ತುಮಕೂರುರಾಜಕೀಯರಾಜ್ಯಸುದ್ದಿ

ನರೇಂದ್ರ ಮೋದಿ ಹುಟ್ಟು ಹಬ್ಬ : ರೈತರು ಮತ್ತು ನಿವೃತ್ತ ಸೈನಿಕರಿಗೆ ಸನ್ಮಾನ

ತುಮಕೂರು: ನಗರದ ಶೆಟ್ಟಿಹಳ್ಳಿ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಬಿಜೆಪಿ ನಗರ ರೈತಮೋರ್ಚಾ ವತಿಯಿಂದ ಶುಕ್ರವಾರ ಪ್ರದಾನಿ ನರೇಂದ್ರ ಮೋದಿಯವರ ಜನ್ಮದಿನಾಚರಣೆಯನ್ನು ಗೋಪೂಜೆ ನೆರವೇರಿಸಿ, ಪ್ರಗತಿಪರ ರೈತರು ಮತ್ತು ನಿವೃತ್ತ ಸೈನಿಕರನ್ನು ಸನ್ಮಾನಿಸುವ ಮೂಲಕ ವಿಶೇಷವಾಗಿ ಆಚರಿಸಿದರು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಸದ ಜಿ.ಎಸ್. ಬಸವರಾಜು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ಹುಟ್ಟಿದ್ದು ಸೆ.17, 1950ರಂದು ವಡೋದರಾದಲ್ಲಿ. 1972ರಲ್ಲಿ ಆರ್‌ಎಸ್‌ಎಸ್ ಸೇರುವ ಮೂಲಕ ರಾಜಕೀಯ ಜೀವನ ಪ್ರಾರಂಭಿಸಿದರು. ನಂತರ 1987ರಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. 1995ರಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನೇಮಕವಾದರು ಮತ್ತು 1998ರಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ಅಲಂಕರಿಸಿದರು ಎಂದರು.
2001ರಲ್ಲಿ ಮೊದಲ ಬಾರಿಗೆ ಗುಜರಾತ್ ಮುಖ್ಯಮಂತ್ರಿಯಾದ ಅವರು, ನಂತರ ಮೂರು ಅವಧಿಗೆ ಗುಜರಾತ್ ಜನಪ್ರಿಯ ಮುಖ್ಯಮಂತ್ರಿಯಾಗಿ ಹೊರಹೊಮ್ಮಿದರು. 2014ರ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಗೆದ್ದರೆ ಮೋದಿಯವರೇ ಪ್ರಧಾನಿ ಅಭ್ಯರ್ಥಿ ಎಂದು 2013ರಲ್ಲಿ ಬಿಜೆಪಿ ಘೋಷಿಸಿತ್ತು. ಅದರಂತೆ 2014ರಲ್ಲಿ ಭರ್ಜರಿ ಗೆಲುವಿನೊಂದಿಗೆ ಪ್ರಧಾನಿ ಹುದ್ದೆಗೆ ಏರಿದ ನರೇಂದ್ರ ಮೋದಿಯವರು ಇದೀಗ 2019ರಲ್ಲೂ ಮತ್ತೆ ಪ್ರಧಾನಿ ಗದ್ದುಗೆಗೆ ಏರಿ ದೇಶದ ಜನತೆಗೆ ವಿವಿಧ ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಎಂದು ಹೇಳಿದರು.
