
ಗುಬ್ಬಿ :- ವೈಕೆ ರಾಮಯ್ಯ ಕಾಲದಿಂದಲೂ ಅನೇಕ ಹೋರಾಟಗಳು ನಡೆಯುತ್ತಿವೆ ಆದರೆ ಬಿಜೆಪಿ ಮತ್ತು ಜೆಡಿಎಸ್ ಸೇರಿದಂತೆ ರೈತರು ಪ್ರಾಣ ಬಿಡುತ್ತೇವೆ ನೀರು ಬಿಡಲ್ಲ ಎನ್ನುವುದು ಸರಿಯಲ್ಲ ನಾವು ಇರೋದು ಪ್ರಾಣ ಉಳಿಸುವ ಕೆಲಸ ಮಾಡಲು ಯಾವ ರೈತರು ಸ್ವಾಮೀಜಿಗಳು ಹೋರಾಟದಂತಹ ವಿಷಯದಲ್ಲಿ ಭಾಗಿಯಾಗುವುದು ಬೇಡ ಈಗಾಗಲೇ ಕಾಮಗಾರಿ ಪ್ರಾರಂಭವಾಗಲಿದ್ದು ಎಲ್ಲರ ಅನುಗ್ರಹ ಮತ್ತು ಸಹಕಾರ ಇರಲಿ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದರು.
ತಾಲ್ಲೂಕಿನ ಕಡಬ ಹೋಬಳಿ ಸುಂಕಾಪುರ ಗೇಟ್ ಬಳಿ ನಡೆದಿರುವ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದ ಅವರು ಎಲ್ಲಾ ಹೋರಾಟಗಾರರಲ್ಲಿ ಕೈ ಮುಗಿದು ಮನವಿ ಮಾಡುತ್ತೇನೆ. ಈಗಾಗಲೇ ಯೋಜನೆ ಕೆಲಸ ನಡೆದಿದೆ. ಯೋಜನೆಯ ಬದಲಾವಣೆ ಮಾಡಲು ಸಾಧ್ಯವಿಲ್ಲ. ಯಾರಿಗೂ ತೊಂದರೆ ಆಗದಂತೆ ನೀರು ಹಂಚುತ್ತೇವೆ. ಹೋರಾಟಗಾರರ ಜೊತೆ ಚರ್ಚಿಸಿ ಮನವೊಲಿಸಿ ಎಲ್ಲರ ಅನುಗ್ರಹ ಪಡೆದು ಕಾಮಗಾರಿ ಪೂರ್ಣ ಗೊಳಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತುಮಕೂರು ಜಿಲ್ಲೆಯ ಎಲ್ಲಾ ಕ್ಷೇತ್ರದ ಹಿತ ಕಾಯುವ ಕೆಲಸ ನಮ್ಮದು. ನೀರಾವರಿ ಸಚಿವನಾಗಿ ಎಲ್ಲಾ ಬಿಜೆಪಿ ಜೆಡಿಎಸ್ ಶಾಸಕರು ಹಾಗೂ ಕೇಂದ್ರ ಸಚಿವ ಸೋಮಣ್ಣ ಅವರ ಜೊತೆ ಎರಡು ತಿಂಗಳ ಹಿಂದೆ ಮಾತನಾಡಿದಂತೆ ಸ್ಥಳ ಪರಿಶೀಲನೆ ಮಾಡಿದ್ದೇನೆ. ಒಂದು ಕ್ಷೇತ್ರಕ್ಕಾಗಿ ನಾನು ಬಂದಿಲ್ಲ. ಎಲ್ಲರಿಗೂ ಸಮಾನವಾಗಿ ನೀರು ಹಂಚುವ ಉದ್ದೇಶದಲ್ಲಿ ಈ ಕಾಮಗಾರಿ ಕೈಗೆತ್ತಿಕೊಂಡಿದ್ದೇವೆ. ಎರಡು ದಶಕದಿಂದ ಕೊನೆಯ ತಾಲ್ಲೂಕಿಗೆ ಹಂಚಿಕೆಯಷ್ಟು ನೀರು ಸಿಕ್ಕಿಲ್ಲ. ಹೇಮಾವತಿ ಹೋರಾಟಗಾರ ವೈ.ಕೆ.ರಾಮಯ್ಯ ಅವರ ಕನಸು ಕುಣಿಗಲ್ ತಾಲ್ಲೂಕಿಗೆ ನೀರು ತರುವುದು. ಅದನ್ನು ಈಗ ಪೂರ್ಣಗೊಳಿಸುತ್ತೇವೆ. ಈಗಾಗಲೇ 400 ಕೋಟಿ ಮಂಜೂರಾಗಿ ಪೈಪ್ ಖರೀದಿ ನಡೆದಿದೆ. ಕೆಲಸ ನಾಲ್ಕು ತಿಂಗಳಲ್ಲಿ ಮುಗಿಯಲಿದೆ ಎಂದರು.
ಈ ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ನಾನು ನೀರಾವರಿ ಸಚಿವನಾಗಿ 600 ಕೋಟಿಗೆ ಕಾಮಗಾರಿ ಮಂಜೂರಾತಿ ಪಡೆದಿತ್ತು. ನಂತರ ಯುಡಿಯೂರಪ್ಪ ಮುಖ್ಯಮಂತ್ರಿಯಾದಾಗ ಕಾಮಗಾರಿ ಸ್ಥಗಿತ ಗೊಳಿಸಲಾಗಿತ್ತು. ಈಗ ಸಾವಿರ ಕೋಟಿ ಯೋಜನೆಯಾಗಿ ಕೆಲಸ ನಡೆದಿದೆ. ಇಲ್ಲಿ ಯಾವುದೇ ತಾಲ್ಲೂಕಿಗೆ ಅನ್ಯಾಯ ಆಗುವುದಿಲ್ಲ ಎಂದು ಪುನರುಚ್ಚರಿಸಿದರು.
ನನಗೆ ಪ್ರಿಯವಾದ ತುಮಕೂರು ಜಿಲ್ಲೆಗೆ ಅನ್ಯಾಯ ಮಾಡುವುದಿಲ್ಲ. ರೈತರಿಗೆ ಅನ್ಯಾಯ ಆದಾಗ ಸಚಿವನಾಗಿ ಬಗೆಹರಿಸುವ ಕೆಲಸ ಮಾಡಿದ್ದೇವೆ. 2 ಸಾವಿರ ಕೋಟಿ ವ್ಯಯ ಮಾಡಿದ ಎತ್ತಿನಹೊಳೆ ಯೋಜನೆ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗೆ ಕುಡಿಯುವ ನೀರು ಪೂರೈಸಲಿದೆ. ಈ ಯೋಜನೆಯಲ್ಲಿ ಮಾನವೀಯತೆ ದೃಷ್ಟಿಯಲ್ಲಿ ನೀರು ಕೇಳಿದಾಗ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ, ಮಧುಗಿರಿ, ಶಿರಾ, ಕೊರಟಗೆರೆ, ಪಾವಗಡ ತಾಲ್ಲೂಕುಗಳಿಗೆ ಕುಡಿಯುವ ನೀರಿಗಾಗಿ ಹಲವು ಕೆರೆಗೆ ನೀರು ಹರಿಸಲು ಅವಕಾಶ ಮಾಡಲಾಗಿದೆ. ಕುಣಿಗಲ್ ತಾಲ್ಲೂಕು ಸಹ ಹೇಮಾವತಿ ನೀರು ಹಂಚಿಕೆಗೆ ಒಳಪಟ್ಟಿದೆ. ಅಲ್ಲಿನ ರೈತರಿಗೆ ನಿಗದಿಯಷ್ಟು ನೀರು ಸರಬರಾಜು ಮಾಡಲಾಗುತ್ತದೆ ಅಷ್ಟೇ ಎಂದು ಹೇಳಿದರು.
ತಮಿಳುನಾಡಿಗೆ ಕಾವೇರಿ ನೀರು 177 ಟಿಎಂಸಿ ಹರಿಸಬೇಕಿತ್ತು. ಕೆ.ಆರ್.ಎಸ್, ಕಬಿನಿ, ಹಾರಂಗಿ, ಹೇಮಾವತಿ ಮೂಲಕ ಈಗಾಗಲೇ 220 ಟಿಎಂಸಿ ಹರಿದಿದೆ. ಇನ್ನೂ ನಾಲ್ಕು ತಿಂಗಳು ಮಳೆ ನಿರೀಕ್ಷೆ ಇದ್ದು, ಸಮುದ್ರ ಸೇರುವ 200 ಟಿಎಂಸಿ ಹೆಚ್ಚುವರಿ ನೀರು ನಾವು ರೈತರಿಗೆ ನೀಡಬೇಕಿದೆ. ಈ ರೀತಿ ಅನುಕೂಲವಾದಾಗ ನೀರು ಹರಿಸಿಕೊಳ್ಳಲು ಈ ಲಿಂಕ್ ಕೆನಾಲ್ ಕಾಮಗಾರಿ ನಡೆಸಲಾಗಿದೆ. ಇದರಿಂದ ಯಾವ ತಾಲ್ಲೂಕಿಗೂ ಅನ್ಯಾಯ ಆಗುವುದಿಲ್ಲ ಎಂದ ಅವರು ಪೈಪ್ ಮೂಲಕ ನೀರು ಹರಿಸಲು ನಿಯಂತ್ರಣ ಅಳವಡಿಸಲಾಗಿದೆ. ಸಾರ್ವಜನಿಕರು ಗಮನಕ್ಕೆ ತಂದು ಮುಖ್ಯನಾಲೆ ಹಾಗೂ ಪೈಪ್ ಲೈನ್ ನಲ್ಲಿ ಸಮಾನವಾಗಿ ನೀರು ಹರಿಯಲಿದೆ. ಅಭಿವೃದ್ದಿ ಕೆಲಸದಲ್ಲಿ ರಾಜಕಾರಣ ಮಾಡುವುದು ಬೇಡ. ಎಲ್ಲರ ಒಪ್ಪಿಗೆ ಪಡೆದು ಕಾಮಗಾರಿ ಪೂರ್ಣ ಗೊಳಿಸುತ್ತೇವೆ ಎಂದು ಮತ್ತೊಮ್ಮೆ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಎಸ್.ಆರ್.ಶ್ರೀನಿವಾಸ್, ಟಿ.ಬಿ.ಜಯಚಂದ್ರ, ಡಾ.ರಂಗನಾಥ್, ಹೇಮಾವತಿ ಮುಖ್ಯ ಎಂಜಿನಿಯರ್ ಪಣಿರಾಜ್, ಜಿಪಂ ಸಿಇಓ ಜಿ.ಪ್ರಭು, ತಾಪಂ ಇಓ ಎಸ್.ಶಿವಪ್ರಕಾಶ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಸೇರಿದಂತೆ ಹಲವು ಮುಖಂಡರು, ಹೇಮಾವತಿ, ಕಂದಾಯ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.