ಅಂತರಾಷ್ಟ್ರೀಯಕೊರಟಗೆರೆತುಮಕೂರು

ಸಿದ್ಧರಬೆಟ್ಟದ ತಪ್ಪಲಿನಲ್ಲಿ 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ

ತುಮಕೂರು : ಹಸಿರಿನ ವನಸಿರಿಯ ನಡುವೆ ಹಕ್ಕಿಗಳ ಕಲರವದೊಂದಿಗೆ ಸೂರ್ಯನ ಮೊದಲ ರಶ್ಮಿ ಭೂರಮೆಗೆ ಮುತ್ತಿಕ್ಕುವ ಸಮಯದಲ್ಲಿ ಸುಕ್ಷೇತ್ರ ಸಿದ್ಧರಬೆಟ್ಟದ ತಪ್ಪಲಲ್ಲಿ ಓಂಕಾರದಿಂದ ಪ್ರಾರಂಭವಾದ ಸಾಮೂಹಿಕ ಯೋಗಾಭ್ಯಾಸ ಎಲ್ಲರಲ್ಲೂ ನವಚೈತನ್ಯ ತಂದುಕೊಟ್ಟಿತು.
ಜಿಲ್ಲೆಯ ಕೊರಟಗೆರೆ ತಾಲೂಕು ಸುಕ್ಷೇತ್ರ ಸಿದ್ಧರಬೆಟ್ಟದ ಶ್ರೀ ರಂಭಾಪುರಿ ಖಾಸಾ ಶಾಖಾ ಮಠದ ಆವರಣದಲ್ಲಿ ಮಂಗಳವಾರ ಬೆಳಗಿನ ಜಾವ ಶ್ರೀ ಕ್ಷೇತ್ರದ ಶ್ರೀ ಶ್ರೀ ಶ್ರೀ ವೀರಭದ್ರ ಶಿವಾಚಾರ್ಯಸ್ವಾಮಿಗಳು, ಮಠದ ವಿದ್ಯಾರ್ಥಿಗಳು, ವಿವಿಧ ಅಧಿಕಾರಿಗಳು, ಸಂಘ ಸಂಸ್ಥೆಗಳ ಸದಸ್ಯರು ವಿವಿಧ ಯೋಗಾಸನ, ಪ್ರಾಣಾಯಾಮ ಹಾಗು ಧ್ಯಾನಾಭ್ಯಾಸ ಮಾಡುವ ಮೂಲಕ 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಸಿದ್ಧರಬೆಟ್ಟದ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರದ ವೈದ್ಯಾಧಿಕಾರಿ ಡಾ.ಹೆಚ್.ಬಿ. ಭವ್ಯ ಅವರು ವಿವಿಧ ಆಸನಗಳ ಭಂಗಿಗಳು ಹಾಗೂ ಆಸನಗಳನ್ನು ಅಭ್ಯಾಸ ಮಾಡುವುದರಿಂದಾಗುವ ಪ್ರಯೋಜನಗಳ ಬಗೆ ವಿವರಣೆ ನೀಡಿದರು.
ಕಾರ್ಯಕ್ರಮದಲ್ಲಿ ವಜ್ರಾಸನ, ತಾಡಾಸನ, ವೃಕ್ಷಾಸನ, ಪಾದಹಸ್ತಾಸನ, ಅರ್ಧಚಕ್ರಾಸನ, ತ್ರಿಕೋನಾಸಾನ, ವಕ್ರಾಸನ, ಉಷ್ಟಾçಸನ, ಶಶಾಂಕಾಸನ, ಮಕರಾಸನ, ಶಲಭಾಸನ, ಧನುರಾಸನಗಳಲ್ಲದೆ ನಾಡಿಶುದ್ಧಿ ಹಾಗೂ ಶೀತಳಿ ಪ್ರಾಣಾಯಾಮಗಳನ್ನು ಅಭ್ಯಾಸ ಮಾಡಿಸಲಾಯಿತು. ಈ ಅಭ್ಯಾಸಗಳಿಂದ ದೇಹದಲ್ಲಾಗುವ ಬದಲಾವಣೆಗಳು ಎಲ್ಲರ ಅನುಭವಕ್ಕೆ ಬಂದಿತು.

ಡಾ. ಭವ್ಯ ಮಾತನಾಡಿ ಊಟದ ನಂತರ ಮಾಡುವ ಏಕೈಕ ಆಸನ ವಜ್ರಾಸನದಿಂದ ಅಜೀರ್ಣ ಸಮಸ್ಯೆ; ಮಕರಾಸನದಿಂದ ಉಸಿರಾಟದ ತೊಂದರೆ; ಶಶಾಂಕಾಸನ ಅಭ್ಯಾಸದಿಂದ ರಕ್ತದೊತ್ತಡ ನಿಯಂತ್ರಣ, ಬೆನ್ನಿನ ಸಮಸ್ಯೆ ನಿವಾರಣೆಯಾಗುತ್ತದೆ. ನಾಡಿಶುದ್ಧಿ ಹಾಗೂ ಶೀತಳಿ ಪ್ರಾಣಾಯಾಮ ಅಭ್ಯಾಸದಿಂದ ದೇಹದಲ್ಲಿರುವ 72000 ನಾಡಿಗಳು ಶುದ್ಧಿಯಾಗುತ್ತವೆ. ದೇಹದ ಸಮತೋಲನ ಕಾಯ್ದುಕೊಳ್ಳಬಹುದು. ಮನಸ್ಸು ಶಾಂತಚಿತ್ತತೆಯಿಂದಿರಲು ಸಾಧ್ಯಮಾಡಿಕೊಡುತ್ತದೆ ಎಂದು ಸಲಹ ನೀಡಿದರು.
ಬ್ರಹ್ಮಕುಮಾರಿ ಸಂಸ್ಥೆಯ ಸುಜಾತಕ್ಕ ಅವರು ಧ್ಯಾನಾಭ್ಯಾಸವನ್ನು ಮಾಡಿಸುತ್ತಾ ಧ್ಯಾನ ಮಾಡುವುದರಿಂದ ಮನಸ್ಸಿಗೆ ಏಕಾಗ್ರತೆ, ತಾಳ್ಮೆ, ಸಮಾಧಾನ ತಂದುಕೊಡುವುದಲ್ಲದೆ ಜ್ಞಾನದ ಮಟ್ಟ ಹೆಚ್ಚುತ್ತದೆ ಎಂದರು.
ಯೋಗಾಭ್ಯಾಸದಲ್ಲಿ ವಿವಿಧ ಆಸನಗಳನ್ನು ಅಭ್ಯಾಸ ಮಾಡಿದ ನಂತರ ಮಾತನಾಡಿದ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಮಾತನಾಡುತ್ತಾ, ವಿಶ್ವದಾದ್ಯಂತ ಜೂನ್ 21ರಂದು ಏಕಾಕಾಲಕ್ಕೆ ಯೋಗ ದಿನವನ್ನಾಗಿ ಆಚರಿಸುತ್ತಿದ್ದೇವೆ. ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ನಾವಿಂದು ಆಚರಿಸುತ್ತಿದ್ದು, ಪ್ರಧಾನ ಮಂತ್ರಿ ಮೋದಿಯವರೂ ಸಹ ಮೈಸೂರಿನಲ್ಲಿ ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ ಎಂದರಲ್ಲದೆ ಯೋಗ, ಪ್ರಾಣಾಯಾಮ, ಧ್ಯಾನಕ್ಕೆ ಈ ಸಿದ್ಧರಬೆಟ್ಟ ಕ್ಷೇತ್ರವು ಸೂಕ್ತವಾಗಿದೆ. ಕಳೆದ 8 ವರ್ಷಗಳ ಹಿಂದೆ ಯೋಗವೆಂದರೆ ದೇಹವನ್ನು ದಂಡಿಸುವ ವ್ಯಾಯಾಮವೆಂದು ನಂಬಲಾಗುತ್ತಿತ್ತು. ಆದರೆ ಯೋಗವೆಂದರೆ ಕೇವಲ ವ್ಯಾಯಾಮವಲ್ಲ. ದೇಹಕ್ಕೂ, ಮನಸ್ಸಿಗೂ ಸಮಾಧಾನ ತರುವ ಸಾಧನ. ಯೋಗಾಭ್ಯಾಸ ಮಾಡುವವರು ಉಸಿರಾಟದ ಮೇಲೆ ಗಮನವನ್ನು ಕೇಂದ್ರೀಕರಿಸಿ ಸುಧೀರ್ಘವಾಗಿ, ನಿಧಾನವಾಗಿ, ಕ್ರಮವಾಗಿ ಉಸಿರಾಡಬೇಕು. ಯೋಗ ಸಾಧಕರ ಸಲಹೆಯಿಲ್ಲದೆ ಉಸಿರಾಟದ ಕ್ರಮವಿಲ್ಲದೆ ತಪ್ಪಾಗಿ ಯೋಗಾಭ್ಯಾಸ ಮಾಡಿದರೆ ಅಡ್ಡಪರಿಣಾಗಳುಂಟಾಗುವ ಸಾಧ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ಯೋಗ ತಜ್ಞರ ಸಲಹೆಗಳನ್ನು ಅನುಸರಿಸಿಯೇ ಯೋಗಾಭ್ಯಾಸ ಮಾಡಬೇಕೆಂದರು.
