ತುಮಕೂರು: ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ಮುರಳೀಧರ ಹಾಲಪ್ಪ ಅವರು ನಗರಕ್ಕೆ ಆಗಮಿಸಿದ್ದ ಜೈನ ಮುನಿಗಳಾದ ಪ.ಪೂ.ಮುನಿಶ್ರೀ 108 ಅಮೋಘ ಕೀರ್ತಿ ಮಹಾರಾಜ್ ಮತ್ತು ಪ.ಪೂ.ಮುನಿಶ್ರೀ 108 ಅಮರಕೀರ್ತಿ ಮಹಾರಾಜ್ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ನಗರದ ಬಿ.ಎಚ್.ರಸ್ತೆಯಲ್ಲಿರುವ ಜೈನ ಭವನದಲ್ಲಿ ಆಶೀರ್ವಚನ ಮತ್ತು ಮಾರ್ಗದರ್ಶನ ನೀಡಿದ ಪ.ಪೂ.ಮುನಿಶ್ರೀ 108 ಅಮೋಘ ಕೀರ್ತಿ ಮಹಾರಾಜ್ ಅವರು, ವ್ಯಸನಮುಕ್ತ ಮತ್ತು ಶಾಖಾಹಾರದ ಬಗ್ಗೆ ಹೆಚ್ಚು ಪ್ರಚಾರ ಮಾಡಿ ಯುವಕರಲ್ಲಿ ಬದಲಾವಣೆ ತಂದಾಗ ಮಾತ್ರ ಉತ್ತಮ ರಾಷ್ಟç ನಿರ್ಮಾಣವಾಗಲಿದೆ ಎಂದು ತಿಳಿಸಿದರು.
ಯುವ ಎಂದರೆ ಗಾಳಿ, ಯುವಕರ ಮನಸ್ಸು ಚಂಚಲತೆಯಿಂದ ಕೂಡಿರುತ್ತದೆ. ಆದುದರಿಂದ ಶುದ್ಧ ಗಾಳಿಯನ್ನು ಸೇವಿಸಿದಾಗ ಮಾತ್ರ ಉತ್ತಮ ಮನಸ್ಸುಗಳ ಯುವಕರಾಗಿ ಹೊರಹೊಮ್ಮುತ್ತಾರೆ. ಆಗ ಉತ್ತಮ ರಾಷ್ಟ್ರವೂ ನಿರ್ಮಾಣವಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಯುವಕರು ಉತ್ತಮ ಸಂಸ್ಕಾರ, ನಡೆ, ನುಡಿ ರೂಢಿಸಿಕೊಳ್ಳಬೇಕು, ಯುವಕರು ಸರಿಯಾದ ಮಾರ್ಗವನ್ನು ಆಯ್ಕೆ ಮಾಡಿಕೊಂಡಾಗ ಸುಸಂಸ್ಕೃತ ಭವ್ಯ ಭಾರತ ನಿರ್ಮಾಣವಾಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಮಾದಕ ವಸ್ತುಗಳ ನಶೆಯಿಂದ ನಮ್ಮ ಜೀವನ ಹಾಳಾಗುವುದು ಖಚಿತ. ನಮಗೆ ಬೇಕಿರುವುದು ಆ ನಶೆಯಲ್ಲ. ಜ್ಞಾನದ ಅಹಿಂಸೆಯ ನಶೆ ನಮ್ಮನ್ನು ಆವರಿಸಬೇಕಿದೆ. ಈ ಅಹಿಂಸೆಯ ದಾರಿಯಲ್ಲಿ ಮನಃಶಾಂತಿ ದೊರೆಯುತ್ತದೆ. ಹಿಂಸೆಯ ಆಚರಣೆ ಯಾವ ಧರ್ಮದಲ್ಲಿಯೂ ಇಲ್ಲ. ಅಹಿಂಸೆಯೇ ಪರಮ ಧರ್ಮ. ನಶೆರಹಿತ ಶಾಖಾಹಾರ ಸೇವನೆಯಿಂದ ಅಹಿಂಸೆ ಮತ್ತು ಸದ್ಭಾವನೆಯಿಂದ ಕೂಡಿದ ಜೀವನ ಅನುಕರಣೀಯವಾಗುತ್ತದೆ. ಇದನ್ನು ಪ್ರಜ್ಞಾಪೂರ್ವಕವಾಗಿ ಪ್ರತಿಯೊಬ್ಬರೂ ಆಚರಿಸಿದರೆ ನಮ್ಮ ಮತ್ತು ಸುತ್ತಮುತ್ತಲಿನ ಪರಿಸರ ಸುಂದರವಾಗಿರುತ್ತದೆ ಎಂದರು.
ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷರಾದ ಮುರಳೀಧರ ಹಾಲಪ್ಪ ಅವರು ಸಮಾಜ ಸೇವೆಯಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಇಡೀ ಜಿಲ್ಲೆಯಲ್ಲಿ ಉತ್ತಮ ಸೇವಾ ಕಾರ್ಯ ಮಾಡಿದ್ದಾರೆ. ಇನ್ನೂ ಹೆಚ್ಚಿನ ರೀತಿಯಲ್ಲಿ ಸೇವೆ ಮಾಡುವ ಶಕ್ತಿಯನ್ನು ಆ ದೇವರು ಕರುಣಿಸಲಿ ಎಂದು ಆಶೀರ್ವದಿಸಿದರು.
ಮುರಳೀಧರ ಹಾಲಪ್ಪ ಮಾತನಾಡಿ, ಜಗತ್ತಿನಲ್ಲಿಂದು ಧಾರ್ಮಿಕತೆ ಕಲುಷಿತಗೊಳ್ಳುತ್ತಿರುವ ಸಂದರ್ಭದಲ್ಲಿ ಜೈನ ಧರ್ಮದ ಸತ್ಯ, ಅಹಿಂಸೆ ಮುಂತಾದ ತತ್ವ ಸಿದ್ಧಾಂತಗಳ ಪಾಲನೆ ಅತ್ಯಂತ ಅವಶ್ಯವಾಗಿದೆ. ಸ್ವಾತಂತ್ರ್ಯ ಹೋರಾಟದ ಕಾಲಕ್ಕೆ ಮಹಾತ್ಮ ಗಾಂಧೀಜಿ ಅಹಿಂಸಾ ತತ್ವದ ಮೂಲಕವೇ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು ಎಂದು ನೆನೆಪಿಸಿದರು.
ಭಾರತ ಧರ್ಮಗಳ ದೇಶವಾಗಿದೆ. ಜೈನ ಮುನಿಗಳು ತುಮಕೂರು ನಗರಕ್ಕೆ ಆಗಮಿಸಿದ್ದು ಸಂಮೃದ್ಧಿಯ ಸಂಕೇತವಾಗಿದೆ. ಗುರುಗಳ ಆಶೀರ್ವದ ಮತ್ತು ಅಹಿಂಸಾ ಯಾತ್ರೆಯ ಧರ್ಮ ಸಂದೇಶಗಳು ಇಂದಿನ ಜನರಿಗೆ ಪ್ರಸ್ತುತವಾಗಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್.ರೇವಣ್ಣ, ಹಿರಿಯ ಮುಖಂಡರಾದ ರೇವಣ ಸಿದ್ಧಯ್ಯ, ನಟರಾಜು, ಮರಿಚನ್ನಮ್ಮ, ಸೇವಾದಳದ ಶಿವಪ್ರಸಾದ್, ರೋಟರಿ ಅಧ್ಯಕ್ಷ ಬಸವರಾಜ್ ಹಿರೇಮಠ್, ನರಸಿಂಹಮೂರ್ತಿ, ವೈ.ಎ.ನಾಗರಾಜ್, ಪದ್ಮಪ್ರಸಾದ್, ಮಂಜುನಾಥ್, ಎಸ್.ವಿ.ಗೀತ ಮುಂತಾದವರು ಭಾಗವಹಿಸಿದ್ದರು.