ಈಜು ಬಾರದೇ ಕೆರೆಯಲ್ಲಿ ಮುಳುಗಿ ಓರ್ವ ನೀರುಪಾಲು : ವ್ಯಕ್ತಿಯ ಪತ್ತೆಗೆ ತೀವ್ರ ಶೋಧ
ಗುಬ್ಬಿ: ತಾಲ್ಲೂಕಿನ ಕಸಬ ಹೋಬಳಿ ಜಿ.ಹೊಸಹಳ್ಳಿ ಗ್ರಾಮದ ಕೆರೆಯಲ್ಲಿ ಈಜಲು ಹೋದ ಶಿರಾ ಮೂಲದ ನಾಲ್ವರ ಪೈಕಿ ಓರ್ವ ವ್ಯಕ್ತಿ ಈಜು ಬಾರದೇ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಶಂಕೆಯಲ್ಲಿ ಮೃತದೇಹಕ್ಕಾಗಿ ತೀವ್ರ ಶೋಧ ನಡೆಯುತ್ತಿರುವ ಘಟನೆ ಸೋಮವಾರ ಸಂಜೆ ನಡೆದಿದೆ.
ಜಿ.ಹೊಸಹಳ್ಳಿ ಗ್ರಾಮದ ಕೆರೆಯಲ್ಲಿ ಮದ್ಯಾಹ್ನ 4 ಗಂಟೆ ಸಮಯದಲ್ಲಿ ಈಜಲು ಹೋದ ನಾಲ್ಕು ಜನರ ಪೈಕಿ ಒಬ್ಬನಿಗೆ ಈಜು ಬಾರದೇ ನೀರಿನಲ್ಲಿ ಮುಳುಗಿರುವ ಬಗ್ಗೆ ತಿಳಿದು ಬಂದಿದ್ದು. ನಾಪತ್ತೆಯಾದ ವ್ಯಕ್ತಿಯನ್ನು ರಾಕೇಶ್(28) ಎಂದು ಹೇಳಲಾಗಿದೆ. ವ್ಯಕ್ತಿಯ ಪತ್ತೆಗೆ ಪೊಲೀಸರು ಮತ್ತು ಅಗ್ನಿ ಶಾಮಕ ದಳ ಹಾಗೂ ಮುಳುಗು ತಜ್ಞರು ತೀವ್ರ ಹುಡುಕಾಟ ನಡೆಸಿದ್ದು;ಇನ್ನೂ ವ್ಯಕ್ತಿಯ ಸುಳಿವು ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.
ಜಿ.ಹೊಸಹಳ್ಳಿ ಗ್ರಾಮದಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜಲ ಜೀವನ್ ಮಿಷನ್ ಯೋಜನೆಯಡಿ ಕಾಮಗಾರಿ ಕೆಲಸ ಮಾಡಲು ಶಿರಾ ಮೂಲದ ಕೂಲಿ ಕಾರ್ಮಿಕರು ಬಂದಿದ್ದು ಇವರ ಪೈಕಿ ನಾಲ್ವರು ಕೆರೆಯಲ್ಲಿ ಈಜಲು ಹೋಗಿದ್ದ ಸಂದರ್ಭದಲ್ಲಿ ರಾಕೇಶ್ ಈಜು ಬಾರದೇ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿರುವ ಬಗ್ಗೆ ತಿಳಿದು ಬಂದಿದೆ.
ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಮತ್ತು ಮುಳುಗು ತಜ್ಞರು ಭೇಟಿ ನೀಡಿ ತೀವ್ರ ಶೋಧ ನಡೆಸಿದ್ದಾರೆ. ಸ್ಥಳಕ್ಕೆ ಗುಬ್ಬಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.