ಯೋಗವನ್ನು ದಿನನಿತ್ಯ ಅಭ್ಯಾಸ ಮಾಡುವುದರಿಂದ ಮನಸ್ಸನ್ನು ಕೇಂದ್ರೀಕರಿಸಬಹುದಲ್ಲದೆ ನೆನಪಿನ ಶಕ್ತಿ ಹೆಚ್ಚುತ್ತದೆ. ಸುಮಾರು 5000 ವರ್ಷಕ್ಕೂ ಹೆಚ್ಚು ಇತಿಹಾಸವಿರುವ ಯೋಗ, ಧ್ಯಾನ, ಪ್ರಾಣಾಯಾಮಕ್ಕೆ ನಮ್ಮ ದೇಶವೇ ಮೂಲ ತವರು. ವಿದೇಶೀಯರೇ ಆಕರ್ಷಿತರಾಗಿ ಯೋಗಾಭ್ಯಾಸದಲ್ಲಿ ತೊಡಗುತ್ತಿರುವಾಗ ನಾವೇಕೆ ಅಭ್ಯಾಸ ಮಾಡಬಾರದು? ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಯೋಗಾಭ್ಯಾಸ ಮಾಡುವ ಮೂಲಕ ದೇಹ ಮತ್ತು ಮನಸ್ಸನ್ನು ಸದೃಢವಾಗಿಟ್ಟುಕೊಳ್ಳೋಣವೆಂದು ಸಲಹೆ ನೀಡಿದರು.

ಕಾರ್ಯಕ್ರಮದ ಸಾನಿಧ್ಯವಹಿಸಿ ಎಲ್ಲ ಆಸನಗಳ ಅಭ್ಯಾಸದಲ್ಲಿ ಪಾಲ್ಗೊಂಡಿದ್ದ ಶ್ರೀ ಕ್ಷೇತ್ರದ ಶ್ರೀ ಶ್ರೀ ಶ್ರೀ ವೀರಭದ್ರ ಶಿವಾಚಾರ್ಯಸ್ವಾಮಿಗಳು ಮಾತನಾಡುತ್ತಾ ಸುಕ್ಷೇತ್ರದಲ್ಲಿ ಯೋಗ ದಿನಾಚರಣೆ ಹಮ್ಮಿಕೊಂಡಿರುವುದು ತಮಗೆ ಸಂತೋಷದ ವಿಚಾರ. ಪ್ರತೀದಿನ ಯೋಗಾಭ್ಯಾಸ ಮಾಡುವುದರಿಂದ ಆರೋಗ್ಯ, ಜ್ಞಾನ ಪ್ರಾಪ್ತಿಯಾಗುವುದಲ್ಲದೆ ಆಯುಷ್ಯ ವೃದ್ಧಿಯಾಗುತ್ತದೆ. ಎಲ್ಲರೂ ಯೋಗಬಂಧುಗಳಾಗಿ ಆರೋಗ್ಯಯುತ ಜೀವನ ನಡೆಸಬೇಕೆಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಶಹಾಪೂರ್‌ವಾಡ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ.ವಿದ್ಯಾಕುಮಾರಿ, ಮಧುಗಿರಿ ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ, ಕೊರಟಗೆರೆ ತಹಶೀಲ್ದಾರ್, ನಾಹಿದಾ ಜಂ ಜಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಂಜುನಾಥ, ಜಿಲ್ಲಾ ಶಸ್ತçಚಿಕಿತ್ಸಕ ಡಾ. ಟಿ.ಎ.ವೀರಭದ್ರಯ್ಯ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಸಂಜೀವಮೂರ್ತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಮಠದ ಭಕ್ತಾದಿಗಳು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಮತ್ತಿತರರು ಹಾಜರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker