ಎಪಿಎಂಸಿಗಳು ಕೆಲಸ ಮಾಡುತ್ತವೆ. ರಾಜ್ಯಸರ್ಕಾರವಾಗಲೀ ಅಥವಾ ಕೇಂದ್ರ ಸರ್ಕಾರವಾಗಲೀ ಎಪಿಎಂಸಿಗಳನ್ನು ಮುಚ್ಚುವ ಕೆಲಸ ಮಾಡುವುದಿಲ್ಲ, ರೈತರ ಆದಾಯ ದ್ವಿಗುಣವಾಗಬೇಕೆಂಬ ಕಾಯಕಲ್ಪ ನಮ್ಮದಾಗಿದೆ ಎಂದು ಹೇಳಿದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ಎಪಿಎಂಸಿ ನೂತನ ಅಧ್ಯಕ್ಷ ಕೆ.ಎಂ.ಉಮೇಶ್‌ಗೌಡ, ರಾಜಕೀಯ ಗುರುಗಳಾದ ಬಿ.ಸುರೇಶ್‌ಗೌಡರ ಆಶೀರ್ವಾದದಿಂದ ಇಂದು ಎಪಿಎಂಸಿ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ್ದು, ಸದಸ್ಯರ ಸಹಕಾರದೊಂದಿಗೆ ರೈತರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಹೇಳಿದರು.
ತಾವೂ ಕೂಡ ಒಬ್ಬ ರೈತರಾಗಿದ್ದು, ರೈತರ ಪ್ರತಿಯೊಂದು ಬದುಕು ಭವಣೆಗಳ ಪರಿಚಯ ತಮಗಿದೆ. ವಿಶೇಷವಾಗಿ ರೈತರು ಬೆಳೆದ ಭತ್ತ, ರಾಗಿ, ಜೋಳ, ತೆಂಗು, ತರಕಾರಿ ಸೇರಿದಂತೆ ಎಲ್ಲಾ ಬೆಳೆಗಳನ್ನು ಖರೀದಿ ಕೇಂದ್ರದಲ್ಲಿ ಮಾರಾಟ ಪ್ರಕ್ರಿಯೆಯಲ್ಲಿನ ಸಮಸ್ಯೆಗಳ ಬಗ್ಗೆ ತಮಗೆ ಮಾಹಿತಿ ಇದ್ದು, ಈ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಉಪಾಧ್ಯಕ್ಷ ಕೊಟ್ಟನಹಳ್ಳಿ ಗೊಲ್ಲರಹಟ್ಟಿಯ ಶಿವರಾಜು, ಸದಸ್ಯರುಗಳಾದ ಚಿಕ್ಕಸಾರಂಗಿಯ ಸಿ.ಡಿ. ಪ್ರಕಾಶ್, ಎ.ಕೆ. ಕಾಲೋನಿಯ ಗೂಳೂರು ಸಿದ್ದರಾಜು, ನೇರಳಾಪುರದ ಎನ್.ಎಸ್. ಹೊನ್ನೇಶ್‌ಕುಮಾರ್, ರಾಮಕೃಷ್ಣಾಪುರ ಗ್ರಾಮದ ಆರ್.ಸಿ. ಶಿವಕುಮಾರ್, ಯಲ್ಲಾಪುರದ ರತ್ನಮ್ಮ, ಬೆಳಗುಂಬ ಲಂಬಾಣಿ ತಾಂಡ್ಯದ ಪುಟ್ಟಲಕ್ಷ÷್ಮಮ್ಮ, ನಾಗವಲ್ಲಿಯ ಎನ್.ಟಿ. ನಾಗರಾಜು. ರಂಗಯ್ಯನಪಾಳ್ಯದ ಸುಭಾಷ್‌ಚಂದ್ರ, ನಾಗವಲ್ಲಿ ರಂಗನಾಥಪುರದ ಪಾರ್ವತಮ್ಮ, ಬಟವಾಡಿಯ ಈಶ್ವರಗುಪ್ತ, ಯಲ್ಲಾಪುರದ ಲೋಕೇಶ್, ಹುಳ್ಳೇನಹಳ್ಳಿಯ ನೀಲಕಂಠಯ್ಯ ಹಾಗೂ ಬೆಳ್ಳಾವಿ ಹೋಬಳಿ ಅರಳಕಟ್ಟೆಯ ಶಿವರಾಜು ಹಾಗೂ ಎಪಿಎಂಸಿ ಕಾರ್ಯದರ್ಶಿ ಪುಷ್ಪ ಸೇರಿದಂತೆ ಬಿಜೆಪಿ ಮುಖಂಡರು ಹಾಜರಿದ್ದರು.