ಹುಳಿಯಾರು : ಬಿಳಿ ನೋಣಗಳ ಕಾಟ ಹೆಚ್ಚಿರುವ ಹುಳಿಯಾರು ಹೋಬಳಿಯ ತಮ್ಮಡಿಹಳ್ಳಿ ಗೊಲ್ಲರಟ್ಟಿ ತೆಂಗಿನ ತೋಟಕ್ಕೆ ಚಿಕ್ಕನಾಯಕನಹಳ್ಳಿ ತಾಲೂಕು ತೋಟಗಾರಿಕೆ ಅಧಿಕಾರಿಗಳು ಭೇಟಿ ನೀಡಿ ರೈತರಿಗೆ ಸಲಹೆ-ಸೂಚನೆ ನೀಡಿದರು.
ಕೀಟ ಬಾಧಿತ ತೆಂಗಿನ ಸಸಿ ಹಾಗೂ ಗರಿಗಳನ್ನು ತೋಟದಿಂದ ಮುನ್ನೆಚರಿಕೆ ವಹಿಸಿ ಸಾಗಿಸಬೇಕು. ಪ್ರತಿ ಎಕರೆಗೆ 5 ರಿಂದ 6 ಹಳದಿ ಬಲೆಗಳನ್ನು ಅಳವಡಿಸಬೇಕು. ಎಲೆಗಳ ಮೇಲೆ ಶೇ.1ರಷ್ಟು ಸ್ಟಾರ್ಚ್ (ಗಂಜಿ ತಿಳಿ) ಸಿಂಪಡಿಸುವುದರಿಂದ ಕಪ್ಪು ಶಿಲೀಂದ್ರ ಉದುರಿ ಹೋಗಲಿದೆ. 1 ಕೆ.ಜಿ ಮೈದಾ ಹಿಟ್ಟನ್ನು 100 ಲೀಟರ್ ನೀರಿನಲ್ಲಿ ಬೆರೆಸಿ ಅಥವಾ ಶೇ.1 ರ ಸಾಂದ್ರತೆಯ ಬೇವಿನ ಎಣ್ಣೆಯನ್ನು ಯಾವುದಾದರು ಡಿಟರ್ಜೆಂಟ್ ಪುಡಿಯೊಂದಿಗೆ ಮಿಶ್ರ ಮಾಡಿ ಸಿಂಪಡಿಸಿ ಕಪ್ಪು ಶಿಲೀಂದ್ರದಿಂದ ಮುಕ್ತಿ ಹೊಂದಬಹುದಾಗಿದೆ ಎಂದು ತೆಂಗು ಬೆಳೆಗಾರರಿಗೆ ಮಾಹಿತಿ ನೀಡಿದರು.
ರೈತರು ಪಹಣಿ ಮತ್ತು ಆಧಾರ್ ಕಾರ್ಡ್ ಕೊಟ್ಟರೆ ಉಚಿತವಾಗಿ ಔಷಧಿಗಳನ್ನು ಕೊಡುತ್ತೇವೆ. ರೈತರು ತೆಂಗಿನ ಗಿಡಗಳಿಗೆ ನಾವು ಹೇಳಿದ ಕ್ರಮಗಳನ್ನು ನಿರ್ವಹಿಸಿದಲ್ಲಿ ರುಗೋಸ್ ಕೀಟ ಬಾಧೆಯಿಂದ ತೆಂಗು ಬೆಳೆಯನ್ನು ರಕ್ಷಿಸಬಹುದು ಎಂದರಲ್ಲದೆ ಒಳ್ಳೆಯ ಮಳೆಗಾಲವಾದರೆ ಕೀಟವು ಸಂಪೂರ್ಣವಾಗಿ ನಾಶವಾಗುತ್ತವೆ ಎಂದು ತಿಳಿಸಿದರು.
ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ಸಂತೋಷ್, ತೋಟಗಾರಿಕೆ ಸಹಾಯಕ ನಿರ್ದೇಶಕ ಚಿತ್ತೇಶ್, ಸಹಾಯಕ ತೋಟಗಾರಿಕೆ ಅಧಿಕಾರಿ ಮಂಜುನಾಥ್ ರೈತರ ತೋಟಗಳಿಗೆ ಭೇಟಿ ನೀಡಿದ ಅಧಿಕಾರಿಗಳಾಗಿದ್ದಾರೆ.