ಒಂದೇ ದಿನದ ಪೌರಯುಕ್ತ ಪಟ್ಟ ಮರುದಿನವೇ ಹಳೆಯ ಹುದ್ದೆಗೆ ವಾಪಸ್ : ಸುವರ್ಣ ಪ್ರಗತಿ ವರದಿ ಹಿಡಿದು ವಿಧಾನ ಪರಿಷತ್ತಿನಲ್ಲಿ ರಮೇಶಬಾಬು ಕಿಡಿ

ಚಿಕ್ಕನಾಯಕನಹಳ್ಳಿ : ಪೌರಾಡಳಿತ ಇಲಾಖೆಯ ಅಧಿಕಾರಿಯೊಬ್ಬರು ಬಡ್ತಿ ಪಡೆದು ಕೇವಲ ಒಂದು ದಿನ ಅಧಿಕಾರ ಚಲಾಯಿಸಿ, ಮರು ದಿನವೇ ಹಳೆಯ ಹುದ್ದೆಗೆ ಮರಳಿರುವ ವಿಲಕ್ಷಣ ಸಂಬಳದ ಹಗರಣ ಇಂದು ವಿಧಾನಪರಿಷತ್ತಿನಲ್ಲಿ ಪ್ರತಿಧ್ವನಿಸಿತು. ಆಡಳಿತ ಪಕ್ಷದ ವಿಧಾನ ಪರಿಷತ್ ಸದಸ್ಯರಾದ ರಮೇಶಬಾಬು ಅವರು ”ಸುವರ್ಣ ಪ್ರಗತಿ” ಪತ್ರಿಕೆಯ ವರದಿಯನ್ನು ಉಲ್ಲೇಖಿಸಿ ಚಿಕ್ಕನಾಯಕನಹಳ್ಳಿ ಪುರಸಭೆಯ ಭ್ರಷ್ಟಾಚಾರ ಮತ್ತು ಅಧಿಕಾರಿಗಳ ಬೇಜವಾಬ್ದಾರಿತನದ ವಿರುದ್ದ ತೀವ್ರ ಆಕ್ರೋಷ ವ್ಯಕ್ತಪಡಿಸಿದರು.

ವಿಷಯ ಪ್ರಸ್ತಾಪಿಸಿದ ರಮೇಶಬಾಬು ಅವರು ಸುವರ್ಣ ಪ್ರಗತಿ ಪತ್ರಿಕೆಯು ವ್ಯವಸ್ಥೆಯ ಅಣಕವನ್ನು ಬಯಲಿಗೆಳದಿದೆ. ಅಧಿಕಾರಿ ಮಂಜಮ್ಮ ಅವರು ಪೌರಯುಕ್ತರಾಗಿ ಪದೋನ್ನತಿ ಪಡೆದಿದ್ದಾರೆ. ನಿಯಮದಂತೆ ಅವರು ಹೊಸ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಬೇಕಿತ್ತು. ಆದರೆ, ಕೇವಲ ಒಂದು ದಿನ ಪೌರಯುಕ್ತರಾಗಿ ಅಧಿಕಾರ ವಹಿಸಿಕೊಂಡು ಮರುದಿನವೇ ತಮಗೆ ಲಾಭದಾಯಕವಾಗಿರುವ ಹಳೆಯ ಹುದ್ದೆಗೆ ವಾಪಸ್ ಬಂದಿದ್ದಾರೆ. ಇದು ಕೇವಲ ಉನ್ನತ ಶ್ರೇಣಿ ಗಿಟ್ಟಿಸಿಕೊಳ್ಳಲು ಮಾಡಿದ ತಂತ್ರವಲ್ಲವೇ ? ಎಂದು ಪ್ರಶ್ನಿಸಿದರು.
ಚಿಕ್ಕನಾಯಕನಹಳ್ಳಿ ಪುರಸಭೆಯಲ್ಲಿ ನಡೆದಿದೆ ಎನ್ನಲಾದ ಹತ್ತಾರು ಕೋಟಿ ದುರುಪಯೋಗವಾಗಿರುವ ಬಗ್ಗೆ ಲೆಕ್ಕ ಪರಿಶೋಧನಾ ವರದಿ ಬಂದಿದ್ದರೂ ಪುರಸಭೆ ಅದನ್ನು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟಿದೆ. ಅನೇಕ ಕಾಮಾಗಾರಿಗಳು ಅಪೂರ್ಣವಾಗಿದ್ದು ಭ್ರಷ್ಟಚಾರ ತಾಂಡವವಾಡುತ್ತಿದೆ ಎಂದು ಎಂದು ನೇರ ಆರೋಪ ಮಾಡಿದರು. ಪುರಸಭೆ ಮುಖ್ಯಾಧಿಕಾರಿ ಅತ್ಯಂತ ಬೇಜಾವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಸಭೆಗಳಿಗೆ ಹಾಜರಾಗುತ್ತಿಲ್ಲ. ಸಾರ್ವಜನಿಕರ ಅಥವಾ ಜನಪ್ರತಿನಿಧಿಗಳ ಪೋನ್ ಕರೆಗಳನ್ನು ಸ್ವೀಕರಿಸುತ್ತಿಲ್ಲ ಇಂತಹ ಅಧಿಕಾರಿಗಳಿಂದ ಆಡಳಿತ ಯಂತ್ರ ಕುಸಿದಿದೆ ಎಂದು ಆಕ್ರೋಷ ಹೊರಹಾಕಿದರು.

ಹಗರಣದ ತೀವ್ರತೆಯನ್ನು ಪರಿಗಣಿಸಿ ಸಚಿವರು ಕಚೇರಿಗೆ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ಪರಿಶೀಲಿಸಬೇಕು. ಅಡಿಟ್ ವರದಿಯನ್ನು ಹೊರತೆಗೆದು ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು. ಕೇವಲ ಸಂಬಳಕ್ಕಾಗಿ ಬಡ್ತಿ ಪಡೆದು ಹಳೆ ಹುದ್ದೆಗೆ ಮರಳಿರುವ ಅಧಿಕಾರಿಯ ಪದೋನ್ನತಿಯನ್ನು ಮರುಪರಿಶೀಲಿಸಬೇಕು ಎಂದು ಆಗ್ರಹಿಸಿದರು. ಆಡಳಿತ ಪಕ್ಷದ ಸದಸ್ಯರೇ ಪತ್ರಿಕಾ ವರದಿ ಹಿಡಿದು ಸರಕಾರದ ನಡೆಯನ್ನು ಪ್ರಶ್ನಿಸಿದ್ದು ಸದನದಲ್ಲಿ ತೀವ್ರ ಕುತೂಹಲ ಮೂಡಿಸಿತಲ್ಲದೆ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತು.



