1 ಸಾವಿರ ಕರುಗಳಿಗೆ ಕಂದು ರೋಗ ಲಸಿಕೆ : ಡಾ.ರ.ಮ.ನಾಗಭೂಷಣ್
ಹುಳಿಯಾರು: ಜಾನುವಾರುಗಳನ್ನು ಬಾಧಿಸುವ ಕಂದು ರೋಗಕ್ಕೆ ತಾಲೂಕಿನಾದ್ಯಂತ ಪಶು ಆಸ್ಪತ್ರೆಗಳಲ್ಲಿ ಚುಚ್ಚುಮದ್ದು ಹಾಕಲಾಗುತ್ತಿದ್ದು ಸಾಕಣೆದಾರರು ನಿರ್ಲಕ್ಷಿಸದೆ ಲಸಿಕೆ ಹಾಕಿಸಿ ಎಂದು ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ.ರ.ಮ.ನಾಗಭೂಷಣ್ ತಿಳಿಸಿದರು.
ಹುಳಿಯಾರಿನಲ್ಲಿ ಮಂಗಳವಾರ ಕರುಗಳಿಗೆ ಉಚಿತವಾಗಿ ಲಸಿಕೆ ಹಾಕಿ ಅವರು ಮಾತನಾಡಿ ಕಂದು ರೋಗ ಮಾರಕ ರೋಗವಾಗಿದ್ದು ಹಸು, ಎಮ್ಮೆ, ಸೇರಿದಂತೆ ವಿವಿಧ ಪ್ರಾಣಿಗಳಲ್ಲಿ ಕಂಡು ಬರುತ್ತದೆ. ಈಗ ಪಶು ಇಲಾಖೆಯಿಂದ ತಾಲೂಕಿನ ಎಲ್ಲಾ ಪಶು ಆಸ್ಪತ್ರೆಗಳಲ್ಲಿ ಆಕಳು, ಎಮ್ಮೆಗಳ 4 ರಿಂದ 8 ತಿಂಗಳ ಹೆಣ್ಣು ಕರುಗಳಿಗೆ ಉಚಿತವಾಗಿ ಲಸಿಕೆ ಹಾಕಲಾಗುತ್ತಿದ್ದು ಇಲ್ಲಿಯವರೆವಿಗೆ 976 ಆಕಳು ಹಾಗೂ 85 ಎಮ್ಮೆ ಕರುಗಳಿಗೆ ಲಸಿಕೆ ಹಾಕಲಾಗಿದೆ ಎಂಬ ಮಾಹಿತಿ ನೀಡಿದರು.
ಜಾನುವಾರುಗಳಲ್ಲಿ ಕಂಡು ಬರುವ ಕಂದು ರೋಗವು ವೇಗವಾಗಿ ಹರಡುವ, ವಿಪರೀತ ಆರ್ಥಿಕ ನಷ್ಟ ಉಂಟು ಮಾಡುವ ಪ್ರಾಣಿಜನ್ಯ ರೋಗವಾಗಿದೆ. ಈ ರೋಗ ಬಂದಿರುವ ಹಸು, ಎಮ್ಮೆಗಳಲ್ಲಿ ಗರ್ಭಪಾತ, ಸತ್ತೆ ಬೀಳುವುದು, ಸಂತಾನೋತ್ಪತ್ತಿಯ ಅಸಮರ್ಥನೆ ಮುಂತಾದ ತೊಂದರೆಗಳಾಗುತ್ತವೆ. ಅಲ್ಲದೆ ಸೋಂಕಿತ ಜಾನುವಾರುಗಳ ಹಾಲು ಹಾಗೂ ಹಾಲಿನ ಉತ್ಪನ್ನ ಸೆವನೆಯಿಂದ ರೋಗ ಹರಡುತ್ತದೆ ಎಂದು ಎಚ್ಚರಿಸಿದರು.
ಈ ರೋಗಕ್ಕೆ ಪರಿಣಾಮಕಾರಿಯಾದ ಚಿಕಿತ್ಸೆ ಇಲ್ಲದಿದ್ದರೂ 4-8 ತಿಂಗಳ ಹೆಣ್ಣು ಕರುಗಳಿಗೆ ಲಸಿಕೆ ಮಾಡಿದಲ್ಲಿ ಅದರ ಜೀವನ ಪೂರ್ತಿ ರೋಗ ನಿರೋಧಕ ಶಕ್ತಿ ಪಡೆಯುತ್ತದೆ. ಹಾಗಾಗಿ ಎಲ್ಲ ಸಾಕಾಣಿಕೆದಾರರೂ ತಮ್ಮ ಹೆಣ್ಣು ಕರುಗಳಿಗೆ ಲಸಿಕೆ ಹಾಕಿಸಿ ಪ್ರಾಣಿಗಳಿಗೆ ರೋಗ ಹರಡುವುದನ್ನು ತಡೆಯಬಹುದು. ಅಲ್ಲದೆ ಮುಂದಿನ ದಿನಗಳಲ್ಲಿ ಹಸುಗಳಿಂದ ಹೆಚ್ಚು ಹಾಲು ನಿರೀಕ್ಷಿಸಬಹುದು. ಮಳೆಗಾಲದಲ್ಲಿ ತಗುಲುವ ಹತ್ತಾರು ಬಾಧೆಗಳನ್ನು ನಿಯಂತ್ರಿಸಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಪಶುವೈದ್ಯಾಧಿಕಾರಿಗಳಾದ ಡಾ.ಹೆಚ್.ಟಿ.ಮಂಜುನಾಥ, ಗಾಣದಾಳು ಪಶುವೈದ್ಯಾಧಿಕಾರಿಗಳಾದ ಡಾ.ಯೋಗೇಶ್, ಹೊಯ್ಸಳಕಟ್ಟೆ ಪಶುವೈದ್ಯಾಧಿಕಾರಿಗಳಾದ ಡಾ.ಕಾವ್ಯ, ಪಶುಪರೀಕ್ಷಕರಾದ ವೆಂಕಟಪ್ಪ, ಪಶುವೈದ್ಯ ಸಹಾಯಕರಾದ ಚಂದ್ರಶೇಖರ್, ಸಿಬ್ಬಂಧಿಗಳಾದ ಕಿರಣ್, ಕುಮಾರಯ್ಯ, ಮಹೇಶ್, ಚೇತನ್, ಅತಾವುಲ್ಲಾ, ದಯಾನಂದ, ಭಾಸ್ಕರ, ಗಜೇಂದ್ರ, ತ್ರಿವೇಣಿ, ಕಾಮಾಕ್ಷಿ, ಉಪಸ್ಥಿತರಿದ್ದರು.