ಸುಪ್ರಿಂ ಕೋರ್ಟಿನ ಆದೇಶ ಉಲ್ಲಂಘಿಸಿ ಅವೈಜ್ಞಾನಿಕ ಮೀಸಲಾತಿ ಹಂಚಿಕೆ : ಪರಿಶಿಷ್ಟ ಜಾತಿ ಮತ್ತು ವರ್ಗಗಳ ಆಯೋಗದ ಕಾರ್ಯದರ್ಶಿಗಳ ವಿರುದ್ದ ನ್ಯಾಯಾಂಗ ನಿಂದನೆ ದೂರು : ಬಿ.ಎಸ್.ಪ್ರಸನ್ನಕುಮಾರ್
ತುಮಕೂರು : ಸುಪ್ರಿಂ ಕೋರ್ಟಿನ ಆದೇಶವನ್ನು ಉಲ್ಲಂಘನೆ ಮಾಡಿ,ಅವೈಜ್ಞಾನಿಕವಾಗಿ ಮೀಸಲಾತಿ ಹಂಚಿಕೆ ಮಾಡಿರುವ ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ರಾಷ್ಟ್ರೀಯ ಅನುಸೂಚಿತ ಜಾತಿ ಮತ್ತು ವರ್ಗಗಳ ಆಯೋಗದ ಕಾರ್ಯದರ್ಶಿಗಳ ವಿರುದ್ದ ನ್ಯಾಯಾಂಗ ನಿಂದನೆ ದೂರು ಸಲ್ಲಿಸಲಾಗುವುದು ಎಂದು ಡಾ.ಅಂಬೇಡ್ಕರ್ ಪರಿಶಿಷ್ಟ ಜಾತಿಗಳ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಬಿ.ಎಸ್.ಪ್ರಸನ್ನಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,2019ರ ಮೇ.14 ರಂದು ನಾನು ಮತ್ತು ಕೆಲ ವಕೀಲ ಮಿತ್ರರು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಅಸ್ಪಷ್ಯತೆಯ ನೋವು ಅನುಭವಿಸದ,ಲಂಬಾಣಿ, ಬೋವಿ,ಕೊರಮ,ಕೊರಚ ಎಂಬ ಹಿಂದುಳಿದ ವರ್ಗಗಳಿಗೆ ಸೇರಿದ ಕೆಲ ಜಾತಿಗಳು ಸೇರಿದ್ದು, ಅವುಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡುವಂತೆ ಸುಮಾರು 2000 ಪುಟಗಳ ದಾಖಲೆಗಳೊಂದಿಗೆ ಮನವಿ ಸಲ್ಲಿಸಿದ್ದ ಹಿನ್ನೇಲೆಯಲ್ಲಿ 14-02-2020ರಂದು ಸುಪ್ರಿಂಕೋರ್ಟು ಓಬಿಸಿ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡಲು ರಾಷ್ಟ್ರೀಯಎಸ್ಸಿ,ಎಸ್ಟಿ ಆಯೋಗಕ್ಕೆ ನೀಡಲು ಸೂಚಿಸಿದ ಹಿನ್ನೇಲೆಯಲ್ಲಿ 27-02-2020ರಂದು ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದು,ಸದರಿ ವಿಚಾರವಾಗಿ ಶೀಘ್ರವೇ ಕ್ರಮ ಕೈಗೊಂಡು ಶಿಫಾರಸ್ಸು ಕಳುಹಿಸುವಂತೆ 12-03-2020ರಂದು ಕರ್ನಾಟಕ ಸರಕಾರಕ್ಕೆ ಪತ್ರ ಬರೆದಿದ್ದರು. ಆದರೆ ಕರ್ನಾಟಕ ಸರಕಾರ ಅಸ್ಪೃಷ್ಯತೆಯ ನೋವು ಅನುಭವಿಸದ ಕೋರಮ, ಕೊರಚ, ಲಂಬಾಣಿ ಮತ್ತು ಭೋಮಿ ಸಮುದಾಯಗಳನ್ನು ಕೈಬಿಡುವ ಬದಲು, ಇದ್ದ ಮೀಸಲಾತಿಯನ್ನೆ ಹಂಚಿಕೆ ಮಾಡಿ,ಕೇಂದ್ರಕ್ಕೆ ಶಿಫಾರಸ್ಸು ಮಾಡಿರುವುದು ಸಂವಿಧಾನ ಬಾಹಿರ ಮತ್ತು ಸುಪ್ರಿಂಕೋರ್ಟಿನ ಉಲ್ಲಂಘನೆಯಾಗಿದೆ.ಹಾಗಾಗಿ ರಾಜ್ಯ ಸರಕಾರ ಮತ್ತು ಆಯೋಗದ ವಿರುದ್ದ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗುವುದೆಂದರು.
ಕೇಂದ್ರದ ಸಾಮಾಜಿಕ ನ್ಯಾಯ ಸಬಲೀಕರಣ ಸಚಿವಾಲವಯೇ 2007ರ ಫೆಬ್ರವರಿ 03 ರಂದು ಆರ್.ಟಿ.ಐ ಅರ್ಜಿಗೆ ನೀಡಿರುವ ಹಿಂಬರಹದಲ್ಲಿ ಅರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವುದರ ಜೊತೆಗೆ, ಅಸ್ಪೃಷ್ಯತೆಯನ್ನು ಅನುಭವಿಸುತ್ತಿರುವ ಸಮುದಾಯಗಳು ಮಾತ್ರ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರಬೇಕು ಎಂದು ಸ್ಪಷ್ಟವಾಗಿ ಹೇಳಿದೆ. ಆದರೆ ಅರ್ಥಿಕವಾಗಿ, ಸಾಮಾಜಿಕವಾಗಿ ಮೇಲಸ್ತರದಲ್ಲಿಯೇ ಇರುವ ಲಂಬಾಣಿ,ಬೋವಿ,ಕೊರಮ,ಕೊರಚ ಜನಾಂಗವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಿ,ಸಂವಿಧಾನದ ಕಲಂ 341 ಕ್ಲಾಸ್ 1-2 ನ್ನು ಉಲ್ಲಂಘಿಸಿರುವ ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿಗಳು ಮತ್ತು ರಾಷ್ಟ್ರೀಯ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಆಯೋಗದ ಕಾರ್ಯದರ್ಶಿಗಳ ವಿರುದ್ದ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುವುದು ಅನಿವಾರ್ಯವಾಗಿದೆ. ಇದು ಯಾರ ವಿರುದ್ದವೂ ನಮ್ಮ ಹೋರಾಟವಲ್ಲ. ಇದು ನಮ್ಮ ಹಕ್ಕಿಗಾಗಿ ಮಾತ್ರ ಹೋರಾಟ ಎಂದು ಬಿ.ಎಸ್.ಪ್ರಸನ್ನಕುಮಾರ್ ತಿಳಿಸಿದರು.
ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಸಂವಿಧಾನ ವಿರೋಧಿ ಕೆಲಸಗಳನ್ನು ಮಾಡಿಕೊಂಡೇ ಬರುತ್ತಿದೆ.ಪರಿಶಿಷ್ಟ ಜಾತಿ ಪಟ್ಟಿಗೆ ಹಿಂದುಳಿದ ವರ್ಗಗಳ ಜಾತಿಗಳನ್ನು ಸೇರಿಸುವುದು ಸಂವಿಧಾನದ ಅನುಚೇದ 141 ಮತ್ತು 144ರ ಸ್ಪಷ್ಟ ಉಲ್ಲಂಘನೆಯಾಗಿದೆ.ಚುನಾವಣೆ ಗಿಮಿಕ್ ಆಗಿ ಕೈಗೊಂಡಿರುವ ಮೀಸಲಾತಿ ಹಂಚಿಕೆಗೆ ಮರಳಾಗಿ ಪರಿಶಿಷ್ಟ ಜಾತಿಯಲ್ಲಿರುವ ಸಮುದಾಯಗಳು ಬಿಜೆಪಿಗೆ ಮತ ನೀಡಿದರೆ,ಭವಿಷ್ಯದಲ್ಲಿ ನಮ್ಮ ಮಕ್ಕಳಿಗೆ ದೊರೆಯುವ ಸರಕಾರಿ ಸವಲತ್ತುಗಳಿಗೆ ನಾವೇ ಕಲ್ಲು ಹಾಕಿದಂತೆ ಎಂದು ಬಿ.ಎಸ್.ಪ್ರಸನ್ನಕುಮಾರ್ ಎಚ್ಚರಿಸಿದರು.
ಕೆಲ ಮಾಧ್ಯಮಗಳು ಮೀಸಲಾತಿ ಹೋರಾಟದ ಸರಿಯಾದ ತಿಳುವಳಿಕೆಯಿಲ್ಲದೆ, ಪರಿಶಿಷ್ಟ ಜಾತಿ ಪಟ್ಟಿಯಿಂದ ಲಂಬಾಣಿ, ಕೊರಮ, ಕೊರಚ,ಭೋವಿ ಸಮುದಾಯಗಳನ್ನು ತೆಗೆಯಲು ಸಾಧ್ಯವಿಲ್ಲ ಎಂಬ ಮಾತುಗಳನ್ನಾಡಿದ್ದಾರೆ. ಇದು ಸರಿಯಲ್ಲ. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಮಾಧ್ಯಮಗಳು ಈ ರೀತಿಯ ಹೇಳಿಕೆ ನೀಡುವ ಮೊದಲು ಈ ಹಿಂದಿನ ನ್ಯಾಯಾಲಯದ ನಡಾವಳಿಗಳನ್ನು ಓದಿಕೊಳ್ಳುವುದು ಒಳ್ಳೆಯದು. ಜನರಿಗೆ ಸತ್ಯ ಹೇಳಬೇಕಾದ ಮಾಧ್ಯಮಗಳೇ ಜನರಿಗೆ ಸುಳ್ಳು ಹೇಳಿ ತಪ್ಪು ದಾರಿಗೆ ಎಳೆಯುವುದು ಸರಿಯಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಡಾ.ಅಂಬೇಡ್ಕರ್ ಪರಿಶಿಷ್ಟ ಜಾತಿ ಒಕ್ಕೂಟಗಳ ಜಿಲ್ಲಾ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಉಪಸ್ಥಿತರಿದ್ದರು.