ತುಮಕೂರು: ಪರಮಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ ಹೆಸರಿನ ವೃತ್ತದಲ್ಲಿ ವಿನೂತನ ಎಲೆಕ್ಟ್ರಾನಿಕ್ ಡಿಸ್ಪ್ಲೇ ವ್ಯವಸ್ಥೆಯನ್ನು ನಿರ್ಮಿಸಿರುವುದು ತುಮಕೂರು ನಗರದ ಜನತೆಗೆ ನೀಡಿರುವ ಕೊಡುಗೆಯಾಗಿದೆ. ಇಂತಹ ಬೃಹತ್ ಡಿಜಿಟಲ್ ಡಿಸ್ಪ್ಲೇ ವ್ಯವಸ್ಥೆ ದೇಶದ ಯಾವುದೇ ಜಿಲ್ಲಾ ಕೇಂದ್ರದಲ್ಲಿ ಇಲ್ಲ ಎಂಬುದು ಗಮನಾರ್ಹ. ಈ ಮೂಲಕ ತುಮಕೂರು ಹೊಸ ಇತಿಹಾಸ ಸೃಷ್ಟಿಸಿದೆ ಎಂದು ಉಪಮುಖ್ಯಮಂತ್ರಿಗಳು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ. ಪರಮೇಶ್ವರ ಅವರು ಹೇಳಿದರು.

ತುಮಕೂರು ಮಹಾನಗರ ಪಾಲಿಕೆ ಹಾಗೂ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಗರದ ಶ್ರೀ ಶಿವಕುಮಾರ ಮಹಾಸ್ವಾಮೀಜಿ ವೃತ್ತದಲ್ಲಿ ಅಂದಾಜು ₹7 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿರುವ ‘ತುಮಕೂರು ಸ್ಕ್ವೇರ್’ ಬೃಹತ್ ಎಲ್‌ಇಡಿ ಡಿಜಿಟಲ್ ಡಿಸ್ಪ್ಲೇ ವ್ಯವಸ್ಥೆಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

 

 

 

ವಿದೇಶಗಳೂ ಸೇರಿದಂತೆ ಅನೇಕ ರಾಷ್ಟ್ರಗಳ ನಗರಗಳಿಗೆ ಭೇಟಿ ನೀಡಿದಾಗ ಪ್ರತಿಯೊಂದು ನಗರದಲ್ಲಿಯೂ ಜನರನ್ನು ಆಕರ್ಷಿಸುವಂತಹ ಪ್ರಮುಖ ಕೇಂದ್ರವಿರುವುದನ್ನು ಗಮನಿಸಿದ್ದೇನೆ. ಆದರೆ, ತುಮಕೂರು ನಗರದಲ್ಲಿ ಅಂತಹ ಒಂದು ಆಕರ್ಷಣೆಯ ಕೇಂದ್ರ ಇರಬೇಕೆಂಬ ಆಶಯ ಬಹಳ ದಿನಗಳಿಂದ ಇತ್ತು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಮಹಾನಗರ ಪಾಲಿಕೆ ಆಯುಕ್ತರು ಡಿಜಿಟಲ್ ಡಿಸ್ಪ್ಲೇ ವ್ಯವಸ್ಥೆ ನಿರ್ಮಿಸುವ ಸಲಹೆ ನೀಡಿದರು. ಅದರಂತೆ ವೃತ್ತವನ್ನು ಪರಿಶೀಲಿಸಿ, ನಕ್ಷೆ ಸಿದ್ಧಪಡಿಸಿ ಯೋಜನೆ ರೂಪಿಸಲಾಯಿತು ಎಂದು ತಿಳಿಸಿದರು.

ಈ ಯೋಜನೆಯ ಅನುಷ್ಠಾನಕ್ಕೆ ಜಿಲ್ಲಾಧಿಕಾರಿಗಳು ಪ್ರತಿನಿತ್ಯ ಪರಿಶ್ರಮ ವಹಿಸಿದ್ದು, ಕಾಮಗಾರಿಯ ಪ್ರಗತಿಯ ಕುರಿತು ನಿರಂತರವಾಗಿ ಮಾಹಿತಿ ನೀಡುತ್ತಿದ್ದರು. ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಅವರ ತಂಡದ ಅಧಿಕಾರಿಗಳು ರಾತ್ರಿ 3, 4 ಗಂಟೆಯವರೆಗೂ ಸ್ಥಳದಲ್ಲಿಯೇ ಇದ್ದು ಕೆಲಸ ನಿರ್ವಹಿಸಿದ್ದಾರೆ. ವಿಶೇಷವಾಗಿ ಆಯುಕ್ತರು ಬೆಳಗಿನ ಜಾವ 3 ಗಂಟೆಗೂ ಕಾಮಗಾರಿಯ ಛಾಯಾಚಿತ್ರಗಳನ್ನು ಕಳುಹಿಸುತ್ತಿದ್ದರು. ಅವರೆಲ್ಲರ ಪರಿಶ್ರಮದಿಂದ ಇಂದು ಯೋಜನೆ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಅಭಿನಂದಿಸಿದರು.

ಕನ್ನಡ ರಾಜ್ಯೋತ್ಸವದ ದಿನವೇ ಯೋಜನೆಯನ್ನು ಉದ್ಘಾಟಿಸಲು ಉದ್ದೇಶಿಸಲಾಗಿತ್ತು. ಆದರೆ, ಡಿಜಿಟಲ್ ಡಿಸ್ಪ್ಲೇ ಬೋರ್ಡ್‌ಗಳು ದೆಹಲಿಯಿಂದ ಬರಬೇಕಿದ್ದುದರಿಂದ ಹಾಗೂ ಅವುಗಳ ಜೋಡಣೆ, ತಾಂತ್ರಿಕ ಪ್ರಕ್ರಿಯೆ ಮತ್ತು ಸಂಚಾರ ನಿರ್ವಹಣೆಯ ಸವಾಲುಗಳಿಂದಾಗಿ ವಿಳಂಬವಾಯಿತು. ಆದರೂ ಕಾಮಗಾರಿಯನ್ನು ಮತ್ತಷ್ಟು ಮುಂದೂಡದೆ ಶೀಘ್ರ ಪೂರ್ಣಗೊಳಿಸುವಂತೆ ಸೂಚಿಸಲಾಯಿತು. ಅಂತಿಮವಾಗಿ ನವೆಂಬರ್ 14ರ ಮಕ್ಕಳ ದಿನಾಚರಣೆಯಂದು ಮಕ್ಕಳಿಗೆ ಈ ವ್ಯವಸ್ಥೆಯನ್ನು ಸಮರ್ಪಿಸುವ ನಿರ್ಧಾರ ಕೈಗೊಳ್ಳಲಾಯಿತು. ತಾಂತ್ರಿಕ ದೋಷಗಳನ್ನು ಸರಿಪಡಿಸಿ ಇಂದು ತುಮಕೂರಿನ ನಾಗರಿಕರಿಗೆ ಅರ್ಪಿಸಲಾಗಿದೆ ಎಂದರು.

 

 

ಈ ಕಾರ್ಯಕ್ರಮಕ್ಕೆ ಪರಮಪೂಜ್ಯ ಸಿದ್ಧಗಂಗಾ ಮಠದ ಶ್ರೀಗಳವರು ಆಗಮಿಸಿರುವುದು ವಿಶೇಷ ಸಂತೋಷ ತಂದಿದೆ. ಸಿದ್ಧಗಂಗಾ ಮಠವು ನಮ್ಮ ಕುಟುಂಬಕ್ಕೆ ಅವಿನಾಭಾವ ಸಂಬಂಧ ಹೊಂದಿರುವ ಸಂಸ್ಥೆಯಾಗಿದೆ. ಬಾಲ್ಯದಲ್ಲಿ, ಸುಮಾರು 10-12 ವರ್ಷದವನಿದ್ದಾಗ, ಪರಮಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳು ನಮ್ಮ ಊರಿಗೆ ಆಗಮಿಸಿ, ನಮ್ಮ ಶಾಲೆಯ ಕಾರ್ಯಕ್ರಮದಲ್ಲಿ ತಂದೆಯವರೊಂದಿಗೆ ನನಗೆ ಆಶೀರ್ವಾದ ಮಾಡಿದ್ದನ್ನು ಸ್ಮರಿಸಿಕೊಳ್ಳುತ್ತೇನೆ. ಅಂದಿನಿಂದ ನಮ್ಮ ಕುಟುಂಬ ಶ್ರೀಮಠದೊಂದಿಗೆ ಗೌರವ ಮತ್ತು ಭಕ್ತಿಯ ಸಂಬಂಧವನ್ನು ಹೊಂದಿದೆ. ಶ್ರೀಮಠದ ಆಶೀರ್ವಾದದಿಂದಲೇ ನಮ್ಮ ಕುಟುಂಬ ಹಾಗೂ ಶಿಕ್ಷಣ ಸಂಸ್ಥೆಗಳು ಬೆಳೆದಿವೆ. ನಮ್ಮ ಅಣ್ಣ ಡಾ. ಶಿವಪ್ರಸಾದ್ ಅವರು ಸಿದ್ಧಗಂಗಾ ಹೈಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮಾಡಿದವರು. ಹೀಗಾಗಿ ಶ್ರೀಮಠದ ಬಗ್ಗೆ ನಮ್ಮ ಕುಟುಂಬಕ್ಕಿರುವ ಗೌರವ ಮತ್ತು ನಂಟಿನ ಕುರಿತು ಯಾವುದೇ ತಪ್ಪು ಕಲ್ಪನೆಗಳಿಗೆ ಅವಕಾಶವಿಲ್ಲ ಎಂಬುದನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ ವೃತ್ತದಲ್ಲಿ ಈ ಡಿಜಿಟಲ್ ಡಿಸ್ಪ್ಲೇ ವ್ಯವಸ್ಥೆ ನಿರ್ಮಿಸಿರುವುದು ಆ ವೃತ್ತಕ್ಕೂ, ಪೂಜ್ಯ ಸ್ವಾಮೀಜಿಗಳಿಗೂ ಸಲ್ಲಿಸಿದ ಗೌರವವೆಂದು ಭಾವಿಸುತ್ತೇನೆ ಎಂದು ಹೇಳಿದರು.

 

 

 

ಈ ವ್ಯವಸ್ಥೆಯು ತುಮಕೂರು ನಗರದ ಆಕರ್ಷಣೆಯನ್ನು ಹೆಚ್ಚಿಸುವುದರ ಜೊತೆಗೆ ನಗರವನ್ನು ಮತ್ತಷ್ಟು ಸ್ಮಾರ್ಟ್ ಸಿಟಿಯನ್ನಾಗಿ ರೂಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಈ ಮೂಲಕ ತುಮಕೂರು ರಾಜ್ಯದ ಇತರ ನಗರಗಳಿಗೂ ಮಾದರಿಯಾಗಲಿದೆ. ಪರಮಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ ಆಶೀರ್ವಾದದಿಂದ ಜಿಲ್ಲೆ ಮತ್ತಷ್ಟು ಅಭಿವೃದ್ಧಿ ಪಥದಲ್ಲಿ ಸಾಗಲಿ ಎಂದು ಹಾರೈಸಿದರು.

ನಾನು ಗೃಹ ಸಚಿವನಾಗಿ ಕಾರ್ಯನಿರ್ವಹಿಸಿದ ಸಂದರ್ಭದಲ್ಲಿ ಪೊಲೀಸ್ ಇಲಾಖೆಯಲ್ಲಿ ಹಲವು ಬದಲಾವಣೆಗಳನ್ನು ತಂದಿದ್ದೇನೆ. ಪೊಲೀಸರ ಸಾಂಪ್ರದಾಯಿಕ ದೊಡ್ಡ ಗಾತ್ರದ ಕ್ಯಾಪ್ ಮಳೆಯಲ್ಲಿ ನೆನೆದಾಗ ಭಾರವಾಗುತ್ತಿತ್ತು ಎಂಬ ಸಿಬ್ಬಂದಿಯ ಮನವಿಯ ಮೇರೆಗೆ ಅದನ್ನು ಬದಲಾಯಿಸಿ, ಆಧುನಿಕ ಹಾಗೂ ಅನುಕೂಲಕರ ಕ್ಯಾಪ್‌ಗಳನ್ನು ಪರಿಚಯಿಸಲಾಗಿದೆ. ಇದರಿಂದ ಪೊಲೀಸರು ಹೆಚ್ಚು ಸ್ಮಾರ್ಟ್ ಆಗಿ ಕಾಣಿಸುತ್ತಿದ್ದಾರೆ. ಯಾವುದೇ ಇಲಾಖೆಯ ಜವಾಬ್ದಾರಿ ವಹಿಸಿಕೊಂಡಾಗಲೂ ಅಭಿವೃದ್ಧಿಯ ದೃಷ್ಟಿಯಿಂದ ಬದಲಾವಣೆಗಳನ್ನು ತರಲು ಪ್ರಯತ್ನಿಸಿದ್ದೇನೆ ಎಂದು ತಿಳಿಸಿದರು.

 

 

ತುಮಕೂರು ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ವಸಂತನರಸಾಪುರದಲ್ಲಿ ಸುಮಾರು 20 ಸಾವಿರ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಏಷ್ಯಾ ಖಂಡದಲ್ಲೇ ಅತಿದೊಡ್ಡ ಕೈಗಾರಿಕಾ ಹಬ್ ನಿರ್ಮಿಸುವ ಪ್ರಯತ್ನ ನಡೆಯುತ್ತಿದೆ. ಈಗಾಗಲೇ 200ಕ್ಕೂ ಹೆಚ್ಚು ಕೈಗಾರಿಕೆಗಳು ಜಿಲ್ಲೆಗೆ ಬಂದಿವೆ. ಇತ್ತೀಚೆಗೆ ಗ್ರೀನ್ ಹೈಡ್ರೋಜನ್ ಘಟಕ ಹಾಗೂ ಡೇಟಾ ಸೆಂಟರ್ ಸ್ಥಾಪನೆಗೆ ಸಂಬಂಧಿಸಿದಂತೆ ಸುಮಾರು ₹80 ಸಾವಿರ ಕೋಟಿ ಹೂಡಿಕೆ ಮಾಡುವ ಪ್ರಸ್ತಾವನೆ ಬಂದಿದೆ. ತುಮಕೂರಿನಲ್ಲಿ ಸುಮಾರು ಒಂದು ಸಾವಿರ ಎಕರೆ ಭೂಮಿ ಒದಗಿಸಿದರೆ 30 ಸಾವಿರ ಜನರಿಗೆ ಉದ್ಯೋಗ ನೀಡುವ ಉದ್ದೇಶವನ್ನು ಹೂಡಿಕೆದಾರರು ಹೊಂದಿದ್ದಾರೆ. ಇಂತಹ ಕೈಗಾರಿಕಾ ಬೆಳವಣಿಗೆಗಳಿಂದ ತುಮಕೂರು ಜಿಲ್ಲೆಯ ಅಭಿವೃದ್ಧಿಗೆ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ ಎಂದು ಹೇಳಿದರು.

ತುಮಕೂರು ಇನ್ನು ಮುಂದೆ ಸಣ್ಣ ನಗರ ಎಂಬ ಭಾವನೆ ಯಾರಲ್ಲಿಯೂ ಇರಬಾರದು. ತುಮಕೂರು ಬೆಂಗಳೂರಿನ ಒಂದು ಭಾಗವಾಗಿ ಬೆಳೆಯುತ್ತಿದೆ. ಈಗಾಗಲೇ ರಸ್ತೆ ಸಂಪರ್ಕದ ಮೂಲಕ ಬೆಂಗಳೂರು ಮತ್ತು ತುಮಕೂರು ನಗರಗಳು ಹತ್ತಿರವಾಗಿವೆ. ಬೆಂಗಳೂರು ನಗರದಲ್ಲಿ ರಸ್ತೆ ಬದಿಯ ಒಂದು ಎಕರೆ ಜಮೀನು ಸಿಗುವುದೂ ಕಷ್ಟವಾಗಿದ್ದು, ಸಿಕ್ಕರೂ ₹5-10 ಕೋಟಿ ಬೆಲೆ ಇದೆ. ಮುಂದಿನ ದಿನಗಳಲ್ಲಿ ತುಮಕೂರು ಮತ್ತು ಬೆಂಗಳೂರು ನಡುವಿನ ಸಂಪರ್ಕ ಇನ್ನಷ್ಟು ಸುಧಾರಿಸಲಿದೆ. ಜಿಲ್ಲೆಯ ಯುವಜನರಿಗೆ, ಮಕ್ಕಳಿಗೆ ಕೈಗಾರಿಕೆ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಹೆಚ್ಚಿನ ಅವಕಾಶಗಳು ದೊರೆಯಬೇಕು ಎಂಬುದು ನಮ್ಮ ಆಶಯವಾಗಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿಗಳು ಯಾವುದೇ ಜವಾಬ್ದಾರಿ ನೀಡಿದರೂ ಪ್ರಾಮಾಣಿಕವಾಗಿ ತಮ್ಮ ಸಂಪೂರ್ಣ ಪ್ರಯತ್ನವನ್ನು ಮಾಡುತ್ತಾರೆ. ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರನ್ನು ಮೂರು ಬಾರಿ ತುಮಕೂರಿಗೆ ಕರೆತಂದು, ಲಕ್ಷಾಂತರ ಜನರು ಭಾಗವಹಿಸಿದ ಬೃಹತ್ ಕಾರ್ಯಕ್ರಮಗಳನ್ನು ಆಯೋಜಿಸಿ, ಸರ್ಕಾರದ ವಿವಿಧ ಯೋಜನೆಗಳ ಲಕ್ಷಾಂತರ ಫಲಾನುಭವಿಗಳಿಗೆ ಸೌಲಭ್ಯ ತಲುಪಿಸುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ. ಈ ಕಾರ್ಯಕ್ರಮಗಳ ಬಗ್ಗೆ ಮುಖ್ಯಮಂತ್ರಿಗಳೂ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಜಿಲ್ಲಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಮಹಾನಗರ ಪಾಲಿಕೆ ಆಯುಕ್ತರು ತಮ್ಮ ತಂಡದ ಅಧಿಕಾರಿಗಳೊಂದಿಗೆ ಹಗಲಿರುಳು ಶ್ರಮಿಸಿ ಈ ಯೋಜನೆಯನ್ನು ಯಶಸ್ವಿಗೊಳಿಸಿದ್ದಾರೆ. ಬೆಳಗಿನ ಜಾವದವರೆಗೂ ಕಾಮಗಾರಿಯ ಮೇಲ್ವಿಚಾರಣೆ ನಡೆಸಿ, ನಿರಂತರವಾಗಿ ಪ್ರಗತಿಯ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದರು. ಅವರ ಪರಿಶ್ರಮಕ್ಕೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸಿದರು.

ತುಮಕೂರು ದಸರಾವನ್ನು ಮತ್ತಷ್ಟು ವಿಸ್ತೃತವಾಗಿ ಆಚರಿಸಬೇಕೆಂಬ ಉದ್ದೇಶದಿಂದ ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ದಸರಾ ಮಹೋತ್ಸವವನ್ನು ಆಯೋಜಿಸಲಾಗುತ್ತಿದೆ. ಹಿಂದೆ ಸ್ಥಳೀಯವಾಗಿ ಸಣ್ಣ ಪ್ರಮಾಣದಲ್ಲಿ ನಡೆಯುತ್ತಿದ್ದ ಊರ ಹಬ್ಬವನ್ನು ಎಲ್ಲರ ಸಹಕಾರದೊಂದಿಗೆ ವಿಸ್ತರಿಸಿ, ಸಾರ್ವಜನಿಕರು ಮತ್ತು ಅಧಿಕಾರಿಗಳನ್ನು ಒಳಗೊಂಡು ದೊಡ್ಡ ಮಟ್ಟದಲ್ಲಿ ಆಚರಿಸಲಾಗುತ್ತಿದೆ. ಈ ಬಾರಿಯ ತುಮಕೂರು ದಸರಾವನ್ನು ಒಂಬತ್ತು-ಹತ್ತು ದಿನಗಳ ಅವಧಿಯಲ್ಲಿ ಸುಮಾರು 20 ಲಕ್ಷ ಜನರು ವೀಕ್ಷಿಸಿದ್ದಾರೆ ಎಂಬ ಅಂದಾಜಿದೆ. ಈ ಯಶಸ್ಸಿಗೆ ಕೈಜೋಡಿಸಿದ ಸಾರ್ವಜನಿಕರು, ಅಧಿಕಾರಿಗಳು ಹಾಗೂ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ತುಮಕೂರು ನಗರ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಪಾವಗಡ ಶಾಸಕ ಹೆಚ್.ವಿ.ವೆಂಕಟೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಅಪರ ಜಿಲ್ಲಾಧಿಕಾರಿ ಡಾ. ತಿಪ್ಪೆಸ್ವಾಮಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ್, ತುಮಕೂರು ಮಹಾನಗರ ಪಾಲಿಕೆ ಆಯುಕ್ತೆ ಶುಭ, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಉಮೇಶ್, ಜಿಲ್ಲಾ ಗ್ಯಾರಂಟಿ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಶೇಖರ್‌ಗೌಡ ಮುಂತಾದವರು ಉಪಸ್ಥಿತರಿದ್ದರು.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *