
ತುಮಕೂರು : ಜಿಲ್ಲೆಯಾದ್ಯಂತ ಇಂದು ಹಮ್ಮಿಕೊಂಡಿದ್ದ ಕೋವಿಡ್ ಲಸಿಕಾ ಮೆಗಾ ಮೇಳ ಕಾರ್ಯಕ್ರಮದಲ್ಲಿ ಸಂಜೆ 6 ಗಂಟೆಯವರೆಗೆ 111208 ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ.
ಜಿಲ್ಲೆಯಲ್ಲಿ ಆಯ್ದ ಶಾಲೆ ಹಾಗೂ ಕೋವಿಡ್ ಲಸಿಕಾ ಕೇಂದ್ರಗಳಲ್ಲಿ ಬೆಳಿಗ್ಗೆ 7 ಗಂಟೆಯಿAದಲೇ ಅಧಿಕಾರಿ/ಸಿಬ್ಬಂದಿಗಳ ತಂಡ ಲಸಿಕೆ ನೀಡಲು ಸಜ್ಜಾಗಿದ್ದರು. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಲಸಿಕಾ ಕಾರ್ಯಕ್ಕಾಗಿ ಸುಮಾರು 460 ಲಸಿಕಾ ಕೇಂದ್ರಗಳನ್ನು ತೆರೆದು ಹೋಬಳಿ ಮಟ್ಟದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳನ್ನು 50 ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿಸಲಾಗಿತ್ತು. ಲಸಿಕೆ ಪಡೆಯಲು ಬೆಳಗ್ಗಿನಿಂದಲೇ ಜನರು ಸಾಲಿನಲ್ಲಿ ನಿಂತು ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಲಸಿಕೆಯನ್ನು ಪಡೆದರು.
ಈ ಲಸಿಕಾ ಮೇಳದಲ್ಲಿ ಜಿಲ್ಲೆಯ ಚಿಕ್ಕನಾಯಕನಹಳ್ಳಿ-11000, ಗುಬ್ಬಿ-11000, ಕೊರಟಗೆರೆ-8000, ಕುಣಿಗಲ್-11000, ಮಧುಗಿರಿ-11000, ಪಾವಗಡ-10000, ಶಿರಾ-14000, ತಿಪಟೂರು-12000, ತುಮಕೂರು-29000, ತುರುವೇಕೆರೆ-8000 ಸೇರಿದಂತೆ ಒಟ್ಟು 1,25,000 ಲಸಿಕೆ ನೀಡುವ ಗುರಿ ಹೊಂದಲಾಗಿತ್ತು. ಈ ಪೈಕಿ ಚಿಕ್ಕನಾಯಕನಹಳ್ಳಿ-11555, ಗುಬ್ಬಿ-11964, ಕೊರಟಗೆರೆ-7292, ಕುಣಿಗಲ್-10027, ಮಧುಗಿರಿ-7475, ಪಾವಗಡ-6240, ಶಿರಾ-13065, ತಿಪಟೂರು-13871, ತುಮಕೂರು-21271, ತುರುವೇಕೆರೆ-8448 ಸೇರಿದಂತೆ ಒಟ್ಟು 1,11,208 ಮಂದಿಗೆ ಲಸಿಕೆ ನೀಡಲಾಗಿದೆ.
ಜಿಲ್ಲಾಧಿಕಾರಿಗಳಿಂದ ಮನೆ-ಮನೆ ಭೇಟಿ ನೀಡಿ ಅರಿವು:-
ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಇಂದು ಪಾವಗಡ ಪಟ್ಟಣ, ಕೊರಟಗೆರೆ ತಾಲ್ಲೂಕಿನ ತುಂಬಾಡಿ, ಮಧುಗಿರಿ ತಾಲ್ಲೂಕಿನ ಹೊಸಕೆರೆ ಗ್ರಾಮದ ಮನೆಗಳಿಗೆ ಭೇಟಿ ನೀಡಿ ಯಾವುದೇ ಆತಂಕ ಪಡದೆ ಲಸಿಕೆ ಪಡೆಯಬೇಕೆಂದು ಸಾರ್ವಜನಿಕರಿಗೆ ಅರಿವು ಮೂಡಿಸಿದರು.
ನಂತರ ಲಸಿಕಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ಲಸಿಕಾ ಮೆಗಾ ಮೇಳದ ಯಶಸ್ವಿಗಾಗಿ ಎಲ್ಲಾ ತಾಲ್ಲೂಕಿನ ಹೋಬಳಿವಾರು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಯನ್ನು ಶೇಖರಿಸಲಾಗಿತ್ತು. ನಿಗಧಿಪಡಿಸಿದ ಲಸಿಕೆ ನೀಡುವ ಗುರಿಯನ್ನು ಸಾಧಿಸಲು ಎಲ್ಲಾ ಇಲಾಖೆಯ ಅಧಿಕಾರಿಗಳೊಂದಿಗೆ ರೋಟರಿ ಸಂಸ್ಥೆ, ರೆಡ್‌ಕ್ರಾಸ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರವನ್ನು ಬಳಸಿಕೊಳ್ಳಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ ಉಪಸ್ಥಿತರಿದ್ದರು.