ಮಧುಗಿರಿ : ಉಪಕಾರಗೃಹದಲ್ಲಿ ಬಂಧಿತರಾಗಿರುವ ಆರೋಪಿಗಳ ಸಂದರ್ಶನಕ್ಕಾಗಿ ಬರುತ್ತಿದ್ದಂತಹ ಸಂಬಂಧಿಗಳಿಂದ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದ ಜೈಲರ್ ರೊಬ್ಬರನ್ನು ಲೋಕಾಯುಕ್ತ ಪೊಲೀಸರು ಹಣದ ಸಮೇತ ಬಂಧಿಸಿರುವ ಘಟನೆ ಮಂಗಳವಾರ ನಡೆದಿದೆ.
ಕೊಲೆ ಆರೋಪ ಎದುರಿಸುತ್ತಿರುವ ಸಿರಾ ಪಟ್ಟಣದ ವಾಸಿ ಅರ್ಬಾಜ್ ಎನ್ನುವ ಆರೋಪಿಯು ಮಧುಗಿರಿ ಉಪಕಾರಗೃಹದಲ್ಲಿದ್ದು ಇತನನ್ನು ನೋಡಲು ಮನೆಯವರು ಆಗಾಗ ಕಾರಗೃಹಕ್ಕೆ ಬರುತ್ತಿದ್ದರು. ಜೈಲರ್ ದೇವೇಂದ್ರ ಆರ್ ಕೋಣಿ ಈ ಮೊದಲು 10000 ರೂ ಲಂಚಕ್ಕೆ ಬೇಡಿಕೆ ಇಟ್ಟು 5, 000 ರೂಗಳನ್ನು ಪಡೆಯುವಾಗ ಲೋಕಾಯುಕ್ತ ಪೊಲೀಸರು ಬೀಸಿದ ಬಲೆಗೆ ಸಿಲುಕಿದ್ದಾರೆ.
ಕೊಲೆಯ ಆರೋಪಿಯ ಸಂಬಂಧಿ ಬಂದಾಗಲೆಲ್ಲ ಜೈಲರ್ ಅವರುಗಳಿಗೆ ರೂ.1500 ರಿಂದ 2,000ರೂ ಗಳಿಗೆ ಬೇಡಿಕೆಯಿಟ್ಟು ಕೊಡದಿದ್ದರೆ ತುಮಕೂರು ಜೈಲಿಗೆ ಕಳುಹಿಸುವುದಾಗಿ ಹೇಳುತ್ತಿದ್ದರೆನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಲೋಕಾಯುಕ್ತ ಪೊಲೀಸರು ಮುಂದಿನ ಕಾನೂನು ಕ್ರಮ ಜರುಗಿಸುತ್ತಿದ್ದಾರೆ.
ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಎಸ್ ಪಿ ವಲಿ ಭಾಷಾ ನೇತೃತ್ವದಲ್ಲಿ ಡಿ ವೈ ಎಸ್ ಪಿ ಗಳಾದ ಮಂಜುನಾಥ್ , ಹರೀಶ್ , ಪಿ ಎಸ್ ಐ ಸತ್ಯನಾರಾಯಣ , ಸಲೀಂ , ರಾಮರೆಡ್ಡಿ , ಶಿವರುದ್ರಪ್ಪ , ಮೇಟಿ , ಬೇಬಿರಾಣಿ ರವರುಗಳು ಇದ್ದರು.