ದೇಶದ ಅರ್ಥಿಕವ್ಯವಸ್ಥೆಯಲ್ಲಿ ಜನಸಾಮಾನ್ಯನೂ ಸೇರ್ಪಡೆಗೊಂಡು ನೇರವಾಗಿ ಪಾಲ್ಗೊಳ್ಳುವಂತೆ ಮಾಡಿದ `ಪ್ರಧಾನ ಮಂತ್ರಿ ಜನ್ ಧನ್ ಯೋಜನಾ’ ದೇಶದ ಅರ್ಥ ವ್ಯವಸ್ಥೆ ಬದಲಾವಣೆಯ ನೂತನ ಮೈಲುಗಲ್ಲಾಗಿದೆ. ದೇಶದಲ್ಲಿ ಕೈಗಾರಿಕಾ ಕ್ರಾಂತಿಯಾಗಲು `ಮೇಕ್ ಇನ್ ಇಂಡಿಯ’ ಯೋಜನೆ ಮೂಲಕ ಸುಲಭವಾಗಿ ವ್ಯವಹಾರ ನಡೆಸಲು ಸಾಧ್ಯವಾಗುವಂತಹ ಉತ್ತಮ ವಾಣಿಜ್ಯ ವಾತಾವರಣ ಕಲ್ಪಿಸಿಕೊಡುತ್ತೇವೆ ಎಂದು ವಿದೇಶಿ ಹೂಡಿಕೆದಾರರಿಗೆ ಹಾಗೂ ಉದ್ಯಮಿಗಳಿಗೆ ನೀಡಿದ ಆಹ್ವಾನ ಅತ್ಯಂತ ಯಶಸ್ವಿಯಾಯಿತು. ಕಾರ್ಮಿಕ ನೀತಿ ಸುಧಾರಣೆ ಹಾಗೂ ಕಾರ್ಮಿಕ ಘನತೆ ಹೆಚ್ಚಿಸುವ ಶ್ರಮ ಏವ ಜಯತೆ ಯೋಜನೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ತಮ್ಮಲ್ಲಿ ಯುವ ಜನತೆಯ ಕೌಶಲ್ಯ ಸಂಪನ್ಮೂಲವನ್ನು ಕಾಯ್ದುಕೊಳ್ಳಲು ಸಹಕಾರಿಯಾಯಿತು ಎಂದು ತಿಳಿಸಿದರು.
ರೈತರಿಗಾಗಿ ಕಿಸಾನ್ ಸಮ್ಮಾನ್ ಯೋಜನೆ ಜಾರಿಗೆ ತಂದು ಪ್ರತಿ ವರ್ಷ ರೈತರ ಖಾತೆಗೆ ಮೂರು ಕಂತುಗಳಲ್ಲಿ 6 ಸಾವಿರ ರೂ. ನೇರವಾಗಿ ಹಾಕಲಾಗುತ್ತಿದೆ. ರೈತರ ಆರ್ಥಿಕತೆ ದ್ವಿಗುಣಗೊಳ್ಳಲು ಅನೇಕ ಯೋಜನೆಗಳನ್ನು ಜಾರಿಗೆ ತಂದ ಕೀರ್ತಿ ಪ್ರದಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ ಎಂದರು.
ರೈತಮೋರ್ಚಾ ರಾಜ್ಯ ಪ್ರದಾನ ಕಾರ್ಯದರ್ಶಿ ಎಸ್.ಶಿವಪ್ರಸಾದ್ ಮಾತನಾಡಿ, ಜನಸಾಮಾನ್ಯನಿಗಾಗಿ ಪ್ರಪ್ರಥಮವಾಗಿ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಮೂರು ಸಾಮಾಜಿಕ ಭದ್ರತೆಯ ಯೋಜನೆಗಳನ್ನು ಪ್ರಾರಂಭಿಸಿದೆ. ಹಿರಿಯರಿಗೆ ನಿವೃತ್ತಿ ವೇತನ ಮತ್ತು ಬಡವರಿಗೆ ವಿಮಾ ರಕ್ಷಣೆಯ ಯೋಜನೆಗಳಲ್ಲಿ ಗಮನ ಕೇಂದ್ರೀಕರಿಸುವ ಮೂಲಕ ಜನಪರ ಕಾಳಜಿ ಎತ್ತಿ ಹಿಡಿದಿದೆ. ನೂತನ ತಂತ್ರಜ್ಞಾನದ ಅಳವಡಿಕೆ ಮೂಲಕ ಭಾರತೀಯರ ಜೀವನದಲ್ಲಿ ಮಹತ್ತರ ಹಾಗೂ ಪರಿಣಾಮಕಾರಿ ಬದಲಾವಣೆ ತರುವ ಸದುದ್ಧೇಶದಿಂದ ಡಿಜಿಟಲ್ ಇಂಡಿಯ ಮಿಷನ್ ಯೋಜನೆಯನ್ನು ಅನಾವರಣಗೊಳಿಸಿದ್ದಾರೆ ಎಂದರು.
ದೇಶದಾಧ್ಯಂತ ಸ್ವಚ್ಛತೆಯ ಕ್ರಾಂತಿ ಮೂಡಿಸುವ ಸಾಮೂಹಿಕ ಜನಾಂದೋಲನದ ಉದ್ದೇಶದಿಂದ ಸ್ವಚ್ಛ ಭಾರತ್ ಮಿಷನ್ ಯೋಜನೆಯನ್ನು ಮಹಾತ್ಮ ಗಾಂಧಿಯವರ ಜನ್ಮದಿನವಾದ ಅ.2, 2014ರಂದು ಪ್ರಾರಂಭಿಸಿದರು. ಜನಮನಗೆದ್ದ ಈ ಪರಿಣಾಮಕಾರಿ ಯೋಜನೆಯ ವಿಸ್ತಾರ ಹಾಗೂ ಪ್ರಭಾವ ಅಮೂಲ್ಯವಾದುದು ಹಾಗೂ ಇದು ಐತಿಹಾಸಿಕ ಆಂದೋಲನವಾಗಿ ಗುರುತಿಸಲ್ಪಟ್ಟಿತು ಎಂದು ಹೇಳಿದರು.
ನಗರ ರೈತಮೋರ್ಚಾ ಅಧ್ಯಕ್ಷ ಸತ್ಯಮಂಗಲ ಜಗದೀಶ್ ಮಾತನಾಡಿ, ಕಳೆದ ಏಳೂವರೆ ವರ್ಷಗಳಲ್ಲಿ ಪ್ರದಾನಿ ನರೇಂದ್ರ ಮೋದಿಯವರು ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದು ದೇಶದ ಆರ್ಥಿಕ ಬಿಕ್ಕಟ್ಟು ಬಗೆಹರಿಸಿ, ಇತರೆ ದೇಶಗಳಿಗಿಂತ ಭಾರತ ಯಾವುದರಲ್ಲೂ ಕಮ್ಮಿಯಿಲ್ಲ ಎಂಬುದನ್ನು ತೋರಿಸಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಾನಗರಪಾಲಿಕೆ ಮೇಯರ್ ಬಿ.ಜಿ.ಕೃಷ್ಣಪ್ಪ, ನಗರ ರೈತಮೋರ್ಚಾ ಅಧ್ಯಕ್ಷ ಸತ್ಯಮಂಗಲ ಜಗದೀಶ್, ಜಿಲ್ಲಾ ರೈತಮೋರ್ಚಾ ಉಪಾಧ್ಯಕ್ಷ ತರಕಾರಿ ಮಹೇಶ್, ರಾಜ್ಯ ಕರ‍್ಯಕಾರಿಣಿ ಸದಸ್ಯ ಸ್ನೇಕ್ ನಂದೀಶ್, ಡಾ.ಎಂ.ಆರ್.ಹುಲಿನಾಯ್ಕರ್, ರುದ್ರೇಶ್, ಪ್ರೇಮಾ ಹೆಗ್ಡೆ, ಜ್ಯೋತಿ, ಸುಜಾತ ಚಂದ್ರಶೇಖರ್, ಯುವಮೋರ್ಚಾ ನಗರಾಧ್ಯಕ್ಷ ಹನುಮಂತರಾಜು, ಪ್ರಧಾನ ಕಾರ್ಯದರ್ಶಿ ಗಣೇಶ್ ಜಿ.ಪ್ರಸಾದ್, ಟಿ.ಆರ್.ಸದಾಶಿವಯ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker