ಚಿಕ್ಕನಾಯಕನಹಳ್ಳಿ: ಬಿಜೆಪಿ ಪಕ್ಷದಲ್ಲಿ ತಾನು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಾಕ್ಷ್ಯಾಧಾರಗಳಿಲ್ಲದೆ ತಮ್ಮ ಮೇಲೆ ಆರೋಪ ಮಾಡಬಾರದು. ಇಲ್ಲವಾದರೆ ಜಿಲ್ಲಾ ಅಧ್ಯಕ್ಷ ಸ್ಥಾನದ ಗಾದಿಯ ಮೇಲೆ ತಾವೇ ಗೂಬೆ ಕುಳಿತಂತಾಗುತ್ತದೆ ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿ ಅವರಿಗೆ ತಿರುಗೇಟು ನೀಡಿದ್ದಾರೆ.

ತಾಲ್ಲೂಕಿನ ಜೆ.ಸಿ.ಪುರ ಗ್ರಾಮದ ನಿವಾಸದಲ್ಲಿ ಇತ್ತೀಚೆಗೆ ಯೂಟ್ಯೂಬರ್ ನಡೆಸಿದ ಸಂದರ್ಶನದಲ್ಲಿ ತಮ್ಮ ಸೋಲಿನ ಹಿಂದಿನ ರಾಜಕೀಯ ತಂತ್ರಗಾರಿಕೆ ಕುರಿತು ಮಾಧುಸ್ವಾಮಿ ಮಾತನಾಡಿದ್ದರು. ಈ ಸಂದರ್ಶನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದಕ್ಕೆ ಹೆಬ್ಬಾಕ ರವಿ ನೀಡಿದ ಮರುಹೇಳಿಕೆಗೆ ಪ್ರತಿಕ್ರಿಯಿಸಿದ ಮಾಧುಸ್ವಾಮಿ, ತಮ್ಮ ವಿರುದ್ಧ ಹರಿಹಾಯ್ದಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಹೊರಗಿನವರಿಗೆ ಟಿಕೆಟ್ ನೀಡಬಾರದು ಎಂದು ಹೇಳಿದ್ದೆ. ನನಗೆ ಟಿಕೆಟ್ ನೀಡದಿದ್ದರೂ ಜಿಲ್ಲೆಯ ಡಾ.ಹುಲಿನಾಯ್ಕರ್ ಅವರ ಪುತ್ರಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದೆ. ಹೊರಗಿನವರಾದ ಸೋಮಣ್ಣ ಅವರ ಪರ ಪ್ರಚಾರ ಮಾಡಲು ಕಷ್ಟವಾಗಿತ್ತು. ಆದರೆ ಹೈಕಮಾಂಡ್ ನಾಯಕ ಅಮಿತ್ ಶಾ ಅವರ ಸೂಚನೆಯಂತೆ ಬೇರೆ ಜಿಲ್ಲೆಗಳಲ್ಲಿ ಪಕ್ಷದ ಪರ ಪ್ರಾಮಾಣಿಕವಾಗಿ ಪ್ರಚಾರ ಮಾಡಿದ್ದೇನೆ. ಇದಕ್ಕೆ ಸಾಕ್ಷಿಗಳಿವೆ ಎಂದು ಸ್ಪಷ್ಟಪಡಿಸಿದರು.

ಪಕ್ಷದ ಕೋರ್ ಕಮಿಟಿಯಲ್ಲಿ ಹೆಬ್ಬಾಕ ರವಿ ಹುನ್ನಾರ ನಡೆಸಿ, ನನ್ನನ್ನು ಹೊರತುಪಡಿಸುವ ಪ್ರಯತ್ನ ಮಾಡಿದ್ದಾರೆ. ಸೊಗಡು ಶಿವಣ್ಣ, ಗುಬ್ಬಿಯ ದಿಲೀಪ್, ತುರುವೇಕೆರೆಯ ಮಸಾಲೆ ಜಯರಾಮ್ ಹಾಗೂ ಜಿ.ಎಸ್.ಬಸವರಾಜು ಅವರನ್ನೂ ಕಡೆಗಣಿಸಲಾಗಿದೆ. ಮುಂದಿನ ದಿನಗಳಲ್ಲಿ ಜ್ಯೋತಿಗಣೇಶ್ ಅವರನ್ನೂ ತೆಗೆದುಹಾಕುತ್ತೀರಾ ಎಂದು ಪ್ರಶ್ನಿಸಿದರು.

ಜಿಲ್ಲೆಯಲ್ಲಿ ಬಿಜೆಪಿ ಪಕ್ಷವನ್ನು ನಿರ್ನಾಮ ಮಾಡಿ ಜೆಡಿಎಸ್ ಪಕ್ಷ ಉಳಿಯುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಗುಬ್ಬಿಯಲ್ಲಿ ದಿಲೀಪ್ ಅವರ ಸೋಲಿನ ಬಗ್ಗೆ ತನಿಖೆಯಾಗಬೇಕು. ವಿಧಾನ ಪರಿಷತ್ ಚುನಾವಣೆಯಲ್ಲಿ ಸೋತ ಲೋಕೇಶ್ ಅವರು ಪಕ್ಷದ ಕೆಲವು ನಾಯಕರು ಕೆಲಸ ಮಾಡಿಲ್ಲ ಎಂದು ಲಿಖಿತವಾಗಿ ನೀಡಿದ್ದರು. ದಿಲೀಪ್ ಸೋಲಿನಲ್ಲಿ ಹೆಬ್ಬಾಕ ರವಿ ಅವರ ಪಾತ್ರವೇನು ಎಂಬುದು ತನಿಖೆಯಿಂದ ಹೊರಬರಲಿ ಎಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಬೆಳೆಸಲು ನಿಮ್ಮ ಕೊಡುಗೆ ಏನು? ಡಿಸಿಸಿ ಬ್ಯಾಂಕ್, ವಿಎಸ್ಎಸ್ಎನ್ ಹಾಗೂ ಹಾಲು ಉತ್ಪಾದಕರ ಸಂಘಗಳ ಚುನಾವಣೆಗಳಲ್ಲಿ ಏನು ಕೆಲಸ ಮಾಡಿದ್ದೀರಿ ಎಂದು ಪ್ರಶ್ನಿಸಿದ ಅವರು, ನಾನು 30-40 ವರ್ಷಗಳಿಂದ ರಾಜಕೀಯ ಮಾಡಿಕೊಂಡು ಬಂದಿದ್ದೇನೆ. ನಿಮ್ಮಿಂದ ಕಲಿಯುವಂತಹದ್ದೇನೂ ಇಲ್ಲ. ನನ್ನ ಮೇಲೆ ಸಾಕ್ಷ್ಯಾಧಾರಗಳಿಲ್ಲದೆ ಆರೋಪ ಮಾಡಬೇಡಿ. ದಯವಿಟ್ಟು ತಮ್ಮ ಜಿಲ್ಲಾಧ್ಯಕ್ಷ ಸ್ಥಾನದಿಂದ ಕೆಳಗಿಳಿಯಿರಿ ಎಂದು ಹೆಬ್ಬಾಕ ರವಿಗೆ ವ್ಯಂಗ್ಯವಾಡಿದರು.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *